ಕಾನೂನು ಕನ್ನಡಿ/ ಮಹಿಳಾ ಅಸ್ಮಿತೆಗೆ ಸವಾಲೊಡ್ಡಿದ ಪಾಸ್‍ಪೋರ್ಟ್ ಪ್ರಕರಣ -ಡಾ.ಗೀತಾ ಕೃಷ್ಣಮೂರ್ತಿ

ಮಹಿಳೆ ಏಕಾಂಗಿಯಾಗಿ ಪೋಷಕಳೂ ತಾಯಿಯೂ ಆಗಬಹುದಾಗಿರುವುದರಿಂದ ಪಾಸ್‍ಪೋರ್ಟ್‍ಗಾಗಿ ಅರ್ಜಿಯನ್ನೂ ತನ್ನ ಹೆಸರಿನಲ್ಲೇ ಸಲ್ಲಿಸಬಹುದಾಗಿದೆ, ಅಲ್ಲದೆ, ಕಾನೂನಿನಲ್ಲಿ ಇದನ್ನು ಕಡ್ಡಾಯಗೊಳಿಸುವ ಯಾವ ಉಪಬಂಧವೂ ಇಲ್ಲ.

ಇದೊಂದು ಪಾಸ್‍ಪೋರ್ಟ್ ನೀಡಿಕೆಗಾಗಿ ಅರ್ಜಿ ಸಲ್ಲಿಸಿದ ಪ್ರಕರಣ. ಎಂದರೆ, ಸಾಧಾರಣ ಪ್ರಕ್ರಿಯೆಯನ್ನು ಒಳಗೊಂಡ ಪ್ರಕರಣ. ಪಾರ್ಸಪೋರ್ಟ್ ನೀಡಿಕೆಗೆ ಅಗತ್ಯಪಡಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದರೆ, ನಿಗದಿಪಡಿಸಿದ ವಿಧಾನದಲ್ಲಿ ನೀಡಿಕೆಯ ಪ್ರಕ್ರಿಯೆ ಚಾಲನೆ ಪಡೆಯುತ್ತದೆ. ಎಲ್ಲ ಹಂತಗಳನ್ನು ದಾಟಿ ಪಾಸ್‍ಪೋರ್ಟ್ ಕೈ ಸೇರುತ್ತದೆ. ಆದರೆ ಈ ಪ್ರಕರಣದಲ್ಲಿ ಹಾಗಾಗಲಿಲ್ಲ.

ಈ ಪ್ರಕರಣದಲ್ಲಿ, ತನ್ನ ಮಗಳ ಪಾಸ್ ಪೋರ್ಟಿನ ಮರುನೀಡಿಕೆಗಾಗಿ ತಾಯಿ ಅರ್ಜಿ ಸಲ್ಲಿಸಿದಳು. ಆದರೆ ಅದರಲ್ಲಿ ಆಕೆಯ ಕೋರಿಕೆಯೆಂದರೆ ತನ್ನ ಮಗಳ ತಂದೆಯ ಹೆಸರನ್ನು ನಮೂದಿಸುವುದನ್ನು ಕಡ್ಡಾಯ ಮಾಡಬಾರದು ಎಂಬುದಾಗಿತ್ತು. ಅದಕ್ಕೆ ಆಕೆ ನೀಡಿದಕಾರಣ ತಾನು ವಿಚ್ಛೇದಿತೆ, ಮಗಳನ್ನು ಆಕೆ ಹುಟ್ಟಿದಾಗಿನಿಂದ ಏಕ ಪೋಷಕಳಾಗಿ ಆಕೆಯನ್ನು ಬೆಳೆಸಿದ್ದೇನೆ ಮತ್ತು ಆಕೆಯ ತಂದೆ ಮಗಳ ಯಾವ ಜವಾಬ್ದಾರಿಯನ್ನೂ ತೆಗೆದುಕೊಂಡಿಲ್ಲ ಎಂಬುದಾಗಿತ್ತು. ಪಾಸ್‍ಪೋರ್ಟಿಗಾಗಿ ಅರ್ಜಿ ಹಾಕಿದಾಗ ಪ್ರಾದೇಶಿಕ ಪಾಸ್‍ಪೋರ್ಟ್ ಅಧಿಕಾರಿಗಳು ಮಗಳ ತಂದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸುವಂತೆ ತಿಳಿಸಿದ್ದಾರೆ. ಆದರೆ ತನ್ನ ಮಗಳ ಶೈಕ್ಷಣಿಕ ಪ್ರಮಾಣಪತ್ರಗಳು, ಆಕೆಯ ಆಧಾರ್ ಕಾರ್ಡ್ ಹಾಗೂ ಇತರ ಎಲ್ಲ ದಾಖಲಾತಿಗಳಲ್ಲಿ ಎಲ್ಲಿಯೂ ತಂದೆಯ ಹೆಸರು ದಾಖಲು ಮಾಡಿಲ್ಲ. ಈಗ, ಪಾಸ್‍ಪೋರ್ಟಿನಲ್ಲಿ ತಂದೆಯ ಹೆಸರನ್ನು ದಾಖಲು ಮಾಡಿದರೆ ಆಕೆಯ ಅಸ್ಮಿತೆಯೇ ಬದಲಾಗುತ್ತದೆ, ತಾಯಿಯ ಹೆಸರಿನಿಂದ ಗುರುತಿಸಲಾಗುತ್ತಿದ್ದ ಅವಳನ್ನು ಮುಂದೆ ಜನ್ಮ ನೀಡಿದ ತಂದೆಯ ಹೆಸರಿನಿಂದ ಗುರುತಿಸುತ್ತಾರೆ. ಈ ಹಿಂದೆ ಇದೇ ಅಧಿಕಾರಿಗಳು, ತಂದೆಯ ಹೆಸರನ್ನು ನಮೂದಿಸುವಂತೆ ಒತ್ತಾಯ ಮಾಡದೆಯೇ 2005ರಲ್ಲಿ ಮತ್ತು 2011 ರಲ್ಲಿ ಪಾಸ್‍ಪೋರ್ಟ್ ನೀಡಿ, ನವೀಕರಿಸಲಾಗಿತ್ತು. ಹುಟ್ಟಿದ ಮಗು ಹೆಣ್ಣು ಎಂಬ ಕಾರಣಕ್ಕೆ ಆಕೆಯನ್ನು ಮಗಳೆಂದು ಒಪ್ಪಿಕೊಳ್ಳದ ಆಕೆಯ ಜನ್ಮ ನೀಡಿದ ವ್ಯಕ್ತಿ ಆಕೆಯ ತಂದೆ ಎಂಬ ಒಂದೇ ಕಾರಣದಿಂದ ಅವನ ಹೆಸರನ್ನು ನಮೂದಿಸಬೇಕೆಂದು ಒತ್ತಾಯಿಸುವುದು ದುರುದ್ದೇಶಪೂರಿತವಾದದುದು, ವಿವೇಚನಾರಹಿತವಾದುದು ಹಾಗೂ ತಾರತಮ್ಯದಿಂದ ಕೂಡಿದುದಾಗಿದೆ ಎಂಬುದು ಅವಳ ವಾದವಾಗಿತ್ತು.

ಬದಲಾಗುತ್ತಿರುವ ಸಮಾಜದಲ್ಲಿ ಏಕ ಪೋಷಕಳಾಗಿ, ತಾಯಿಯೇ ಮಕ್ಕಳ ಎಲ್ಲ ಜವಾಬ್ದಾರಿಯನ್ನೂ ಹೊತ್ತು ಮಕ್ಕಳನ್ನು ಬೆಳೆಸುವ ಪ್ರಕರಣಗಳೂ ಹೆಚ್ಚುತ್ತಿವೆ. ಇಂಥ ತಾಯಂದಿರು, ತಂದೆಯ ಹೆಸರನ್ನು ನಮೂದಿಸಬೇಕು ಎಂದು ಕಡ್ಡಾಯಗೊಳಿಸಿದುದರಿಂದಾಗಿ, ಅನೇಕ ಸಂದರ್ಭಗಳಲ್ಲಿ ಮುಜುಗರಕ್ಕೆ ಒಳಗಾಗಬೇಕಾಗಿ ಬಂದಿರುವುದು ಸುಳ್ಳಲ್ಲ. ಹೀಗೆ ಮುಜುಗರಕ್ಕೆ ಒಳಗಾದವರಲ್ಲಿ ಎಷ್ಟು ಮಂದಿ ಮಹಿಳೆಯರಿಗೆ ನ್ಯಾಯಾಲಯದ ಮೆಟ್ಟಿಲು ಹತ್ತಿ ತಮ್ಮ ಹಕ್ಕುಗಳನ್ನು ದಕ್ಕಿಸಿಕೊಳ್ಳಲು ಸಾಧ್ಯ? ಹಾಗಾಗಿ ಸುಮ್ಮನುಳಿದು, ಜಾರಿಯಲ್ಲಿರುವ ಕಾನೂನುಗಳಿಗೆ ಮತ್ತು ನಿಯಮಗಳಿಗೆ ತಲೆ ಬಾಗುವವರೇ ಹೆಚ್ಚು. ಈ ಕಾರಣದಿಂದಾಗಿಯೇ, ಸ್ಪಷ್ಟವಾಗಿ ತಾರತಮ್ಯವೆಸಗುವ ಕಾನೂನಿನ ಉಪಬಂಧಗಳು ಹಾಗೂ ಆ ಕಾನೂನಿನ ಮೇರೆಗೆ ಮಾಡಿರುವ ನಿಯಮಗಳು ಜಾರಿಯಾದ ಅನೇಕ ವರ್ಷಗಳ ಕಾಲ ಪ್ರಶ್ನಾತೀತವಾಗಿ ಉಳಿದಿರುವುದು.

ಮಗುವನ್ನು ನರ್ಸರಿ ಶಾಲೆಗೆ ಸೇರಿಸುವಾಗಲೇ ಪಿತೃ ಪ್ರಧಾನ ವ್ಯವಸ್ಥೆಯ ಈ ಪದ್ಧತಿ ಜಾರಿಯಾಗುತ್ತದೆ. ಇತರ ವಿವರಗಳನ್ನು ಕೇಳುವ ನಮೂನೆಯಲ್ಲಿ ಕಡ್ಡಾಯವಾಗಿ ನಮೂದಿಸಲೇ ಬೇಕಾದ ಮತ್ತೊಂದು ವಿವರವೆಂದರೆ –ತಂದೆಯ ಹೆಸರು. ತಾಯಿಯ ಹೆಸರನ್ನು ಉಲ್ಲೇಖಿಸಬೇಕೆಂದು ಎಲ್ಲಿಯೂ ಯಾರೂ ಕೇಳುವುದಿಲ್ಲ. ಏಕೆಂದರೆ, ನಮ್ಮದು ಪಿತೃ ಪ್ರಧಾನ ಸಮಾಜ. ಹಾಗಾಗಿ ಇಲ್ಲಿ ಎಲ್ಲವೂ ಪುರುಷ ಪ್ರಧಾನ. ನಮ್ಮ ವೈಯಕ್ತಿಕ ಕಾನೂನುಗಳೆಲ್ಲವೂ ನಮ್ಮ ಧರ್ಮ ಹಾಗೂ ಸಂಸೃತಿಯನ್ನು ಆಧರಿಸಿಯೇ ರಚಿತವಾದವುಗಳು. ಹಾಗಾಗಿ ಅಲ್ಲಿ ನೆಲೆಯೂರಿದ್ದ ಪುರುಷ ಪಾರಮ್ಯದ ಸಿದ್ಧಾಂತಗಳಿಗೇ ಇಲ್ಲಿಯೂ ಮನ್ನಣೆ. ಕೆಲವು ಕಾನೂನುಗಳಲ್ಲಿ ಸ್ತ್ರೀ ಪರುಷರಿಗೆ ಸಮಾನ ಹಕ್ಕುಗಳನ್ನು ಕಾನೂನಿನ ನೆಲೆಯಲ್ಲಿ ಕೊಟ್ಟಿದ್ದರೂ ಅನೇಕ ಬಾರಿ ಅವುಗಳನ್ನು ಜಾರಿಗೊಳಿಸುವ ಹಂತದಲ್ಲಿ ಮತ್ತು ಅವನ್ನು ಅರ್ಥೈಸುವ ಹಂತದಲ್ಲಿ ಅವು ಸೋತಿರುವ ಅನೇಕ ಉದಾಹರಣೆಗಳು ನಮಗೆ ದೊರೆಯುತ್ತವೆ. ಹಾಗಾಗಿ ಕಾನೂನಿನಲ್ಲಿ ಸಮಾನತೆ ದೊರೆತರೂ ವಾಸ್ತವದಲ್ಲಿ ಅದನ್ನು ಹೋರಾಟದ ಮೂಲಕವೇ ಪಡೆಯಬೇಕಾಗುತ್ತದೆ.
ಈ ಪ್ರಕರಣದಲ್ಲಿ, ಪಾಸ್‍ಪೋರ್ಟ್ ನೀಡಿಕೆಗಾಗಿ ಸಲ್ಲಿಸುವ ಅರ್ಜಿಯಲ್ಲಿ ತಂದೆಯ ಹೆಸರನ್ನು ನಮೂದಿಸಬೇಕೆಂದು ಕಾನೂನು ಕಡ್ಡಾಯಗೊಳಿಸುತ್ತದೆಯೇ ಎಂಬ ಬಗ್ಗೆ ಹಾಗೂ ಈ ಸಂಬಂಧ ಇರುವ ಪೂರ್ವ ನಿದರ್ಶನಗಳನ್ನು (ತೀರ್ಪುಗಳನ್ನು) ನ್ಯಾಯಾಲಯದ ಗಮನಕ್ಕೆ ತರಬೇಕೆಂದು ನ್ಯಾಯಾಲಯ ಅಮಿಕಸ್ ಕ್ಯೂರಿಯನ್ನು ನೇಮಿಸಿತು(ನ್ಯಾಯಾಲಯದ ಗೆಳೆಯ). ಅಮಿಕಸ್ ಕ್ಯೂರಿ ಅವರು ನ್ಯಾಯಾಲಯಕ್ಕೆ ಒದಗಿಸಿದ ಮಾಹಿತಿಯನ್ನು ಆಧರಿಸಿ ನ್ಯಾಯಾಲಯ ತೀರ್ಪು ನೀಡಿದೆ-
“ಅವಿವಾಹಿತ ಮಹಿಳೆಯರು, ಲೈಂಗಿಕ ವೃತ್ತಿ ನಡೆಸುವವರು, ಅತ್ಯಾಚಾರಕ್ಕೆ ಒಳಗಾದವರು, ಗಂಡನಿಂದ ಬೇರ್ಪಟ್ಟವರು, ತಂದೆಯೇ ನಿರ್ಲಕ್ಷಿಸಿದ ಮಕ್ಕಳ ತಾಯಂದಿರು, ಕೃತಕರೀತಿಯಲ್ಲಿ ಗರ್ಭಧಾರಣೆಯ ಮೂಲಕ ಮಕ್ಕಳನ್ನು ಪಡೆದ ತಾಯಂದಿರು, ಹೀಗೆ ಅನೇಕ ಕಾರಣಗಳಿಗಾಗಿ ತಾಯಂದಿರು ಏಕ ಪೋಷಕರಾಗಿ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕಾಗಿ ಬಂದಿರುವ ಈ ಕಾಲಮಾನದ ಬೆಳವಣಿಗೆಯನ್ನೂ ನಾವು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.

ಮಹಿಳೆ ಏಕಾಂಗಿಯಾಗಿ ಪೋಷಕಳೂ ತಾಯಿಯೂ ಆಗಬಹುದಾಗಿರುವುದರಿಂದ ಪಾಸ್‍ಪೋರ್ಟ್‍ಗಾಗಿ ಅರ್ಜಿಯನ್ನೂ ತನ್ನ ಹೆಸರಿನಲ್ಲೇ ಸಲ್ಲಿಸಬಹುದಾಗಿದೆ, ಅಲ್ಲದೆ, ಕಾನೂನಿನಲ್ಲಿ ಇದನ್ನು ಕಡ್ಡಾಯಗೊಳಿಸುವ ಯಾವ ಉಪಬಂಧವೂ ಇಲ್ಲ. ಅಲ್ಲದೆ, 2016 ರ ಜನವರಿ 29 ರಲ್ಲಿ ಆನ್‍ಲೈನ್ ಪಾಸ್‍ಪೋರ್ಟ್ ನಮೂನೆಯಲ್ಲಿ, ಕುಟುಂಬದ ವಿವರಗಳು ಎಂದಿರುವಲ್ಲಿ ತಂದೆ/ತಾಯಿ/ಕಾನೂನುಬದ್ಧ ಪೋಷಕ ಎಂದಿದೆ ಎಂದು ಅಮಿಕಸ್ ಕ್ಯೂರಿ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಹಾಗಾಗಿ ಕಂಪ್ಯೂಟರಿನಲ್ಲಿ ಅಳವಡಿಸಿರುವ ಅರ್ಜಿ ನಮೂನೆಯಲ್ಲಿ ತಂದೆಯ ಹೆಸರನ್ನು ನಮೂದಿಸಿದ ಹೊರತು ಮುಂದಿನ ವಿವರಗಳನ್ನು ನಮೂದಿಸಲಾಗುವುದಿಲ್ಲ ಎಂಬ ಪ್ರಾದೇಶಿಕ ಪಾಸ್‍ಪೋರ್ಟ್ ಅಧಿಕಾರಿಯ ವಾದವನ್ನು ನ್ಯಾಯಾಧೀಶರು ತಳ್ಳಿ ಹಾಕಿದರು. ಅಲ್ಲದೆ, ತಂತ್ರಜ್ಞಾನ, ವ್ಯವಹಾರಗಳನ್ನು ಸುಲಭಗೊಳಿಸುವ ಸಾಧನವಾಗಬೇಕೇ ಹೊರತು ವ್ಯಕ್ತಿಯ ಕಾನೂನು ಮಾನ್ಯ ಹಕ್ಕುಳನ್ನು ಕಸಿದುಕೊಳ್ಳಲು ಕಾರಣವಾಬಾರದು. ಹಾಗೊಂದು ವೇಳೆ ನೀವು ಕಂಪ್ಯೂಟರ್‍ನಲ್ಲಿ ಅಳವಡಿಸಿರುವ ತಂತ್ರಾಂಶ ಕಾರಣವಾಗಿದ್ದರೆ ಅದನ್ನು ಬದಲಿಸಿ ಎಂದು ಆದೇಶಿಸಿದರು.
ಮಹಿಳಾ ಹಕ್ಕುಗಳ ಹೋರಾಟವನ್ನು ಗಮನಿಸಿದಾಗ, ಮಹಿಳೆಯರ ಯಾವ ಹಕ್ಕುಗಳೂ ಹೋರಾಟವಿಲ್ಲದೆ ಅವಳಿಗೆ ದಕ್ಕಿಲ್ಲ ಎಂಬುದು ಸ್ಪಷ್ಟವಾಗುತ್ತದೆ. 1950 ರಲ್ಲಿ ಜಾರಿಗೆ ಬಂದ ಭಾರತದ ಸಂವಿಧಾನ, ಸ್ತ್ರೀ ಪುರುಷರಾದಿಯಾಗಿ ತನ್ನ ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕುಗಳನ್ನು ನೀಡಿತು. ಆದರೆ ಸಂವಿಧಾನ ಜಾರಿಯಾದ ನಂತರ, ಅನೇಕ ದಶಕಗಳು ಕಳೆದ ನಂತರ ರಚನೆಯಾದ ಅನೇಕ ಕಾನೂನುಗಳಲ್ಲಿ ಸಹ ಸ್ತ್ರೀ ಪುರುಷ ತಾರತಮ್ಯ ಉಳಿದುಕೊಂಡು ಬಂದಿರುವುದನ್ನು ನೋಡಿದ್ದೇವೆ. ಇದಕ್ಕೆ ಮುಖ್ಯ ಕಾರಣ ನಮ್ಮ ಸಮಾಜದ ಸಂರಚನೆ, ಪುರುಷ ಪ್ರಧಾನ ದೃಷ್ಟಿಕೋನ, ಹಾಗೂ ಬೆಳೆದು ಬಂದ ಉತ್ಪಾದಕ ಮತ್ತು ಅನುತ್ಪಾದಕ ದುಡಿಮೆಯ ನಿರ್ವಚನ. ಈ ಎಲ್ಲ ಕಾರಣಗಳಿಂದಾಗಿ ಮಹಿಳೆ ಎರಡನೆಯ ದರ್ಜೆಯ ಪ್ರಜೆಯಾಗಿಯೇ ಉಳಿದದ್ದು. ಈಗಲೂ ಜನಸಂಖ್ಯೆಯ ಬಹುಪಾಲು ಪ್ರತಿಶತ ಮಹಿಳೆಯರಿಗೆ ಸಂಬಂಧಿಸಿದಂತೆ ಇದು ಹೆಚ್ಚು ಬದಲಾಗಿಲ್ಲ.
ಈ ಪರಿಸ್ಥಿತಿಯಲ್ಲಿ ಸ್ವಲ್ಪವಾದರೂ ಬದಲಾವಣೆ ಬಂದಿದ್ದರೆ ಅದಕ್ಕೆ ಕಾರಣ ತಮ್ಮ ಹಕ್ಕುಗಳಿಗಾಗಿ ಮಹಿಳೆಯರು ನಡೆಸಿದ ಮತ್ತು ನಡೆಸುತ್ತಿರುವ ಹೋರಾಟ. ಸ್ವಾತಂತ್ರ್ಯಾನಂತರದ ಭಾರತದಲ್ಲಿ, ಐವತ್ತರ ದಶಕದಲ್ಲಿ, ಕಾನೂನುಗಳ ಕ್ರೋಢೀಕರಣವಾದಾಗ, ಮಹಿಳೆಯರಿಗೆ ಆವರೆಗೆ ಇಲ್ಲದಿದ್ದ ಕೆಲವೊಂದು ಹಕ್ಕುಗಳು ದೊರೆತವು. ಆದರೆ ಮಹಿಳಾ ಅಸ್ಮಿತೆಗೆ ಮುಖ್ಯವಾಗಿದ್ದ, ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಸಮಾನವಾದ ಹಕ್ಕುಗಳನ್ನು ಹೆಣ್ಣು ಮಕ್ಕಳು ಪಡೆಯಲು, ಘನತೆಯಿಂದ ಜೀವಿಸಲು ಮತ್ತು ದೌರ್ಜನ್ಯ ಮುಕ್ತವಾದ ಜೀವನ ನಡೆಸಲು ಅಗತ್ಯವಾದ ಮಾನವ ಹಕ್ಕುಗಳನ್ನು ಪಡೆಯಲು ದಶಕಗಳು ಬೇಕಾದವು.

ಕಾನೂನಿನ ರಚನೆಯಲ್ಲೇ ಅಂತರ್ಗತವಾಗಿರುವ ಈ ಸ್ತ್ರೀ ಪುರುಷ ತಾರತಮ್ಯ ಮಹಿಳೆಯ ವೈಯಕ್ತಿಕ ಜೀವನದಲ್ಲಿ ಉಂಟುಮಾಡಿರುವ ತೊಡಕಿನ ಸಂದರ್ಭಗಳು, ಅವನ್ನು ಛಲ ಬಿಡದೆ ಕಾನೂನು ಹೋರಾಟದ ಮೂಲಕ ಬಗೆಹರಿಸಿಕೊಂಡ ಉದಾಹರಣೆಗಳು ಅನೇಕ ಪ್ರಕರಣಗಳಲ್ಲಿ ಬೆಳಕಿಗೆ ಬಂದಿದೆ.

ಡಾ.ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *