ಕಾನೂನು ಕನ್ನಡಿ / ಪ್ರಸೂತಿ ಸೌಲಭ್ಯ ಮಹಿಳೆಯ ಹಕ್ಕು – ಡಾ.ಗೀತಾ ಕೃಷ್ಣಮೂರ್ತಿ

ಮಹಿಳೆಯರು ಆರ್ಥಿಕವಾಗಿ ಸಬಲರಾಗುವ ಈ ದಿಕ್ಕಿನಲ್ಲಿ ಮುಖ್ಯ ಸಮಸ್ಯೆ ಎಂದರೆ ಉದ್ಯೋಗ ಕ್ಷೇತ್ರದಲ್ಲಿ
ವ್ಯಕ್ತವಾಗುವ ತಾರತಮ್ಯ ನೀತಿ. ಮಹಿಳೆ ಗರ್ಭಿಣಿಯಾದಾಗ ಕೆಲಸ ಮಾಡದೆ ಇದ್ದರೂ ಅವಳ
ಮತ್ತು ಅವಳ ಮಗುವಿನ ಆರೋಗ್ಯ ರಕ್ಷಣೆಗೆ ಸೌಲಭ್ಯ ಕಲ್ಪಿಸುವುದು ಕಾನೂನಿನ ಉದ್ದೇಶ. ಕೇರಳದ ಐವರು ಮಹಿಳೆಯರು ಹೋರಾಟದ ಮೂಲಕ ತಮ್ಮ ಹಕ್ಕನ್ನು ಪಡೆದುಕೊಂಡ ಪ್ರಕರಣ ಇದು.

ಮಹಿಳೆ ಇಂದು ಭಾರತದ ಕಾರ್ಮಿಕ ಬಲದ ಅವಿಭಾಜ್ಯ ಅಂಗ. 2011 ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಮಹಿಳಾ ಸಂಖ್ಯೆ 149.8 ದಶ ಲಕ್ಷ. ಇವರ ಪೈಕಿ ಲಕ್ಷ ಮಹಿಳೆಯರು ಸಂಘಟಿತ ಮಾಡುತ್ತಿದ್ದಾರೆ ಮತ್ತು
ಸುಮಾರು 32.14 ಲಕ್ಷ ಮಹಿಳೆಯರು ಸಾಮುದಾಯಿಕ, ಹಾಗೂ ವೈಯಕ್ತಿಕ ವಲಯಗಳಲ್ಲಿ ಕೆಲಸ
ಮಾಡುತ್ತಿದ್ದಾರೆ. ಆರ್ಥಿಕವಾಗಿ ಸಬಲರಾಗುವ ಈ ದಿಕ್ಕಿನಲ್ಲಿ ಮುಖ್ಯ ಸಮಸ್ಯೆ ಎಂದರೆ ಉದ್ಯೋಗ ಕ್ಷೇತ್ರದಲ್ಲಿ
ವ್ಯಕ್ತವಾಗುವ ತಾರತಮ್ಯ ನೀತಿ.

ಇದರ ನಿವಾರಣೆಗಾಗಿ, ಇತರ ಉದ್ಯೋಗಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಮತ್ತು ಕಾನೂನುಗಳ ಅಡಿಯಲ್ಲಿ ವಿವಿಧ ಅನುಕೂಲಗಳನ್ನು ಮತ್ತು ಅಸಮಾನತೆಯನ್ನು ಹೋಗಲಾಡಿಸಲು ಜಾರಿ ಮಾಡಿರುವ ಸಮಾನ ಪರಿಶ್ರಮ ಅಧಿನಿಯಮ, 1976 ಮತ್ತು ಮಹಿಳೆಯರಿಗೆ ಹೆರಿಗೆಗೆ ಮುಂಚೆ ಮತ್ತು ಹೆರಿಗೆಯ ನಂತರ ರಜೆಗೆ ಸಂಬಂಧಿಸಿದಂತೆ ಜಾರಿ ಮಾಡಿರುವ ಪ್ರಸೂತಿ ಸೌಲಭ್ಯ ಅಧಿನಿಯಮ, 1961.

ಮಹಿಳೆ ಉದ್ಯೋಗಕ್ಕೆ ಹಾಜರಾಗದಿದ್ದಾಗಲೂ ಅವಳ ತಾಯ್ತನದ ಘನತೆಯನ್ನು ಸಂರಕ್ಷಿಸುವುದಕ್ಕಾಗಿ ಮತ್ತು ತಾಯಿ ಹಾಗೂ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಅಗತ್ಯವಾದ ಸೌಲಭ್ಯವನ್ನು ನೀಡುವುದಕ್ಕಾಗಿ ಪ್ರಸೂತಿ ರಜೆ ಮತ್ತು ಸೌಲಭ್ಯವನ್ನು ಒದಗಿಸಲಾಗುತ್ತದೆ. ಇಂದು ಹೆಚ್ಚು ಹೆಚ್ಚು ಮಹಿಳೆಯರು ಉದ್ಯೋಗ ಕ್ಷೇತ್ರವನ್ನು ಪ್ರವೇಶಿಸುತ್ತಿರುವುದರಿಂದ, ಪ್ರಸೂತಿ ರಜೆ ಮತ್ತು ಪ್ರಸೂತಿ ಸೌಲಭ್ಯಗಳನ್ನು ಒದಗಿಸಬೇಕಾದ ಅನಿವಾರ್ಯತೆಯೂ ಹಚ್ಚಿದೆ ಮತ್ತು ಬಳಸಿಕೊಳ್ಳುವ ಮಹಿಳೆಯರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ.

ಮಹಿಳೆ ತಾಯ್ತನಕ್ಕೆ ಕಾಲಿಡುವ ಸಂದರ್ಭ ಅವಳ ಕುಟುಂಬ ಜೀವನದ ಅತ್ಯಂತ ಪ್ರಮುಖ ಘಟ್ಟ. ಆ ಸಂದರ್ಭದಲ್ಲಿ, ದೇಶದಾದ್ಯಂತ ಏಕರೂಪದ ಸೌಲಭ್ಯಗಳ ನೀಡಿಕೆಯನ್ನು ಜಾರಿಗೆ ತರುವುದಕ್ಕಾಗಿ
1961 ರಲ್ಲಿ ‘ಪ್ರಸೂತಿ ಸೌಲಭ್ಯ ಅಧಿನಿಯಮ’ವನ್ನು ಜಾರಿಗೆ ತರಲಾಯಿತು. ಉದೋಗಸ್ಥ ಮಹಿಳೆಗೆ ಹೆರಿಗೆಗೆ
ಮುಂಚೆ ಮತ್ತು ಹೆರಿಗೆಯ ಅನಂತರ ವೇತನ ಸಹಿತವಾದ ರಜೆ ಕೊಡುವುದನ್ನು ಪ್ರಸೂತಿ ಸೌಲಭ್ಯ
ಅಧಿನಿಯಮ,1961 ಕಡ್ಡಾಯಗೊಳಿಸುತ್ತದೆ. ಮಹಿಳೆ ಗರ್ಭಿಣಿಯಾದಾಗ ಕೆಲಸ ಮಾಡದೆ ಇದ್ದರೂ ಅವಳ
ಮತ್ತು ಅವಳ ಮಗುವಿನ ಆರೋಗ್ಯ ರಕ್ಷಣೆಗೆ ಸೌಲಭ್ಯ ಕಲ್ಪಿಸುವುದು ಈ ಕಾನೂನಿನ ಉದ್ದೇಶ. ಈಗ, ಪ್ರಸೂತಿ ಸೌಲಭ್ಯ ಅಧಿನಿಯಮ(ತಿದ್ದುಪಡಿ) ಅಧಿನಿಯಮ, 2017 ಜಾರಿಯಲ್ಲಿದೆ. 2017ರ ಏಪ್ರಿಲ್‍ನಿಂದ ಇದು ಜಾರಿಗೆ ಬಂದಿದೆ.

ಮುಖ್ಯವಾಗಿ, ಮಹಿಳೆ ಪುರುಷನಿಗೆ ಸರಿಸಮನಾಗಿ ಉದ್ಯೋಗದಲ್ಲಿ ತೊಡಗಿಕೊಳ್ಳಲು ಮತ್ತು ಉದ್ಯೋಗದಲ್ಲಿ ಪ್ರಗತಿ ಹೊಂದಲು ಅವಳಿಗೆ ತೊಡಕಾಗಿರುವುದು ಆಕೆ ಪ್ರಸೂತಿ ರಜೆಯನ್ನು ತೆಗೆದುಕೊಳ್ಳಬೇಕಾಗಿ ಬರುವುದು. ಎಷ್ಟೇ ಕಾರ್ಯನೀತಿಗಳನ್ನು ರೂಪಿಸಲಿ, ಎಷ್ಟೇ ನಿಯಮಗಳನ್ನು ರಚಿಸಲಿ, ವೈಯಕ್ತಿಕ ನೆಲೆಯಲ್ಲಿ, ತನಗೆ ಕಾನೂನು ಸಮ್ಮತವಾಗಿ ದೊರೆಯಬೇಕಾದ ಪ್ರಸೂತಿ ಸೌಲಭ್ಯಕ್ಕಾಗಿ ಮತ್ತು ಆ ಸಂಬಂಧವಾದ ಇತರ
ಹಕ್ಕುಗಳನ್ನು ಪಡೆದು ಕೊಳ್ಳುವುದಕ್ಕಾಗಿ ನಿಯೋಜಕರ ವಿರುದ್ಧ ಕಾನೂನು ಸಮರ ನಡೆಸಬೇಕಾಗಿ ಬರುವುದು ತಪ್ಪುವುದಿಲ್ಲ.

ಅಂಥದ್ದೊಂದು ಕಾನೂನಿನ ಹೋರಾಟದ ಮೂಲಕ ತಮ್ಮ ಹಕ್ಕನ್ನು ಪಡೆದುಕೊಂಡ ಪ್ರಕರಣ ಇದು.
ಕೇರಳದ ಐವರು ಮಹಿಳೆಯರು ತಮಗೆ ಕಡಿಮೆ ಅವಧಿಯ ಪ್ರಸೂತಿ ರಜೆ ಮಂಜೂರು ಮಾಡಿದ ಕೇರಳ
ಸರ್ಕಾರದ ವಿರುದ್ಧ ಕೇರಳ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಇವರಲ್ಲಿ ಕೆಲವರು ಮಹಿಳೆಯರು ಕೇರಳ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಹೆಚ್ಚುವರಿ ಕೌಶಲ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ, ಕೆಲವರು, ಮಾಧ್ಯಮಿಕ ಶಿಕ್ಷಾ ಅಭಿಯಾನದ ಅಡಿಯಲ್ಲಿ ಕರಾರಿನ ಮೇಲೆ ಸೇವೆ ಸಲ್ಲಿಸುತ್ತಿದ್ದವರು. ಇವರೆಲ್ಲರಿಗೆ, ಕೇವಲ 135 ದಿನಗಳ ಪ್ರಸೂತಿ ರಜೆಯನ್ನು ಮಂಜೂರು ಮಾಡಿ, ಆ ರಜೆ ಅವಧಿ ಮುಗಿದ ನಂತರ ಕೆಲಸಕ್ಕೆ ಹಾಜರಾಗಬೇಕೆಂದು ಸೂಚಿಸಲಾಯಿತು.

ಆದರೆ, ಅವರು, ಕೇರಳ ಸರ್ಕಾರದ ಸೇವಾ ನಿಯಮಗಳ ಅಡಿಯಲ್ಲಿ ತಾವು 180 ದಿನಗಳ ಪ್ರಸೂತಿ ರಜೆ ಪಡೆಯಲು ಅರ್ಹರಿದ್ದೇವೆಂದು ಮನವಿ ಮಾಡಿದರು. ಅಲ್ಲದೆ, ಪ್ರಸೂತಿ ಸೌಲಭ್ಯಗಳ ಅಧಿನಿಯಮದ ಪ್ರಕಾರ ತಾವು, 26 ವಾರಗಳ ಪ್ರಸೂತಿ ರಜೆ ಪಡೆಯಲು ಅರ್ಹರಿದ್ದೇವೆಂದು ವಾದಿಸಿದರು. ಆದರೆ, ಕರಾರಿನ ಮೇಲೆ ಸೇವೆ ಸಲ್ಲಿಸುತ್ತಿರುವವರಿಗೆ ಇದು ಅನ್ವಯವಾಗುವುದಿಲ್ಲವೆಂದೂ, ಅವರು ಕೇವಲ 135 ದಿನಗಳ ಪ್ರಸೂತಿ ರಜೆಪಡೆಯಲು ಮಾತ್ರ ಅರ್ಹರೆಂದೂ ಕೇರಳ ಸರ್ಕಾರ ವಾದಿಸಿತು. ಅಲ್ಲದೆ, 11-4- 2017 ರಂದು ಒಂದು ಆದೇಶವನ್ನು ಹೊರಡಿಸಿ, ಇದನ್ನು 90 ದಿನಗಳಿಗೆ ಸೀಮಿತಗೊಳಿಸಿತು. ಸರ್ಕಾರದ ಈ ನಿಲುವನ್ನು ಮಹಿಳಾ ಉದ್ಯೋಗಿಗಳು ಕೇರಳ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು, ಪ್ರಸೂತಿ ರಜೆಯನ್ನು 90 ದಿನಗಳಿಗೆ ನಿರ್ಬಂಧಗೊಳಿಸುವುದು ಮಹಿಳೆಯರ ವಿರುದ್ಧ ಎಸಗುವ ತಾರತಮ್ಯವಾಗುತ್ತದೆ ಎಂದು
ಅಭಿಪ್ರಾಯಪಟ್ಟರು. ಅಲ್ಲದೆ ‘ಮಾತೃತ್ವ’ ಎಂಬುದು ಪರಭಾರೆ ಮಾಡಲಾಗದ ಜವಾಬ್ದಾರಿ. ಅಂಥ ಮಾತೃತ್ವ ಅವಳ ವಿರುದ್ಧ ತಾರತಮ್ಯವೆಸಗಲು ಕಾರಣವಾಗಬಾರದು. ಅವರ ನೌಕರಿಯ ಸ್ವರೂಪವನ್ನು
ಆಧರಿಸಿ ಅವರ ಪ್ರಸೂತಿ ರಜೆಯನ್ನು ಕಡಿತಗೊಳಿಸಿದ್ದೇ ಆದರೆ ಇಂಥ ತಾರತಮ್ಯವನ್ನು ಎಸಗಿದಂತೆ ಆಗುತ್ತದೆ.

ಇಂಥದ್ದೇ ಇನ್ನೊಂದು ಪ್ರಕರಣದಲ್ಲಿ, ಇದೇ ನ್ಯಾಯಾಲಯ, ‘ಅವಳ ಮಾತೃತ್ವ ಮತ್ತು ಉದ್ಯೋಗ
ಎರಡರ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ತಾಯಿಯ ಮೇಲೆ ಒತ್ತಡವನ್ನು ಹೇರಲಾಗದು,
ಮತ್ತು ರಾಜ್ಯ ತಾಯಿಯ ಘನತೆಯ ಹಕ್ಕನ್ನು ಮಹಿಳೆಗೆ ನಿರಾಕರಿಸಲಾಗದು’ ಎಂದು
ಅಭಿಪ್ರಾಯಪಟ್ಟಿದೆ. ಅದನ್ನು, ಈ ಪ್ರಕರಣದಲ್ಲಿ ತೀರ್ಪು ನೀಡುತ್ತಾ ನ್ಯಾಯಾಧೀಶೆ ಅನು ಶಿವರಾಮನ್
ಉಲ್ಲೇಖಿಸಿದ್ದಾರೆ. ಅರ್ಜಿದಾರರಿಗೆ 26 ವಾರಗಳ ರಜೆಯನ್ನು ಈ ತೀರ್ಪು ಕೈಸೇರಿದ ಎರಡು ವಾರಗಳೊಳಗೆ
ಮಂಜೂರು ಮಾಡುವಂತೆ ಆದೇಶಿಸಿದ್ದಾರೆ.

ದೆಹಲಿ ಮತ್ತು ಸುತ್ತ ಮತ್ತಲ ಪ್ರದೇಶದಲ್ಲಿ ಪ್ರತಿ ಸಾವಿರ ಉದ್ಯೋಗಸ್ಥ ಮಹಿಳೆಯರ ಪೈಕಿ, ಒಂದು
ಮಗುವಾದ ನಂತರ ತಮ್ಮ ಉದ್ಯೋಗವನ್ನು ಮುಂದುವರೆಸುವವರು ಕೇವಲ ಶೇಕಡಾ 18-
34ರಷ್ಟು ಎಂದು ಸಮೀಕ್ಷೆ ತಿಳಿಸುತ್ತದೆ. 2013ರ ವಿಶ್ವ ಬ್ಯಾಂಕ್‍ನ ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ,
ಮಹಿಳೆಯರ ಜನಸಂಖ್ಯೆಯ ಪೈಕಿ, 15 ವರ್ಷಗಳನ್ನು ಮೀರಿದ ಶೇ. 27ರಷ್ಟು ಮಹಿಳೆಯರು
ಮಾತ್ರ ಉದ್ಯೋಗದಲ್ಲಿದ್ದಾರೆ. ಬ್ರಿಕ್ಸ್ ದೇಶಗಳ ಪೈಕಿ, ಎಂದರೆ, ಬ್ರೆಜಿóಲ್, ರಷ್ಯಾ, ಭಾರತ, ಚೈನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಪೈಕಿ ಅತಿ ಕಡಿಮೆ ಸಂಖ್ಯೆಯ ಉದ್ಯೋಗಸ್ಥ ಮಹಿಳೆಯರು ಇರುವದು ಭಾರತದಲ್ಲಿ.

ಮಹಿಳಾಪರ ಕಾನೂನುಗಳ ಉದ್ದೇಶ ಈಡೇರುವುದು ಅವು ಮಹಿಳೆಯರಿಗೆ ತಲುಪಿದಾಗ ಮಾತ್ರ. ಅವು
ಮಹಿಳೆಯರಿಗೆ ತಲುಪುವುದು ಸರ್ಕಾರ ಮತ್ತು ಅದರ ಅಂಗ ಸಂಸ್ಥೆಗಳು ಇದನ್ನು ಅರ್ಥ ಮಾಡಿಕೊಂಡು
ಅವುಗಳನ್ನು ಅನ್ವಯಿಸಿದಾಗ. ಆದರೆ ಹಾಗೆ ಆಗದೆ ಇದ್ದ ಸಂದರ್ಭಗಳಲ್ಲಿ, ಇಂಥ ತೀರ್ಪುಗಳು, ಶಾಸನಗಳ ಅನ್ವಯ ಮತ್ತು ನಿರ್ವಚನೆಯನ್ನು ನಿರ್ದಿಷ್ಟಪಡಿಸುವ ಮೂಲಕ ಅವುಗಳ ಉದ್ದೇಶ ಈಡೇರಿಸುವುದರಲ್ಲಿ
ನೆರವಾಗುತ್ತವೆ. ಹಾಗಾಗಿ ಈ ತೀರ್ಪು ನಮಗೆ ಮಹತ್ವದ್ದಾಗುತ್ತದೆ.

-ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *