Latestಅಂಕಣ

ಕಾನೂನು ಕನ್ನಡಿ / ಧ್ವನಿಮುದ್ರಿತ ಸಾಕ್ಷ್ಯ ಅಂಗೀಕಾರಾರ್ಹ – ಡಾ. ಗೀತಾ ಕೃಷ್ಣಮೂರ್ತಿ

ಹೊಸಕಾಲದ ಬೆಳವಣಿಗೆಗಳಿಗೆ ಅನುಗುಣವಾಗಿ ಬದುಕಿನ ಎಲ್ಲ ವಲಯಗಳೂ ತಮ್ಮ ನೆಲೆಬೆಲೆಯನ್ನು ಮಾರ್ಪಡಿಸಿಕೊಳ್ಳುವುದು ಅನಿವಾರ್ಯ; ಇದಕ್ಕೆ ನ್ಯಾಯಾಂಗವೂ ಹೊರತಲ್ಲ. ತಂತ್ರಜ್ಞಾನದ ಅಭಿವೃದ್ಧಿಯ ಕಾರಣ, ಅದರ ನೆರವನ್ನೂ ಸಾಕ್ಷ್ಯ ಸಂಗ್ರಹ ಮತ್ತು ಪರಿಗಣನೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಉಪಬಂಧಗಳ ಸೇರ್ಪಡೆಯ ಮೂಲಕ ಅದಕ್ಕೆ ಕಾನೂನಾತ್ಮಕವಾಗಿ ಅಧಿಕೃತ ಮುದ್ರೆ ಬಿದ್ದಿದೆ.

ಈಗಂತೂ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನದ್ದೇ ಪಾರಮ್ಯ. ತಂತ್ರಜ್ಞಾನ ಪ್ರವೇಶವಾಗದ ಕ್ಷೇತ್ರವಿಲ್ಲ. ಹಾಗೆಯೇ ನ್ಯಾಯಾಲಯಗಳಲ್ಲಿಯೂ, ತಂತ್ರಜ್ಞಾನದ ಸಹಾಯದಿಂದ ಧ್ವನಿಮುದ್ರಿಸಿಕೊಳ್ಳಲಾಗುವ ಸಂಭಾಷಣೆಯನ್ನು ಹಾಗೂ ವೀಡಿಯೋಗಳನ್ನು ಸಾಕ್ಷ್ಯವನ್ನಾಗಿ ಹಾಜರು ಪಡಿಸುವ ಪರಿಪಾಠ ಈಗ ಸಾಮಾನ್ಯವಾಗಿದೆ. ಪಕ್ಷಕಾರರು ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಇತರ ಪಕ್ಷಕಾರನ ಅರಿವಿಗೆ ಬಾರದಂತೆ ಧ್ವನಿ ಮುದ್ರಿಸಿಕೊಂಡ ಮಾತುಗಳನ್ನು, ಸಂಭಾಷಣೆಯನ್ನು ಅಥವಾ ವೀಡಿಯೋಗಳನ್ನು ತಮ್ಮ ವಾದಕ್ಕೆ ಪೂರಕವಾಗಿ ನ್ಯಾಯಾಲಯದಲ್ಲಿ ಹಾಜರು ಪಡಿಸುವುದು ವಾಡಿಕೆಯಾಗಿಬಿಟ್ಟಿದೆ.
ಮೂಲತಃ, ಭಾರತೀಯ ಸಾಕ್ಷ್ಯ ಅಧಿನಿಯಮದ ಅಡಿಯಲ್ಲಿ, ಕೇವಲ ಮೌಖಿಕ ಸಾಕ್ಷ್ಯ ಹಾಗೂ ದಸ್ತಾವೇಜು ಸಾಕ್ಷ್ಯಗಳನ್ನು ಮಾತ್ರ ನ್ಯಾಯಾಲಯಗಳಲ್ಲಿ ಅಂಗೀಕರಿಸಲಾಗುತ್ತಿತ್ತು. ವಿದ್ಯುತ್ ಉಪಕರಣವನ್ನು ಬಳಸಿ ಧ್ವನಿಮುದ್ರಿಸಿಕೊಂಡ ಸಂಭಾಷಣೆಯ ಅಥವಾ ಹೇಳಿಕೆಯ ಅಂಗೀಕಾರಾರ್ಹತೆ, ಸ್ವರೂಪ ಮತ್ತು ಸಾಕ್ಷ್ಯವಾಗಿ ಅದರ ಮೌಲ್ಯ ಇವುಗಳ ಬಗ್ಗೆ ಸಾಕ್ಷ್ಯ ಅಧಿನಿಯಮದಲ್ಲಿ ಯಾವುದೇ ಉಲ್ಲೇಖವೂ ಇರಲಿಲ್ಲ. ಆದರೆ, ತಂತ್ರಜ್ಞಾನದ ಪ್ರವೇಶದಿಂದಾಗಿ, 2000 ದಲ್ಲಿ ಮಾಹಿತಿ ತಂತ್ರಜ್ಞಾನ ಅಧಿನಿಯಮದ ಮೂಲಕ, ಈ ಎಲ್ಲವುಗಳ ಬಗ್ಗೆ ಉಪಬಂಧಗಳನ್ನು ಸೇರಿಸಲಾಯಿತು.
ನ್ಯಾಯಾಲಯಗಳೂ ಸಹ ಅಗತ್ಯವಿದ್ದೆಡೆಗಳಲ್ಲಿ ಇಂಥ ಸಾಕ್ಷ್ಯಗಳ ಅಂಗೀಕಾರಾರ್ಹತೆಯ ಬಗ್ಗೆ ತಮ್ಮ ನಿಲುವುಗಳನ್ನು ಹಾಗೂ ನಿಯಮಗಳನ್ನು ಅನೇಕ ತೀರ್ಪುಗಳಲ್ಲಿ ಸ್ಪಷ್ಟ ಪಡಿಸುತ್ತಾ ಬಂದಿವೆ.
ಇತ್ತೀಚೆಗೆ, ದೆಹಲಿ ಉಚ್ಚ ನ್ಯಾಯಾಲಯ, ವೈವಾಹಿಕ ವಿವಾದಗಳನ್ನೊಳಗೊಂಡ ದಾವೆಗಳಲ್ಲಿ ಧ್ವನಿ ಮುದ್ರಿತ ಖಾಸಗಿ ಸಂಭಾಷಣೆಗಳು ಸಾಕ್ಷ್ಯಗಳಾಗಿ ಅಂಗೀಕಾರಾರ್ಹ ಎಂದು ತೀರ್ಪು ನೀಡಿದೆ. ಹಿಂಸೆಯ ಕಾರಣದ ಮೇಲೆ ವಿಚ್ಛೇದನೆಗಾಗಿ ಸಲ್ಲಿಸಿದ ಅರ್ಜಿ ವಿಚಾರಣೆಯಲ್ಲಿ ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ಈ ಅಭಿಪ್ರಾಯ ತಳೆದಿದ್ದಾರೆ.
ರೇಖಾ, ರಮೇಶನನ್ನು ವಿವಾಹವಾದ ಎರಡು ವರ್ಷಕ್ಕೇ ಅವಳಿಗೆ ಜೀವನ ಸಾಕೆನಿಸಿತ್ತು. ರೇಖಾ ತಂದೆ ತಾಯಿಯ ಒಬ್ಬಳೇ ಮಗಳು. ಸುಸಂಸ್ಕøತ ಹಾಗೂ ಸುಶಿಕ್ಷಿತ ವಾತಾವರಣದಲ್ಲಿ ಬೆಳೆದವಳು. ತಂದೆ ತಾಯಿಯರಂತೆ ಆಕೆಯೂ ಉನ್ನತ ವ್ಯಾಸಂಗ ಪಡೆದವಳು. ಉನ್ನತ ವಿಚಾರ ಮತ್ತು ಉನ್ನತ ನಡೆಗಳಿಂದ ಅವಳು ಎಲ್ಲರಿಗೆ ಅಚ್ಚುಮೆಚ್ಚು. ಅವಳ ತಂದೆಗೆ ಅವಳ ವಿವಾಹದ್ದೇ ಚಿಂತೆಯಾಗಿತ್ತು. ಇಂಥ ಪ್ರೀತಿಯ ಮಗಳನ್ನು ಯೋಗ್ಯನಾದವನ ಕೈಯಲ್ಲಿಡಬೇಕೆಂಬ ಕಾಳಜಿಯಿಂದ ಅವರು ವರಾನ್ವೇಷಣೆಗೆ ತೊಡಗಿದ್ದರು. ಕಡೆಗೆ ಅವರ ಕಣ್ಣಿಗೆ ಬಿದ್ದದ್ದು ಅವರ ಗೆಳೆಯನ ಮಗನೇ ಆದ ರಮೇಶ. ಮೊದಲಿನಿಂದ ನೋಡಿದ ಹುಡುಗ, ವಿದ್ಯಾವಂತ, ಕೈ ತುಂಬಾ ಸಂಬಳ ತರುವ ಉದ್ಯೋಗ. ಎಲ್ಲ ರೀತಿಯಿಂದಲೂ ಸರಿ ಹೊಂದುವ ಹುಡುಗ ಎನಿಸಿತ್ತು ಅವರಿಗೆ. ತಂದೆಯ ನಿರ್ಧಾರಕ್ಕೆ ಎದುರಾಡದೆ ರಮೇಶನನ್ನು ವರಿಸಿದ್ದಳು ರೇಖಾ. ವಿವಾಹಕ್ಕೆ ಮುಂಚೆ ಅವನೊಡನೆ ಮಾತಾಡಿ ಓಡಾಡಿದಾಗಲೂ ಅವಳಿಗೆ ಅವನನ್ನು ನಿರಾಕರಿಸಲು ಯಾವುದೇ ಕಾರಣ ಕಂಡಿರಲಿಲ್ಲ.
ವಿವಾಹವಾದ ಸುಮಾರು ಆರು ತಿಂಗಳ ಕಾಲ ಜೀವನ ಸುಂದರವಾಗಿತ್ತು. ಆ ನಂತರದಲ್ಲಿ ಗಂಡನಲ್ಲಾದ ಬದಲಾವಣೆಗಳು ಅವಳ ಕಣ್ಣಿಗೆ ಕಾಣತೊಡಗಿದವು. ಅವಳಿಗೆ ತಿಳಿಯದಂತೆ, ಅವಳನ್ನು ತಪ್ಪಿಸಿ, ಅವನು ಯಾರೊಂದಿಗೋ ಮಾತನಾಡುತ್ತಿದ್ದ ರೀತಿ ಅವನಿಗೆ ವಿವಾಹ ಬಾಹಿರ ಸಂಬಂಧವಿದೆ ಎಂಬ ಅವಳ ಅನುಮಾನವನ್ನು ದೃಢ ಪಡಿಸಿದವು. ಆದರೆ ಈ ಬಗ್ಗೆ ಅವನನ್ನು ಪ್ರಶ್ನೆ ಮಾಡಲು ಅವಳು ಪ್ರಯತ್ನಿಸಿದಾಗಲೆಲ್ಲಾ ಅವನು ಏರಿದ ದನಿಯಲ್ಲಿ ಕಿರುಚಾಡಿ ಅವಳನ್ನು ಸುಮ್ಮನಾಗಿಸುತ್ತಿದ್ದ. ಇಲ್ಲವೇ ಅವಳೇ ಅಂಥ ಸಂಬಂಧವನ್ನು ಹೊಂದಿದ್ದಾಳೆಂದು ಆರೋಪಿಸಿ ಎಲ್ಲರ ಹೆಸರನ್ನೂ ಅವಳೊಂದಿಗೆ ತಳುಕು ಹಾಕಿ ಅತ್ಯಂತ ನೀಚ ಮಟ್ಟದಲ್ಲಿ ಅವಳ ಮೇಲೆ ಆರೋಪ ಹೊರಿಸುತ್ತಿದ್ದ. ಈ ಅಂಶಗಳು ವಿಕೋಪಕ್ಕೆ ಹೋಗಿ ಅವಳಿಗೆ ಅತೀವವಾದ ಮಾನಸಿಕ ಹಿಂಸೆಯನ್ನು ಉಂಟು ಮಾಡುತ್ತಿದ್ದವು. ಕಡೆಗೆ ಅವಳಿಗೆ ಅವನೊಡನೆ ಜೀವಿಸುವುದೇ ದುಸ್ತರವೆನಿಸತೊಡಗಿತು. ಆದರೆ ಅವನ ವಿವಾಹ ಬಾಹಿರ ಸಂಬಂಧವನ್ನು ಸಾಬೀತು ಪಡಿಸುವ ಯಾವುದೇ ಮಾರ್ಗವಿರಲಿಲ್ಲ ಆಕೆಗೆ. ಆಗ ಆಕೆ ಮೊರೆಹೋದದ್ದು ತಂತ್ರಜ್ಞಾನಕ್ಕೆ. ತಂತ್ರಜ್ಞಾನದ ನೆರವು ಪಡೆದು ಆಕೆ ಅವನಿಗೆ ತಿಳಿಯದಂತೆ, ಅವನು ಅವನ ಗೆಳತಿಯ ಜೊತೆ ನಡೆಸಿದ ಸಂಭಾಷಣೆಗಳನ್ನು ಧ್ವನಿ ಮುದ್ರಿಸಿಕೊಂಡಳು.
ರೇಖಾ ಮಾನಸಿಕ ಹಿಂಸೆಯ ಕಾರಣದ ಮೇಲೆ ರಮೇಶನಿಂದ ವಿಚ್ಛೇದನೆ ಬೇಡಿ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಾಗ, ಇತರ ಸಾಕ್ಷ್ಯಗಳ ಜೊತೆಗೆ ಆಕೆ ಧ್ವನಿ ಮುದ್ರಿಸಿಕೊಂಡಿದ್ದ ಸಂಭಾಷಣೆಯ ಸಿ.ಡಿ.ಯನ್ನೂ ಸಾಕ್ಷ್ಯವನ್ನಾಗಿ ಹಾಜರುಪಡಿಸಿದಳು. ಆದರೆ ಇದನ್ನು ಸಾರಾಸಗಟಾಗಿ ರಮೇಶ ಅಲ್ಲಗಳೆದ. ಆದರೆ, ಸಿ.ಡಿ.ಯಲ್ಲಿ ಅಡಕವಾಗಿರುವ ಸಂಭಾಷಣೆಗಳೇ ಪ್ರಕರಣದಲ್ಲಿ ಬಹಳ ಮುಖ್ಯವಾದ ಸಾಕ್ಷ್ಯವಾಗಿರುವುದರಿಂದ ಮತ್ತು ಅದನ್ನು ಪ್ರತಿಪಕ್ಷದವರು ಅಲ್ಲಗಳೆಯುತ್ತಿರುವುದರಿಂದ, ಸಿ.ಡಿ.ಯಲ್ಲಿರುವ ವಿಷಯಗಳ ಸತ್ಯಾಸತ್ಯತೆಯನ್ನು ರುಜುವಾತುಪಡಿಸಲು ನ್ಯಾಯಾಲಯ ತಜ್ಞರನ್ನು ನೇಮಿಸಬೇಕೆಂದು ರೇಖಾಳ ವಕೀಲರು ಮನವಿ ಮಾಡಿಕೊಂಡರು. ಆದರೆ, ಸಿ.ಡಿ.ಯಲ್ಲಿರುವ ಧ್ವನಿ ಮುದ್ರಣವನ್ನು ಆತನ ಮಲಗುವ ಕೋಣೆಯಲ್ಲಿ ಅವನಿಗೆ ತಿಳಿಯದಂತೆ ಧ್ವನಿಮುದ್ರಣ ಯಂತ್ರವನ್ನಿಟ್ಟು ಧ್ವನಿ ಮುದ್ರಿಸಿಕೊಂಡಿರುವುದರಿಂದ, ಸಂವಿಧಾನದ 19 ಮತ್ತು 21ನೇ ಅನುಚ್ಛೇದದ ಅಡಿಯಲ್ಲಿ ವ್ಯಕ್ತಿಗೆ ಇರುವ ಖಾಸಗಿತನದ ಹಕ್ಕನ್ನು ಅದು ಉಲ್ಲಂಘಿಸುತ್ತದೆ, ಆದ್ದರಿಂದ ಈ ಕೋರಿಕೆಯನ್ನು ಮನ್ನಿಸಬಾರದು ಮತ್ತು ಅಂಥ ಸಾಕ್ಷ್ಯವನ್ನು ಪರಿಗಣಿಸಬಾರದು ಎಂಬುದು ಅವಳ ವಿರೋಧ ಪಕ್ಷದವರ ವಕೀಲರ ವಾದವಾಗಿತ್ತು.
ಇಲ್ಲಿ ಮುಖ್ಯವಾಗಿ ಉಂಟಾದ ಪ್ರಶ್ನೆಯೆಂದರೆ, ಧ್ವನಿ ಮುದ್ರಿತ ಸಾಕ್ಷ್ಯ ನ್ಯಾಯಾಲಯದಲ್ಲಿ ಅಂಗೀಕಾರಾರ್ಹವೇ ಎಂಬುದು.
“ಆತನಿಗೆ ತಿಳಿಯದಂತೆ ಆತನ ಕೋಣೆಯಲ್ಲಿ ಧ್ವನಿ ಮುದ್ರಣ ಯಂತ್ರವನ್ನಿರಿಸಿ ಮಾಡಿಕೊಂಡ ಧ್ವನಿ ಮುದ್ರಣ ಖಂಡಿತವಾಗಿಯೂ ವ್ಯಕ್ತಿಯ ಖಾಸಗಿ ಹಕ್ಕನ್ನು ಉಲ್ಲಂಘಿಸುತ್ತದೆ. ಅಂಥ ಯಂತ್ರವನ್ನಿಡಲು ಖಂಡಿತವಾಗಿಯೂ ಪಕ್ಷಕಾರರಿಗೆ ಹಕ್ಕು ಇಲ್ಲ. ಆದ್ದರಿಂದ ಅಂಥ ಧ್ವನಿ ಮುದ್ರಣ ಸಾಕ್ಷ್ಯವಾಗಿ ಅಂಗೀಕಾರಾರ್ಹವೇ ಅಲ್ಲವೇ ಎಂಬ ಪ್ರಶ್ನೆ ಉಂಟಾಗುತ್ತದೆ. ಆದರೆ ಅದನ್ನು ನಾವು ಇಲ್ಲಿ ಚರ್ಚಿಸುವುದಿಲ್ಲ. ಅಂಥ ಹಕ್ಕು ಉಲ್ಲಂಘನೆಗೆ ಅವರು ಕಾನೂನು ವ್ಯವಹರಣೆಯನ್ನು ಎದುರಿಸಬೇಕಾಗುತ್ತದೆ. ಅದನ್ನು ಒತ್ತಟ್ಟಿಗೆ ಇಟ್ಟು, ಇಲ್ಲಿ ಚರ್ಚೆಗೆ ಒಳಪಡಬೇಕಾದ ವಿಷಯ, ಆ ಸಾಕ್ಷ್ಯ ಅಂಗೀಕಾರಾರ್ಹವೇ ಅಲ್ಲವೇ ಎಂಬುದು.”
ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ಮತ್ತೊಂದು ಪ್ರಕರಣದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವನ್ನು ಉಲ್ಲೇಖಿಸಿದರು -“ ವಿವಾದವನ್ನು ಬಗೆಹರಿಸಲು ನೆರವಾಗುವ ಯಾವುದೇ ವರದಿ, ಹೇಳಿಕೆ, ದಸ್ತಾವೇಜು, ಮಾಹಿತಿಯನ್ನು ಕುಟುಂಬ ನ್ಯಾಯಾಲಯ ಸಾಕ್ಷ್ಯವಾಗಿ ಅಂಗೀಕರಿಸಬಹುದು. ಇದರ ಉದ್ದೇಶ ಆದಷ್ಟೂ ಕುಟುಂಬ ನ್ಯಾಯಾಲಯದ ವ್ಯವಹರಣೆಗಳನ್ನು ಸರಳಗೊಳಿಸುವುದು ಮತ್ತು ಸುಗಮಗೊಳಿಸುವುದು. ಆದ್ದರಿಂದ ಸಾಕ್ಷ್ಯವಾಗಿ ಅದು ಅಂಗೀಕಾರಾರ್ಹವೇ ಅಲ್ಲವೇ ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ, ಆ ಸಾಕ್ಷ್ಯಗಳು ಅವರ ವಾದವನ್ನು ಸಮರ್ಥಿಸುತ್ತವೆಯೇ ಇಲ್ಲವೇ ಎಂಬುದಷ್ಟನ್ನೇ ನೋಡಲಾಗುತ್ತದೆ.”
“ಆದ್ದರಿಂದ ವ್ಯಕ್ತಿಯ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿ ಧ್ವನಿ ಮುದ್ರಿಸಿಕೊಂಡಿರುವ ಸಂಭಾಷಣೆ ಖಂಡಿತವಾಗಿ ನ್ಯಾಯಾಲಯದ ಮುಂದಿರುವ ವಿವಾದವನ್ನು ಪರಿಹರಿಸಲು ನೆರವು ನೀಡುತ್ತದೆ. ಆದ್ದರಿಂದ ಆ ಸಾಕ್ಷ್ಯಗಳು ಅಂಗೀಕಾರಾರ್ಹ” ಎಂದು ತೀರ್ಪು ನೀಡಿ, ರೇಖಾಳಿಗೆ ವಿಚ್ಛೇದನೆ ನೀಡಿದರು.
ಪ್ರತಿಪಕ್ಷಕಾರರು ಎತ್ತಿದ ಪ್ರಶ್ನೆಗೆ ನ್ಯಾಯಾಧೀಶರು ನೀಡಿದ ಉತ್ತರ ಮತ್ತು ಸಮರ್ಥನೆ ಹಾಗೂ ತೀರ್ಪು, ತಂತ್ರಜ್ಞಾನದ ಈ ಯುಗದಲ್ಲಿ ಶೋಷಣೆಗೆ ಒಳಗಾಗುವ, ಆದರೆ ಆ ಕುರಿತಾಗಿ ಸಾಕ್ಷ್ಯವನ್ನು ಹಾಜರುಪಡಿಸಲು ವಿಫಲರಾಗುವ ಹೆಣ್ಣು ಮಕ್ಕಳಿಗೆ (ಗಂಡು ಮಕ್ಕಳಿಗೂ ಸಹ) ಹೊಸ ವಿಧಾನವನ್ನು ತೋರಿಸಿ ಅವರು ನಿರಾಳವಾಗಿ ಉಸಿರಾಡುವಂತೆ ಮಾಡುತ್ತದೆ.
(ಪಕ್ಷಕಾರರನ್ನು ಮತ್ತು ಅವರ ಹೆಸರುಗಳನ್ನು ಬದಲಿಸಲಾಗಿದೆ.)

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *