ಕಾನೂನು ಕನ್ನಡಿ/ಜೀವ ರಕ್ಷಣೆ ಪರಮೋಚ್ಚ ಕರ್ತವ್ಯ : ಜೀವಪರ ತೀರ್ಪು – ಡಾ. ಗೀತಾ ಕೃಷ್ಣಮೂರ್ತಿ

ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಬ್ಬರು ರಸ್ತೆ ಅಪಘಾತದಲ್ಲಿ ಸಾಯುತ್ತಾರೆ. ಅದರಲ್ಲಿ ಬಹುತೇಕರು ಸಕಾಲದಲ್ಲಿ ವೈದ್ಯಕೀಯ ನೆರವು ಸಿಕ್ಕಿದ್ದರೆ ಬದುಕುಳಿಯುವ ಸಾಧ್ಯತೆ ಇದೆ. ಕಾನೂನು ಪ್ರಕ್ರಿಯೆಗೆ ಹೆದರಿ ಬಹಳಷ್ಟು ಜನ ಅಪಘಾತದಲ್ಲಿ ಗಾಯಗೊಂಡವರ ನೆರವಿಗೆ ಧಾವಿಸುವುದಿಲ್ಲ. ಕೇಂದ್ರ ಸರ್ಕಾರ  ಹೊರಡಿಸಿರುವ ಹೊಸ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಅಪಘಾತ ಸಂತ್ರಸ್ತರ ನೆರವಿಗೆ ಮುಂದಾಗುವವರಿಗೆ ಯಾವುದೇ ಕಿರುಕುಳ ನೀಡುವಂತಿಲ್ಲ

ತಮ್ಮ ಎದುರಿನಲ್ಲೆ ಅಪಘಾತ ಸಂಭವಿಸಿ, ಯಾರಾದರೂ ಗಾಯಗೊಂಡರೆ ಅಥವಾ ಗಾಯಗೊಂಡು ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದರೆ ಬಳಿ ಇರುವವರು ಅವರ ಸಹಾಯಕ್ಕೆ ಧಾವಿಸುವುದು ತತ್‍ಕ್ಷಣದ ಮಾನವೀಯ ಪ್ರತಿಕ್ರಿಯೆ. ಗಾಯಗೊಂಡವರಿಗೆ ತತ್‍ಕ್ಷಣದಲ್ಲಿ ಸಹಾಯ ದೊರೆತು ಚಿಕಿತ್ಸೆ ದೊರೆತಲ್ಲಿ ಎಷ್ಟೋ ಜೀವಗಳು ಉಳಿಯುವುದರಲ್ಲಿ ಸಂದೇಹವಿಲ್ಲ. ಆದರೆ ಸಹಾಯ ಮಾಡಲು ಮನಸ್ಸಿದ್ದರೂ ಹಿಂಜರಿಯುವವರೇ ಹೆಚ್ಚು. ಇದಕ್ಕೆ ಕಾರಣ, ಆ ನಂತರದಲ್ಲಿ ಪೊಲೀಸು, ಕೋರ್ಟು ಕಚೇರಿ ಎಂದು ಅಲೆಯಬೇಕಾಗುತ್ತದೆ ಎಂಬುದು. ಆದರೆ, ಈ ಒಂದು ಕಾರಣಕ್ಕಾಗಿ, ಸಹಾಯ ದೊರೆಯದೇ ಜೀವ ಬಲಿಯಾಗಬಾರದು. ಇದನ್ನು ಸರ್ವೋಚ್ಚ ನ್ಯಾಯಾಲಯ ಪದೇ ಪದೇ ಹೇಳಿದೆ. ಆದರೂ ಅನೇಕ ಬಾರಿ ಈ ಬಗ್ಗೆ ಅರಿವಿಲ್ಲದೆ, ಜನ ಸಹಾಯ ಮಾಡಲು ಹಿಂಜರಿಯುತ್ತಾರೆ.
ಇಂಥ ಅನೇಕ ಅಪಘಾತಗಳ ವರದಿಗಳನ್ನು ವೃತ್ತ ಪತ್ರಿಕೆಗಳಲ್ಲಿ ಓದಿ, ದೃಶ್ಯ ಮಾಧ್ಯಮಗಳಲ್ಲಿ ನೋಡಿ ನಿಡುಸುಯ್ದದ್ದಿದೆ, ರೊಚ್ಚಿಗೆದ್ದದ್ದೂ ಇದೆ. ಆದರೆ ಅಂಥ ಸಂದರ್ಭದಲ್ಲೂ, ಸಹಾಯ ಮಾಡಲು ಜೀವ ತುಡಿಯತ್ತಿದ್ದರೂ, ಯಾರೂ ಸಹಾಯಕ್ಕೆ ಧಾವಿಸದೆ ಇರಲು ಕಾರಣ, ತಾವೇ ಎಲ್ಲಿ ಗೊಂದಲದಲ್ಲಿ, ಕಾನೂನಿನ ಕಗ್ಗಂಟಿನಲ್ಲಿ ಸಿಲುಕಿಕೊಳ್ಳುತ್ತೇವೆಯೋ ಎಂಬ ಭಯ.

2004 ರಲ್ಲಿ, ರಾಜೀವ್ ನಾರಾಯಣ್ ಎಂಬುವವರು ನವ ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಿಂದ ಹೊರಬರುತ್ತಿದ್ದರು. ಒಬ್ಬಾತ ರಸ್ತೆಯ ಮಧ್ಯದಲ್ಲಿ ತನ್ನ ಬೈಕ್‍ನಿಂದ ಬಿದ್ದು ನರಳುತ್ತಿರುವುದನ್ನು ನೋಡಿದರು. ಕೂಡಲೇ ಸಹಾಯ ಮಾಡಲು ಅವನತ್ತ ಧಾವಿಸಿದರು. ಅಷ್ಟರಲ್ಲಿ ಅಲ್ಲಿ ಜನ ಸೇರಿ, ರಾಜೀವ್ ಅವರೇ ಅವನಿಗೆ ಅಪಾಯ ಮಾಡುತ್ತಿದ್ದಾರೆಂಬಂತೆ ‘ಹೊಡೆಯಿರಿ, ಹೊಡೆಯಿರಿ’ ಎಂದು ಅರಚುತ್ತಾ ರಾಜೀವ್ ಅವರತ್ತ ನುಗ್ಗಿದರು, ಕೆಲವರು ಅವರಿಂದ ಹಣ ಕೀಳಲೂ ಸಹ ಮುಂದಾದರು. ಆ ಘಟನೆ ಅವರಿಗೆ ಎಷ್ಟು ಆಘಾತವನ್ನುಂಟು ಮಾಡಿತೋ ಅಷ್ಟೇ ಚಿಂತನೆಗೂ ಹಚ್ಚಿತು. ಅಪಘಾತದಲ್ಲಿ ಗಾಯಗೊಂಡವರಿಗೆ ಯಾವುದೇ ಹಿಂಜರಿಕೆಯಿಲ್ಲದೆ, ಜನ ಮುಂದೆ ಬಂದು ಸಹಾಯ ಮಾಡಬೇಕು, ಈ ದಿಕ್ಕಿನಲ್ಲಿ ತಾವು ಏನಾದರೂ ಮಾಡಬೇಕು ಎಂದು ನಿರ್ಧರಿಸಿದರು. ಅಲ್ಲಿಂದೀಚೆಗೆ, ಈ 14 ವರ್ಷಗಳಲ್ಲಿ ತಾವು ಸುಮಾರು 35 ಜೀವಗಳನ್ನು ಉಳಿಸುವಲ್ಲಿ ನೆರವಾಗಿರುವುದಾಗಿ ಹೇಳುತ್ತಾರೆ. ಅವರಿಂದಾಗಿ ಜೀವ ಉಳಿದ ದಿನೇಶ್ ತಿವಾರಿ ಎಂಬುವವರೂ ಅವರೊಂದಿಗೆ ಕೈಜೋಡಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡವರಿಗೆ ಕೂಡಲೇ ಸಹಾಯ ಹಸ್ತ ಚಾಚುವಲ್ಲಿ ಇರುವ ಹಿಂಜರಿಕೆ ಹಾಗೂ ಜನರ ಮನೋಭಾವದಿಂದಾಗಿ ರಾಜೀವ್ ಅವರು ತೋರಿದಂಥ ಪ್ರತಿಕ್ರಿಯೆ ಇಂದು ವ್ಯಕ್ತವಾಗುತ್ತಿಲ್ಲ. ಆದರೆ ಅವರು ತೋರಿದಂಥ ರಿ ಪ್ರತಿಕ್ರಿಯೆಯೇ ಆ ಕ್ಷಣದ ಸಹಜ ಪ್ರತಿಕ್ರಿಯೆಯಾಗಬೇಕು. ಆದರೆ ಹಾಗಾಗುತ್ತಿಲ್ಲ. ಸಾಯುತ್ತಿರುವ ವ್ಯಕ್ತಿಗಳಿಗೂ ಸಹಾಯ ಹಸ್ತ ಚಾಚದಿರುವಂಥ ಅಮಾನವೀಯತೆ ಕೊನೆಯಾಗಬೇಕಾದರೆ, ಸಹಾಯ ಮಾಡುವವರಿಗೆ ತಮಗೇನೂ ತೊಂದರೆಯಾಗದು, ಯಾವುದೇ ಕಾನೂನಿನ ತೊಡಕಿನಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಆಗುವುದಿಲ್ಲ ಎಂಬ ಭರವಸೆಯನ್ನು ಮೂಡಿಸುವುದು ಅಗತ್ಯ.

ಈ ದಿಕ್ಕಿನಲ್ಲಿ ಕಾರ್ಯ ಪ್ರವೃತ್ತವಾದುದು ‘ಸೇವ್ ಲೈಫ್ ಫೌಂಡೇಷನ್’ ಎಂಬ ಸ್ವಯಂ ಸೇವಾ ಸಂಸ್ಥೆ. ಈ ಸಂಸ್ಥೆ 2013 ರಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಅಪಘಾತವನ್ನು ನೋಡುವ ನೂರು ಮಂದಿಯ ಪೈಕಿ ಕೇವಲ ಇಪ್ಪತ್ತಾರು ಮಂದಿ ಮಾತ್ರ ಅಪಘಾತಕ್ಕೆ ಒಳಗಾದವರಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ಉಳಿದ 74 ರಷ್ಟು ಜನ ಸಹಾಯ ಮಾಡುವ ಬದಲು ತಟಸ್ಥರಾಗಿ ಸುಮ್ಮನೆ ನಿಂತು ನೋಡುತ್ತಾರೆ. ಸಹಾಯ ಮಾಡಲು ಹಿಂಜರಿಯುವ ಈ ಮನೋಭಾವವೇ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗಲು ಕಾರಣ. ಗಾಯಗೊಂಡು ರಸ್ತೆಯಲ್ಲಿ ಬಿದ್ದು ನರಳುತ್ತಿರುವವರಿಗೆ ಕೂಡಲೇ ಸಹಾಯ ದೊರೆತು ವೈದ್ಯಕೀಯ ಚಿಕಿತ್ಸೆ ದೊರೆತದ್ದೇ ಆದರೆ ಅರ್ಧದಷ್ಟು ಸಾವುಗಳನ್ನು ತಪ್ಪಿಸಬಹುದಾಗಿರುವಂಥ ವಾಗಿರುತ್ತವೆ ಎನ್ನುತ್ತದೆ ಈ ಸಮೀಕ್ಷೆ. ಅಪಘಾತದಲ್ಲಿ ಗಾಯಗೊಂಡವರ ಸಹಾಯಕ್ಕೆ ಸದುದ್ದೇಶದಿಂದ ಧಾವಿಸುವ ಆಪದ್ಬಾಂಧವರಿಗೆ ಕಿರುಕುಳದಿಂದ, ಭಯ ಹಾಗೂ ಒತ್ತಡದಿಂದ ರಕ್ಷಣೆ ನೀಡುವ ಬಗ್ಗೆ ಮತ್ತು ಪರಿಣಾಮಕಾರೀ ಆಘಾತ (ಟ್ರಾಮಾ) ಸೇವೆಗಳನ್ನು ಒದಗಿಸುವುದನ್ನು ಕಡ್ಡಾಯ ಮಾಡುವ ಬಗ್ಗೆ ಅಗತ್ಯ ಮಾರ್ಗದರ್ಶಿ ಸೂತ್ರಗಳನ್ನು ಹಾಕಿಕೊಡಬೇಕೆಂದು ಕೋರಿ ಇದೇ ಸಂಸ್ಥೆ 2012 ರಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಿತು.

2013 ರಲ್ಲಿ ಸರ್ವೋಚ್ಚ ನ್ಯಾಯಾಲಯ ಒಂದು ಸಮಿತಿಯನ್ನು ರಚಿಸಿ ಈ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿತು. ಈ ವರದಿಯನ್ನು ಆಧರಿಸಿ, ಸರ್ವೋಚ್ಚ ನ್ಯಾಯಾಲಯ ನೀಡಿದ ನಿರ್ದೇಶನದ ಪ್ರಕಾರ ಕೇಂದ್ರ ಸರ್ಕಾರ ಆಪದ್ಬಾಂಧವರಿಗೆ ಎಲ್ಲ ರೀತಿಯ ಕಿರುಕುಳದಿಂದ ರಕ್ಷಣೆ ನೀಡುವ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಿತು. ಆದರೆ ಇವಕ್ಕೆ ಕಾನೂನಿನ ಬಲ ಇಲ್ಲದೆ ಇದ್ದುದರಿಂದ, ಸಹಾಯ ನೀಡಲು ಜನರಲ್ಲಿದ್ದ ಹಿಂಜರಿಕೆ ಹಾಗೆಯೇ ಮುಂದುವರಿಯಿತು. 2016 ರ ಮಾರ್ಚ್ 4 ರಂದು ಅರ್ಜಿಯ ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯ , ಈ ಮಾರ್ಗದರ್ಶಿ ಸೂತ್ರಗಳನ್ನು ಎಲ್ಲ ರಾಜ್ಯಗಳೂ ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚನೆ ನೀಡಿತು. ಹಾಗಾಗಿ ಈ ಮಾರ್ಗದರ್ಶನ ಸೂತ್ರಗಳು ಕಾನೂನಿನಷ್ಟೇ ಬಲ ಪಡೆದುಕೊಳ್ಳುತ್ತವೆ ಮತ್ತು ಅದರ ಉಲ್ಲಂಘನೆ ನ್ಯಾಯಾಲಯ ನಿಂದನೆಯಾಗುತ್ತದೆ ಎಂಬುದನ್ನೂ ಸ್ಪಷ್ಟ ಪಡಿಸಲಾಯಿತು.

ಈ ಮಾರ್ಗದರ್ಶನ ಸೂತ್ರದ ಮುಖ್ಯ ಅಂಶಗಳು ಹೀಗಿವೆ-

ಯಾವುದೇ ಅಪಘಾತದಲ್ಲಿ ಯಾರಿಗಾದರೂ ಘಾಸಿ/ಗಾಯ ಉಂಟಾಗಿದ್ದರೆ ಅಥವಾ ಯಾರದ್ದಾದರೂ ಸಾವು ಉಂಟಾಗಿದ್ದರೆ, ಅದನ್ನು ನೋಡಿದ ಯಾರೇ ವ್ಯಕ್ತಿ ಪೊಲೀಸು ಠಾಣೆಗೆ ಅಥವಾ ಪೊಲೀಸು ಕಂಟ್ರೋಲ್ ರೂಮಿಗೆ ದೂರವಾಣಿ ಮೂಲಕ ತಿಳಿಸಬಹುದು. ಹಾಗೆ ತಿಳಿಸಿದ ವ್ಯಕ್ತಿ ತನ್ನ ಹೆಸರು, ವಿಳಾಸ, ಫೋನ್ ನಂಬರ್ ಮುಂತಾದ ತನ್ನ ವೈಯಕ್ತಿಕ ಮಾಹಿತಿಯನ್ನು ತಿಳಿಸುವ ಅಗತ್ಯವಿಲ್ಲ.
ಅಪಘಾತದ ಸ್ಥಳಕ್ಕೆ ಬಂದ ನಂತರವೂ ಪೊಲೀಸರು ಆ ವಿವರಗಳನ್ನು ತಿಳಿಸುವಂತೆ ಮಾಹಿತಿ ನೀಡಿದ ವ್ಯಕ್ತಿಯನ್ನು ಒತ್ತಾಯಿಸುವಂತಿಲ್ಲ.
ಅಪಘಾತ ಸಂತ್ರಸ್ತನಿಗೆ ಸಹಾಯ ಮಾಡಿದ ಯಾರೇ ವ್ಯಕ್ತಿಯನ್ನು ಅದಕ್ಕೆ ಸಂಬಂಧಿಸಿದ ಯಾವುದೇ ವಿಚಾರಣೆಯಲ್ಲಿ ಸಾಕ್ಷಿಯಾಗುವಂತೆ ಒತ್ತಾಯ ಮಾಡುವಂತಿಲ್ಲ. ಸಾಕ್ಷ್ಯ ನುಡಿಯಬೇಕೇ ಬೇಡವೇ ಎಂಬುದು ಸಹಾಯ ಮಾಡಿದ ವ್ಯಕ್ತಿಯ ವಿವೇಚನೆಗೆ ಬಿಟ್ಟದ್ದು.
ಸಹಾಯ ಮಾಡಿದ ವ್ಯಕ್ತಿ ಸಾಕ್ಷ್ಯ ನುಡಿಯಲು ಒಪ್ಪಿಕೊಂಡರೆ, ಅವರ ಸಾಕ್ಷ್ಯವನ್ನು, ಅವರಿಗೆ ಅನುಕೂಲವಾಗುವ ಸಮಯದಲ್ಲಿ ಮತ್ತು ಸ್ಥಳದಲ್ಲಿ ಪಡೆಯತಕ್ಕದ್ದು ಮತ್ತು ವಿಚಾರಣಾಧಿಕಾರಿ ಸಾಧಾರಣ ಉಡುಪಿನಲ್ಲಿರತಕ್ಕದ್ದು.
ವಿಚಾರಣಾಧಿಕಾರಿ, ಸಾಕ್ಷ್ಯ ಪಡೆಯಲು ಅಪಘಾತ ಸಮಯದಲ್ಲಿ ಸಹಾಯ ನೀಡಿದ ವ್ಯಕ್ತಿಯನ್ನು ಪೊಲೀಸು ಠಾಣೆಗೇ ಕರೆಸಿದ್ದಲ್ಲಿ ಅದಕ್ಕೆ ಕಾರಣಗಳನ್ನು ಲಿಖಿತದಲ್ಲಿ ದಾಖಲಿಸಬೇಕು.
ಒಂದು ವೇಳೆ ಸಹಾಯ ಮಾಡಿದ ವ್ಯಕ್ತಿ ತಾನಾಗಿಯೇ ಪೊಲೀಸು ಠಾಣೆಗೆ ಬಂದು ಸಾಕ್ಷ್ಯ ಹೇಳಲು ಸಿದ್ಧನಾದರೆ, ವಿಳಂಬ ಮಾಡದೆ, ಆತನಿಗೆ ತೊಂದರೆಯಾಗದಂತೆ, ಆತನ ಸಾಕ್ಷ್ಯವನ್ನು ಒಂದೇ ಬಾರಿಗೆ ನಿರ್ದಿಷ್ಟ ಸಮಯದೊಳಗೆ ಪಡೆಯಬೇಕು.
ಸಹಾಯ ಮಾಡಿದ ವ್ಯಕ್ತಿ, ಸಾಕ್ಷ್ಯ ನುಡಿದವನಾಗಲೀ ಅಥವಾ ಕೇವಲ ವರದಿ ಮಾಡಿದ ವ್ಯಕ್ತಿಯಾಗಲಿ. ಲಿಂಗ, ಜಾತಿ, ಮತ, ರಾಷ್ಟ್ರೀಯತೆಯ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ.
ಪೊಲೀಸರು ಎಫ್‍ಐಆರ್ ಅನ್ನು ದಾಖಲು ಮಾಡಿಕೊಳ್ಳುವ ಮೊದಲೇ ಮತ್ತು ಗಾಯಗೊಂಡ ವ್ಯಕ್ತಿಯ ಕುಟುಂಬವನ್ನು ಪತ್ತೆ ಹಚ್ಚುವ ಮೊದಲೆ. ಚಿಕಿತ್ಸೆ ನೀಡಲು ವ್ಶೆದ್ಯರಿಗೆ ಅವಕಾಶವಿರುತ್ತದೆ.
ಸಹಾಯ ನೀಡಿದವರ ವಿರುದ್ಧ ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲು ಅವಕಾಶ ವಿರುವುದಿಲ್ಲ.

ಈ ಮಾರ್ಗದರ್ಶಿ ಸೂತ್ರಗಳು ಇಂದು ದೇಶದಾದ್ಯಂತ ಜಾರಿಯಲ್ಲಿದ್ದರೂ ಆ ಬಗ್ಗೆ ಕಾನೂನು ರಚಿಸಲು ಪ್ರಪ್ರಥಮವಾಗಿ ಮುಂದಾದದ್ದು ಕರ್ನಾಟಕ ರಾಜ್ಯ. ರಾಜ್ಯ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ‘ಆಪದ್ಬಾಂಧವರ ಮತ್ತು ವೈದ್ಯ ವೃತ್ತಿ ನಿರತರ ವಿಧೇಯಕ’ ದ ಮುಖ್ಯಾಂಶಗಳೆಂದರೆ-

ಸಹಾಯ ನೀಡುವವರಿಗೆ-
* ಸಿವಿಲ್ ಹಾಗೂ ಕ್ರಿಮಿನಲ್ ಕಾನೂನು ಮೊಕದ್ದಮೆಗಳಿಗೆ ಒಳಪಡದಂತೆ ರಕ್ಷಣೆ,
* ನ್ಯಾಯಲಯ ಅಥವಾ ಪೊಲೀಸು ಠಾಣೆಗೆ ಹೋಗಬೇಕಾಗಿಲ್ಲ ಎಂಬ ರಕ್ಷಣೆ,
* 1500 ರೂಗಳ ಪ್ರೋತ್ಸಾಹ ಧನ,
* ನ್ಯಾಯಾಲಯಕ್ಕೆ ಹಾಜರಾಗುವುದು ಅಗತ್ಯವಾದ ಸಂದರ್ಭದಲ್ಲಿ, ಅದಕ್ಕೆ ತಗಲುವ ಎಲ್ಲ ಖರ್ಚನ್ನು ಆಪದ್ಬಾಂಧವ ನಿಧಿಯಿಂದ ಭರಿಸುವುದು.

ಆಸ್ಪತ್ರ್ರೆಗಳು ಮತ್ತು ವೈದ್ಯರುಗಳು-
* ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡೂ ಅಪಘಾತ ಸಂತ್ರಸ್ತನಿಗೆ ತುರ್ತು ಚಿಕಿತ್ಸೆಯನ್ನು ಕೂಡಲೇ ನೀಡಬೇಕಾದುದು ಕಡ್ಡಾಯ.
* ಚಿಕಿತ್ಸೆ ನೀಡಲು ನಿರಾಕರಿಸುವ ವೈದ್ಯರ ವಿರುದ್ಧ ಕಠಿಣ ಕ್ರಮ.
* ಮೆಡಿಕೋ-ಲೀಗಲ್ ಮೊಕದ್ದಮೆಗಳಿಂದ ವ್ಶೆದ್ಯರಿಗೆ ರಕ್ಷಣೆ

ರಾಜ್ಯ ಸರ್ಕಾರ ಜಾರಿಗೊಳಿಸಬೇಕೆಂದಿರುವ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಇನ್ನೂ ಬೀಳಬೇಕಿದೆ.
ಈಗಾಗಲೇ ಜಾರಿಯಲ್ಲಿರುವ ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಮತ್ತು ರಾಜ್ಯದ ಈ ಕಾನೂನು ಜಾರಿಗೆ ಬಂದ ನಂತರ, ಆ ಕಾನೂನಿನ ಬಗ್ಗೆ ಜನರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಜನರೂ ಸಹ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಮಾನವೀಯತೆಯನ್ನು ಮೆರೆಯಬೇಕಾದ ಅಗತ್ಯ ಇನ್ನೂ ಹೆಚ್ಚಾಗಿ ಇದೆ.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *