Latestಅಂಕಣ

ಕಾನೂನು ಕನ್ನಡಿ / ಜೀವನಾಂಶ: ಮಹಿಳೆಯ ಹಕ್ಕು – ಡಾ. ಗೀತಾ ಕೃಷ್ಣಮೂರ್ತಿ

ವಿವಾಹ ವಿಚ್ಛೇದನೆಯಲ್ಲಿ ಪತ್ನಿಗೆ ಜೀವನಾಂಶ ನೀಡುವುದರ ಮೂಲ ಉದ್ದೇಶ, ಅವಳ ಮುಂದಿನ ಜೀವನದಲ್ಲಿ ಬಿಕ್ಕಟ್ಟು ಬರಬಾರದು ಎಂಬುದೇ ಆಗಿದೆ. ಪತ್ನಿ ತನಗೆ ಜೀವನಾಂಶ ಬೇಡ ಎಂದು ವಿಚ್ಛೇದನೆಯ ಸಮಯದಲ್ಲಿ ಹೇಳಿದ್ದರೂ ಮುಂದೆ ಅದಕ್ಕೆ ಅರ್ಜಿ ಸಲ್ಲಿಸಿ ಪಡೆಯಬಹುದು. ಪತ್ನಿ ಜೀವನಾಂಶವನ್ನು ಬಿಟ್ಟುಕೊಡುವ ಯಾವುದೇ ಒಪ್ಪಂದವೂ, ಒಪ್ಪಿಗೆಯಿಂದ ಮಾಡಿಕೊಂಡಿದ್ದರೂ, ಅದು ಅನೂರ್ಜಿತವಾದುದು, ಅಂಥ ಒಪ್ಪಂದ ಸಾರ್ವಜನಿಕ ನೀತಿಗೆ ವಿರುದ್ಧವಾದುದು.

ಜೀವನಾಂಶ ಎಂದ ಕೂಡಲೇ ಈಗ ಧುತ್ತೆಂದು ಕಣ್ಣ ಮುಂದೆ ಬರುವುದು, ಅಮೆಜಾನ್ ಎಂಬ ದೈತ್ಯ ಉದ್ದಿಮೆಯ ಸಂಸ್ಥಾಪಕ ಜೆಫ್ ಬಿಜೋಸ್ ತನ್ನ ಪತ್ನಿ ಮಕೆನ್ಜಿ ಬಿಜೋಸ್‍ಗೆ ವಿಚ್ಛೇದನೆ ನೀಡಿದ ಸಂದರ್ಭದಲ್ಲಿ ನೀಡಿದ ಜೀವನಾಂಶದ ಮೊತ್ತ- 38.3 ಬಿಲಿಯನ್ ಡಾಲರುಗಳು! ಎಂದರೆ, 4.2 ಲಕ್ಷ ಕೋಟಿ ರೂಪಾಯಿಗಳು! ಜೆಫ್ ಬಿಜೋಸ್ ಪ್ರಪಂಚದ ಅತಿ ಶ್ರೀಮಂತ ವ್ಯಕ್ತಿಯೆಂದು ದಾಖಲಾಗಿರುವುದಷ್ಟೇ ಅಲ್ಲದೆ, ಇದುವರೆಗೆ ಅತ್ಯಂತ ದುಬಾರೀ ವಿಚ್ಛೇದನೆ ನೀಡಿದ ವ್ಯಕ್ತಿಯೆಂದೂ ಬಹುಶಃ ದಾಖಲೆಯಾಗಬಹುದು. ಈ ಮೊತ್ತ ಆತನ ಪತ್ನಿಯನ್ನು ಪ್ರಪಂಚದ ಅತಿ ಶ್ರೀಮಂತ ಮಹಿಳೆಯನ್ನಾಗಿಸಿದೆ! ಈ ಮೊತ್ತ ಇವರಿಬ್ಬರೂ ಒಪ್ಪಿ, ಬಹಳ ಸೌಹಾರ್ದಯುತವಾಗಿ ನಿರ್ಧರಿಸಿ, ನಿಗದಿಪಡಿಸಿಕೊಂಡ ಮೊತ್ತ.

ಆದರೆ, ಜನ ಸಾಮಾನ್ಯರ ಜೀವನದಲ್ಲಿ, ಜೀವನ ನಿರ್ವಹಣೆಗಾಗಿ ಅಗತ್ಯವಿರುವ ಕನಿಷ್ಠ ಮೊತ್ತಕ್ಕಾಗಿಯೂ ಹೋರಾಡುವ ಪರಿಸ್ಥಿತಿಯಿದೆ. ಭಾರತದಲ್ಲಿ, ಜೀವನಾಂಶಕ್ಕೆ ಸಂಬಂಧಿಸಿದಂತೆ ಆಯಾ ಧರ್ಮದವರಿಗೆ ಆಯಾ ಧರ್ಮದ ವೈಯಕ್ತಿಕ ಕಾನೂನುಗಳು ಅನ್ವಯವಾಗುತ್ತವೆ. ಆದರೆ, ದಂಡ ಪ್ರಕ್ರಿಯಾ ಸಂಹಿತೆಯ 125 ನೇ ಪ್ರಕರಣ, ಪರಿತ್ಯಕ್ತ ಹಾಗೂ ನಿರ್ಗತಿಕ ಪತ್ನಿಯರಿಗೆ, ಅವರು ಯಾವುದೇ ಧರ್ಮಕ್ಕೆ ಸೇರಿದ್ದರೂ, ಜೀವನಾಂಶದ ಹಕ್ಕನ್ನು ನೀಡುತ್ತದೆ.

ಜೀವನಾಂಶ ನೀಡುವುದರ ಉದ್ದೇಶ, ವಿವಾಹ ವಿಚ್ಛೇದನೆಯ ನಂತರ, ವಿಚ್ಛೇದಿತ ಪತ್ನಿ ತನ್ನ ಜೀವನ ನಿರ್ವಹಣೆಗೆ ಪರದಾಡುವಂತಾಗಬಾರದು ಎಂಬುದು ಮತ್ತು ಯಾವುದೇ ಆಸ್ತಿ, ಆದಾಯದ ಮೂಲವಿಲ್ಲದ ಮಹಿಳೆ ತನ್ನ ಬಡತನದ ಕಾರಣದಿಂದಾಗಿ ಅನೈತಿಕ ಚಟುವಟಿಕೆಗಳಿಗೆ ಮೊರೆ ಹೋಗಬಾರದು ಎಂಬುದು. ಜೀವನಾಂಶ ನೀಡುವಾಗ ಪರಿಗಣಿಸಲಾಗುವ ಇನ್ನೊಂದು ಅಂಶ, ವಿಚ್ಛೇದನೆಗೆ ಮುಂಚೆ, ಮಹಿಳೆ ತನ್ನ ಗಂಡನ ಮನೆಯಲ್ಲಿ ಯಾವ ರೀತಿಯಲ್ಲಿ ಜೀವನ ನಡೆಸುತ್ತಿದ್ದಳೋ ಮತ್ತು ಯಾವ ಸೌಲಭ್ಯಗಳನ್ನು ಅನುಭವಿಸುತ್ತಿದ್ದಳೋ ಅದೇ ರೀತಿಯ ಜೀವನವನ್ನು ನಡೆಸಲು ಮತ್ತು ಅಂಥವೇ ಸೌಲಭ್ಯಗಳನ್ನು ಅನುಭವಿಸಲು ಅವಶ್ಯವಿರುವಷ್ಟು ಹಣವನ್ನು ಜೀವನಾಂಶದ ರೂಪದಲ್ಲಿ ದೊರೆಯಬೇಕು ಎಂಬುದು. ಹಾಗಾಗಿ ಜೀವನಾಂಶ ನೀಡಿಕೆ ವಿಚ್ಛೇದನೆ ಪ್ರಕ್ರಿಯೆಯ ಒಂದು ಬಹು ಮುಖ್ಯವಾದ ಮತ್ತು ತಪ್ಪಿಸಲಾಗದ ಭಾಗ.

ವಿಚ್ಛೇದನೆ ತಡವಾಗದ ರೀತಿಯಲ್ಲಿ, ಖಾತ್ರಿಯಾಗಿ ಮತ್ತು ಅಪೀಲುಗಳ ಗೋಜಿಲ್ಲದೆ, ಒಂದೇ ಬಾರಿಗೆ ವಿಚ್ಛೇದನೆಯ ಪ್ರಕ್ರಿಯೆಯಿಂದ ಮತ್ತು ವಿವಾಹ ಬಂಧನದಿಂದ ಮುಕ್ತಿ ಪಡೆಯುವ ಮಾರ್ಗ ಎಂದರೆ `ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನೆ’ ಪಡೆಯುವುದು. ಹಾಗೆ ವಿಚ್ಛೇದನೆ ನೀಡಲು ಒಪ್ಪಿದ ಪತಿ ಪತ್ನಿಯರಿಬ್ಬರೂ ತಮ್ಮ ಷರತ್ತುಗಳನ್ನು ತಿಳಿಸಿ, ಒಂದು ಒಪ್ಪಂದಕ್ಕೆ ಬರುವುದು ಸಾಮಾನ್ಯ ಪ್ರಕ್ರಿಯೆ. ಈ ಷರತ್ತುಗಳಲ್ಲಿ ಮುಖ್ಯವಾದುದು ಎಂದರೆ ಪತಿ (ಸಾಮಾನ್ಯವಾಗಿ) ಪತ್ನಿಗೆ ಕೊಡಬೇಕಾದ ಜೀವನಾಂಶದ ಮೊತವನ್ನು ನಿಗದಿಪಡಿಸಿಕೊಳ್ಳುವುದು. ಈ ಕುರಿತಾಗಿ ಒಂದು ಒಪ್ಪಂದಕ್ಕೆ ಬಂದರೆಂದರೆ ನಿರಾಳ. ಇನ್ನು ಮುಂದಿನದು ಕಾನೂನು ಪ್ರಕ್ರಿಯೆ. ಅನೇಕ ಬಾರಿ, ಅನೇಕ ಕಾರಣಗಳಿಗಾಗಿ ತನಗೆ ಯಾವುದೇ ಜೀವನಾಂಶ ಬೇಡವೆಂದು ತಿಳಿಸಿ ಅದನ್ನು ಬಿಟ್ಟುಕೊಡುವುದೂ ಉಂಟು. ಹೀಗೆ ಅವರು ಒಪ್ಪಿಕೊಂಡ ಷರತ್ತುಗಳನ್ನು ಒಪ್ಪಂದದ ರೂಪಕ್ಕೆ ಇಳಿಸಿ, ಈ ಎಲ್ಲ ಷರತ್ತುಗಳಿಗೂ ತಾವು ಬದ್ಧರಾಗಿರುತ್ತೇವೆಂದು ಖಾತ್ರಿ ಪಡಿಸಿ ಅದಕ್ಕೆ ರುಜು ಹಾಕಿ ನ್ಯಾಯಾಲಯಕ್ಕೆ ಸಲ್ಲಿಸುವುದು. ಹಾಗಾಗಿಯೇ ಅಂಥ ವಿಚ್ಛೇದನೆಗೆ ನೀಡಿದ ಒಪ್ಪಿಗೆ, ಯಾವುದೇ ಹೆದರಿಕೆ, ಜೀವ ಬೆದರಿಕೆ, ಒತ್ತಾಯ, ಒತ್ತಡಗಳಿಂದ ಮುಕ್ತವಾಗಿದೆ ಎಂಬುದನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡಬೇಕು. ವಿಚ್ಛೇದನೆಯ ಡಿಕ್ರಿ ನೀಡುವುದಕ್ಕೆ ಮುನ್ನ, ಯಾವುದೇ ಸಮಯದಲ್ಲಿ ಬೇಕಾದರೂ ಒಪ್ಪಿಗೆಯನ್ನು ಹಿಂಪಡೆಯಬಹುದು.

ಹಾಗಾಗಿ, ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನೆ ಪಡೆಯುವ ಸಂದರ್ಭದಲ್ಲಿ, ಹೆಂಡತಿ ತನಗೆ ಜೀವನಾಂಶ ಬೇಡವೆಂದು, ಜೀವನಾಂಶ ಪಡೆಯಲು ತನಗಿರುವ ಹಕ್ಕನ್ನು ಬಿಟ್ಟುಕೊಡುತ್ತೇನೆಂದು ಒಪ್ಪಂದಕ್ಕೆ ಬಂದರೆ, ಗಂಡನಿಗೆ ಅದಕ್ಕಿಂತ ಹೆಚ್ಚಿನ ಸಂತೋಷವಿರಲಿಕ್ಕಿಲ್ಲ!

ಆದರೆ, ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನೆ ಪಡೆಯುವ ಸಂದರ್ಭದಲ್ಲಿ, ತನಗೆ ಜೀವನಾಂಶ ಬೇಡವೆಂದು, ಜೀವನಾಂಶ ಪಡೆಯಲು ತನಗಿರುವ ಹಕ್ಕನ್ನು ಬಿಟ್ಟುಕೊಡುತ್ತೇನೆಂದು ಒಪ್ಪಂದಕ್ಕೆ ಬಂದಿದ್ದು, ಆ ನಂತರದಲ್ಲಿ ಜೀವನಾಂಶ ಕೋರಿ ಹೆಂಡತಿ ನ್ಯಾಯಾಲಯದ ಮೆಟ್ಟಿಲು ಹತ್ತಿದರೆ…?

ಇಂಥದ್ದೊಂದು ಅರ್ಜಿ ಮುಂಬಯಿ ಉಚ್ಚ ನ್ಯಾಯಾಲಯದ ಮುಂದೆ ಬಂತು.

ರಾಮಚಂದ್ರ ಮತ್ತು ಶೋಭಾ ಎಂಬ ಪತಿ ಪತ್ನಿಯರು ಪರಸ್ಪರ ಒಪ್ಪಿಗೆಯಿಂದ ಬೇರೆ ಆಗಲು ನಿರ್ಧರಿಸಿದರು. ಅದರ ಜೊತೆಗೆ, ಇಬ್ಬರೂ ಪರಸ್ಪರರಿಂದ ಜೀವನಾಂಶವನ್ನು ಕ್ಲೇಮು ಮಾಡದಿರುವ ನಿರ್ಧಾರಕ್ಕೆ ಬಂದರು. ಅದರಂತೆ ಒಂದು ಒಪ್ಪಂದ ಪತ್ರವನ್ನೂ ಮಾಡಿಕೊಂಡರು. ಅವರ ಅರ್ಜಿ ವಿಚಾರಣೆಯ ನಂತರ ವಿಚ್ಛೇದನೆ ಡಿಕ್ರಿಯನ್ನು ಹೊರಡಿಸಲಾಯಿತು, ಅದರಲ್ಲಿ, ಇಬ್ಬರೂ ಪರಸ್ಪರರಿಂದ ಜೀವನಾಂಶವನ್ನು ಕ್ಲೇಮು ಮಾಡದಿರುವ ಬಗ್ಗೆ ಅವರಿಬ್ಬರೂ ಒಂದು ಒಪ್ಪಂದಕ್ಕೆ ಬಂದಿದ್ದಾರೆ ಎಂಬ ಅಂಶವನ್ನೂ ಸೇರ್ಪಡೆ ಮಾಡಲಾಗಿತ್ತು. ಆದರೆ, ಆ ನಂತರದಲ್ಲಿ ಪತ್ನಿ, ದಂಡ ಪ್ರಕ್ರಿಯಾ ಸಂಹಿತೆಯ 125 ನೇ ಪ್ರಕರಣದ ಅಡಿಯಲ್ಲಿ ಪತಿಯಿಂದ ಜೀವನಾಂಶವನ್ನು ಕ್ಲೇಮು ಮಾಡಿ ಅರ್ಜಿ ಸಲ್ಲಿಸಿದಳು. ಆದರೆ ಅವಳ ಅರ್ಜಿ ಕೆಳಗಿನ ಎರಡೂ ನ್ಯಾಯಾಲಯಗಳಲ್ಲಿ ತಿರಸ್ಕøತವಾಯಿತು. ಈ ಅರ್ಜಿ ತಿರಸ್ಕøತವಾಗಲು ಮುಖ್ಯ ಕಾರಣ, ತಾನು ಗಂಡನಿಂದ ಜೀವನಾಂಶವನ್ನು ಕ್ಲೇಮು ಮಾಡುವುದಿಲ್ಲವೆಂದು ಒಪ್ಪಿ ಮಾಡಿಕೊಂಡ ಒಪ್ಪಂದ. ಆದರೆ ಈ ಒಪ್ಪಂದವನ್ನು, ಮೋಸದಿಂದ ಮಾಡಿಸಿಕೊಂಡದ್ದು ಎಂಬುದು ಪತ್ನಿಯ ವಕೀಲರ ವಾದ.

ನಂತರದಲ್ಲಿ, ಪತ್ನಿ ಕೆಳ ನ್ಯಾಯಾಲಯಗಳ ತೀರ್ಪನ್ನು ಪ್ರಶ್ನಿಸಿ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದಳು. ಇಲ್ಲಿಯೂ ಅವಳ ಅರ್ಜಿಯಲ್ಲಿಯ ಬೇಡಿಕೆಯ ವಿರುದ್ಧ ಮಂಡಿಸಿದ ವಾದ ಅದೇ ಆಗಿತ್ತು- ಆಕೆ ಜೀವನಾಂಶದ ಕ್ಲೇಮನ್ನು ಸ್ವಇಚ್ಛೆಯಿಂದ ಬಿಟ್ಟುಕೊಟ್ಟಿರುವುದರಿಂದ, ಆಕೆ ಆ ಒಪ್ಪಂದವನ್ನು ಉಲ್ಲಂಘಿಸಿ, ಜೀವನಾಂಶವನ್ನು ಮತ್ತೆ ಕ್ಲೇಮು ಮಾಡಲು ಬರುವುದಿಲ್ಲ ಎಂಬುದು.
ಉಚ್ಚ ನ್ಯಾಯಾಲಯದಲ್ಲಿ ಆಕೆಯ ಪರವಾಗಿ ವಾದ ಮಂಡಿಸಿದ ವಕೀಲರು, ಆ ಒಪ್ಪಿಗೆಯನ್ನು ಅವಳಿಂದ ಮೋಸದಿಂದ ಪಡೆಯಲಾಗಿತ್ತು ಎಂಬುದನ್ನು ಉಲ್ಲೇಖಿಸಿದರು. ಆದರೆ ಅದಕ್ಕಿಂತ ಮುಖ್ಯವಾದ ಅವರ ವಾದ ಎಂದರೆ, ಜೀವನಾಂಶವನ್ನು ಬಿಟ್ಟುಕೊಡುವ ಯಾವುದೇ ಒಪ್ಪಂದವೂ, ಒಪ್ಪಿಗೆಯಿಂದ ಮಾಡಿಕೊಂಡಿದ್ದರೂ, ಅದು ಅನೂರ್ಜಿತವಾದುದು, ಅಂಥ ಒಪ್ಪಂದ ಸಾರ್ವಜನಿಕ ನೀತಿಗೆ ವಿರುದ್ಧವಾದುದು ಎಂಬುದು. ದಂಡ ಪ್ರಕ್ರಿಯಾ ಸಂಹಿತೆಯ 125 ನೇ ಪ್ರಕರಣದ ಮೂಲ ಉದ್ದೇಶ- ಪರಿತ್ಯಕ್ತ ಮತ್ತು ನಿರ್ಗತಿಕ ಪತ್ನಿಯರು, ನಿರ್ಲಕ್ಷಿತ ಮತ್ತು ತೊರೆಯಲಾದ ಮಕ್ಕಳು ಮತ್ತು ಅಸಮರ್ಥ ಹಾಗೂ ಅಸಹಾಯಕ ತಂದೆ ತಾಯಿಯರು ತಮ್ಮ ಜೀವನ ನಿರ್ವಹಣೆಗಾಗಿ ಭಿಕ್ಷೆ ಬೇಡುವಂತಾಗಬಾರದು ಮತ್ತು ಸಮಾಜಕ್ಕೆ ಬೇಡದ ಹೊರೆಯಾಗಬಾರದು ಮತ್ತು ತಮ್ಮ ಜೀವನ ನಿರ್ವಹಣೆಗೆ ಬೇರೆ ದಾರಿ ಕಾಣದೆ ಅನೈತಿಕ ಹಾಗೂ ಆಪರಾಧಿಕ ಚಟುವಟಿಕೆಗಳಲ್ಲಿ ತೊಡಗುವಂತಾಗಬಾರದು ಎಂಬುದು. ಆದ್ದರಿಂದ ದಂಡ ಪ್ರಕ್ರಿಯಾ ಸಂಹಿತೆಯ 125 ನೇ ಪ್ರಕರಣಕ್ಕೆ ವಿರೋಧವಾದ ಯಾವುದೇ ಒಪ್ಪಂದ ಅನೂರ್ಜಿತಗೊಳ್ಳುತ್ತದೆ.

ಒಂದು ಒಪ್ಪಂದ ಪತ್ರ ಆ ಘನ ಉದ್ದೇಶವನ್ನು ವಿಫಲಗೊಳಿಸಲಾರದು ಮತ್ತು ವಿಫಲಗೊಳಿಸಬಾರದು, ಹಾಗೆಯೇ ವಿಫಲಗೊಳಿಸಲು ಅವಕಾಶವನ್ನೂ ಕೊಡಬಾರದು. ಒಂದು ವೇಳೆ ಒಪ್ಪಂದವನ್ನು ಮೋಸದಿಂದ ಮಾಡಿಸದೆ ಅವಳೇ ಸ್ವಇಚ್ಛೆಯಿಂದ ಮಾಡಿದ್ದರೂ ಸಹ, ಆಕೆ ದಂಡ ಪ್ರಕ್ರಿಯಾ ಸಂಹಿತೆಯ 125 ನೇ ಪ್ರಕರಣದ ಅಡಿಯಲ್ಲಿ ಜೀವನಾಂಶವನ್ನು ಕ್ಲೇಮು ಮಾಡುವ ಹಕ್ಕನ್ನು ಕಳೆದುಕೊಳ್ಳುವುದಿಲ್ಲ.
ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳು ಸಹ ಇದೇ ವಾದವನ್ನು ಪುರಸ್ಕರಿಸಿವೆ.
ಜೀವನಾಂಶವನ್ನು ಪಡೆಯಲು ಪತ್ನಿ, ಜೀವನ ನಿರ್ವಹಣೆಗೆ ತನಗೆ ಬೇರೆ ಯಾವುದೇ ಆದಾಯ ಇಲ್ಲವೆಂಬುದನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡಬೇಕು. ಅರ್ಜಿದಾರರು ತೋರಿಸುವ ಕಾರಣಗಳು ಸಮರ್ಥನೀಯವಾಗಿವೆ ಎಂದು ನ್ಯಾಯಾಲಯಕ್ಕೆ ಮನದಟ್ಟಾದರೆ ಮಾತ್ರ ಜೀವನಾಂಶ ನೀಡಿಕೆಗೆ ಆದೇಶಿಸುತ್ತಾರೆ.

ದಂಡ ಪ್ರಕ್ರಿಯಾ ಸಂಹಿತೆಯ 125 ನೇ ಪ್ರಕರಣದ ಅಡಿಯಲ್ಲಿ ಉಂಟಾಗುವ ಶಾಸನಾತ್ಮಕ ಬದ್ಧತೆ ಯಾವುದೇ ಇತರ ಕಾನೂನು ವಿಧಿಸುವ ಬದ್ಧತೆಗಿಂತ ಭಿನ್ನವಾದುದು. ಆದ್ದರಿಂದ, ಒಂದು ಒಪ್ಪಂದ ಮಾಡಿಕೊಳ್ಳುವ ಮೂಲಕ ಪತಿ ತನ್ನ ಪತ್ನಿಯ ಶಾಸನಾತ್ಮಕ ಹಕ್ಕನ್ನು ವಿಫಲಗೊಳಿಸಲಾರ, ಕಿತ್ತುಕೊಳ್ಳಲಾರ ಅಥವಾ ವಿನಿಮಯ ಮಾಡಿಕೊಳ್ಳಲಾರ. ಅಂಥ ಯಾವುದೇ ಒಪ್ಪಂದ ಸಾರ್ವಜನಿಕ ನೀತಿಗೆ ವಿರುದ್ಧವಷ್ಟೇ ಅಲ್ಲ ಕಾನೂನಿನ ಉಪಬಂಧದ ಉದ್ದೇಶಕ್ಕೆ ಸಹ ವಿರುದ್ಧವಾದುದು. ಆದ್ದರಿಂದ, ದಂಡ ಪ್ರಕ್ರಿಯಾ ಸಂಹಿತೆಯ 125ನೇ ಪ್ರಕರಣವನ್ನು ಅತಿಕ್ರಮಿಸುವ ಯಾವುದೇ ಒಪ್ಪಂದಕ್ಕೆ ಕಾನೂನಿನ ಮಾನ್ಯತೆ ನೀಡುವುದು ಎಂದರೆ, ಸಾರ್ವಜನಿಕ ನೀತಿಗೆ ವಿರುದ್ಧವಾದುದಕ್ಕೆ ಮಾನ್ಯತೆ ನೀಡಿದಂತೆ. ಅಷ್ಟೇ ಅಲ್ಲದೆ, ಅದನ್ನು ಧಿಕ್ಕರಿಸಿದಂತೆ. ಆದ್ದರಿಂದ ಅಂಥ ಒಪ್ಪಂದಕ್ಕೆ ಮಾನ್ಯತೆ ನೀಡಲಾಗದು ಎಂದು ನ್ಯಾಯಾಧೀಶರು ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದರು ಮತ್ತು ಪತ್ನಿ ಜೀವನಾಂಶ ಪಡೆಯಲು ಹಕ್ಕು ಉಳ್ಳವಳಾಗಿದ್ದಾಳೆ ಎಂದು ತೀರ್ಪು ನೀಡಿದರು.
ಸರ್ವೋಚ್ಚ ನ್ಯಾಯಾಲಯವೂ ಸಹ ಇತರ ಅನೇಕ ಪ್ರಕರಣಗಳಲ್ಲಿ ಈ ನಿಲುವನ್ನು ಸಮರ್ಥಿಸಿ ತೀರ್ಪು ನೀಡಿದೆ.

-ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *