Latestಅಂಕಣ

ಕಾನೂನು ಕನ್ನಡಿ/ಜೀವನಾಂಶ ಮತ್ತು ವಿವಾಹ ರುಜುವಾತು – ಡಾ.ಗೀತಾ ಕೃಷ್ಣಮೂರ್ತಿ

ಹಲವು ವರ್ಷಗಳು ಸಂಸಾರ ಮಾಡಿ, ಮಕ್ಕಳನ್ನು ಪಡೆದ ನಂತರ ಪತಿ ಪತ್ನಿ ಬೇರ್ಪಟ್ಟರೆ, ಜೀವನಾಂಶ ಮಂಜೂರು ಮಾಡಲು ವಿವಾಹವನ್ನು ಸಂದೇಹಕ್ಕೆ ಆಸ್ಪದವಿಲ್ಲದಂತೆ ರುಜುವಾತು ಪಡಿಸುವ ಅಗತ್ಯವಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪು, ಅನೇಕ ಮಹಿಳೆಯರ ಜೀವನಕ್ಕೆ ಉಸಿರು ನೀಡುತ್ತದೆ

  

ಪಿತೃಪ್ರಧಾನ ಮತ್ತು ಪುರುಷ ಪ್ರಧಾನ ವ್ಯವಸ್ಥೆಯ ನಮ್ಮ ಸಮಾಜದಲ್ಲಿ ಯಾವಾಗಲೂ ಮಹಿಳೆಯೇ ಶೋಷಿತಳು. ಮಹಿಳೆಯ ಶೋಷಣೆಯನ್ನು ತಪ್ಪಿಸಲು ನಮ್ಮಲ್ಲಿ ಅನೇಕ ಕಾನೂನುಗಳು ಜಾರಿಯಲ್ಲಿವೆ. ಆ ಎಲ್ಲ ಕಾನೂನುಗಳೂ ಸರಿಯಾಗಿ ಪಾಲನೆಯಾದಲ್ಲಿ, ಶೋಷಣೆಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲಾಗದಿದ್ದರೂ, ನಿಯಂತ್ರಣದಲ್ಲಿ ಇಡಬಹುದು.
ಮಹಿಳೆ ಶೋಷಣೆಗೆ ಒಳಗಾಗುವ ಒಂದು ಕ್ಷೇತ್ರ ಅವಳ ಕುಟುಂಬ. ಆರ್ಥಿಕವಾಗಿ ಸ್ವಾವಲಂಬಿಗಳಾಗಿರುವ ಮತ್ತು ಆಯ್ಕೆಯ ಸ್ವಾತಂತ್ರ್ಯವಿರುವ ಮಹಿಳೆಯರ ಶೇಕಡಾವಾರು ಪ್ರಮಾಣ ಅತ್ಯಲ್ಪ. ಇತ್ತೀಚೆಗೆ ಜೀವನಾಂಶದ ಮೊಕದ್ದಮೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಕೊಟ್ಟಿರುವ ತೀರ್ಪು ಎಷ್ಟು ಮಹತ್ವವಾದದ್ದು ಎಂಬುದನ್ನು ಇದು ವಿಶದಪಡಿಸುತ್ತದೆ. ಪ್ರೀತಿಸಿ ವಿವಾಹವಾದ ಪತಿ ಪತ್ನಿಯರು ಸುಖದಿಂದ ಬಾಳಿ, ಎರಡು ಮಕ್ಕಳನ್ನು ಪಡೆದು, ವಿವಾಹವಾದ ಏಳು ವರ್ಷಗಳ ನಂತರ ನ್ಯಾಯಾಲಯದ ಮೆಟ್ಟಿಲು ಹತ್ತಿದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ

ಕಮಲ ಮತ್ತು ಮೋಹನ್ ಕುಮಾರ್  ನೆರೆಹೊರೆಯ ಮನೆಯಲ್ಲಿ ವಾಸಿಸುತ್ತಿದ್ದವರು. ಇಬ್ಬರಲ್ಲೂ ಗೆಳೆತನ ಬೆಳೆದು ಪ್ರೀತಿಯಲ್ಲಿ ಪರ್ಯವಸಾನವಾಯ್ತು. ಒಬ್ಬರನ್ನೊಬ್ಬರು ಬಿಟ್ಟಿರಲಾರದ ಹಂತದಲ್ಲಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಆದರೆ, ಇದಕ್ಕೆ ಇಬ್ಬರ ಮನೆಯ ಹಿರಿಯರ ಸಮ್ಮತಿ ಇರಲಿಲ್ಲ. ಎಷ್ಟೇ ಪ್ರಯತ್ನಿಸಿದರೂ ಇಬ್ಬರ ತಂದೆ ತಾಯಿಯರ ಒಪ್ಪಿಗೆ ದೊರೆಯಲಿಲ್ಲ. ಬೇರೆ ದಾರಿ ಕಾಣದೆ, ಅವರಿಗೆ ತಿಳಿಸದೆ ವಿವಾಹವಾಗಿಬಿಟ್ಟರೆ, ಅನಿವಾರ್ಯವಾಗಿ ಅವರು ಒಪ್ಪಬೇಕಾಗುತ್ತದೆ ಎಂದು ಯೋಚಿಸಿ, 1998 ರಲ್ಲಿ, ಕೆಲವೇ ಗೆಳೆಯರ ಸಮ್ಮುಖದಲ್ಲಿ, ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾದರು. ಅವರಂದುಕೊಂಡಂತೆಯೇ ಕಾಲ ಕ್ರಮೇಣ ಸಂಬಂಧಗಳು ಸುಧಾರಿಸಿ ನೆಮ್ಮದಿಯ ಜೀವನ ಅವರದಾಯಿತು. 2001 ಮತ್ತು 2003 ರಲ್ಲಿ, ಹೀಗೆ ಇಬ್ಬರು ಮಕ್ಕಳನ್ನೂ ಪಡೆದರು. ಆದರೆ ಅವರ ಸಂಸಾರದ ಶಾಂತ ಸರೋವರದಲ್ಲಿ ಬಿರುಗಾಳಿ ಬೀಸಿದಂತಾಗಿದ್ದು ಮೋಹನ್ ಕುಮಾರ್ ಕಚೇರಿಗೆ ಹೊಸದಾಗಿ ವರ್ಗಾವಣೆಯಾಗಿ ಬಂದ ಅರ್ಚನಾ ಎಂಬ ಮಹಿಳೆಯ ಪ್ರವೇಶದ ನಂತರ. ಮೋಹನಕುಮಾರ್ 2005 ರಲ್ಲಿ ಅರ್ಚನಾಳನ್ನು ವಿವಾಹವಾಗಿಬಿಟ್ಟ. ಆನಂತರದಲ್ಲಿ, ಮನೆಯ ಕಡೆ ಅವನ ಗಮನ ಕಡಿಮೆಯಾಯಿತು. ಮನೆಗೆ ಬರುವುದು ಅಪರೂಪವಾಯಿತು. ದಿನ ನಿತ್ಯದ  ಖರ್ಚಿಗೂ ಹಣ ಇಲ್ಲದೆ ಜೀವನ ನಿರ್ವಹಣೆ ಕಷ್ಟವಾಯಿತು. ಇದೇ ವಿಷಯಕ್ಕೆ ಅವರಿಬ್ಬರ ನಡುವೆ ಜಗಳವಾಗಿ, ವಿಷಯ ವಿಕೋಪಕ್ಕೆ ತಿರುಗಿ, ಕಮಲ ಪೊಲೀಸು ಠಾಣೆಯಲ್ಲಿ ಅವನ ವಿರುದ್ಧ ದೂರು ನೀಡಿದಳು. ದೂರಿನ ಆಧಾರದ ಮೇಲೆ ಇಬ್ಬರನ್ನೂ ಪೊಲೀಸು ಠಾಣೆಗೆ ಕರೆಸಿ ಪೊಲೀಸರು ರಾಜಿ ಮಾಡಿಸಿದರು. ಮೋಹನ ಕುಮಾರ್ ಕಮಲಳಿಗೆ ತಿಂಗಳಿಗೆ 3000 ರೂಗಳನ್ನು ಕೊಡಬೇಕೆಂಬ ಒಪ್ಪಂದಕ್ಕೆ ಬದ್ಧನನ್ನಾಗಿಸಿ ಕಳುಹಿಸಿಕೊಟ್ಟರು.

ಆದರೆ ಕಮಲ ಬೇರೆ ಬಡಾವಣೆಗೆ ಮನೆಯನ್ನು ಬದಲಾಯಿಸಿದಾಗ ಆತ ಆಕೆಗೆ ಹಣ ಕೊಡುವುದನ್ನು ನಿಲ್ಲಿಸಿಬಿಟ್ಟ. ಆಕೆ, ಬೇರೆ ದಾರಿ ಕಾಣದೆ ದಂಡ ಪ್ರಕ್ರಿಯಾ ಸಂಹಿತೆಯ 125 ನೇ ಪ್ರಕರಣದಡಿಯಲ್ಲಿ ಜೀವನಾಂಶವನ್ನು ಕೋರಿ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಳು. ವಿವಾಹ, ವಿಚ್ಛೇದನೆ, ಜೀವನಾಂಶ ಮುಂತಾದುವುಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ಧರ್ಮದವರಿಗೆ ಅವರವರ ಧರ್ಮದ ವೈಯಕ್ತಿಕ ಕಾನೂನುಗಳು ಅನ್ವಯವಾಗುತ್ತವೆ. ಹಾಗಾಗಿ ಜೀವನಾಂಶವನ್ನು ಅವರವರ ವೈಯಕ್ತಿಕ ಕಾನೂನಿನ ಪ್ರಕಾರ ಕ್ಲೇಮು ಮಾಡಲು ಅವಕಾಶವಿರುತ್ತದೆ. ಇವಲ್ಲದೆ, ಜೀವನಾಂಶಕ್ಕೆ ಸಂಬಂಧಿಸಿದಂತೆ, ದಂಡ ಪ್ರಕ್ರಿಯಾ ಸಂಹಿತೆಯ 125 ನೇ ಪ್ರಕರಣ ಎಲ್ಲ ಧರ್ಮದವರಿಗೂ ಏಕ ಪ್ರಕಾರವಾಗಿ ಅನ್ವಯಿಸುತ್ತದೆ. ಇದರ ಪ್ರಕಾರ, ಪತ್ನಿ, ತಂದೆತಾಯಿ ಮತ್ತು ಅವಲಂಬಿತ ಮಕ್ಕಳು, ತಮ್ಮನ್ನು ತಾವು ನೋಡಿಕೊಳ್ಳಲು ಅಶಕ್ತರಾಗಿದ್ದರೆ, ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಪತಿ/ಮಗ/ತಂದೆಯದ್ದಾಗಿರುತ್ತದೆ.

ದಂಡ ಪ್ರಕ್ರಿಯಾ ಸಂಹಿತೆ ಜಾರಿಯಾದದ್ದು ಬ್ರಿಟಿಷರ ಕಾಲದಲ್ಲಿ, 1882 ರಲ್ಲಿ. ಕ್ರೋಡೀಕೃತ ದಂಡ ಪ್ರಕ್ರಿಯಾ ಸಂಹಿತೆ 1973 ರಲ್ಲಿ ಜಾರಿಯಾಯಿತು. ಇದರ ಉದ್ದೇಶ, ಗಂಡನಿಂದ ಪರಿತ್ಯಕ್ತಳಾದ ಹೆಂಡತಿ, ಮಗನಿಂದ ಪರಿತ್ಯಕ್ತರಾದ ತಂದೆ ತಾಯಿಯರು ಹಾಗೂ ಅವಲಂಬಿತ ಮಕ್ಕಳು ಬೀದಿ ಪಾಲಾಗಬಾರದು, ನಿರ್ಗತಿಕರಾಗಬಾರದು ಮತ್ತು ಆ ಕಾರಣದಿಂದ, ಜೀವನ ನಿರ್ವಹಣೆಗಾಗಿ ಅನೈತಿಕ ಚಟುವಟಿಕೆಗಳಲ್ಲಿ ತೊಡಗಬಾರದು ಎಂಬುದು. ಬಹುಪಾಲು ಮಹಿಳೆಯರು, ಆರ್ಥಿಕವಾಗಿ, ಕುಟುಂಬದ ಪುರುಷ ಸದಸ್ಯರನ್ನೇ ಅವಲಂಬಿಸಿರುತ್ತಾರೆ. ಇದು ಅವತ್ತಿಗೂ ನಿಜ, ಇವತ್ತಿಗೂ ನಿಜ. ಅಂಕಿ ಅಂಶಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಿರಬಹುದು ಅಷ್ಟೇ. ಇಂದಿಗೂ ದುಡಿಯುವ ಮಹಿಳೆಯರ ಸಂಖ್ಯೆ ಕೇವಲ ಶೇಕಡಾ 27 ರಷ್ಟು ಅಷ್ಟೇ. ಅವರಲ್ಲಿಯೂ ತಾವು ದುಡಿಯುವ ಹಣದ ಮೇಲೆ ಅಧಿಕಾರವಿರುವವರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು!

ಕಮಲಳ ಮೊಕದ್ದಮೆ ಕುಟುಂಬ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಾಗ,  ಕಮಲಳನ್ನು ತಾನು ಸಂಪ್ರದಾಯದ ಪ್ರಕಾರ ವಿಧ್ಯುಕ್ತವಾಗಿ ವಿವಾಹವಾಗಿಲ್ಲವಾದ ಕಾರಣ ಆಕೆ ತನ್ನ ಪತ್ನಿ ಎನ್ನಿಸಿಕೊಳ್ಳುವುದಿಲ್ಲ ಎಂದು ಮೋಹನ ಕುಮಾರ್ ವಾದಿಸಿದ. ಏಕೆಂದರೆ ಮೇಲೆ ಉಲ್ಲೇಖಿಸಿದ ಕಾನೂನಿನ ಪ್ರಕಾರ ಜೀವನಾಂಶ ದೊರೆಯುವುದು ಕಾನೂನು ಪ್ರಕಾರ ವಿವಾಹವಾದ ‘ಪತ್ನಿ’ಗೆ ಮಾತ್ರ.
ಆದರೆ ಕುಟುಂಬ ನ್ಯಾಯಾಲಯ, ಕಮಲ ನೀಡಿದ ಮೌಖಿಕ ಸಾಕ್ಷ್ಯ ಮತ್ತು ಆಕೆ ತಾನು ಅವನ ಪತ್ನಿ ಎಂಬುದನ್ನು ರುಜುವಾತು ಪಡಿಸಲು ಹಾಜರುಪಡಿಸಿದ ದಾಖಲೆಗಳು, ಇತರ ಸಾಕ್ಷಿಗಳು ನೀಡಿದ ಸಾಕ್ಷ್ಯಗಳಿಂದ ಅವರಿಬ್ಬರು ಬಹಳ ವರ್ಷಗಳಿಂದ ಗಂಡ ಹೆಂಡತಿಯರಂತೆ ಒಟ್ಟಿಗೆ ಜೀವನ ನಡೆಸಿದ್ದಾರೆ ಮತ್ತು ಅವರ ಸುತ್ತಲಿನವರು ಅವರನ್ನು ಗಂಡ ಹೆಂಡತಿಯರೆಂದೇ ನಂಬಿದ್ದಾರೆ ಮತ್ತು ಈ ವಿವಾಹದಿಂದ ಅವರು ಇಬ್ಬರು ಮಕ್ಕಳನ್ನೂ ಪಡೆದಿದ್ದಾರೆ, ಆದ್ದರಿಂದ ಕಮಲಳನ್ನು ಮೋಹನ ಕುಮಾರನ ಪತ್ನಿ ಎಂದು ಪರಿಗಣಿಸಬೇಕಾಗುತ್ತದೆ ಎಂದು ಅಭಿಪ್ರಾಯ ಪಟ್ಟಿತು. ಹಾಗಾಗಿ ಕಮಲಳಿಗೆ ಹಾಗೂ ಅವಳ ಇಬ್ಬರು ಮಕ್ಕಳಿಗೆ ಜೀವನಾಂಶವನ್ನು ನೀಡುವಂತೆ (12-8-2008 ರಲ್ಲಿ) ಗಂಡನಿಗೆ ಆದೇಶಿಸಿತು.

ಆದರೆ, ಈ ಆದೇಶವನ್ನು ಪ್ರಶ್ನಿಸಿ ಕಮಲಳ ಗಂಡ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದ. ಅಪೀಲು ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ, ಕಮಲ ತಾನು ಮೋಹನ ಕುಮಾರ್ ಅವರನ್ನು ವಿಧ್ಯುಕ್ತವಾಗಿ, ಸಂಪ್ರದಾಯದ ಪ್ರಕಾರ ವಿವಾಹವಾದ ಪತ್ನಿ ಎಂಬುದನ್ನು ರುಜುವಾತು ಪಡಿಸಲು ವಿಫಲಳಾಗಿದ್ದಾಳೆ ಎಂಬ ಕಾರಣಕ್ಕೆ ಕುಟುಂಬ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿತು.

ಕಮಲ ತನ್ನ ಪ್ರಯತ್ನವನ್ನು ನಿಲ್ಲಿಸಲಿಲ್ಲ. ತನ್ನವರನ್ನೆಲ್ಲ ವಿರೋಧಿಸಿ ಮೋಹನ ಕುಮಾರನನ್ನು ನಂಬಿ ಅವನ ಹಿಂದೆ ಬಂದುದಕ್ಕೆ ಸಿಕ್ಕ ಪ್ರತಿಫಲದಿಂದ ಆಘಾತಗೊಂಡಿದ್ದಳು. ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಆಕೆ ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದಳು. ಅಪೀಲಿನ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಕಮಲಳ ಪರವಾಗಿ ತೀರ್ಪು ನೀಡಿದೆ.
ದಂಡ ಪ್ರಕ್ರಿಯಾ ಸಂಹಿತೆಯ 125 ನೇ ಪ್ರಕರಣದ ಅಡಿಯಲ್ಲಿ ಜೀವನಾಂಶ ಮಂಜೂರು ಮಾಡಲು ವಿವಾಹವನ್ನು ಸಂದೇಹಕ್ಕೆ ಆಸ್ಪದವಿಲ್ಲದಂತೆ ರುಜುವಾತು ಪಡಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಆರ್.ಭಾನುಮತಿ ಮತ್ತು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರ ಪೀಠ  ಅಭಿಪ್ರಾಯಪಟ್ಟಿದೆ. ಮತ್ತೂ ಮುಂದುವರಿದು, ‘ಪತ್ನಿ’ ಎಂಬ ಪದಕ್ಕೆ ವಿಸ್ತೃತವಾದ ಅರ್ಥವನ್ನು ಕೊಡಬೇಕು, ಪುರುಷ ಮತ್ತು ಮಹಿಳೆ ದೀರ್ಘಕಾಲ ಪತಿ ಪತ್ನಿಯರ ರೀತಿಯಲ್ಲಿ ವಾಸ ಮಾಡುತ್ತಿದ್ದರೆ, ಅಂಥ ಸಂದರ್ಭಗಳಲ್ಲಿ ಜೀವನಾಂಶ ಮಂಜೂರು ಮಾಡಲು ವಿವಾಹ ನೆರವೇರಿದೆ ಎಂಬ ಬಗ್ಗೆ ಖಚಿತ ರುಜುವಾತನ್ನು ಕಡ್ಡಾಯವಾಗಿ ಹಾಜರು ಪಡಿಸುವ ಅಗತ್ಯವಿಲ್ಲ, ಆಗ ಮಾತ್ರ, ಜೀವನಾಂಶ ನೀಡಿಕೆಗೆ ಅವಕಾಶ ಕಲ್ಪಿಸುವ ಈ ಕಾನೂನು ಉಪಬಂಧದ ಉದ್ದೇಶ ಮತ್ತು ಆಶಯ ನೆರವೇರುತ್ತದೆ ಮತ್ತು ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ನಿರೂಪಿಸಿರುವ ‘ಸಾಮಾಜಿಕ ನ್ಯಾಯ ಮತ್ತು ವ್ಯಕ್ತಿಯ ಘನತೆ’ ಯನ್ನು ಎತ್ತಿ ಹಿಡಿದಂತಾಗುತ್ತದೆ ಎಂದು ಸಹ ಹೇಳಿದೆ. ಈ ಹಿಂದೆ, ಇಂಥ ಅನೇಕ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯ ತಳೆದ ನಿಲುವನ್ನೇ ಈ ಪೀಠವೂ ತಳೆದಿದೆ.

ಅಪೀಲುದಾರಳು (ಕಮಲ) ಪ್ರತ್ಯರ್ಜಿದಾರನೊಡನೆ (ಮೋಹನ್ ಕುಮಾರ್) ಪತ್ನಿಯಂತೆ ಜೀವನ ನಡೆಸಿದ್ದಳು ಎಂಬುದಕ್ಕೆ ಕುಟುಂಬ ನ್ಯಾಯಾಲಯದಲ್ಲಿ ಒದಗಿಸಿರುವ ಸಾಕ್ಷ್ಯಾಧಾರಗಳು ಸಾಕು ಎಂದು ಕುಟುಂಬ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿದೆ ಮತ್ತು ಜೀವನಾಂಶದ ಬಾಕಿಯನ್ನು ಎರಡು ತಿಂಗಳೊಳಗೆ ಅಪೀಲುದಾರಳಿಗೆ ಸಂದಾಯ ಮಾಡಬೇಕು ಮತ್ತು ಪ್ರತಿ ತಿಂಗಳು 10 ನೇ ದಿನಾಂಕದೊಳಗೆ ಜೀವನಾಂಶವನ್ನು ಸಂದಾಯ ಮಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಹಾಗೂ ಜೀವನಾಂಶದ ಮೊಬಲಗನ್ನು ಹೆಚ್ಚಿಸಬೇಕೆಂಬ ಅರ್ಜಿಯನ್ನೂ ಸಹ ಕುಟುಂಬ ನ್ಯಾಯಾಲಯಕ್ಕೆ ಸಲ್ಲಿಸಲು ಅಪೀಲುದಾರಳಿಗೆ ಅವಕಾಶವಿದೆ ಎಂಬ ಅಂಶವನ್ನೂ ಸಹ ಉಲ್ಲೇಖಿಸಿದೆ.

ಇಂಥ ತೀರ್ಪುಗಳು, ಕಾನೂನಿನ ಆಶಯವನ್ನು ನೆರವೇರಿಸಿ, ಮಹಿಳೆಯರ ಶೋಷಣೆಯನ್ನು ತಪ್ಪಿಸಲು ಸಹಕಾರಿಯಾಗುತ್ತವೆ. ಆದರೆ, ಕಮಲ ಎಂಬ ಮಹಿಳೆ ತನಗೆ ನ್ಯಾಯಯುತವಾಗಿ ಸಲ್ಲಬೇಕಾದ ಕಾನೂನಿನ ಪ್ರಯೋಜನವನ್ನು ದಕ್ಕಿಸಿಕೊಳ್ಳಲು ಅದೆಷ್ಟು ದೀರ್ಘ ಕಾಲ ಹೋರಾಟ ನಡೆಸಬೇಕಾಯಿತು! ಅದೂ ನ್ಯಾಯ ದೇವತೆಯ ಅಂಗಳದಲ್ಲಿಯೇ! ಇದು ನಮ್ಮ ಕಣ್ಣು ತೆರೆಸಬೇಕು.

ಡಾ.ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *