ಕಾನೂನು ಕನ್ನಡಿ/ ವಿಚ್ಛೇದನ ಪ್ರಕರಣ: ಪತ್ನಿಗೆ ಪತಿಯ ವೇತನ ವಿವರ – ಡಾ. ಗೀತಾ ಕೃಷ್ಣಮೂರ್ತಿ

ಬಹುಪಾಲು ವಿಚ್ಛೇದನ ಪ್ರಕರಣಗಳಲ್ಲಿ ಪತ್ನಿಗೆ ಸಮರ್ಪಕ ಜೀವನಾಂಶ ದೊರೆಯುವುದಿಲ್ಲ. ಪತಿಯ ವೇತನ, ಭತ್ಯೆ ಇತ್ಯಾದಿಗಳ ಬಗ್ಗೆ ದಾಖಲೆ ಒದಗಿಸಲು ಸಂತ್ರಸ್ತ ಮಹಿಳೆಯರಿಗೆ ಸಾಧ್ಯವಾಗುವುದಿಲ್ಲ. ಈ ವಿಚಾರದಲ್ಲಿ  ಇತ್ತೀಚೆಗೆ ಮಧ್ಯಪ್ರದೇಶ ಹೈಕೋರ್ಟ್ ದ್ವಿಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ

ಹೆಂಡತಿಗೆ ಗಂಡನ ಸಂಬಳ ಎಷ್ಟು ಎಂದು ತಿಳಿಯುವ ಹಕ್ಕಿದೆ ಎಂದು ಇತ್ತೀಚೆಗೆ ಮಧ್ಯ ಪ್ರದೇಶದ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಜೀವನಾಂಶದ ಪ್ರಕರಣಗಳಲ್ಲಿ ಪತ್ನಿ ಪತಿಯಿಂದ ಜೀವನಾಂಶ ಕ್ಲೇಮು ಮಾಡಿ ದಾಗ ಜೀವನಾಂಶದ ಮೊತ್ತ ಎಷ್ಟು ಎಂಬುದನ್ನು ನಿರ್ಧರಿಸುವುದು  ಗಂಡನಿಗೆ ಎಷ್ಟು ಆದಾಯವಿದೆ ಎಂಬುದನ್ನು ಆಧರಿಸಿ. ಗಂಡನಿಗೆ ಹೆಚ್ಚು ಆದಾಯವಿದ್ದಷ್ಟೂ ಪತ್ನಿಗೆ ಕೊಡಬೇಕಾಗುವ ಜೀವನಾಂಶದ ಮೊತ್ತವೂ ಹೆಚ್ಚಾಗುತ್ತದೆ. ಹಾಗಾಗಿ ತಮ್ಮ ಎಲ್ಲ ಆದಾಯವನ್ನೂ ಯಾವತ್ತೂ ಯಾವ ಗಂಡನೂ ನ್ಯಾಯಾಲಯದ ಮುಂದೆ ಬಿಚ್ಚಿಡುವುದಿಲ್ಲ. ಗಂಡ ನ್ಯಾಯಾಲಯದ ಮುಂದೆ ಘೋಷಿಸಿರುವ  ಆದಾಯವನ್ನು ಸುಳ್ಳು ಎಂದು ಹೆಂಡತಿ ಹೇಳುವುದಾದರೆ, ಗಂಡನ ನಿಜವಾದ ಆದಾಯ ಎಷ್ಟು, ಅದಕ್ಕೆ ರುಜುವಾತು ಏನು ಎಂಬುದನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡಬೇಕು ಮತ್ತು ಅದನ್ನು  ಸಾಬೀತು ಪಡಿಸಲು ಅಗತ್ಯವಾದ ದಾಖಲೆಗಳನ್ನು ಹಾಜರುಪಡಿಸಬೇಕಾಗುತ್ತದೆ.

ಬೇರೆಯಾದ ತನ್ನ ಗಂಡನಿಂದ ಪಡೆಯುತ್ತಿದ್ದ ಜೀವನಾಂಶದ ಮೊತ್ತವನ್ನು ಹೆಚ್ಚಿಸಬೇಕೆಂದು ಹೆಂಡತಿ ಮನವಿ ಸಲ್ಲಿಸಿದ ಒಂದು ಪ್ರಕರಣದಲ್ಲಿ, ಗಂಡನ ವೇತನ ಎಷ್ಟು ಎಂಬುದನ್ನು ಸಾಬೀತು ಪಡಿಸಲು, ಮಹಿಳೆ ಎಷ್ಟು ದೀರ್ಘಕಾಲದ ಹೋರಾಟ ನಡೆಸಬೇಕಾಗುತ್ತದೆ ಎಂಬುದು ಮುಂದಿನ ಈ ಪ್ರಕರಣದಲ್ಲಿ ಮನದಟ್ಟಾಗುತ್ತದೆ.

ಸುನಿತಾ ಜೈನ್ ಎಂಬಾಕೆಗೆ ದೂರವಾದ ತನ್ನ ಗಂಡನಿಂದ 7000 ರೂಪಾಯಿ ಜೀವನಾಂಶ ದೊರೆಯುತ್ತಿತ್ತು. ಆದರೆ ತನ್ನ ಗಂಡ ತಿಂಗಳಿಗೆ 2.25 ಲಕ್ಷ ರೂಪಾಯಿಗಿಂತಲೂ ಹೆಚ್ಚು ವೇತನ ಪಡೆಯುತ್ತಿರುವುದರಿಂದ, ತನ್ನ ಜೀವನಾಂಶದ ಮೊತ್ತವನ್ನು ಹೆಚ್ಚಿಸಬೇಕೆಂದು ಸುನಿತಾ ಅರ್ಜಿ ಸಲ್ಲಿಸಿದ್ದಳು. ಅರ್ಜಿ ಸಲ್ಲಿಸಿದರೆ ಸಾಲದು, ತಾನು ಹೇಳಿದುದಕ್ಕೆ ಪುರಾವೆಯಾಗಿ ದಾಖಲೆಗಳನ್ನೂ ಆಕೆ ಸಲ್ಲಿಸಬೇಕು. ಅದಕ್ಕಾಗಿ ಆಕೆ ಮೊರೆಹೋದದ್ದು ನ್ಯಾಯಾಲಯವನ್ನೇ. ಗಂಡ ಪಡೆಯುತ್ತಿರುವ ವೇತನಕ್ಕೆ  ಪುರಾವೆಯಾಗಿ, ಆತನ ವೇತನ ಚೀಟಿಯನ್ನು ಸಲ್ಲಿಸುವಂತೆ ಅವನಿಗೆ ಆದೇಶ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದಳು. ಆದರೆ ವಿಚಾರಣಾ ನ್ಯಾಯಾಲಯ ಅವಳ ಮನವಿಯನ್ನು ತಿರಸ್ಕರಿಸಿತು. ಆದರೆ ಆಕೆ ಹಿಂಜರಿಯಲಿಲ್ಲ. ತನ್ನ ಪ್ರಯತ್ನವನ್ನು ಮುಂದುವರೆಸಿದಳು. ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ತನ್ನ ಗಂಡನ ವೇತನದ ಮಾಹಿತಿ ನೀಡಬೇಕೆಂದು ಕೋರಿ ತನ್ನ ಗಂಡ ಕೆಲಸ ಮಾಡುತ್ತಿದ್ದ ಭಾರತ ಸಂಚಾರ ನಿಗಮಕ್ಕೆ ಅರ್ಜಿ ಸಲ್ಲಿಸಿದಳು.

ಆದರೆ ಅಲ್ಲಿಯೂ ಆಕೆಗೆ ನಿರಾಸೆ ಕಾದಿತ್ತು. ಭಾರತ ಸಂಚಾರ ನಿಗಮ ಆ ಮಾಹಿತಿಯನ್ನು ನೀಡಲು ನಿರಾಕರಿಸಿತು. ಇದಕ್ಕೆ ಅದು ನೀಡಿದ ಕಾರಣ ‘ವ್ಯಕ್ತಿಯ ವೇತನವನ್ನು ಬಹಿರಂಗಪಡಿಸುವುದರಿಂದ ಆ ವ್ಯಕ್ತಿಗಿರುವ ‘ಖಾಸಗಿತನದ ಹಕ್ಕ’ನ್ನು ಉಲ್ಲಂಘಿಸಿದಂತಾಗುತ್ತದೆ’ ಎಂಬುದು. ಇದನ್ನು ಆಕೆ ಕೇಂದ್ರ ಮಾಹಿತಿ ಆಯೋಗದಲ್ಲಿ ಪ್ರಶ್ನಿಸಿದಳು. ಕೇಂದ್ರ ಮಾಹಿತಿ ಆಯೋಗ 2007 ರ ಜುಲೈ 27 ರಂದು ಆದೇಶ ಹೊರಡಿಸಿ, ಆಕೆ ಕೋರಿದ ಮಾಹಿತಿಯನ್ನು ಒದಗಿಸಬೇಕೆಂದು ಭಾರತ ಸಂಚಾರ ನಿಗಮದ ಮಾಹಿತಿ ಅಧಿಕಾರಿಗೆ ನಿರ್ದೇಶನ ನೀಡಿತು. ಮಾಹಿತಿ ಹಕ್ಕು ಅಧಿನಿಯಮದ 4(1)(ಬಿ)(ಎಕ್ಸ್) ಪ್ರಕರಣದಡಿಯಲ್ಲಿ, ಸಂಬಳದ ವಿವರಗಳನ್ನು ಸಾಮಾಜಿಕ ತಾಣದಲ್ಲಿ ಹಾಕಬೇಕೆಂದು, ಆ ಮೂಲಕ ಅಧಿನಿಯಮದ ಉಪಬಂಧಗಳನ್ನು ಪಾಲಿಸಬೇಕೆಂದು ಬಿಎಸ್‍ಎನ್‍ಎಲ್‍ಗೆ ಆದೇಶ ನೀಡಿತು.

ಆದರೆ ಆಕೆಯ ಗಂಡ ಮತ್ತು ಆತನ ಉದ್ಯೋಗದಾತ-ಬಿಎಸ್‍ಎನ್‍ಎಲ್, ಮಧ್ಯ ಪ್ರದೇಶದ ಉಚ್ಚ ನ್ಯಾಯಾಲಯದ ಏಕ ನ್ಯಾಯಾಧೀಶ ಪೀಠದಲ್ಲಿ ಆಯೋಗದ ಆದೇಶವನ್ನು ಪ್ರಶ್ನಿಸಿದರು. ನ್ಯಾಯಾಲಯದ ಏಕ ನ್ಯಾಯಾಧೀಶ ಪೀಠ ಆಯೋಗದ ಆದೇಶವನ್ನು ತಳ್ಳಿ ಹಾಕಿತು. ತನ್ನ ತೀರ್ಪಿಗೆ ಅದು, ಗಿರೀಶ್ ರಾಮಚಂದ್ರ ದೇಶಪಾಂಡೆ ಎಂಬುವವರು  ಕೇಂದ್ರ ಮಾಹಿತಿ  ಆಯೋಗ ಮತ್ತು ಇತರರ ವಿರುದ್ಧ ಹಾಕಿದ ಅರ್ಜಿಯಲ್ಲಿ, ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಆಧರಿಸಿತು. ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ, ಸರ್ಕಾರೀ ನೌಕರ ಪಡೆಯುವ ಮೆಮೋಗಳು, ಕಾರಣ ತೋರಿಸುವಂತೆ ಕೇಳುವ ನೋಟೀಸುಗಳು, ಶಿಕ್ಷೆ ವಿಧಿಸಿದ ಆದೇಶಗಳು, ಆಸ್ತಿಯ, ವರಮಾನ ತೆರಿಗೆಯ ವಿವರಗಳು, ಸ್ವೀಕರಿಸಿದ ದಾನದ ವಿವರಗಳು ಎಲ್ಲವೂ ಮಾಹಿತಿ ಹಕ್ಕು ಅಧಿನಿಯಮದ 8(1)ನೇ ಪ್ರಕರಣದ (1)ನೇ ಖಂಡದಲ್ಲಿ ಪರಿಭಾಷಿಸಿದಂತೆ ವೈಯಕ್ತಿಕ ಮಾಹಿತಿ ಎನ್ನಿಸಿಕೊಳ್ಳುತ್ತದೆ, ಎಂದು ಅಭಿಪ್ರಾಯಪಟ್ಟಿತ್ತು. ಇದನ್ನು ಆಧರಿಸಿ, ಈ ಪ್ರಕರಣದಲ್ಲಿ, ಈ ಮಾಹಿತಿಯನ್ನು ಬಿಎಸ್‍ಎನ್‍ಎಲ್ ಬಹಿರಂಗಗೊಳಿಸುವ ಅಗತ್ಯವಿಲ್ಲ ಎಂಬ ನಿಲುವನ್ನು ತಳೆದು ಸುನೀತಾ ಜೈನ್‍ಳ ಗಂಡ ಪವನ್‍ಕುಮಾರ್ ಅವರ ಪರವಾಗಿ ತೀರ್ಪು ನೀಡಿತು. “ಖಾಸಗಿತನದ ಹಕ್ಕಿನ ಕೆಳಗೆ ಯಾರೇ ವ್ಯಕ್ತಿಯ ವೇತನವನ್ನೂ ಬಹಿರಂಗ ಪಡಿಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿತು.

ಛಲ ಬಿಡದ ಸುನಿತಾ ಈ ತೀರ್ಪಿನ ವಿರುದ್ಧ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದಳು. ಪ್ರಕರಣದ ಕೂಲಂಕುಷ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಸುನೀತಳ ಪರವಾಗಿ ತೀರ್ಪನ್ನು ನೀಡಿತು. ಸುನೀತಳ ಪರವಾಗಿ ನೀಡಿದ ತೀರ್ಪಿಗೆ ಅದು ನೀಡಿದ ವಿವರಣೆ ಮತ್ತು ಕಾರಣಗಳು ನಮಗೆ ಮುಖ್ಯವಾಗುತ್ತವೆ,-

ಪ್ರಸ್ತುತ ಪ್ರಕರಣದಲ್ಲಿ, ನ್ಯಾಯಾಲಯದ  ನ್ಯಾಯಮೂರ್ತಿ ಎಸ್‍ಕೆ.ಸೇಠ್ ಮತ್ತು ನ್ಯಾಯಮೂರ್ತಿ  ನಂದಿತಾ ದುಬೆ ಅವರ ಪೀಠದ ಮುಂದೆ ಇದ್ದದ್ದು ಮೇಲಿನ ಪ್ರಕರಣದಲ್ಲಿ ಪತ್ನಿ ಸಲ್ಲಿಸಿದ್ದ ರಿಟ್ ಅಪೀಲು. ಪ್ರಶ್ನೆ-ಪತ್ನಿ ಕೇಳಿದ್ದ ಮಾಹಿತಿ, ಮಾಹಿತಿ ಹಕ್ಕು ಅಧಿನಿಯಮದ 8(1)(ಜೆ) ಪ್ರಕರಣದ ಅಡಿಯಲ್ಲಿ ಮಾಹಿತಿಯನ್ನು ಕೊಡಬಾರದೆಂಬ ವಿನಾಯಿತಿಗೆ ಅರ್ಹವಾಗುತ್ತದೆಯೇ ಅಥವಾ 4(1)(ಬಿ)(ಎಕ್ಸ್) ಪ್ರಕರಣದಡಿಯಲ್ಲಿ, ಸರ್ಕಾರೀ ಪ್ರಾಧಿಕಾರಗಳು ತನ್ನ ಅಧಿಕಾರಿಗಳ ಹಾಗೂ ಉದ್ಯೋಗಿಗಳ ಮಾಸಿಕ ವೇತನವನ್ನು ಸಾಮಾಜಿಕ ತಾಣದಲ್ಲಿ ಪ್ರಕಟಿಸಲು ಬದ್ಧರಾಗಿರುತ್ತಾರೆಯೇ ಎಂಬುದಾಗಿತ್ತು.

ಮೇಲೆ ಹೇಳಿದುದು ವೈಯಕ್ತಿಕ ಮಾಹಿತಿಯಾಗಿದ್ದು ಅದನ್ನು ಬಹಿರಂಗ ಪಡಿಸುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿಯೂ ಇಲ್ಲ ಮತ್ತು ಹಾಗೆ ಬಹಿರಂಗ ಪಡಿಸುವುದರಿಂದ ಉದ್ಯೋಗಿಯ ಖಾಸಗಿತನಕ್ಕೆ ಇರುವ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ವಾದಿಸಲಾಯಿತು.

ಅಧಿನಿಯಮದ 8(1)(ಜೆ) ಪ್ರಕರಣದ ಅಡಿಯಲ್ಲಿ ಮಾಹಿತಿಯನ್ನು ಕೊಡಬಾರದೆಂಬ ವಿನಾಯಿತಿಗೆ ಅರ್ಹವಾಗುತ್ತದೆಯೇ ಎಂಬುದನ್ನು ಪರಿಗಣಿಸುವ ಪ್ರಸ್ತುತ ಸಂದರ್ಭದಲ್ಲಿ, ಅಪೀಲುದಾರರು ಮತ್ತು ಪ್ರತ್ಯರ್ಜಿದಾರರು ಪತ್ನಿ ಮತ್ತು ಪತಿ ಎಂಬುದನ್ನು ಮರೆಯಲಾಗದು ಮತ್ತು ಪ್ರತ್ಯರ್ಜಿದಾರನಾದ ಪತಿ ಎಷ್ಟು ವೇತನವನ್ನು ಪಡೆಯುತ್ತಿದ್ದಾನೆ ಎಂಬುದನ್ನು ತಿಳಿಯಲು ಪತ್ನಿಗೆ ಹಕ್ಕಿದೆ, ಈ ಸಂದರ್ಭದಲ್ಲಿ ಪತ್ನಿಯನ್ನು ಮೂರನೇ ವ್ಯಕ್ತಿ ಎಂದು ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟಿತು.

ನ್ಯಾಯಾಲಯ ಅಪೀಲನ್ನು ಪುರಸ್ಕರಿಸಿತು ಮತ್ತು ಕೇಂದ್ರ ಮಾಹಿತಿ ಆಯೋಗದ ಆದೇಶವನ್ನು ಎತ್ತಿ ಹಿಡಿದು, ಪವನ್‍ಕುಮಾರ್ ಅವರ ವೇತನ ಚೀಟಿಯನ್ನು ಸುನೀತಾ ಅವರಿಗೆ ಒದಗಿಸುವಂತೆ ಭಾರತ್ ಸಂಚಾರ್ ನಿಗಮಕ್ಕೆ ಉಚ್ಚ ನ್ಯಾಯಾಲಯ ಸೂಚಿಸಿತು.

ಜೀವನಾಂಶ ಪ್ರಕರಣಗಳಲ್ಲಿ ಗಂಡನ ಆದಾಯವನ್ನು ರುಜುವಾತು ಪಡಿಸುವುದು ಎಷ್ಟು ಕಷ್ಟ ಎಂಬುದಕ್ಕೆ ಇದು ಒಂದು ಉದಾಹರಣೆ.

ಈ ಸಂದರ್ಭದಲ್ಲಿ ಇಂಥ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ದೆಹಲಿ ಉಚ್ಚ ನ್ಯಾಯಾಲಯ 2015 ರಲ್ಲಿ ನೀಡಿರುವ ನಿರ್ದೇಶನಗಳು ಮತ್ತಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ. ‘ಪತಿ ಮತ್ತು ಪತ್ನಿ ಇಬ್ಬರೂ ವಿಚ್ಛೇದನೆ ಅಥವಾ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸುವಾಗ, ಸಲ್ಲಿಸುವ ಸಮಯದಲ್ಲಿ ಇದ್ದ ಅವರ ಆದಾಯ, ಸ್ವತ್ತುಗಳು ಮತ್ತು ವೆಚ್ಚದ ವಿವರಗಳನ್ನು ಒಳಗೊಂಡ ಒಂದು ವಿವರವಾದ ಅಫಿಡವಿಟ್ಟನ್ನು ದಾಖಲೆಗಳ ಸಹಿತ ಸಲ್ಲಿಸಬೇಕು’ ಎಂದು ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜೆ.ಆರ್, ಮಿಧಾ ಅವರು ನಿರ್ದೇಶಿಸಿದ್ದಾರೆ. ‘ಇದರಿಂದ ವಿಚ್ಛೇದನೆ ಪ್ರಕ್ರಿಯೆ ಪ್ರಾರಂಭವಾದ 60 ದಿನಗಳೊಳಗೆ, ನಿಜವಾದ ಆದಾಯದ ಆಧಾರದ ಮೇಲೆ ಜೀವನಾಂಶದ ಆದೇಶವನ್ನು ನೀಡುವುದು ಸಾಧ್ಯವಾಗುತ್ತದೆ.’ ಎಂದೂ ಅಭಿಪ್ರಾಯಪಟ್ಟಿದ್ದಾರೆ. ‘ಜೀವನಾಂಶ ಎಂಬುದು ಕೇವಲ ಕಾನೂನು ರೀತ್ಯಾ ದೊರೆಯುವ ಹಕ್ಕಲ್ಲ. ಅದು ಮಾನವ ಹಕ್ಕುಗಳ ಅವಿಭಾಜ್ಯ ಅಂಗವೂ ಹೌದು. ಆರ್ಥಿಕವಾಗಿ ದುರ್ಬಲರಾದವರಿಗೆ ಜೀವನಾಂಶವೇ ಜೀವನಾಧಾರ. ದೀರ್ಘಾವಧಿ ಎಳೆದಾಡುವ ಕಾನೂನು ವ್ಯವಹಾರಗಳು ಹಿಂದೂ ವಿವಾಹ ಅಧಿನಿಯಮದ ಆಶಯವನ್ನೇ ವಿಫಲಗೊಳಿಸಿಬಿಡುತ್ತದೆ.’  ಎಂದು ಸಹ ಕಾಳಜಿ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಅಫಿಡವಿಟ್ಟುಗಳ ಮೂಲಕ ಸಲ್ಲಿಸಲಾಗಿರುವ ವಿವರಗಳ ಸತ್ಯಾಸತ್ಯತೆ ಬಗ್ಗೆಯೂ ಎಚ್ಚರಿಕೆಯಿಂದ ಪರಿಶೀಲಿಸಲು ನಿರ್ದೇಶನಗಳನ್ನು ನೀಡಿದ್ದಾರೆ.

ತಮ್ಮ ಆದಾಯ ವೆಚ್ಚಗಳ ಕಡ್ಡಾಯ ಅಫಿಡವಿಟ್ಟುಗಳನ್ನು ಸಲ್ಲಿಸಬೇಕಾಗುವ ಇಂಥ ಪದ್ಧತಿ ಎಲ್ಲೆಡೆ ಏಕರೂಪವಾಗಿ ಜಾರಿಗೆ ಬರಲು ಸಂಬಂಧಪಟ್ಟ ಕಾನೂನುಗಳಲ್ಲಿ ಸೂಕ್ತ ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ. ಅದಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಅಗತ್ಯವಾದ ಪ್ರಸ್ತಾವಗಳನ್ನು ಕಾನೂನು ಮಂತ್ರಾಲಯಕ್ಕೆ ಕಳುಹಿಸುವಂತೆ ಸಹ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರಿಗೆ ತಿಳಿಸಿದೆ.

ಇಂಥದೊಂದು ಕ್ರಮ ಎಲ್ಲಡೆ ಜಾರಿಗೆ ಬಂದು, ಕಟ್ಟುನಿಟ್ಟಾಗಿ ಪಾಲಿಸುವಂತಾದರೆ ಜೀವನಾಂಶ ಪಡೆಯವ ಹಾದಿಯ ಅರ್ಧ ದಾರಿ ಸುಗಮವಾದಂತೆ.

 

 

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *