ಅಂಕಣ

ಕಾನೂನು ಕನ್ನಡಿ / ಗರ್ಭಪಾತದ ಹಕ್ಕು: ನೂತನ ನಿರ್ವಚನ – ಡಾ. ಗೀತಾ ಕೃಷ್ಣಮೂರ್ತಿ

ಗರ್ಭಪಾತ ಎನ್ನುವುದು ನಮ್ಮ ದೇಶದಲ್ಲಿ ಗರ್ಭಿಣಿಯ ಆರೋಗ್ಯಕ್ಕಿಂತ ಅತಿಹೆಚ್ಚು ಧಾರ್ಮಿಕ ನಿರ್ಬಂಧಕ್ಕೆ, ಹೆಣ್ಣುಮಗುವನ್ನು ಕುರಿತ ತಿರಸ್ಕಾರಕ್ಕೆ ಮತ್ತು ಗಂಡುಮಗುವಿನ ಆಸೆಗೆ ಸಂಬಂಧಿಸಿರುತ್ತದೆ. ವೈದ್ಯಕೀಯ ಗರ್ಭಪಾತ ಕುರಿತು ಇದೀಗ ಹೊರಬಂದಿರುವ ಒಂದು ತೀರ್ಪು, ಮಹಿಳೆಯ ಆರೋಗ್ಯದ ದೃಷ್ಟಿಯಿಂದ ಬಹಳ ಮಹತ್ವವನ್ನು ಪಡೆಯುತ್ತದೆ.

ತೀರಾ ಇತ್ತೀಚೆಗೆ ಮುಂಬಯಿ ನ್ಯಾಯಾಲಯ ಪ್ರಮುಖವಾದ ಒಂದು ತೀರ್ಪನ್ನು ನೀಡಿದೆ. ಇದು ವೈದ್ಯಕೀಯ ಗರ್ಭಪಾತಕ್ಕೆ ಸಂಬಂಧಪಟ್ಟ ತೀರ್ಪು. ಈಗ ಜಾರಿಯಲ್ಲಿರುವ ವೈದ್ಯಕೀಯ ಗರ್ಭಪಾತ ಕಾನೂನಿನ ಪ್ರಕಾರ 20 ವಾರಗಳನ್ನು ದಾಟಿದ ಗರ್ಭವನ್ನು, ನ್ಯಾಯಾಲಯದ ಅನುಮತಿ ಇಲ್ಲದೆ ತೆಗೆಯುವಂತಿಲ್ಲ. ಆದರೆ, ಗರ್ಭ ಮುಂದುವರಿದರೆ ತಾಯಿಯ ಜೀವಕ್ಕೆ ಅಪಾಯವಿದೆ ಎಂದು ನೋಂದಾಯಿತ ವೈದ್ಯರು ಅಭಿಪ್ರಾಯಪಟ್ಟರೆ, ನ್ಯಾಯಾಲಯದ ಅನುಮತಿ ಇಲ್ಲದೆ ಗರ್ಭಪಾತ ಮಾಡಿಸಬಹುದು ಎಂಬ ಮಹತ್ವದ ತೀರ್ಪನ್ನು ಈ ನ್ಯಾಯಾಲಯ ನೀಡಿದೆ. ಇಂಥ ತೀರ್ಪು ನೀಡಲು ಕಾರಣವಾದದ್ದು, ನ್ಯಾಯಾಲಯದ ಅನುಮತಿ ಕೋರಿ ಹಾಕಿದ ಅರ್ಜಿಗಳು.

ಮೂವರು ಮಹಿಳೆಯರು, 20 ವಾರಗಳನ್ನು ಮೀರಿದ ಗರ್ಭವನ್ನು ತೆಗೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಗರ್ಭ 20 ವಾರಗಳನ್ನು ಮೀರಿದ್ದರೆ ಅದನ್ನು ನ್ಯಾಯಾಲಯದ ಅನುಮತಿ ಇಲ್ಲದೆ ತೆಗೆಸುವುದು ಕಾನೂನು ರೀತ್ಯಾ ಅಪರಾಧವಾಗುತ್ತದಾದ್ದರಿಂದ ಈ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದನ್ನು ವಿಳಂಬ ಮಾಡುವುದು ಸಾಧ್ಯವಿರಲಿಲ್ಲ. ಹಾಗಾಗಿ ಕೂಡಲೇ ನ್ಯಾಯಾಲಯ, ವಿವಿಧ ವೈದ್ಯ ವಿಭಾಗಗಳಲ್ಲಿ ಪರಿಣತಿ ಹೊಂದಿರುವ ವೈದ್ಯಕೀಯ ಮಂಡಲಿಯನ್ನು ರಚಿಸಿತು. ಇದರಲ್ಲಿ ಮನೋವೈದ್ಯರೂ ಸೇರಿದ್ದರು ಎಂಬುದು ಗಮನಾರ್ಹ. ಈ ಮಂಡಲಿ ನೀಡಿದ ವರದಿಯನ್ನು ಆಧರಿಸಿ, ಮತ್ತು ಇದೇ ರೀತಿಯ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪುಗಳ ಹಿನ್ನೆಲೆಯಲ್ಲಿ ಅರ್ಜಿದಾರರ ಗರ್ಭಪಾತಕ್ಕೆ ಅನುಮತಿ ನೀಡಲಾಯಿತು.

ಗರ್ಭಪಾತಕ್ಕೆ ತುರ್ತು ಅನುಮತಿಯನ್ನು ಕೋರುವ ಈ ರೀತಿಯ ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗುತ್ತಲೇ ಇರುತ್ತವೆ. ಈ ಬಗೆಯ ಯಾವುದೇ ಅರ್ಜಿಗೆ ಸಂಬಂಧಪಟ್ಟಂತೆ ತುರ್ತಾಗಿ ತೀರ್ಪು ನೀಡುವುದು ಅತ್ಯಂತ ಅಗತ್ಯ. ವಿಳಂಬ ಮಾಡುವಂತಿಲ್ಲ. ಏಕೆಂದರೆ, 20 ವಾರಗಳು ದಾಟಿದ ಗರ್ಭ, ಒಂದೊಂದು ದಿನ ಕಳೆದಂತೆಯೂ ಬದಲಾವಣೆಯಾಗುತ್ತಿರುತ್ತದೆ. ಹಾಗಾಗಿ, ಈ ತೊಂದರೆಯನ್ನು ನಿವಾರಿಸಲು ನ್ಯಾಯಾಲಯ ಈ ಸಮಸ್ಯೆಯನ್ನು ಕೂಲಂಕಷ ವಿಶ್ಲೇಷಣೆಗೆ ಒಳಪಡಿಸಲು ತೀರ್ಮಾನಿಸಿತು. ಇದಕ್ಕಾಗಿ ನ್ಯಾಯಾಲಯ, ಹಿರಿಯ ವಕೀಲ ಡಿ.ಜೆ. ಖಂಭಟ್ಟ ಅವರನ್ನು ನ್ಯಾಯಾಲಯ ಸಹಾಯಕರನ್ನಾಗಿ ನೇಮಿಸಿತು.

ಸಾಮಾಜಿಕ, ಆರ್ಥಿಕ, ಸಾಂಸ್ಕøತಿ ಹಾಗೂ ಧಾರ್ಮಿಕ ಕ್ರೌರ್ಯಗಳಂತೆಯೇ ಮಹಿಳೆಯ ದೇಹ ರಚನೆ ಹಾಗೂ ಅವಳ ಗರ್ಭಧಾರಣೆಯ ಸಾಮಥ್ರ್ಯವೂ ಅನೇಕ ಬಾರಿ ಅವಳ ಮೇಲಿನ ಕ್ರೌರ್ಯಕ್ಕೆ ಕಾರಣವಾಗಿದೆ. ಮಹಿಳೆಯ ಇಷ್ಟಾನಿಷ್ಟಕ್ಕಿಂತ ಹೆಚ್ಚಾಗಿ, ಭಾರತೀಯ ಸಾಮಾಜಿಕ ಸಂದರ್ಭದಲ್ಲಿ, ಮಹಿಳೆ ಇತರರ ಸಂತೋಷಕ್ಕಾಗಿ ಗರ್ಭಧರಿಸುವುದು ಅನಿವಾರ್ಯವಾಗಿದೆ. ಅವಳು ಗರ್ಭ ಧರಿಸುವುದಕ್ಕೆ ಮಹಿಳೆಯಷ್ಟೇ ಪುರುಷನೂ ಕಾರಣನಾಗುತ್ತಾನೆ, ಮಗು ಗಂಡೋ ಹೆಣ್ಣೋ ಎಂಬುದು ನಿರ್ಧಾರವಾಗುವುದು ಗಂಡನಿಂದ ಎಂಬುದನ್ನು ಒಪ್ಪಿಕೊಳ್ಳಲು ಸಮಾಜದ ಬಹುಭಾಗ ಇವತ್ತಿಗೂ ಸಿದ್ಧವಿಲ್ಲ. ಈ ಅಜ್ಞಾನದಿಂದಾಗಿ, ಈ ಕಾರಣಕ್ಕೆ, ಅವಳ ಮೇಲೆ ಕ್ರೌರ್ಯ ಅನಾದಿ ಕಾಲದಿಂದಲೂ ನಡೆದುಕೊಂಡೇ ಬಂದಿದೆ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ, ಗರ್ಭವನ್ನು ತೆಗೆಸುವುದು ಅನಿವಾರ್ಯವಾದಾಗ ಸಹ, ಗರ್ಭವನ್ನು ತೆಗೆಸುವುದು ಕಾನೂನಿನ ತೊಡಕು ಮತ್ತು ನ್ಯಾಯಾಲಯದ ವಿಳಂಬ ಪ್ರಕ್ರಿಯೆಯಿಂದಾಗಿ ಸಾಧ್ಯವಾಗದೆ ಹೋಗುತ್ತದೆ. ಆಗಲೂ, ಆ ನಂತರದ ತೊಂದರೆಗಳನ್ನು ಮಹಿಳೆಯೇ ಅನುಭವಿಸಬೇಕಾಗುತ್ತದೆ.

ಗರ್ಭಪಾತ ಮಹಾಪಾಪ ಎಂಬ ನಂಬಿಕೆಯಿದ್ದ ಸಮಾಜದಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸಿ, ವೈದ್ಯಕೀಯ ಗರ್ಭಪಾತ ಅಧಿನಿಯಮವನ್ನು ಜಾರಿಗೊಳಿಸಿದ್ದು 1972 ರ ಏಪ್ರಿಲ್ 1 ರಿಂದ. ಈ ಕಾನೂನನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು, ಅನೇಕ ತಡೆ ಹಾಗೂ ಎಚ್ಚರಿಕೆಯ ಕ್ರಮಗಳನ್ನೂ ಕಾನೂನು ವಿಧಿಸಿತು ಮತ್ತು ಅವುಗಳ ಉಲ್ಲಂಘನೆ ಶಿಕ್ಷಾರ್ಹ ಅಪರಾಧವಾಯಿತು. ಹಾಗಾಗಿ, ನೋಂದಾಯಿತ ವೈದ್ಯರು ಮಾತ್ರ, ಕೆಲವು ಸಂದರ್ಭಗಳಲ್ಲಿ, ಗರ್ಭಪಾತ ಮಾಡಬಹುದಾಗಿತ್ತು. ಈ ಕಾನೂನನ್ನು 2002 ರಲ್ಲಿ ತಿದ್ದುಪಡಿ ಮಾಡಲಾಯಿತು. ಈ ಅಧಿನಿಯಮವನ್ನು ಜಾರಿಗೆ ತಂದುದರ ಉದ್ದೇಶವೆಂದರೆ, ಮಹಿಳೆಯ ಜೀವಕ್ಕೆ ಅಥವಾ ಅವಳ ದೈಹಿಕ ಆರೋಗ್ಯಕ್ಕೆ ಇರುವ ಅಪಾಯವನ್ನು ತಪ್ಪಿಸುವುದು; ಲೈಂಗಿಕ ಅಪರಾಧಗಳಾದ ಅತ್ಯಾಚಾರ ಅಥವಾ ಮಾನಸಿಕ ಅಸ್ವಸ್ಥಳೊಡನೆ ನಡೆಸಿದ ಲೈಂಗಿಕ ಸಂಪರ್ಕದಿಂದ ಉಂಟಾದ ಗರ್ಭವನ್ನು ತೆಗೆಸುವುದು; ಮಗು ಹುಟ್ಟಿದ ನಂತರ ಅಂಗವಿಕಲವಾಗುವ ಅಥವಾ ಖಾಯಿಲೆಗೆ ತುತ್ತಾಗುವ ಸಂಭವವಿದ್ದರೆ ಅಂಥ ಭ್ರೂಣವನ್ನು ತೆಗೆಯುವುದು, ಸಂತಾನ ನಿಯಂತ್ರಣ ಕ್ರಮವನ್ನು ಅನುಸರಿಸಿದ ಅನಂತರವೂ ಗರ್ಭಧಾರಣೆಯಾಗಿದ್ದರೆ ಅಂಥ ಗರ್ಭವನ್ನು ತೆಗೆಯುವುದು. ಕಾರಣ ಏನೇ ಇದ್ದರೂ, 20 ವಾರಗಳನ್ನು ದಾಟಿದ ಗರ್ಭವನ್ನು, ಈಗ ಜಾರಿಯಲ್ಲಿರುವ ಕಾನೂನಿನ ಪ್ರಕಾರ ತೆಗೆಯುವಂತಿಲ್ಲ.

ಆದರೆ, ಗರ್ಭ ಮುಂದುವರಿದರೆ ತಾಯಿಯ ಜೀವಕ್ಕೆ ಅಪಾಯವಿದೆ ಎಂದಾಗ ಮಾತ್ರ ಗರ್ಭಪಾತ ಮಾಡಿಸಬಹುದು. ತಾಯಿಯ ಜೀವಕ್ಕೆ ಅಪಾಯವಿದೆ ಎಂದು ನೋಂದಾಯಿತ ವೈದ್ಯರು ಪ್ರಮಾಣೀಕರಿಸಬೇಕು. ಅದರ ಆಧಾರದ ಮೇಲೆ ನ್ಯಾಯಾಲಯ ಗರ್ಭಪಾತಕ್ಕೆ ಅನುಮತಿ ನೀಡಬೇಕು. ಈ ಅವಕಾಶವಿರುವುದು ತಾಯಿಯ ಜೀವಕ್ಕೆ ಅಪಾಯವಿದೆ ಎಂದಾಗ ಮಾತ್ರ. ಮಗುವಿನ ಜೀವಕ್ಕೆ ಅಥವಾ ಆರೋಗ್ಯಕ್ಕೆ ಅಪಾಯವಿದೆ ಎಂದಾಗ ಅಲ್ಲ. ತಾಯಿಯ ಜೀವವನ್ನು ಉಳಿಸುವುದಕ್ಕೆ ಅಲ್ಲದೆ ಬೇರೆ ಯಾವುದೇ ಕಾರಣಕ್ಕೆ 20 ವಾರಗಳು ದಾಟಿದ ಗರ್ಭದ ಗರ್ಭಪಾತಮಾಡುವ ವೈದ್ಯರು ಏಳು ವರ್ಷಗಳ ಕಾರಾಗೃಹವಾಸ ಶಿಕ್ಷೆಗೆ ಗುರಿಯಾಗುತ್ತಾರೆ.

ಆದರೂ, ಸರ್ವೋಚ್ಚ ನ್ಯಾಯಾಲಯ ಅನೇಕ ಪ್ರಕರಣಗಳಲ್ಲಿ 20 ವಾರಗಳಿಗೂ ಮೀರಿದ ಗರ್ಭವನ್ನು ತೆಗೆಸಲು ಅನುಮತಿ ನೀಡಿದೆ. ತಾಯಿಯ ಪ್ರಾಣ ಉಳಿಸುವುದಕ್ಕಾಗಿ, 20 ವಾರಗಳಿಗೂ ಮೀರಿದ ಗರ್ಭವನ್ನು ತೆಗೆಯುವುದು ಅನಿವಾರ್ಯವಾಗಿದ್ದ ಸಂದರ್ಭದಲ್ಲಿ ಮಾತ್ರ ಗರ್ಭಪಾತಕ್ಕೆ ಕಾನೂನು ಅವಕಾಶ ಕೊಡುತ್ತದೆ. ಆದರೆ ಕಾನೂನಿನಲ್ಲಿ, ಎಂದರೆ ಈ ಬಗ್ಗೆ ಜಾರಿಯಲ್ಲಿರುವ ವೈದ್ಯಕೀಯ ಗರ್ಭಪಾತ ಅಧಿನಿಯಮದಲ್ಲಿ ಇರುವ `ತಾಯಿಯ ಪ್ರಾಣ’ ಎಂಬುದಕ್ಕೆ ಸರ್ವೋಚ್ಚ ನ್ಯಾಯಾಲಯ ವಿಸ್ತøತವಾದ ಅರ್ಥವನ್ನು ನೀಡಿ ನಿರ್ವಚಿಸಿದೆ. ಗರ್ಭವನ್ನು ಮುಂದುವರಿಸಿದಲ್ಲಿ ತಾಯಿಯ ಜೀವಕ್ಕೆ ತೊಂದರೆಯಾಗದಿದ್ದರೂ ಅವಳ ಮಾನಸಿಕ ಆರೋಗ್ಯಕ್ಕೆ ತೀವ್ರ ಸ್ವರೂಪದ ಧಕ್ಕೆಯಾಗುತ್ತದೆ ಎನ್ನುವ ಸಂದರ್ಭಗಳಲ್ಲಿ ಮತ್ತು ಗರ್ಭ ಮುಂದುವರಿದರೆ, ತಾಯಿಯ ಜೀವಕ್ಕೆ ತೊಂದರೆ ಇಲ್ಲದಿದ್ದರೂ, ಹುಟ್ಟುವ ಮಗು ತೀವ್ರತರವಾದ ಮಾನಸಿಕ ಅಥವಾ ದೈಹಿಕ ನ್ಯೂನತೆಯಿಂದ ಕೂಡಿದ್ದು ಅನಾರೋಗ್ಯದಿಂದ ಬಳಲುತ್ತದೆ ಎನ್ನುವ ಸಂದರ್ಭಗಳಲ್ಲಿಯೂ, ಗರ್ಭಪಾತಕ್ಕೆ ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡುತ್ತಲೇ ಬಂದಿದೆ.

ಈ ಹಿನ್ನೆಲೆಯಲ್ಲಿ ಮತ್ತು ಪ್ರಕರಣದ ತುರ್ತು ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಕೂಡಲೇ ಗರ್ಭಪಾತವನ್ನು ಮಾಡದಿದ್ದರೆ ತಾಯಿಯ ಜೀವಕ್ಕೆ ಅಪಾಯವಿದೆ ಎಂದು ನೋಂದಾಯಿತ ವೈದ್ಯರು ಅಭಿಪ್ರಾಯಪಟ್ಟ ಸಂದರ್ಭದಲ್ಲಿ ಮಾತ್ರ ನ್ಯಾಯಾಲಯದ ಅನುಮತಿ ಪಡೆಯದೆಯೇ ನೋಂದಾಯಿತ ವೈದ್ಯರು ಗರ್ಭಪಾತ ಮಾಡಬಹುದು ಎಂದು ಈ ನ್ಯಾಯಾಲಯದ ತೀರ್ಪು ನೀಡಿದೆ. ಈ ಹಿಂದೆ ಅಂಥ ಅನೇಕ ಹಲವು ಪ್ರಕರಣಗಳಲ್ಲಿ, ನ್ಯಾಯಾಲಯದ ಅನುಮತಿ ಪಡೆವ ಪ್ರಕ್ರಿಯೆಯಲ್ಲಿ ಗರ್ಭಪಾತ ಮಾಡುವುದು ಸಾಧ್ಯವಾಗದೆ ಹೋದ ಕಾರಣದಿಂದ ಅಂಗವಿಕಲ ಮಗು ಹುಟ್ಟಿದ ಪ್ರಕರಣಗಳಿವೆ ಮತ್ತು ವಿಳಂಬವಾಗಿ ಮಾಡಿದ ಕಾರಣದಿಂದ ತಾಯಿಯ ಜೀವಕ್ಕೆ ಎರವಾದ ಪ್ರಕರಣಗಳೂ ಇವೆ. ಈ ದೃಷ್ಟಿಯಿಂದ ಈ ತೀರ್ಪು ಬಹಳ ಮಹತ್ವ ಪೂರ್ಣದ್ದಾಗುತ್ತದೆ.
ಗರ್ಭಪಾತ ಮಾಡಲು ಪ್ರಯತ್ನಪಟ್ಟರೂ, ಪ್ರಯತ್ನ ವಿಫಲವಾಗಿ, ಜೀವಂತ ಮಗು ಹುಟ್ಟಿದಲ್ಲಿ, ಆ ಮಗುವನ್ನು ನೋಡಿಕೊಳ್ಳುವುದು ಮತ್ತು ಆರೈಕೆ ಮಾಡುವುದು ತಂದೆ ತಾಯಿಯರ ಹಾಗೂ ವೈದ್ಯರ ಕರ್ತವ್ಯವಾಗಿರುತ್ತದೆ. ದುರದೃಷ್ಟವಶಾತ್ ತಂದೆ ತಾಯಿಯರು ಮಗುವಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಒಪ್ಪದಿದ್ದರೆ ಅಥವಾ ಮಗುವಿನ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅಶಕ್ತರಾಗಿದ್ದರೆ, ಆಗ, ಅಂಥ ಮಗುವಿನ ಪಾಲನೆ, ಪೋಷಣೆಯ ಹೊಣೆಯನ್ನು ಸರ್ಕಾರ ವಹಿಸಿಕೊಳ್ಳಬೇಕಾಗುತ್ತದೆ ಎಂಬ ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯವನ್ನು ನ್ಯಾಯಾಲಯ ಉಲ್ಲೇಖಿಸಿದೆ.

ಗರ್ಭಪಾತದ ಹಕ್ಕು, ಮಹಿಳಾ ಹಕ್ಕುಗಳ ಹೋರಾಟದಲ್ಲಿಯೂ ಸಾಕಷ್ಟು ವಾದ ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ. ಏಕೆಂದರೆ ಗರ್ಭಪಾತ ಎನ್ನುವುದು ಕೇವಲ ತಾಂತ್ರಿಕ, ವೈದ್ಯಕೀಯ ವಿಷಯವಾಗಿ ಉಳಿಯದೆ, ಕುಟುಂಬ, ತಾಯ್ತನ, ಮಹಿಳಾ ಲೈಂಗಿಕತೆ, ರಾಜ್ಯ, ರಾಜಕಾರಣ ಇವೆಲ್ಲಕ್ಕೂ ಸಂಬಂಧಿಸಿದ ವಿಸ್ತøತ ತಳಹದಿಯ ಭಾವನಾತ್ಮಕ ಹೋರಾಟಗಳ ಕೇಂದ್ರ ಬಿಂದುವೂ ಆಗುತ್ತದೆ. ಹಾಗೆಯೇ, ಈ ಹಕ್ಕು ಅತ್ಯಂತ ನಿರ್ಲಕ್ಷಿತ ಹಕ್ಕೂ ಆಗಿದೆ. ಗರ್ಭಪಾತದೊಂದಿಗೆ ತಳುಕು ಹಾಕಿಕೊಂಡಿರುವ ಕೌಟುಂಬಿಕ ಹಾಗೂ ಧಾರ್ಮಿಕ ಕಟ್ಟುಪಾಡುಗಳಿಂದಾಗಿ, ಇತರ ಹಕ್ಕುಗಳಂತೆ ಗರ್ಭಪಾತದ ಹಕ್ಕನ್ನು ಒಂದು ಸ್ವತಂತ್ರ ಹಕ್ಕಾಗಿ ಚಲಾಯಿಸಲು ಸಾಧ್ಯವಾಗುವುದೇ ಇಲ್ಲ.

ಸದ್ಯದಲ್ಲಿ, ಕಾನೂನಿನ ಚೌಕಟ್ಟಿನೊಳಗೆ ಈ ಹಕ್ಕು ಬಂಧಿಯಾಗಿದೆ. ಆದರೂ, ಕಾನೂನುಗಳ ರಚನೆಯ `ಉದ್ದೇಶ ಮತ್ತು ಕಾರಣ’ಗಳ ಹೇಳಿಕೆಗಳ ವ್ಯಾಪ್ತಿಯೊಳಗೇ, ನ್ಯಾಯಾಲಯಗಳು ಕಾನೂನುಗಳಿಗೆ ವಿಸ್ತøತ ವ್ಯಾಖ್ಯಾನವನ್ನು ನೀಡುತ್ತಿವೆ ಮತ್ತು ಆ ಮೂಲಕ, ಕಾನೂನುಗಳ ಅಕ್ಷರಶಃ ಪಾಲನೆಯಿಂದ ಉಂಟಾಗಬಹುದಾದ ತೊಂದರೆಗಳನ್ನು ನಿವಾರಿಸುವ ಪ್ರಯತ್ನಗಳನ್ನು ಮಾಡುತ್ತಲೇ ಬಂದಿವೆ.

ಆದರೆ, ಈ ಸ್ವಾತಂತ್ರ್ಯದ ದುರುಪಯೋಗವಾಗದಂತೆ ನೋಡಿಕೊಳ್ಳುವುದು ಸಂಬಂಧಪಟ್ಟವರ ಜವಾಬ್ದಾರಿಯಾಗಿರುತ್ತದೆ.

– ಡಾ.ಗೀತಾ ಕೃಷ್ಣಮೂರ್ತಿ

——————————–

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *