ಕಾನೂನು ಕನ್ನಡಿ / ಕೌಟುಂಬಿಕ ದೌರ್ಜನ್ಯ: ಮಹಿಳೆಗಿಲ್ಲ ವಿನಾಯಿತಿ – ಡಾ. ಗೀತಾ ಕೃಷ್ಣಮೂರ್ತಿ
ಸಾಮರಸ್ಯವಿಲ್ಲದ ಕುಟುಂಬದಲ್ಲಿ ಮಹಿಳೆಗೆ ಗಂಡನ ಜೊತೆ ಅವನ ತಾಯಿ ಮತ್ತು ಸೋದರಿಯರೂ ಹಿಂಸೆ ನೀಡುವುದು ಅಪರೂಪವೇನಲ್ಲ. ಗಂಡನ ಅಥವಾ ಪುರುಷ ಸಂಗಾತಿಯ ಮಹಿಳಾ ಸಂಬಂಧಿಗಳನ್ನು ಕಾನೂನಿನ ವ್ಯಾಪ್ತಿಗೆ ತರಬಹುದು, ಮಹಿಳೆಯರಿಂದಲೇ ಉಂಟಾಗುವ ಹಿಂಸೆಯ ವಿರುದ್ಧವೂ ದನಿ ಎತ್ತಬಹುದು ಎಂದು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು ಮಹಿಳಾ ಹಕ್ಕುಗಳ ರಕ್ಷಣೆಗೆ ನೆರವಾಗಿದೆ
ನ್ಯಾಯ ಕೋರಿ ನ್ಯಾಯಾಲಯದ ಮೆಟ್ಟಿಲು ಹತ್ತಿದ ಸಂಧ್ಯಾ ಎಂಬುವರು ಮನೋಜ್ ಎಂಬುವರನ್ನು ವಿವಾಹವಾದದ್ದು 2005 ರಲ್ಲಿ. ವಿವಾಹವನ್ನು ವಿಶೇಷ ವಿವಾಹ ಅಧಿನಿಯಮದ ಅಡಿಯಲ್ಲಿ ನೋಂದಣಿ ಮಾಡಿಸಿದರು. ವಿವಾಹದ ನಂತರ ಗಂಡನ ಮನೆಯಲ್ಲಿ, ಗಂಡನ ತಾಯಿ ಹಾಗೂ ಗಂಡನ ಸಹೋದರಿಯ ಜೊತೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ವಿವಾಹವಾದ ನಂತರದ ಒಂದು
ವರ್ಷದಲ್ಲಿಯೇ ಗಂಡ ಹಾಗೂ ಅತ್ತೆ ಮತ್ತು ನಾದಿನಿ ಅವರಿಗೆ ಹಿಂಸೆ ನೀಡಲು ಪ್ರಾರಂಭಿಸಿದರು. 2007 ರ ಜೂನ್ 16 ರಂದು ಗಂಡ ಆಕೆಯನ್ನು ಮನಬಂದಂತೆ ಥಳಿಸಿದ. ಆ ಬಗ್ಗೆ ಆಕೆ ಹತ್ತಿರದ ಪೊಲೀಸು ಠಾಣೆಯಲ್ಲಿ ಭಾರತ ದಂಡ ಸಂಹಿತೆಯ 498 ಎ ಪ್ರಕರಣದ ಅಡಿಯಲ್ಲಿ ದೂರು ದಾಖಲಿಸಿದಳು.
ಇದರೊಡನೆ, ಅಂದೇ ಆಕೆ, 2006 ರಲ್ಲಿ ಜಾರಿಯಲ್ಲಿ ಬಂದ `ಕೌಟುಂಬಿಕ ದೌರ್ಜನ್ಯದಿಂಂದ ಮಹಿಳೆಯರಿಗೆ ರಕ್ಷಣೆ’ ಎಂಬ ಕಾನೂನಿನ ಅಡಿಯಲ್ಲಿ ಗಂಡ, ಅತ್ತೆ ಹಾಗೂ ನಾದಿನಿಯ ವಿರುದ್ಧವೂ ದೂರನ್ನು ದಾಖಲು ಮಾಡಿದಳು. ಹಾಗೆಯೇ, ಈ ಅಧಿನಿಯಮದ ಅಡಿಯಲ್ಲಿ ಜೀವನಾಂಶವನ್ನು ಮಂಜೂರು ಮಾಡಬೇಕೆಂದು ಕೋರಿ ಹಾಕಿದ ಅರ್ಜಿಯನ್ನು ನ್ಯಾಯಿಕ ಮ್ಯಾಜಿಸ್ಟ್ರೇಟರು ಪುರಸ್ಕರಿಸಿದರು. ಮತ್ತು ಪತ್ನಿಗೆ ಅರ್ಜಿಯ ದಿನಾಂಕದಿಂದ 1500 ರೂ.ಗಳ ತಾತ್ಕಾಲಿಕ ಜೀವನಾಂಶವನ್ನು ನೀಡುವಂತೆ ಆದೇಶಿಸಿದರು. ಅದರ ಜೊತೆಗೇ, ಅರ್ಜಿಯನ್ನು
ಅಂತಿಮವಾಗಿ ಇತ್ಯರ್ಥಗೊಳಿಸುವವರೆಗೆ ಆಕೆಯನ್ನು ಮನೆಯಿಂದ ಹೊರಹಾಕದಂತೆ ಆಕೆಯ ಗಂಡ, ಅತ್ತೆ ಹಾಗೂ ನಾದಿನಿಯನ್ನು ನಿರ್ಬಂಧಿಸಿ ಆದೇಶವನ್ನು ಹೊರಡಿಸಿದರು. ಮ್ಯಾಜಿಸ್ಟ್ರೇಟರ ಈ ಆದೇಶವನ್ನು ಪ್ರಶ್ನಿಸಿ ಆಕೆಯ ಪತಿ ಸತ್ರ ನ್ಯಾಯಾಲಯದಲ್ಲಿ ಸಲ್ಲಿಸಿದ ಮೇಲ್ಮನವಿ ತಿರಸ್ಕøತವಾಯಿತು. ಉಚ್ಚ ನ್ಯಾಯಾಲಯದಲ್ಲಿಯೂ ಆತನ ಮೇಲ್ಮನವಿ ತಿರಸ್ಕøತವಾಯಿತು.
ಇದೆಲ್ಲದರ ನಡುವೆ, ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಗೆ ರಕ್ಷಣೆ ನೀಡುವ ಕಾನೂನಿನ ಅಡಿಯಲ್ಲಿ `ಮಹಿಳೆಯರ ವಿರುದ್ಧ ದೂರು ನೀಡಲು' ಅವಕಾಶ ಇಲ್ಲದಿರುವುದರಿಂದ, ತನ್ನನ್ನು ಮತ್ತು ತನ್ನ ಮಗಳನ್ನು ಪ್ರತಿವಾದಿಗಳನ್ನಾಗಿ ಮಾಡಲು ಬರುವುದಿಲ್ಲ ಮತ್ತು ಸೊಸೆ ತನ್ನ ಮಗನ ಪತ್ನಿಯಾಗಿ ವಾಸಿಸುತ್ತಿದ್ದ ಮನೆ ತನ್ನ ಹೆಸರಿನಲ್ಲಿರುವ ಮನೆ ಎಂದೂ,ಕಾನೂನಿನಲ್ಲಿ ಪರಿಭಾಷಿಸಿರುವಂತೆ ಅದು ಸೊಸೆಯ
ಹಂಚಿಕೊಂಡ ಮನೆ (ಷೇರ್ಡ್ ಹೌಸ್‍ಹೋಲ್ಡ್) ಅಲ್ಲವೆಂದೂ, ಆದ್ದರಿಂದ ಸೊಸೆಯನ್ನು ಮನೆಯಿಂದ ಹೊರಹಾಕಬಾರದು ಎಂದು ಆದೇಶಿಸಿರುವ ನ್ಯಾಯಿಕ ಮ್ಯಾಜಿಸ್ಟ್ರೇಟರ ಆದೇಶವನ್ನು ಮಾರ್ಪಾಟು ಮಾಡಬೇಕೆಂದೂ ಕೋರಿದಳು. ಈ ವಾದವನ್ನು ಒಪ್ಪಿದ ನ್ಯಾಯಾಲಯ, ನ್ಯಾಯಿಕ ಮ್ಯಾಜಿಸ್ಟ್ರೇಟರ ಆದೇಶವನ್ನು ರದ್ದುಗೊಳಿಸಿತು ಮತ್ತು `ವಾಸದ ಹಕ್ಕಿಗೆ’ ಸಂಬಂಧಪಟ್ಟ ಮಟ್ಟಿಗೆ ಆದೇಶವನ್ನು ಮಾರ್ಪಡಿಸಿ, ಆಕೆಯ ವಾಸಕ್ಕೆ ಅವಕಾಶ ಕಲ್ಪಿಸಲು 1000 ರೂ.ಗಳನ್ನು ಜೀವನಾಂಶದ ಜೊತೆಗೆ ಸೇರಿಸಿ ಕೊಡಬೇಕೆಂದೂ ಆದೇಶ ನೀಡಿತು.
ಮೇಲ್ಮನವಿಯಲ್ಲಿ, ಮುಂಬಯಿ ಉಚ್ಚ ನ್ಯಾಯಾಲಯವೂ ಸತ್ರ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು ಮತ್ತು ಅತ್ತೆಯ ಹೆಸರಿನಲ್ಲಿರುವ ಗಂಡನ ಮನೆಯನ್ನು, ಆರು ತಿಂಗಳೊಳಗಾಗಿ, ತೊರೆಯುವಂತೆ ಆದೇಶವನ್ನು ನೀಡಿತು. ಉಚ್ಚ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ಪತ್ನಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದಳು.
ಇಲ್ಲಿ ಮುಖ್ಯವಾಗಿ ನಿರ್ಧಾರವಾಗಬೇಕಿದ್ದ ಪ್ರಶ್ನೆ ಎಂದರೆ, ಕೌಟುಂಬಿಕ ಹಿಂಸೆಯನ್ನು ನೀಡಿದ ವ್ಯಕ್ತಿ `ಮಹಿಳೆ’ ಎಂಬ ಕಾರಣಕ್ಕೆ ಅವಳು ಕಾನೂನಿನಿಂದ ತಪ್ಪಿಸಿಕೊಳ್ಳಲು ಅವಕಾಶವಿದೆಯೇ ಎಂಬುದು.
ಮಹಿಳೆಯರು ಅಸಹಾಯಕರಾಗಿ ಎದುರಿಸುವ ಕೌಟುಂಬಿಕ ದೌರ್ಜನ್ಯಕ್ಕೆ ನೂರು ಮುಖ. ವೈವಾಹಿಕ ಜೀವನವನ್ನು ಅಸ್ಥಿರಗೊಳಿಸುವ ಈ ಹಿಂಸೆ ಅಥವಾ ದೌರ್ಜನ್ಯ ಮಾನಸಿಕ ಸ್ವರೂಪದ್ದಾಗಿರಬಹುದು
ಅಥವಾ ದೈಹಿಕ ಸ್ವರೂಪದ್ದಾಗಿರಬಹುದು. ಹೆಣ್ಣು ಮಕ್ಕಳು, ವಿವಾಹದ ನಂತರದ ತಮ್ಮ ಜೀವನದ ಬಗ್ಗೆ ಹಲವಾರು ಕನಸುಗಳನ್ನು, ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡು ತಮ್ಮ ವೈವಾಹಿಕ ಜೀವನಕ್ಕೆ ಕಾಲಿರಿಸಿರುತ್ತಾರೆ. ಆದರೆ, ತಮ್ಮ ಕುಟುಂಬದವರಿಂದಲೇ ದೌರ್ಜನ್ಯಕ್ಕೆ ಒಳಗಾದಾಗ ಮಾನಸಿಕವಾಗಿ ಅತೀವವಾದ ಆಘಾತಕ್ಕೆ ಒಳಗಾಗಿರುತ್ತಾರೆ. ಅದನ್ನು ಎದುರಿಸಲು ಬೇಕಾದ ಯಾವುದೇ ರೀತಿಯ ಬೆಂಬಲ ಅವರಿಗೆ ಅಲ್ಲಿ ದೊರೆಯುವುದಿಲ್ಲ.
ಯಾವುದೇ ರೀತಿಯ ಹಿಂಸೆಗೆ, ದೌರ್ಜನ್ಯಕ್ಕೆ ಒಳಗಾಗದೆ, ಘನತೆಯಿಂದ ಜೀವಿಸುವ ಹಕ್ಕು, ಭಾರತದ ಸಂವಿಧಾನದ ಅಡಿಯಲ್ಲಿ, ಭಾರತದ ಪ್ರತಿಯೊಬ್ಬ ಪ್ರಜೆಗೂ ಇದೆ. ಇದು ವ್ಯಕ್ತಿಯ ಮೂಲಭೂತ ಹಕ್ಕು. ಕೌಟುಂಬಿಕ ದೌರ್ಜನ್ಯ ಮಹಿಳೆಯ ಈ ಮೂಲಭೂತ ಹಕ್ಕನ್ನು ಕಸಿದುಕೊಳ್ಳುತ್ತದೆ. ವಿಪರ್ಯಾಸವೆಂದರೆ, ಈ ಹಕ್ಕುಗಳನ್ನು ತೀರ ಇತ್ತೀಚಿನವರೆಗೂ ಮಹಿಳೆಯ ಮೂಲಭೂತ ಹಕ್ಕುಗಳು ಎಂದೇ ಪರಿಗಣಿಸಿರಲಿಲ್ಲ. ಇಂಥ ದೌರ್ಜನ್ಯ ಅನೇಕ ಶತಮಾನಗಳಿಂದಲೂ ನಡೆಯುತ್ತಾ ಬಂದಿದೆ. ಇದಕ್ಕೆ ಕಾರಣ ಮಹಿಳೆಯರು ಆರ್ಥಿಕವಾಗಿ ಪುರುಷರನ್ನು ಅವಲಂಬಿಸಿರುವುದು ಮತ್ತು ಪುರುಷರು ಮಹಿಳೆಯರಿಗಿಂತ ಮೇಲು ಎಂಬ ಭಾವನೆ ಸಮಾಜದಲ್ಲಿ ಬೇರೂರಿರುವುದು. ಹಾಗಾಗಿ ಇದರ ವಿರುದ್ಧ ಹೋರಾಡಲು ಮತ್ತು ಕೌಟುಂಬಿಕ ಹಿಂಸೆಯಿಂದ ರಕ್ಷಣೆ ಪಡೆಯಲು ತೀರಾ ಇತ್ತೀಚಿನವರೆಗೆ ಮಹಿಳೆಗೆ ಯಾವುದೇ ಕಾನೂನಿನ ಬೆಂಬಲ ಇರಲಿಲ್ಲ.
ಮಹಿಳಾ ಸಂಘಟನೆಗಳ ದೀರ್ಘ ಕಾಲದ ಹೋರಾಟದ ಫಲವಾಗಿ &quoಣ; ಕೌಟುಂಬಿಕ ದೌರ್ಜನ್ಯದಿಂಂದ ಮಹಿಳೆಯರಿಗೆ ರಕ್ಷಣೆ &quoಣ; ಎಂಬ ಕಾನೂನು 2006 ರಿಂದ ಜಾರಿಗೆ ಬಂದಿದೆ.
ಇದು ಜಾರಿಗೆ ಬಂದ ನಂತರ ಈ ಚಿತ್ರಣ ಸ್ವಲ್ಪ ಬದಲಾಯಿತು.
ಮೇಲಿನ ಪ್ರಶ್ನೆಗೆ ಉತ್ತರ ನೀಡುವ ಮೊದಲು ಸರ್ವೋಚ್ಚ ನ್ಯಾಯಾಲಯ, ಈ ಸಂಬಂಧವಾಗಿ ಆ ಕಾನೂನಿನಲ್ಲಿರುವ ಉಪಬಂಧಗಳನ್ನು ಕೂಲಂಕಷ ಪರಿಶೀಲನೆಗೆ ಒಳಪಡಿಸಿತು. ಪ್ರಸಕ್ತ ಕಾನೂನಿನಲ್ಲಿ ಹೀಗಿದೆ,-
2(ಕ್ಯು). ಪ್ರತಿವಾದಿ' ಎಂದರೆ ಸಂತ್ರಸ್ತ ಮಹಿಳೆಯೊಡನೆ ಸಂಬಂಧ ಹೊಂದಿರುವ ಅಥವಾ ಸಂಬಂಧ ಹೊಂದಿದ್ದ, ಈ ಕಾನೂನಿನ ಅಡಿಯಲ್ಲಿ ಪರಿಹಾರವನ್ನು ಕೋರಲಾಗಿರುವ ಪುರುಷ ಸದಸ್ಯ: ಹಾಗೂ, ಪತ್ನಿ ಅಥವಾ ಸಹಜೀವನ ನಡೆಸುತ್ತ ವಿವಾಹ ರೀತಿಯ ಸಂಬಂಧವನ್ನು ಹೊಂದಿರುವ ಮಹಿಳೆ, ಪತಿ ಅಥವಾ ಪುರುಷ ಸಂಗಾತಿಯ ಸಂಬಂಧಿಯ ವಿರುದ್ಧವೂ ದೂರನ್ನು ದಾಖಲಿಸಬಹುದು. ಮೇಲೆ ಮೊದಲಿನ ಪ್ಯಾರಾದಲ್ಲಿ
ಪುರುಷ’ನ ವಿರುದ್ಧ ಎಂದು ಸ್ಪಷ್ಟ ಪಡಿಸಿದೆ. ಆದರೆ ಅದರ ಕೆಳಗೆ, ಮೇಲಿನ ಪ್ಯಾರಾದ ವ್ಯಾಪ್ತಿಯನ್ನು ಕಾನೂನು ವಿಸ್ತರಿಸಿದೆ. ಅದರಲ್ಲಿ ಪತಿ ಅಥವಾ ಪುರುಷ ಸಂಗಾತಿಯ ಸಂಬಂಧಿ' ಎಂದು ನಮೂದಿಸಲಾಗಿದೆ. ಮಹಿಳೆಯರ ವಿರುದ್ಧ ದೂರು ನೀಡಬಾರದು ಎಂಬುದು ಕಾನೂನು ರಚನಾಕಾರರ ಉದ್ದೇಶವಾಗಿದ್ದಿದ್ದರೆ, ಸ್ಪಷ್ಟವಾಗಿ ಅದನ್ನು ಹೇಳಲಾಗುತ್ತಿತ್ತು.
ಸಂಬಂಧಿ’ ಎಂಬುದಕ್ಕೆ ಸೀಮಿತ ಅರ್ಥವನ್ನು ಎಲ್ಲಿಯೂ ಕೊಟ್ಟಿಲ್ಲ, ಅಲ್ಲದೆ, ಕೌಟುಂಬಿಕ ದೌರ್ಜನ್ಯ ಕಾನೂನಿನಲ್ಲಿ ಎಲ್ಲಿಯೂ, `ಸಂಬಂದಿ’ ಎಂದರೆ ಪುರುಷ ಸಂಬಂಧಿ ಮಾತ್ರ ಎಂದು ಎಲ್ಲಿಯೂ ಪರಿಭಾಷಿಸಿಲ್ಲ. ಇದರಿಂದಾಗಿ ಗಂಡನ ಅಥವಾ ಪುರುಷ ಸಂಗಾತಿಯ ಮಹಿಳಾ ಸಂಬಂಧಿಗಳನ್ನು ಕಾನೂನಿನ ವ್ಯಾಪ್ತಿಗೆ ತರಬಾರದು ಎಂಬುದು ಕಾನೂನು ರಚನಾಕಾರರ ಉದ್ದೇಶವಾಗಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ, ಈ ಅಂಶಕ್ಕೆ ಸಂಬಂಧಿಸಿದಂತೆ, ಸತ್ರ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯಗಳೆರಡೂ ತಪ್ಪು ತೀರ್ಮಾನವನ್ನು ಕೈಗೊಂಡಿದೆ ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟು, ಅರ್ಜಿದಾರರ ಅತ್ತೆ ಮತ್ತು ನಾದಿನಿ ಇಬ್ಬರನ್ನೂ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ತೀರ್ಪು ನೀಡಿದೆ.
ಕುಟುಂಬದ ಸದಸ್ಯರಿಂದಲೇ ನಡೆಯುವ ದೌರ್ಜನ್ಯ ಹಾಗೂ ಹಿಂಸೆಗಳ ವಿರುದ್ಧ ಹೋರಾಡಲು ಮಹಿಳೆಯರಿಗೆ ಈ ಕಾನೂನಿನ ಅರಿವು ಇರುವುದು ಅಗತ್ಯ. ಈ ಕಾನೂನಿನ ಅಡಿಯಲ್ಲಿ ರಕ್ಷಣೆ ದೊರೆಯುವುದು ಮಹಿಳೆಯರಿಗೆ ಮಾತ್ರ. ಪುರುಷರಿಂದ ಹಿಂಸೆಗೆ ಅಥವಾ ದೌರ್ಜನ್ಯಕ್ಕೆ ಒಳಗಾಗಿದ್ದರೆ ಮಾತ್ರ ಮಹಿಳೆ ಅವರ ವಿರುದ್ಧ ದೂರು ನೀಡಬಹುದು. ಮಹಿಳೆ ವಿವಾಹಿತೆಯಾಗಿರುವಲ್ಲಿ, ಹಿಂಸೆ ನೀಡುವವರು ಮಹಿಳೆಯರಾಗಿದ್ದರೂ, ಅವರು ಅವಳ ಗಂಡನ ಸಂಬಂಧಿಗಳಾಗಿದ್ದರೆ, ಅವರ ವಿರುದ್ಧ ಆಕೆ ದೂರು ನೀಡಬಹುದು. ಎಂದರೆ, ಕೌಟುಂಬಿಕ ಸಂಬಂಧದಿಂದ ಉಂಟಾದ ಸಂಬಂಧಿಗಳಿಂದ ಮಾನಸಿಕ ಅಥವಾ ದೈಹಿಕ ಹಿಂಸೆ ಅನುಭವಿಸುತ್ತಿದ್ದರೆ ಈ ಕಾನೂನಿನ ಅಡಿಯಲ್ಲಿ ಪರಿಹಾರವಿದೆ. ಅಷ್ಟೇ ಅಲ್ಲದೆ, ಆರ್ಥಿಕ ಹಾಗೂ ಲೈಂಗಿಕ ಹಿಂಸೆಯನ್ನೂ ಈ ಕಾನೂನಿನ ವ್ಯಾಪ್ತಿಗೆ ತರಲಾಗಿದೆ.
ಸಾಮರಸ್ಯವಿಲ್ಲದ ಕುಟುಂಬದಲ್ಲಿ, ಹಿಂಸೆ ನೀಡುವ ಗಂಡನ ಜೊತೆಯಲ್ಲಿ ಗಂಡನ ತಾಯಿ, ಗಂಡನ ಸಹೋದರಿಯರು ಹಿಂಸೆ ಕೊಡುವುದರಲ್ಲಿ ಸೇರಿಕೊಳ್ಳುವುದು, ಆ ಮೂಲಕ ಹಿಂಸಾನಂದವನ್ನು ಅನುಭವಿಸುವುದು ಅಪರೂಪವೇನಲ್ಲ. ಹಾಗಾಗಿ ಮಹಿಳೆಯರಿಂದಲೇ ಮಹಿಳೆಗೆ ಉಂಟಾಗುವ ಹಿಂಸೆಯ ವಿರುದ್ಧವೂ, ಹಿಂಸೆಗೆ ಒಳಗಾದ ಮಹಿಳೆ ದನಿ ಎತ್ತಬಹುದು ಎಂಬುದು ಸಹ ಮಹಿಳಾ ಹಕ್ಕುಗಳ ರಕ್ಷಣೆಯ ಸಂದರ್ಭದಲ್ಲಿ ಮುಖ್ಯವಾದುದಾಗುತ್ತದೆ.
- ಡಾ. ಗೀತಾ ಕೃಷ್ಣಮೂರ್ತಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.