ಕಾನೂನು ಕನ್ನಡಿ / ಕೌಟುಂಬಿಕ ಕ್ರೌರ್ಯದ ಪರಿಭಾಷೆ – ಡಾ. ಗೀತಾ ಕೃಷ್ಣಮೂರ್ತಿ

ಮಹಿಳೆಯರ ವಿರುದ್ಧ ಹಿಂಸೆ ಎಂದರೆ, ಮಹಿಳೆಯರ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಹಿಳೆಯರ ವಿರುದ್ಧ ಎಸಗುವ ತಾರತಮ್ಯ ಎಂದು ಪರಿಭಾವಿಸಲಾಗುತ್ತದೆ. ಸಮಾಜ ಬದಲಾದಂತೆ, ಸಾಮಾಜಿಕ ಮೌಲ್ಯಗಳು ಬದಲಾದಂತೆ, ಜೀವನ ಮಟ್ಟ ಉತ್ತಮಗೊಂಡಂತೆ, ಕಾನೂನಿನ ದೃಷ್ಟಿಯಲ್ಲಿ ‘ಕ್ರೌರ್ಯ’ ದ ಪರಿಭಾಷೆಯೂ ಬದಲಾಗುತ್ತಾ ಹೋಗುತ್ತದೆ.

ಇತ್ತೀಚೆಗೆ ಉತ್ತರಾಖಂಡ ಉಚ್ಚ ನ್ಯಾಯಾಲಯ, ಹಿಂಸೆಯ ಕಾರಣದ ಮೇಲೆ ಪತ್ನಿಗೆ ವಿಚ್ಛೇದನೆ ನೀಡಿದೆ. ಆ ಹಿಂಸೆಯಾದರೂ ಎಂಥದ್ದು? ಪತಿ, ತನ್ನ ಪತ್ನಿಗೆ ಯಾವುದೇ ಆದಾಯ ಇಲ್ಲ ಎಂದು ತಿಳಿದಿದ್ದರೂ, ಪದೇ ಪದೇ ಹೆಂಡತಿಯ ಹೆಸರಿನಲ್ಲಿ ಸಾಲ ತೆಗೆದುಕೊಳ್ಳುತ್ತಿದ್ದ, ಆದರೆ ಅದನ್ನು ತೀರಿಸುತ್ತಿರಲಿಲ್ಲ. ಕೆಲವು ಸಾಲಗಳಿಗೆ ಅವಳನ್ನು ಖಾತರಿದಾರಳನ್ನಾಗಿ ಮಾಡಿದ್ದ. ಹಾಗಾಗಿ ಅವನು ಸಾಲ ತೀರಿಸದೆ ಇದ್ದಾಗ ಇವಳನ್ನು ಸಾಲಕ್ಕೆ ಹೊಣೆಗಾರಳನ್ನಾಗಿ ಮಾಡಲಾಗುತ್ತಿತ್ತು. ಸಾಲ ಕೊಟ್ಟವರು ಬಂದು ಸಾಲ ಮರು ಪಾವತಿಸುವಂತೆ ಪತ್ನಿಯನ್ನು ಪೀಡಿಸುತ್ತಿದ್ದರು. ಅಲ್ಲದೆ ಆತ ಗೆಳೆಯರೊಡನೆ ಸೇರಿ ಡಾಲಿ ಗುಜರಾಲ್ ಎಂಬಾಕೆಗೆ ಮೋಸ ಮಾಡಿದ್ದ. ಆಕೆ ಈತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಆ ಸಂಬಂಧ ಎಫ್‍ಐಆರ್ ಕೂಡ ದಾಖಲಾಗಿದೆ.

ಇವಿಷ್ಟು ಸಾಲದು ಎಂಬಂತೆ, ತನ್ನ ಗಂಡ ಎಲ್ಲ ಸಮಯವನ್ನೂ ಅದೇ ಅಪಾರ್ಟ್‍ಮೆಂಟ್‍ನಲ್ಲಿರುವ ಬೇರೊಬ್ಬ ಹೆಂಗಸಿನೊಡನೆ ಕಳೆಯುತ್ತಿದ್ದ ಮತ್ತು ಅದನ್ನು ಪ್ರಶ್ನಿಸಿದಾಗ ಪತ್ನಿಗೆ ದನಕ್ಕೆ ಬಡಿದಂತೆ ಬಡಿಯುತ್ತಿದ್ದ. ಈ ಎಲ್ಲ ಅಂಶಗಳು ತನಗೆ ಮಾನಸಿಕ ಹಿಂಸೆ ಉಂಟು ಮಾಡಿದೆ ಎಂದು ಪತ್ನಿ ಗಂಡನಿಂದ ವಿಚ್ಛೇದನೆ ಪಡೆಯಲು ಬಯಸಿ, ಡೆಹ್ರಾಡೂನಿನ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಅರ್ಜಿಯಲ್ಲಿ ಎಲ್ಲ ವಿಷಯಗಳಿಗಿಂತ ಮುಖ್ಯವಾಗಿ, ಆಕೆ ವಿಚ್ಛೇದನೆ ಕೋರಲು ತೋರಿಸಿದ ಕಾರಣ, ತನ್ನ ಹೆಸರಿನಲ್ಲಿ ಸಾಲ ಪಡೆದು ಅದನ್ನು ಆತ ಮರು ಪಾವತಿ ಮಾಡುವುದಿಲ್ಲ, ಇದರಿಂದಾಗಿ ತಾನು ಸಮಾಜದಲ್ಲಿ ಹಾಗೂ ಬಂಧು ಬಳಗದವರಲ್ಲಿ ಇನ್ನಿಲ್ಲದ ಅವಮಾನಕ್ಕೆ ಗುರಿಯಾಗಬೇಕಾಗಿ ಬಂದಿದೆ ಎಂಬುದಾಗಿತ್ತು.

ಡೆಹ್ರಾಡೂನಿನ ಕುಟುಂಬ ನ್ಯಾಯಾಲಯ ಅವಳ ಅರ್ಜಿಯನ್ನು ತಿರಸ್ಕರಿಸಿತು. ಈ ಕಾರಣಗಳ ಮೇಲೆ ವಿಚ್ಛೇದನೆ ನೀಡಲು ನಿರಾಕರಿಸಿತು.
ಡೆಹ್ರಾಡೂನಿನ ಕುಟುಂಬ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಆಕೆ ಉತ್ತರಾಖಂಡ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದಳು.

ಮಹಿಳಾ ಹಕ್ಕುಗಳಿಗೂ ಕ್ರೌರ್ಯಕ್ಕೂ ಇನ್ನಿಲ್ಲದ ನಂಟು. ಮಹಿಳಾ ಹಕ್ಕುಗಳಿಗಾಗಿ ನಡೆದ ಹೋರಾಟದ ಬಹುಭಾಗ ಮಹಿಳೆಯರ ಮೇಲೆ ನಡೆಯುವ ಕ್ರೌರ್ಯದ ವಿರುದ್ಧ ನಡೆದ ಹೋರಾಟವೇ ಆಗಿದೆ. 1955 ರಲ್ಲಿ ಜಾರಿಗೆ ಬಂದ ಹಿಂದೂ ವಿವಾಹ ಅಧಿನಿಯಮದ ಅಡಿಯಲ್ಲಿ, ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನೆ ಪಡೆಯಲು ಅವಕಾಶವಿರಲಿಲ್ಲ. ಆ ಕಾರಣದ ಮೇಲೆ ನ್ಯಾಯಿಕ ಬೇರ್ಪಡೆಯನ್ನು ಮಾತ್ರ ಪಡೆಯಬಹುದಾಗಿತ್ತು. 1976 ರಲ್ಲಿ ಹಿಂದೂ ವಿವಾಹ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಮಹಿಳೆಯ ಮೇಲೆ ನಡೆಯುವ ಕ್ರೌರ್ಯ- ವಿಚ್ಛೇದನೆ ಪಡೆಯಲು ಒಂದು ಕಾರಣ ಎಂಬುದಾಗಿ ಗುರುತಿಸಲಾಯಿತು. ಆದರೆ ಎಂಥ ವರ್ತನೆಗಳು ಅಥವಾ ಎಂಥ ಕೃತ್ಯಗಳು ‘ಕ್ರೌರ್ಯ’ ಎಂಬ ಪರಿಭಾಷೆಯಲ್ಲಿ ಬರುತ್ತವೆ ಎಂಬುದನ್ನು ಅದರಲ್ಲಿ ನಿರ್ವಚಿಸಲಾಗಿಲ್ಲ. ಆದರೆ ನ್ಯಾಯಾಲಯಗಳು, ಅನೇಕ ಪ್ರಕರಣಗಳಲ್ಲಿ ‘ಕ್ರೌರ್ಯ’ ವನ್ನು ಪರಿಭಾಷಿಸುತ್ತಾ ಬಂದಿದೆ.

‘ಸಮಾಜ ಬದಲಾದಂತೆ, ಸಾಮಾಜಿಕ ಮೌಲ್ಯಗಳು ಬದಲಾದಂತೆ, ಜೀವನ ಮಟ್ಟ ಉತ್ತಮಗೊಂಡಂತೆ, ಕಾನೂನಿನ ದೃಷ್ಟಿಯಲ್ಲಿ ‘ಕ್ರೌರ್ಯ’ ದ ಪರಿಭಾಷೆಯೂ ಬದಲಾಗುತ್ತಾ ಹೋಗುತ್ತದೆ’ ಎಂದು ಒಂದು ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ. ದೈಹಿಕ ಹಿಂಸೆಯಷ್ಟೇ ಮಾನಸಿಕ ಹಿಂಸೆಯೂ ಜೀವನವನ್ನು ದುರ್ಭರವನ್ನಾಗಿ ಮಾಡುತ್ತದೆ. ಹಾಗಾಗಿ ಹಿಂಸೆ ಅಥವಾ ಕ್ರೌರ್ಯ ಎಂಬುದರಲ್ಲಿ ಮಾನಸಿಕ ಹಿಂಸೆಯೂ ಸೇರುತ್ತದೆ. ಒಂದು ಕೃತ್ಯ ಅಥವಾ ನಡವಳಿಕೆ ಪತ್ನಿಗೆ ದೈಹಿಕವಾಗಿ ಅಥವಾ ಮಾನಸಿಕವಾಗಿ ಹಿಂಸೆಯನ್ನು ಉಂಟು ಮಾಡಿದೆಯೇ ಇಲ್ಲವೇ ಎಂಬುದು ಕೆಲವೊಮ್ಮೆ ಆಯಾ ಪ್ರಕರಣದ ವಿವರಗಳನ್ನು ಅವಲಂಬಿಸಿರುತ್ತದೆ. ಪತಿ ಪತ್ನಿಯರು ರೂಢಿಸಿಕೊಂಡಿರುವ ಜೀವನ ರೀತಿ, ಜೀವನ ಮಟ್ಟ, ಅವರ ಹಣಕಾಸಿನ ಪರಿಸ್ಥಿತಿ, ಸಾಮಾಜಿಕ ಪರಿಸರವನ್ನು ಸಹ ಒಂದು ಕೃತ್ಯ ಪತ್ನಿಗೆ (ಪತಿಗೆ) ಹಿಂಸಾತ್ಮಕವಾಗಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸುವಾಗ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಹಾಗಾಗಿ, ಒಂದು ಪ್ರಕರಣದಲ್ಲಿ ‘ಹಿಂಸೆ’ ಯಾದದ್ದು ಇನ್ನೊಂದು ಪ್ರಕರಣದಲ್ಲಿ ‘ಹಿಂಸೆ’ ಎನಿಸದೆ ಹೋಗಬಹುದು ಎಂದು ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯಗಳು ಅಭಿಪ್ರಾಯ ಪಟ್ಟಿವೆ. ಹಾಗೆಯೇ ದಾಂಪತ್ಯ ಜೀವನದಲ್ಲಿ ಪತಿ ಪತ್ನಿಯರ ನಡುವೆ ಸಾಮಾನ್ಯವಾಗಿ ಬರುವ ಭಿನ್ನಾಭಿಪ್ರಾಯಗಳು ಮತ್ತು ನಡೆಯುವ ಜಗಳಗಳನ್ನು ‘ಹಿಂಸೆ’ಯ ವ್ಯಾಪ್ತಿಯಿಂದ ಹೊರಗಿಡಬೇಕೆಂಬ ಎಚ್ಚರಿಕೆ ಇರಬೇಕು ಎಂಬ ಅಂಶವನ್ನೂ ನ್ಯಾಯಾಲಯಗಳು ಅನೇಕ ಪ್ರಕರಣಗಳಲ್ಲಿ ತಿಳಿಸಿವೆ.

ಹಿಂದೂ ವಿವಾಹ ಅಧಿನಿಯಮದ ಅಡಿಯಲ್ಲಿ, ವಿಚ್ಛೇದನಕ್ಕೆ ಕಾರಣವಾಗುವ ಮಾನಸಿಕ ಹಿಂಸೆಯನ್ನು, ‘ಪತಿಯ ವರ್ತನೆ ಅಥವಾ ಕೃತ್ಯದಿಂದ ಪತಿಯ ಜೊತೆಯಲ್ಲಿದ್ದು ಜೀವನ ಮಾಡುವುದು ಸಾಧ್ಯವೇ ಇಲ್ಲ ಎಂದು ಅನ್ನಿಸುವ ಹಾಗೆ ಪತ್ನಿಗೆ ಮಾನಸಿಕ ಹಿಂಸೆ ಉಂಟು ಮಾಡಿದ್ದರೆ, ಅವನ ಅಂಥ ವರ್ತನೆ ಅಥವಾ ಕೃತ್ಯವನ್ನು ಕ್ರೌರ್ಯ ಎಂದು ಸ್ಥೂಲವಾಗಿ ಹೇಳಬಹುದು’ ಎಂದು ಅರ್ಥೈಸಲಾಗಿದೆ. ವೈವಾಹಿಕ ಜೀವನದಲ್ಲಿ ದೈಹಿಕ ಹಾಗೂ ಮಾನಸಿಕ ಹಿಂಸೆಗೆ ತುತ್ತಾಗುವುದು ಹೆಚ್ಚಾಗಿ ಮಹಿಳೆಯರೇ ಎಂಬುದರಲ್ಲಿ ಯಾವುದೇ ಸಂಶಯವೂ ಇಲ್ಲ. ಮಹಿಳೆಯರಿಗೆ ಶೋಷಣೆಯಿಂದ ರಕ್ಷಣೆ ನೀಡುವ ಕಾನೂನುಗಳನ್ನು ಮಹಿಳೆಯರೇ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಎಷ್ಟೇ ದೂರುಗಳಿದ್ದರೂ ಅವುಗಳ ಸಂಖ್ಯೆ ಗಣನೀಯವಲ್ಲ.

ಕುಟುಂಬದ ವ್ಯಕ್ತಿಗಳಿಂದಲೇ ಮಹಿಳೆಯರು ಒಳಗಾಗುವ ದೌರ್ಜನ್ಯಗಳಿಗೆ ಲೆಕ್ಕವಿಲ್ಲ. ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುವ ಹಿಂಸೆ ಸಾಂಕ್ರಾಮಿಕ ಸ್ವರೂಪವನ್ನು ಪಡೆದುಕೊಂಡಿದೆ. ಪ್ರಪಂಚದಾದ್ಯಂತ ಪ್ರತಿ ಮೂವರು ಮಹಿಳೆಯರಲ್ಲಿ ಒಬ್ಬ ಮಹಿಳೆ, ಅವಳ ಜೀವಿತಾವಧಿಯಲ್ಲಿ, ದೌರ್ಜನ್ಯಕ್ಕೆ ಅಥವಾ ಲೈಂಗಿಕ ಹಿಂಸಾಚಾರಕ್ಕೆ ತುತ್ತಾಗಿರುತ್ತಾಳೆ, ಸಾಮಾನ್ಯವಾಗಿ ಅವಳಿಗೆ ಪರಿಚಯವಿರುವವರಿಂದಲೇ ಎಂದು ಒಂದು ಅಂಕಿ ಅಂಶ ತಿಳಿಸುತ್ತದೆ.
ಮಹಿಳೆಯರ ವಿರುದ್ಧದ ಹಿಂಸೆ ಮತ್ತು ಕೌಟುಂಬಿಕ ದೌರ್ಜನ್ಯವನ್ನು ತಡೆಗಟ್ಟುವ ಹಾಗೂ ಅದರ ವಿರುದ್ಧ ಹೋರಾಡುವ ಯೂರೋಪ್ ಕೌನ್ಸಿಲ್ ಆಫ್ ಕನ್‍ವೆನ್ಷನ್ ಮಹಿಳೆಯರ ಮೇಲೆ ನಡೆಯುವ ಹಿಂಸೆಯ ಪರಿಭಾಷೆಯನ್ನು ಒದಗಿಸುತ್ತದೆ-

“ ‘ಮಹಿಳೆಯರ ವಿರುದ್ಧ ಹಿಂಸೆ’ ಎಂದರೆ, ಮಹಿಳೆಯರ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಹಿಳೆಯರ ವಿರುದ್ಧ ಎಸಗುವ ತಾರತಮ್ಯ ಎಂದು ಪರಿಭಾವಿಸಲಾಗುತ್ತದೆ. ಮಹಿಳೆಗೆ ದೈಹಿಕ, ಲೈಂಗಿಕ, ಮಾನಸಿಕ ಅಥವಾ ಆರ್ಥಿಕ ಸಂಕಷ್ಟವನ್ನು ಉಂಟು ಮಾಡುವ ಅಥವಾ ಉಂಟು ಮಾಡುವ ಸಾಧ್ಯತೆ ಇರುವ, ಮಹಿಳೆಯರ ವಿರುದ್ಧ ನಡೆಯುವ ಎಲ್ಲ ಕೃತ್ಯಗಳು ಇದರಲ್ಲಿ ಸೇರುತ್ತವೆ. ಅಂಥ ಸಂಕಷ್ಟವನ್ನು ಉಂಟು ಮಾಡುವ ಬೆದರಿಕೆಯೊಡ್ಡುವುದೂ ಸಹ ಹಿಂಸೆ ಎನಿಸಿಕೊಳ್ಳುತ್ತದೆ. ಅಲ್ಲದೆ, ಅವಳ ಸಾರ್ವಜನಿಕ ಜೀವನದಲ್ಲಿ ಅಥವಾ ಅವಳ ವೈಯಕ್ತಿಕ ಜೀವನದಲ್ಲಿ, ಅವಳ ಇಚ್ಛೆಗೆ ವಿರುದ್ಧವಾಗಿ ಯಾವುದೇ ರೀತಿಯ ಒತ್ತಡ ಹೇರುವಿಕೆ ಅಥವಾ ವಿವೇಚನಾರಹಿತ ಸ್ವಾತಂತ್ರ್ಯಹರಣ ಸಹ ಹಿಂಸೆ ಎಂದು ಪರಿಭಾಷಿಸಲಾಗುತ್ತದೆ.”

ಮೇಲಿನ ಪ್ರಕರಣದಲ್ಲಿ ಅಹವಾಲನ್ನು ಮತ್ತು ವಾದವನ್ನು ಆಲಿಸಿದ ಉಚ್ಚ ನ್ಯಾಯಾಲಯ, “ಕುಟುಂಬ ನ್ಯಾಯಾಲಯದ ನ್ಯಾಯಾಧೀಶರು, ಪತ್ನಿ ಹಾಜರು ಪಡಿಸಿರುವ ಸಾಕ್ಷ್ಯಗಳನ್ನು ಸರಿಯಾದ ಅರ್ಥದಲ್ಲಿ ಗ್ರಹಿಸಿಲ್ಲ, ಕುಟುಂಬ ಕಡು ಬಡತನದಲ್ಲಿದೆ ಎಂದು ಅವರು ಭಾವಿಸಿದಂತಿದೆ. ಆದರೆ ಪತಿ ಪತ್ನಿಯ ಹೆಸರಿನಲ್ಲಿ ಸಾಲ ಮಾಡಿ ಐಷಾರಾಮೀ ಕಾರುಗಳನ್ನು ಕೊಂಡು ಸಾಲ ಹಿಂತಿರುಗಿಸದೆ ಓಡಾಡುತ್ತಿದ್ದಾನೆ. ಇದರಿಂದಾಗಿ ಪತ್ನಿಗೆ ಅತೀವವಾದ ಅವಮಾನ ಹಾಗೂ ಮುಜುಗರ ಉಂಟಾಗಿದೆ ಮತ್ತು ಮಾನಸಿಕ ಹಿಂಸೆಯನ್ನುಂಟು ಮಾಡಿದೆ. ಸಾಲ ತೆಗೆದುಕೊಳ್ಳುವುದು ಅಪರಾಧವೂ ಅಲ್ಲ, ನಾಚಿಕೆ ಪಡುವ ಕೃತ್ಯವೂ ಅಲ್ಲ. ಆದರೆ ಸಾಲವನ್ನು, ಯಾವುದೇ ರೀತಿಯಲ್ಲಾದರೂ ಸರಿ, ವಸೂಲು ಮಾಡಲು ಸಾಲ ನೀಡಿದವರು ಮನೆಯ ಬಳಿ ಬರುವುದರಿಂದಾಗಿ, ಸಮಾಜದಲ್ಲಿ ವ್ಯಕ್ತಿಯ ಘನತೆಗೆ ಕುಂದುಂಟಾಗುತ್ತದೆ. ಪತ್ನಿ ಗೃಹಿಣಿ. ಪತಿ, ಆಕೆಯ ಹೆಸರಿನಲ್ಲಿ ಸಾಲ ಪಡೆದಿರುವುದೂ ಅಲ್ಲದೆ, ಕೆಲವು ಸಾಲಗಳಿಗೆ ಆಕೆಯನ್ನು ಜಾಮೀನುದಾರಳನ್ನಾಗಿಯೂ ಮಾಡಿದ್ದ. ಆಕೆಗೆ ಯಾವುದೇ ಆದಾಯ ಇಲ್ಲದಿರುವುದರಿಂದ ಆಕೆಗೆ ಸಾಲಿಗರ ಕಾಟ ಇನ್ನಷ್ಟು ಹಿಂಸೆಯನ್ನು ಉಂಟು ಮಾಡುತ್ತಿತ್ತು.” ಎಂದು ಅಭಿಪ್ರಾಯಪಟ್ಟು ಕೆಳಗಿನ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿ ಆಕೆಗೆ ವಿಚ್ಛೇದನೆಯನ್ನು ನೀಡಿತು.

ಸರ್ವೋಚ್ಚ ನ್ಯಾಯಾಲಯ ಮತ್ತು ವಿವಿಧ ನ್ಯಾಯಾಲಯಗಳು ವಿವಿಧ ಪ್ರಕರಣಗಳಲ್ಲಿ ನೀಡಿರುವ ತೀರ್ಪುಗಳನ್ನು ಅವಲೋಕಿಸಿದಾಗ, ಪ್ರಕರಣದ ವಿವರಗಳನ್ನು ಆಧರಿಸಿ ಕ್ರೌರ್ಯದ ಪರಿಭಾಷೆ ವಿಸ್ತಾರವಾಗುತ್ತಾ ಹೋಗಿರುವುದನ್ನು ಕಾಣಬಹುದು. ಇದನ್ನು ಧನಾತ್ಮಕ ಬೆಳವಣಿಗೆ ಎಂದೇ ಗುರುತಿಸಬಹುದು.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *