ಕಾನೂನು ಕನ್ನಡಿ / ಕಾನೂನಿನ ಸಂವೇದನಾಶೀಲ ಅನ್ವಯ – ಡಾ. ಗೀತಾ ಕೃಷ್ಣಮೂರ್ತಿ
ಅಪರಾಧದ ವಿಚಾರಣೆ ಯಾವಾಗಲೂ ಸತ್ಯ ಶೋಧನೆಯೇ ಆಗಿರುತ್ತದೆ. ವಿಚಾರಣೆಯ ಸ್ವರೂಪ ಮತ್ತು ಅಗತ್ಯವಿರುವ ಸಾಕ್ಷ್ಯಗಳು ಯಾವುವು ಎಂಬುದು ಆಯಾ ಪ್ರಕರಣದ ಅಂಶಗಳನ್ನು ಅವಲಂಬಿಸಿರುತ್ತವೆ. ಅಪರಾಧಿಯನ್ನು ನಿರಪರಾಧಿ ಎಂದು ಸಾಬೀತು ಪಡಿಸುವ ಪ್ರಕ್ರಿಯೆಯಲ್ಲಿ ಸಂತ್ರಸ್ತೆಯ ಹಕ್ಕುಗಳಿಗೆ ಚ್ಯುತಿ ಉಂಟಾಗಬಾರದು. ಎಲ್ಲಕ್ಕಿಂತ ಹೆಚ್ಚಾಗಿ, ಕಾನೂನಿನ ನಿಯಮವನ್ನು ಪಾಲಿಸುವ ಮೂಲಕ ಸಾಮಾಜಿಕ ಹಿತಾಸಕ್ತಿಯನ್ನು ಕಾಪಾಡುವುದೂ ಸಹ ನ್ಯಾಯಾಲಯದ ಕರ್ತವ್ಯ ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಅವಳು ಕೇವಲ ಒಂಬತ್ತು ವರ್ಷದ ಎಳೆ ಹುಡುಗಿ. 2004 ರಂದು ಅವಳು ಗೆಳತಿಯೊಂದಿಗೆ ಎಮ್ಮೆಗಳನ್ನು ಮೇಯಿಸಲು ತೆರಳಿದ್ದಳು. ಜನರಿಂದ ಸ್ವಲ್ಪ ದೂರ ಸರಿದಾಗ, ಆ ಬಾಲಕಿಯ ಮೇಲೆ ಬಿಳಿ ಬಟ್ಟೆಯನ್ನು ಧರಿಸಿದ್ದ ಕೃಶ ಕಾಯದ ಅಪರಿಚಿತ ವ್ಯಕ್ತಿ ಅತ್ಯಾಚಾರವೆಸಗಿದ್ದ. ಆ ಒಂಬತ್ತು ವರ್ಷದ ಎಳೆಯ ಹುಡುಗಿಯ ಜೊತೆಗಿದ್ದ ಗೆಳತಿ ಜಾಸಿಬೆನ್ ಎಂಬಾಕೆ ಕೂಡ ಅಪ್ರಾಪ್ತ ವಯಸ್ಕಳೇ! ಆಘಾತಕ್ಕೆ ಒಳಗಾದ ಗೆಳತಿ ನಡೆದ ಘಟನೆಯನ್ನು ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಾಯಿ ಅಂಬಾಬೆನ್‍ಗೆ ತಿಳಿಸಿದಳು. ಕೂಡಲೇ ಅದೇ ದಿನ, ಆಕೆ ಪೊಲೀಸು ಠಾಣೆಯಲ್ಲಿ ದೂರು ನೀಡಿ ಎಫ್‍ಐಆರ್ ದಾಖಲಿಸಿದಳು. ಸಂತ್ರಸ್ತೆಯನ್ನು ಅದೇ ದಿನವೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಡಾ| ಮೇಘನಾ ನರೇಂದ್ರಭಾಯ್ ಮೆಹ್ತಾ ಎಂಬ ವೈದ್ಯರು ಆಕೆಯನ್ನು ಪರೀಕ್ಷಿಸಿ ಹುಡುಗಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದನ್ನು ದೃಢಪಡಿಸಿ ವರದಿಯನ್ನೂ ನೀಡಿದರು. ಹೇದನ್ ನಂಭಾ ಗಡ್ವಿ ಮತ್ತು ಧೀರೂಭಾಯ್ ಮಲುಭಾಯ್ ದೇಸಾಯ್ ಎಂಬಿಬ್ಬರನ್ನು ಸಂದೇಹದ ಆಧಾರದ ಮೇಲೆ ಪೊಲೀಸರು ದಸ್ತಗಿರಿ ಮಾಡಿ ತಮ್ಮ ವಶಕ್ಕೆ ಪಡೆದರು. ಇದಾದ ಎರಡು ದಿನಗಳ ನಂತರ, ಎಂದರೆ, 2004 ರ ಫೆಬ್ರುವರಿ 22 ರಂದು, ಕಾರ್ಯಕಾರೀ ಮ್ಯಾಜಿಸ್ಟ್ರೇಟರಾದ ದಿಲೀಪ್‍ಕುಮಾರ್ ಕಾಂತಿಲಾಲ್ ರಾಥೋಡ್ ಎಂಬುವರು ಗುರುತು ಹಿಡಿಯುವ ಪ್ರಕ್ರಿಯೆಯನ್ನು ನಡೆಸಲಾಯಿತು (ಟೆಸ್ಟ್ ಐಡೆಂಟಿಫಿಕೇಷನ್ ಪೆರೇಡ್). ಸಂತ್ರಸ್ತೆ ಅತ್ಯಾಚಾರಿಯನ್ನು ಗುರುತಿಸಿದ್ದಾಳೆ ಎಂಬುದಕ್ಕೆ ರುಜುವಾತಾಗಿ ಆ ದಾಖಲೆಗೆ ಸಂತ್ರಸ್ತೆಯ ಬೆರಳು ಗುರುತನ್ನೂ ಪಡೆಯಲಾಯಿತು.
ಪ್ರಕರಣದ ವಿಚಾರಣೆ ಪ್ರಾರಂಭವಾದದ್ದು ಆರು ತಿಂಗಳ ನಂತರ, 2004 ರ ಆಗಸ್ಟ್ ತಿಂಗಳಲ್ಲಿ. ವಿಚಾರಣೆಯ ಸಂದರ್ಭದಲ್ಲಿ, ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಹಾಗೂ ಆ ಘಟನೆಯನ್ನು ಆಕೆಯ ತಾಯಿಗೆ ವರದಿ ಮಾಡಿದ, ಅಪ್ರಾಪ್ತ ವಯಸ್ಕ ಬಾಲಕಿ, ಗೆಳತಿ ಜಾಸಿಬೆನ್ ಇಬ್ಬರೂ ಅತ್ಯಾಚಾರ ನಡೆದಿದೆ ಎಂಬುದನ್ನು ಅಲ್ಲಗಳೆದರು. ಅಲ್ಲದೆ, ಆರೋಪಿಗಳನ್ನು ನ್ಯಾಯಾಲಯದಲ್ಲಿ ಗುರುತು ಹಿಡಿಯಲೂ ನಿರಾಕರಿಸಿದರು. ಇದರ ಪರಿಣಾಮವಾಗಿ, ವಿಚಾರಣಾ ನ್ಯಾಯಾಲಯ ಇಬ್ಬರು ಆರೋಪಿಗಳನ್ನೂ ದೋಷ ಮುಕ್ತಗೊಳಿಸಿ ಖುಲಾಸೆ ಮಾಡಿತು.
ಮಹಿಳೆಯರನ್ನು ಶೋಷಣೆಯಿಂದ ರಕ್ಷಿಸುವ ಅನೇಕ ಕಾನೂನುಗಳು ಜಾರಿಗೊಂಡಿವೆ. ಅವುಗಳಲ್ಲಿ, ಅತ್ಯಾಚಾರ ಕಾನೂನು ಸಹ ಒಂದು. ಈ ಕಾನೂನುಗಳಲ್ಲಿ, ಕಾಲದ ಅಗತ್ಯಕ್ಕೆ ತಕ್ಕಂತೆ, ತಿದ್ದುಪಡಿಗಳನ್ನೂ ಮಾಡಲಾಗಿದೆ ಮತ್ತು ಮಾಡಲಾಗುತ್ತಿದೆ, ಏಕೆಂದರೆ ಅದೊಂದು ನಿರಂತರ ಪ್ರಕ್ರಿಯೆ. ಆದರೂ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಕಡಿಮಯಾಗಿಲ್ಲ. ಎಳೆ ವಯಸ್ಸಿನ ಬಾಲಕಿಯರೂ ಇಂಥ ಹೇಯ ದೌರ್ಜನ್ಯಕ್ಕೆ ಗುರಿಯಾಗುತ್ತಿರುವುದು ಅತ್ಯಂತ ಆತಂಕಕ್ಕೆ ಕಾರಣವಾಗುವಂಥದ್ದು. ಆದರೆ ಅತ್ಯಾಚಾರಕ್ಕೆ ಗುರಿಯಾದಾಗ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಕರಣಗಳ ಸಂಖ್ಯೆ ಕಡಿಮೆಯಾದಷ್ಟೂ ಕಾನೂನಿನಲ್ಲಿ ವಿಶ್ವಾಸ ಮೂಡಿಸುವ ಬದಲು ಅಪನಂಬಿಕೆಯನ್ನು ಹುಟ್ಟು ಹಾಕುತ್ತದೆ.
ಮೇಲಿನ ಘಟನೆಯ ವಿವರಗಳಿಂದ, ಅಪರಾಧ ನಡೆದಿದೆ ಎಂದು ಸಾಮಾನ್ಯ ಜ್ಞಾನವಿರುವ ಯಾರೇ ವ್ಯಕ್ತಿಗೂ ಮೇಲ್ನೋಟಕ್ಕೇ ತಿಳಿಯುತ್ತದೆ. ಆದರೆ ಹೊರಬಿದ್ದ ತೀರ್ಪು ಮಾತ್ರ ಅದಕ್ಕೆ ವಿರುದ್ಧವಾದುದು! ಇದು ಎಂಥವರನ್ನೂ ವಿಚಲಿತರನ್ನಾಗಿಸುತ್ತದೆ.
‘ನೂರು ಆರೋಪಿಗಳು ಶಿಕ್ಷೆಯಿಂದ ಪಾರಾದರೂ ಸರಿ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು’ ಎಂಬುದು ಆಪರಾಧಿಕ ನ್ಯಾಯ ಶಾಸ್ತ್ರದ ನಿಲುವು. ಹಾಗಾಗಿಯೇ ಒಬ್ಬ ಆರೋಪಿಯನ್ನು ಅಪರಾಧಿಯೆಂದು ಘೋಷಿಸಬೇಕಾದರೆ ಅವನ ಮೇಲಿರುವ ಆರೋಪ ಸಂದೇಹಕ್ಕೆ ಆಸ್ಪದವಿಲ್ಲದಂತೆ ರುಜುವಾತಾಗಬೇಕು. ವಿಚಾರಣೆಯ ಯಾವುದೇ ಹಂತದಲ್ಲಿ ಯಾವುದೇ ಸಂದೇಹವಿದ್ದರೂ, ಸಂದೇಹದ ಲಾಭ (ಬೆನಿಫಿಟ್ ಆಫ್ ಡೌಟ್) ದೊರೆಯುವುದು ಆರೋಪಿಗೆ!
ಈ ಪ್ರಕರಣದಲ್ಲಿ, ಅತ್ಯಾಚಾರವಾಗಿರುವುದು ಕೂಡಲೇ ಗಮನಕ್ಕೆ ಬಂದಿದೆ, ಘಟನೆಯ ದಿನದಂದೇ ಎಫ್‍ಐಆರ್ ದಾಖಲಾಗಿದೆ, ವಿಳಂಬವಾಗಿಲ್ಲ, ಅದೇ ದಿನವೇ ವೈದ್ಯಕೀಯ ಪರಿಕ್ಷೆಯನ್ನು ನಡೆಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲೂ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢ ಪಟ್ಟಿದೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿ ಹಾಗೂ ಆಕೆಯ ಜೊತೆಗಿದ್ದ ಆಕೆಯ ಗೆಳತಿ, ಅತ್ಯಾಚಾರವೆಸಗಿದವರನ್ನು ಗುರುತಿಸಿದ್ದಾರೆ. ಹಾಗಾದರೆ ತಪ್ಪಿದ್ದೆಲ್ಲಿ?
ಆರೋಪಿಗಳ ಖುಲಾಸೆಗೆ ಕಾರಣವಾದದ್ದು, ಅತ್ಯಾಚಾರ ಘಟಿಸಿದ ಆರು ತಿಂಗಳ ನಂತರ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯದಲ್ಲಿ, ಮಕ್ಕಳು ತಾವು ನೀಡಿದ್ದ ಹೇಳಿಕೆಯನ್ನು ಅಲ್ಲಗಳೆದರು ಮತ್ತು ಆರೋಪಿಗಳನ್ನು ಗುರುತಿಸಲು ನಿರಾಕರಿಸಿದರು ಎಂಬ ಅಂಶ.
ಬಹುಶಃ ಈ ಪ್ರಕರಣದ ಅಂತ್ಯ ಇದೇ ಆಗಿದ್ದಿದ್ದರೆ, ಇಂಥ ಪ್ರಕರಣಗಳಿಂದ, ನ್ಯಾಯ ವ್ಯವಸ್ಥೆಯ ಮೇಲೆ ನಂಬಿಕೆಯನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿಬಿಡುತ್ತಿತ್ತು. ಹಾಗಾಗಬಾರದು ಎಂದೇ ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಎರಡು ಮೂರು ಹಂತದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದು.
ಅಧೀನ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿತು. ಉಚ್ಚ ನ್ಯಾಯಾಲಯ ಅಪೀಲನ್ನು ಪುರಸ್ಕರಿಸಿ, ಅಧೀನ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿ, ಖುಲಾಸೆಯಾಗಿದ್ದ ಆರೋಪಿಗಳು ಅಪರಾಧಿಗಳು ಎಂದು ತೀರ್ಪು ನೀಡಿತು.
ಅದಕ್ಕೆ ನೀಡಿದ ಕಾರಣಗಳು- ಸಂತ್ರಸ್ತೆಯ ತಾಯಿ ನೀಡಿದ್ದ ದೂರನ್ನು ಆ ಠಾಣೆಯ ಪೊಲೀಸ್ ಸಬ್ ಇನ್‍ಸ್ಪೆಕ್ಟರ್-ಬಚುಭಾಯ್ ಪಿ ಕಾಲ್ಸಾರಿಯಾ-ಅವರು ರುಜುವಾತು ಪಡಿಸಿದ್ದಾರೆ. ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ಆಕೆಯನ್ನು ಪರೀಕ್ಷಿಸಿದ ವೈದ್ಯೆ ದೃಢಪಡಿಸಿದ್ದಾರೆ. ಫೊರೆನ್ಸಿಕ್ ತಜ್ಞರು ವರದಿಯೂ ಇದನ್ನೇ ದೃಢ ಪಡಿಸಿದೆ. ಆರೋಪಿಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಸಂತ್ರಸ್ತೆ ಹಾಗೂ ಆಕೆಯ ಗೆಳತಿ ಸ್ಪಷ್ಟವಾಗಿ ಗುರುತಿಸಿದ ಬಗ್ಗೆ ದಾಖಲೆಗಳಿವೆ.
ಈ ಅಂಶಗಳು ಆರೋಪಿಗಳ ಅಪರಾಧವನ್ನು ಸಾಬೀತುಪಡಿಸುತ್ತವೆ. ಹಾಗಾದರೆ ಅಪರಾಧಿಗಳನ್ನು ಖುಲಾಸೆ ಮಾಡಲು ಕಾರಣವಾದ ಅಂಶಗಳು ಯಾವುವು?
ಒಂದೇ ಅಂಶ- ಸಂತ್ರಸ್ತೆ ಹಾಗೂ ಅವಳ ಗೆಳತಿ ನ್ಯಾಯಾಲಯದ ಅಂಗಳದಲ್ಲಿ ಅಪರಾಧ ನಡೆದಿದೆ ಎಂಬುದನ್ನೇ ಅಲ್ಲಗಳೆದರು ಮತ್ತು ಆರೋಪಿಗಳನ್ನು ಗುರುತಿಸಲು ನಿರಾಕರಿಸಿದರು ಎಂಬುದು. ಉಚ್ಚ ನ್ಯಾಯಾಲಯದ ಮುಂದಿದ್ದ ಪ್ರಶ್ನೆ ಒಂದೇ.
ಅಪರಾಧವನ್ನು ನಿಸ್ಸಂದೇಹವಾಗಿ ಸಾಬೀತು ಪಡಿಸುವ ಇಷ್ಟೆಲ್ಲ ಅಂಶಗಳಿದ್ದಾಗ್ಯೂ ವಿಚಾರಣೆಯ ಹಂತದಲ್ಲಿ, ಮಕ್ಕಳು ಪ್ರತಿಕೂಲವಾಗಿ ನುಡಿಯಬೇಕಾದರೆ ಬಲವಾದ ಕಾರಣವಿರಬೇಕು. ಘಟನೆಯ ದಿನಾಂಕ ಮತ್ತು ನ್ಯಾಯಾಲಯದಲ್ಲಿ ಸಾಕ್ಷಿ ನೀಡಬೇಕಾದ ದಿನಾಂಕಗಳ ನಡುವೆ ಆರು ತಿಂಗಳುಗಳ ಅಂತರವಿತ್ತು. ಈ ಅವಧಿಯಲ್ಲಿ ಅಸಹಾಯಕರಾದ ಮತ್ತು ಬಡತನದಲ್ಲಿದ್ದ ಅವರ ಮೇಲೆ ಒತ್ತಡ ಹೇರಿರಲು ಸಾಧ್ಯ. ಎಳೆಯ ಮನಸ್ಸುಗಳು ಹೆದರಿರಲು ಸಾಧ್ಯ. ಖುಲಾಸೆಯನ್ನು ಪ್ರಶ್ನಿಸಿ ಅಪೀಲು ಸಲ್ಲಿಸಿದ ರಾಜ್ಯ ಸರ್ಕಾರದ ಪರ ವಾದಿಸಿದ ಅಭಿಯೋಜಕರು ತಮ್ಮ ವಾದದಲ್ಲಿ ಒತ್ತು ನೀಡಿದುದು ಇದೇ ಅಂಶಕ್ಕೆ. ನ್ಯಾಯಾಲಯದಲ್ಲಿ ಮಕ್ಕಳು ಪ್ರತಿಕೂಲ ಸಾಕ್ಷ್ಯ ನುಡಿದರು ಎಂಬ ಒಂದೇ ಕಾರಣ ಪ್ರಕರಣದಲ್ಲಿ ದೊರೆಯಬೇಕಾದ ನ್ಯಾಯವನ್ನು ಅಡಿಮೇಲು ಮಾಡಲಾರದು ಮತ್ತು ಮಾಡಬಾರದು ಎಂಬುದು ಅವರ ವಾದವಾಗಿತ್ತು. ಈ ವಾದವನ್ನು ಒಪ್ಪಿಕೊಂಡ ಉಚ್ಚ ನ್ಯಾಯಾಲಯ ವಿಚಾರಣಾ ನ್ಯಾಯಾಲಯದ ತೀರ್ಪನ್ನು ವಿಪರ್ಯಯಗೊಳಿಸಿ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಹತ್ತು ವರ್ಷಗಳ ಕಠಿಣ ಕಾರಾಗೃಹವಾಸ ಮತ್ತು 5,000 ರೂ.ಗಳ ಜುಲ್ಮಾನೆಯ ಶಿಕ್ಷೆ ವಿಧಿಸಿತು.
ಈ ತೀರ್ಪಿನ ವಿರುದ್ಧ ಅಪರಾಧಿಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದರು. ಇಲ್ಲಿಯೂ ಅವರ ವಾದದ ಮುಖ್ಯಾಂಶ ಅದೇ-ಪೊಲೀಸು ಠಾಣೆಯಲ್ಲಿ ಆರೋಪಿಗಳನ್ನು ಸಂತ್ರಸ್ತೆ ಗುರುತಿಸಿದ್ದಾಳೆ ಎನ್ನುವ ಸಾಕ್ಷ್ಯ ಪೂರಕ ಸಾಕ್ಷ್ಯವಾಗಬಹುದೇ ಹೊರತು ಅದೇ ಪ್ರಮುಖ ಸಾಕ್ಷ್ಯವಾಗಲಾರದು ಮತ್ತು ಸಂತ್ರಸ್ತೆ ನ್ಯಾಯಾಲಯದಲ್ಲಿ ಆರೋಪಿಗಳನ್ನು ಗುರುತಿಸಲು ನಿರಾಕರಿಸಿರುವುದರಿಂದ ಪೂರಕ ಸಾಕ್ಷ್ಯವನ್ನು ನಿರ್ಣಾಯಕ ಸಾಕ್ಷ್ಯವನ್ನಾಗಿ ಪರಿಗಣಿಸಲಾಗದು. ಆದ್ದರಿಂದ, ಅತ್ಯಾಚಾರವೆಸಗಿರುವುದು ಆರೋಪಿಗಳೇ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂಬುದು.
ಆದರೆ ಸರ್ವೋಚ್ಚ ನ್ಯಾಯಾಲಯ ಈ ವಾದವನ್ನು ತಳ್ಳಿ ಹಾಕಿತು. ನ್ಯಾಯಾಲಯದಲ್ಲಿ ಆರೋಪಿಗಳನ್ನು ಗುರುತಿಸಲು ದೂರುದಾರರು ವಿಫಲರಾದಾಗ, ಪೊಲೀಸು ಠಾಣೆಯಲ್ಲಿ ಗುರುತಿಸಿರುವ ಸಾಕ್ಷ್ಯವನ್ನು ಪರಿಗಣಿಸಲಾಗುವುದಿಲ್ಲ ಎಂಬುದು ಸಾಮಾನ್ಯ ನಿಯಮ. ಆದರೆ, ಇದೂ ಸಹ ಆಯಾ ಪ್ರಕರಣದಲ್ಲಿನ ವಿವರಗಳನ್ನು ಅವಲಂಬಿಸಿರುತ್ತದೆ. ಅಪರಾಧವನ್ನು ಸಾಬೀತು ಪಡಿಸಲು ಬಲವಾದ ಬೇರೆ ಸಾಕ್ಷ್ಯಗಳು ಇದ್ದಲ್ಲಿ ಮತ್ತು ಬಲವಾದ ಸಾಂದರ್ಭಿಕ ಸಾಕ್ಷ್ಯಗಳು ಇದ್ದಲ್ಲಿ ಈ ಸಾಕ್ಷ್ಯ ನಿರ್ಣಾಯಕ ಸಾಕ್ಷ್ಯವಾಗುವುದಿಲ್ಲ ಎಂಬ ನಿಲುವನ್ನು ತಳೆಯಿತು. ಅಲ್ಲದೆ, ‘ನ್ಯಾಯಿಕ ಪ್ರಕ್ರಿಯೆಯನ್ನು ಬುಡಮೇಲು ಮಾಡಲು ಸಾಕ್ಷಿ ಪ್ರತಿಕೂಲ ಸಾಕ್ಷಿಯಾಗಿ ಬದಲಾದರೆ, ನ್ಯಾಯಾಲಯ ಹಾಗೆ ಮಾಡಲು ಸಾಕ್ಷಿಗೆ ಅವಕಾಶ ನೀಡಬಾರದು. ಸುಳ್ಳು ಸಾಕ್ಷ್ಯ ನೀಡುವುದು ಭಾರತ ದಂಡ ಸಂಹಿತೆಯ 193 ನೇ ಪ್ರಕರಣದ ಪ್ರಕಾರ ಅಪರಾಧ. ಆದರೆ ಇದನ್ನು ಅನ್ವಯಿಸಿ ಸುಳ್ಳು ಸಾಕ್ಷಿಗಳನ್ನು ಶಿಕ್ಷಿಸಿರುವ ಪ್ರಕರಣಗಳು ಅತಿ ವಿರಳ’ ಎಂದು ಮತ್ತೊಂದು ಪ್ರಕರಣದಲ್ಲಿ ನೀಡಿದ ಅಭಿಪ್ರಾಯವನ್ನು ಈ ಪ್ರಕರಣದಲ್ಲಿ ಪುನರುಚ್ಛರಿಸಲಾಗಿದೆ.
ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಎಳೆಯ ವಯಸ್ಸಿನವಳಾಗಿದ್ದಳು ಮತ್ತು ಬಡವಳಾಗಿದ್ದಳು. ಹಾಗಾಗಿ ಅವಳು ಒತ್ತಡಕ್ಕೆ, ಬೆದರಿಕೆಗೆ ಮಣಿದು ಸುಳ್ಳು ಸಾಕ್ಷ್ಯ ನೀಡಿರುವ ಎಲ್ಲ ಸಾಧ್ಯತೆಗಳೂ ಇವೆ. ಎಲ್ಲ ಸಾಕ್ಷ್ಯಗಳು ಮತ್ತು ದಾಖಲೆಗಳು ಆರೋಪಿಗಳೇ ಅಪರಾಧಿಗಳೆಂಬುದನ್ನು ಸಾಬೀತು ಪಡಿಸುತ್ತವೆ. ಅಪರಾಧದ ವಿಚಾರಣೆ ಯಾವಾಗಲೂ ಸತ್ಯ ಶೋಧನೆಯೇ ಆಗಿರುತ್ತದೆ. ವಿಚಾರಣೆಯ ಸ್ವರೂಪ ಮತ್ತು ಅಗತ್ಯವಿರುವ ಸಾಕ್ಷ್ಯಗಳು ಯಾವುವು ಎಂಬುದು ಆಯಾ ಪ್ರಕರಣದ ಅಂಶಗಳನ್ನು ಅವಲಂಬಿಸಿರುತ್ತವೆ. ಅಪರಾಧಿಯನ್ನು ನಿರಪರಾಧಿ ಎಂದು ಸಾಬೀತು ಪಡಿಸುವ ಪ್ರಕ್ರಿಯೆಯಲ್ಲಿ ಸಂತ್ರಸ್ತೆಯ ಹಕ್ಕುಗಳಿಗೆ ಚ್ಯುತಿ ಉಂಟಾಗಬಾರದು. ಎಲ್ಲಕ್ಕಿಂತ ಹೆಚ್ಚಾಗಿ, ಕಾನೂನಿನ ನಿಯಮವನ್ನು ಪಾಲಿಸುವ ಮೂಲಕ ಸಾಮಾಜಿಕ ಹಿತಾಸಕ್ತಿಯನ್ನು ಕಾಪಾಡುವುದೂ ಸಹ ನ್ಯಾಯಾಲಯದ ಕರ್ತವ್ಯ ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಒಂದು ಗುರುತರ ಅಪರಾಧದ ವಿಚಾರಣೆಯಲ್ಲಿ ನ್ಯಾಯ ದೊರೆಯುವಂತೆ ನೋಡಿಕೊಳ್ಳುವುದು ಅತ್ಯಂತ ಗಂಭೀರವಾದ ವಿಚಾರ. ಅಭಿಯೋಜನೆಯ ಮುಖ್ಯ ಸಾಕ್ಷಿ ಪ್ರತಿಕೂಲ ಸಾಕ್ಷ್ಯ ನೀಡಿದಳು ಎಂಬ ಒಂದೇ ಅಂಶ ಅಪರಾಧಿಯನ್ನು ನಿರಪರಾಧಿ ಎಂದು ತೀರ್ಪು ನೀಡಲು ಕಾರಣವಾಗಬಾರದು ಎಂದು ಅಭಿಪ್ರಾಯಪಟ್ಟು ಉಚ್ಚ ನ್ಯಾಯಾಲಯದ ತೀರ್ಪನ್ನು, ಎಂದರೆ ಆರೋಪಿಗಳನ್ನು ಅಪರಾಧಿಗಳು ಎಂದು ನೀಡಿದ ತೀರ್ಪನ್ನು ಎತ್ತಿ ಹಿಡಿದಿದೆ ಮತ್ತು ಅಪೀಲನ್ನು ವಜಾ ಮಾಡಿದೆ.
ಈ ಪ್ರಕರಣದಲ್ಲಿ ಬಾಲಕಿ ಸುಳ್ಳು ಸಾಕ್ಷ್ಯ ನೀಡಿದ್ದರೂ, ಘಟನೆ ನಡೆದು 14 ವರ್ಷಗಳು ಗತಿಸಿ ಹೋಗಿರುವುದರಿಂದ, ಈ ಅವಧಿಯಲ್ಲಿ ಅವಳು ಮದುವೆಯಾಗಿ ಜೀವನದಲ್ಲಿ ನೆಲೆ ಕಂಡುಕೊಂಡು ನೆಮ್ಮದಿಯ ಜೀವನ ನಡೆಸುತ್ತಿರುವ ಸಾಧ್ಯತೆ ಇದೆ. ಆದ್ದರಿಂದ ಸುಳ್ಳು ಸಾಕ್ಷ್ಯ ನೀಡಿದ ಅಪರಾಧಕ್ಕಾಗಿ ಅವಳನ್ನು ಶಿಕ್ಷಿಸದೆ ಬಿಡುತ್ತಿದ್ದೇವೆ ಎಂದು ಸಹ ತಿಳಿಸಿದ್ದಾರೆ.
ಮಹಿಳಾ ಪರ ಕಾನೂನುಗಳು ಎಷ್ಟೇ ಜಾರಿಯಾಗಿದ್ದರೂ, ಕಾನೂನುಗಳನ್ನು ಆಗಿಂದಾಗ್ಗೆ ತಿದ್ದುಪಡಿ ಮಾಡುತ್ತಾ ಎಷ್ಟೇ ಬಲಗೊಳಿಸಿದ್ದರೂ ಮಹಿಳೆಗೆ ನಿಜವಾದ ನ್ಯಾಯ ದೊರೆಯುವುದು ಅಪರಾಧಿಗೆ ಶಿಕ್ಷೆಯಾದಾಗ ಮಾತ್ರ. ಕಾನೂನು ತನ್ನಷ್ಟಕ್ಕೆ ಯಾವುದೇ ನ್ಯಾಯವನ್ನು ದೊರಕಿಸಿ ಕೊಡಲಾರದು. ನಿಷ್ಪಕ್ಷಪಾತವಾದ ವಿಚಾರಣೆ ನಡೆದು, ಆ ಕಾನೂನನ್ನು ಅನ್ವಯಿಸಿ, ನ್ಯಾಯ ಪ್ರದಾನ ಮಾಡಿದಾಗ ಮಾತ್ರ, ನ್ಯಾಯಾಂಗದಲ್ಲಿ ಭರವಸೆ ಮೂಡುವುದು.
ಆ ದೃಷ್ಟಿಯಿಂದ, ಈ ಪ್ರಕರಣ ನಮಗೆ ಮುಖ್ಯವಾಗುತ್ತದೆ.
ಡಾ. ಗೀತಾ ಕೃಷ್ಣಮೂರ್ತಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.