ಕಾನೂನು ಕನ್ನಡಿ/ಕಾನೂನಿನಲ್ಲಿನ ತಾರತಮ್ಯ ಪ್ರಶ್ನಿಸಿ – ಡಾ. ಗೀತಾ ಕೃಷ್ಣಮೂರ್ತಿ

 

ಮಹಿಳೆಯರು ತಮಗೆ ಅನ್ವಯವಾಗುವ ಕಾನೂನುಗಳ ಜೊತೆಗೆ ಸಾಮಾನ್ಯ ಕಾನೂನು ಅರಿಯುವುದೂ ಅಗತ್ಯ

ಕಾನೂನಿಗೆ ಒಳಪಡದ ಜೀವನವನ್ನು ಹಾಗೂ ಸಮಾಜವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಎಲ್ಲ ಕ್ಷೇತ್ರಗಳು, ಎಲ್ಲ ವಿಷಯಗಳು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲ ವ್ಯಕ್ತಿಗಳೂ ಕಾನೂನಿನ ಅಂಕೆಗೆ ಒಳಪಡಲೇ ಬೇಕು. ಎಲ್ಲರಿಗೂ ಕಾನೂನಿನಿಂದ ಸಮಾನ ರಕ್ಷಣೆಯ ಮೂಲಭೂತ ಹಕ್ಕನ್ನು ನಮ್ಮ ಸಂವಿಧಾನ ತನ್ನ ಪ್ರಜೆಗಳಿಗೆ ನೀಡುತ್ತದೆ. ಹಾಗೆಯೇ ಕಾನೂನು ಕ್ರಮ ಕೈಗೊಳ್ಳಲು ಸಮಾನ ಮೂಲಭೂತ ಹಕ್ಕನ್ನೂ ನೀಡುತ್ತದೆ. ನಮಗಿರುವ ಹಕ್ಕುಗಳನ್ನು ನಾವು ಅರಿತುಕೊಂಡಾಗ ಮಾತ್ರ ನಾವು ಅದರ ಪ್ರಯೋಜನವನ್ನು ಪಡೆಯಬಹುದು ಮತ್ತು ಅನ್ಯಾಯವಾದಾಗ ನಮಗಾದ ಅನ್ಯಾಯಕ್ಕೆ ಪರಿಹಾರವಿದೆ ಎಂದು ತಿಳಿಯುವುದು ಹಾಗೂ ಆದ ಅನ್ಯಾಯದ ವಿರುದ್ಧ ಸಿಡಿದು ನಿಲ್ಲುವುದು ಸಾಧ್ಯವಾಗುತ್ತದೆ.
ವಿವಿಧ ಕಾನೂನುಗಳು ಬೇರೆ ಬೇರೆ ಸಂದರ್ಭಗಳಲ್ಲಿ ಹೇಗೆ ಅನ್ವಯವಾಗುತ್ತವೆ ಅಥವಾ ಅವನ್ನು ಹೇಗೆ ಅನ್ವಯಿಸಲಾಗುತ್ತದೆ, ಅವು ಹೇಗೆ ನಮ್ಮ ದಿನ ನಿತ್ಯದ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸುತ್ತಾ ಹೋದಂತೆ ನಮ್ಮ ವಿಶ್ಲೇಷಣಾತ್ಮಕ ಬುದ್ಧಿ ಚುರುಕುಗೊಳ್ಳತ್ತದೆ, ಸರಿ ತಪ್ಪುಗಳ ವಿಮರ್ಶಾತ್ಮಕ ವಿವೇಚನೆ ಬೆಳೆಯುತ್ತದೆ, ಪ್ರಶ್ನಿಸುವ ಮನೋಭಾವ ಉಂಟಾಗುತ್ತದೆ. ಇಂಥ ಗುಣಗಳು ಸಬಲೆಯರೆನ್ನಿಸಿಕೊಳ್ಳುವ ಪ್ರತಿ ವ್ಯಕ್ತಿಯಲ್ಲೂ ಇರಬೇಕಾದುದು ಅಗತ್ಯ. ಎಲ್ಲ ರಂಗಗಳಲ್ಲಿಯೂ ಮಹಿಳೆ ಪುರುಷನಿಗೆ ಸರಿಸಾಟಿಯಾಗಬಲ್ಲಳು ಎಂಬುದು ಇಂದಿನ ಮಹಿಳೆಯ ನಿಲುವು. ಇಂಥ ಸಂದರ್ಭದಲ್ಲಿ, ವಿಶೇಷವಾಗಿ ಮಹಿಳೆಯರು ಈ ಗುಣಗಳನ್ನು ಬೆಳೆಸಿಕೊಳ್ಳಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ಭಾರತದ ಸಂವಿಧಾನ ಸ್ತ್ರೀ ಪುರುಷರಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ. ನಿಜ. ಆದರೆ ಸಂವಿಧಾನ ಆಶಿಸಿದಂಥ ಸಮಾನತೆ ಇಲ್ಲಿಯವರೆಗೂ ಯಾವ ಕ್ಷೇತ್ರದಲ್ಲೂ ಮಹಿಳೆಗೆ ಸಿಕ್ಕಿಲ್ಲ ಎಂಬುದು ನಿಚ್ಚಳವಾಗಿದೆ. ನಮ್ಮ ದೇಶದಲ್ಲಿ ಜಾರಿಯಾಗುವ ಎಲ್ಲ ಕಾನೂನುಗಳೂ ಸಂವಿಧಾನಕ್ಕೆ ಸಂಗತವಾಗಿರಬೇಕು ಎಂಬ ಈ ಆಶಯವೂ ಸಹ ಉಲ್ಲಂಘನೆಯಾಗುತ್ತಲೇ ಬಂದಿದೆ. ಸ್ತ್ರೀ ಪುರುಷರ ನಡುವೆ ತಾರತಮ್ಯವೆಸಗುವ ಅನೇಕ ಕಾನೂನುಗಳು, ಸಂವಿಧಾನ ಜಾರಿಯಲ್ಲಿ ಬಂದ 68 ವರ್ಷಗಳ ನಂತರವೂ, ಜಾರಿಯಲ್ಲಿವೆ. ಪಿತೃಪ್ರಧಾನ ಸಮಾಜವಾದ ನಮ್ಮ ಸಮಾಜದಲ್ಲಿ ಜಾರಿಯಲ್ಲಿದ್ದ ಕಾನೂನುಗಳೆಲ್ಲವೂ ಪುರುಷರಿಗೆ ಅನುಕೂಲವಾಗುವ ಕಾನೂನುಗಳೇ ಆಗಿದ್ದವು. ವಿವಾಹ, ದತ್ತಕ, ಆಸ್ತಿ-ಮುಂತಾದ ಕೌಟುಂಬಿಕ ಕಾನೂನುಗಳೆಲ್ಲವೂ ತಾರತಮ್ಯದಿಂದ ಕೂಡಿದ ಕಾನೂನುಗಳೇ ಆಗಿದ್ದವು. ಸ್ವಾತಂತ್ರ್ಯ ಪಡೆದ ನಂತರದಲ್ಲಿ ಜಾರಿಯಲ್ಲಿದ್ದ ಈ ಸಾಂಪ್ರದಾಯಿಕ ಕಟ್ಟು ಕಟ್ಟಳೆಗಳೇ ಕಾನೂನುಗಳಾದವು. ಆದರೆ ಆಗಲೂ, ಆ ಕಾನೂನುಗಳಲ್ಲಿಯೂ ಸ್ತ್ರೀ ಪುರುಷರ ಹಕ್ಕುಗಳ ನಡುವೆ ಇದ್ದ ತಾರತಮ್ಯ ಬಹುತೇಕ ಹಾಗೆಯೇ ಉಳಿದುಕೊಂಡೇ ಬಂದಿತು. ಆದರೆ ಈ ತಾರತಮ್ಯಗಳು ನಿವಾರಣೆಯಾಗಲು ಪ್ರಾರಂಭವಾದದ್ದೇ ಅವನ್ನು ಪ್ರಶ್ನಿಸತೊಡಗಿದಾಗ! ಆದರೆ ಅನೇಕ ತಾರತಮ್ಯಗಳು ಇಂದಿಗೂ ಅನೇಕ ಕಾನೂನುಗಳಲ್ಲಿ ಉಳಿದುಕೊಂಡೇ ಬಂದಿವೆ! ಇದಕ್ಕೆ ಕಾರಣ ಅದು ತಾರತಮ್ಯವೆಂದಾಗಲೀ, ಅದನ್ನು ಪ್ರಶ್ನಿಸಬಹುದು ಅಥವಾ ಪ್ರಶ್ನಿಸಬೇಕು ಎಂದಾಗಲೀ ಮಹಿಳೆಯ ಅರಿವಿಗೇ ಬಾರದಿದ್ದುದು ಮತ್ತು ಅದಾವುದನ್ನೂ ಪ್ರಶ್ನಿಸದೇ ಒಪ್ಪಿಕೊಂಡದ್ದು ಮತ್ತು ಹಾಗೆ ಒಪ್ಪಿಕೊಳ್ಳುವಂಥ ಅಥವಾ ಒಪ್ಪಿಕೊಳ್ಳುವುದು ಅನಿವಾರ್ಯವಾಗುವಂಥ ಸಮಾಜವನ್ನು ಸೃಷ್ಟಿಸಿದುದು.
ಇಂಥ ಧಾರ್ಮಿಕ ಹಿಡಿತವುಳ್ಳ ಕೌಟುಂಬಿಕ ಕಾನೂನುಗಳನ್ನು ಬದಲಾವಣೆ ಮಾಡುವುದು ಮತ್ತು ಅಂಥ ಬದಲಾವಣೆಗೆ ಸಮಾಜವನ್ನು ಒಗ್ಗಿಸುವುದು ಸುಲಭದ ಕೆಲಸವಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಈಗಿರುವ ಹಕ್ಕುಗಳು ದೊರೆತಿರುವುದರ ಹಿಂದೆ ಹಕ್ಕುಗಳಿಗಾಗಿ ಮಾಡಿದ ಸಾಮಾಜಿಕ ಹಾಗೂ ಕಾನೂನಿನ ಹೋರಾಟದ ದೊಡ್ಡ ಇತಿಹಾಸವೇ ಇದೆ.
ಇಷ್ಟಾಗಿಯೂ, ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಗೆ ಸಮಪಾಲು ದೊರೆತದ್ದು 2005 ರಲ್ಲಿ! ಮಹಿಳೆಯರ ಹಕ್ಕುಗಳನ್ನು ಮಾನವ ಹಕ್ಕುಗಳೆಂದು ಪರಿಗಣಿಸಿ ಅವಳಿಗೆ ಕೌಟುಂಬಿಕ ದೌರ್ಜನ್ಯದಿಂದ ರಕ್ಷಣೆ ಕೊಡುವ ಕಾನೂನು ಜಾರಿಗೆ ಬಂದದ್ದು 2006 ರಲ್ಲಿ! ಮಹಿಳೆಯರಿಗೆ ಉದ್ಯೋಗ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯದಿಂದ ರಕ್ಷಣೆ ನೀಡುವ ಕಾನೂನು ಜಾರಿಗೆ ಬಂದದ್ದು 2013 ರಲ್ಲಿ! ಇಂಥ ಪ್ರಮುಖ ಕಾನೂನುಗಳು ಜಾರಿಯಲ್ಲಿದ್ದರೂ ಅನುಷ್ಠಾನ ಮತ್ತು ತನಿಖೆಯಲ್ಲಿನ ಕೊರತೆ ಮತ್ತು ನ್ಯೂನತೆಗಳಿಂದಾಗಿ ಮತ್ತು ಸಂವೇದನಾರಾಹಿತ್ಯದಿಂದಾಗಿ ಬಹಳಷ್ಟು ಬಾರಿ ಮಹಿಳೆ ನ್ಯಾಯದಿಂದ ವಂಚಿತಳಾಗುತ್ತಲೇ ಇದ್ದಾಳೆ.
ಮಹಿಳೆಯರು, ತಮಗೆ ಅನ್ವಯವಾಗುವ ಕಾನೂನುಗಳ ಜೊತೆಗೆ, ಮುಖ್ಯವಾಹಿನಿಯ ಸದಸ್ಯರಾಗಿ, ನಾಡಿಗೆ ಅನ್ವಯಿಸುವ ಸಾಮಾನ್ಯ ಕಾನೂನುಗಳ ಅರಿವನ್ನು ಹೊಂದಿರುವುದೂ ಅಷ್ಟೇ ಅಗತ್ಯವಿದೆ.
ಕಾನೂನುಗಳು ಹೆಚ್ಚು ಸ್ಪಷ್ಟವಾಗಿ ಅರ್ಥವಾಗುವುದು, ಕಾನೂನುಗಳನ್ನು ಹೇಗೆ ಅನ್ವಯಿಸಲಾಗುತ್ತದೆ, ಅದರ ಪರಿಣಾವೇನು ಎಂಬುದು ತಿಳಿದಾಗ ಮಾತ್ರ. ಒಂದು ಕಾನೂನನ್ನು ಅನ್ವಯಿಸಿ ನೀಡಿದ ತೀರ್ಪು, ವೈಯಕ್ತಿಕ ಮಟ್ಟದಲ್ಲಿ ಆ ಪ್ರಕರಣಕ್ಕೆ ಮತ್ತು ಆ ಮೊಕದ್ದಮೆಯ ಪಕ್ಷಕಾರರಿಗೆ ಮಾತ್ರ ಅನ್ವಯವಾಗುತ್ತದೆ ಎಂದೆನಿಸಿದರೂ ಅಂಥದೇ ಪರಿಸ್ಥಿತಿಯನ್ನು ಎದುರಿಸುತ್ತಿರುವ ಅನೇಕಾನೇಕರ ಪಾಲಿಗೆ ಬೆಳಕು ನೀಡುವ ಆಶಾ ಜ್ಯೋತಿಯಾಗಬಹುದು. ಮತ್ತೆ ಕೆಲವು ಮೊಕದ್ದಮೆಗಳಲ್ಲಿ ನೀಡಿದ ತೀರ್ಪುಗಳು ಇಡೀ ಸಮಾಜಕ್ಕೆ ಅನ್ವಯವಾಗುವ ಮೂಲಕ ಜೀವನವನ್ನು ಸಹ್ಯವಾಗಿಸುವಂಥವಾಗಿರಬಹುದು ಅಥವಾ ಸುಧಾರಿಸುವಂಥವಾಗಿರಬಹುದು.
ಜಾರಿಯಲ್ಲಿರುವ ಕಾನೂನುಗಳ ಬಗೆಗಿನ ತಿಳಿವು, ಅವುಗಳ ಅನ್ವಯ, ಅವುಗಳ ಪರಿಣಾಮ ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸುವುದಷ್ಟೇ ಅಲ್ಲದೆ ನಮ್ಮಲ್ಲಿ ಆತ್ಮ ವಿಶ್ವಾಸವನ್ನು ತುಂಬುತ್ತದೆ ಮತ್ತು ನಮ್ಮನ್ನು ಹೆಚ್ಚು ಸಬಲರನ್ನಾಗಿಸುತ್ತದೆ.

ಭರವಸೆಯ ತೀರ್ಪು

ಇದೊಂದು ವಿಚಿತ್ರವಾದ ಪ್ರಕರಣ. ಪತ್ನಿಗೆ ನೀಡಬೇಕಾದ ವಿಮಾನ ಪ್ರಯಾಣದ ವೆಚ್ಚವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಹತ್ತಿದ ಪ್ರಕರಣ.
2009 ರಲ್ಲಿ ರಮ್ಯ ಮತ್ತು ರಮೇಶ ವಿವಾಹವಾದರು (ಹೆಸರುಗಳನ್ನು ಬದಲಾಯಿಸಲಾಗಿದೆ) ಪ್ರಾರಂಭದಲ್ಲಿದ್ದ ಪರಸ್ಪರ ಆಕರ್ಷಣೆ ಕಡಿಮೆಯಾದ ಮೇಲೆ ಅವರಲ್ಲಿ ಭಿನ್ನಾಭಿಪ್ರಾಯಗಳು ಪ್ರಾರಂಭವಾದವು. ಪ್ರಾರಂಭದಲ್ಲಿನ ಸಣ್ಣ ಸಣ್ಣ ಜಗಳಗಳು ಕ್ರಮೇಣ ವಿಕೋಪಕ್ಕೆ ತಿರುಗಿದಾಗ ರಮ್ಯ ಮನೆ ಬಿಟ್ಟು ಉತ್ತರ ಪ್ರದೇಶದ ಮುಜಾಫರ್‍ನಗರದಲ್ಲಿದ್ದ ತನ್ನ ತವರು ಮನೆಗೆ ಹೋಗಿ ಬಿಟ್ಟಳು. 2006 ರಲ್ಲಿ ಆಕೆ ರಮೇಶನ ವಿರುದ್ಧವಷ್ಟೇ ಅಲ್ಲದೆ ಅವನ ಕುಟುಂಬದ ಸದಸ್ಯರ ವಿರುದ್ಧವೂ ಕ್ರಿಮಿನಲ್ ಕೇಸನ್ನು ಹೂಡಿದಳು ಮತ್ತು ವಿಚ್ಛೇದನೆಗಾಗಿಯೂ ಅರ್ಜಿ ಸಲ್ಲಿಸಿದಳು. ಆದರೆ ಅದಾವುದನ್ನೂ ಆಕೆ ಮುಂದುವರಿಸಲಿಲ್ಲ. ಆದರೆ ಅದೇ ವರ್ಷ ರಮೇಶ ರಮ್ಯಳಿಂದ ವಿಚ್ಛೇದನೆ ಕೋರಿ ಬೆಂಗಳೂರಿನ ಕುಟುಂಬ ನ್ಯಾಯಾಲಯದಲಿ ಅರ್ಜಿ ಸಲ್ಲಿಸಿದ. ಆದರೆ ತಾನು ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಇರುವುದರಿಂದ ವಿಚ್ಚೇದನೆಯ ಮೊಕದ್ದಮೆಯನ್ನು ತಾನಿರುವ ಪ್ರದೇಶದ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಳು. ಆದರೆ ಸರ್ವೋಚ್ಚ ನ್ಯಾಯಾಲಯ ಆಕೆಯ ಅರ್ಜಿಯನ್ನು ಪುರಸ್ಕರಿಸಲಿಲ್ಲ, ಬದಲಿಗೆ, ವಿಚಾರಣೆಗೆ ಹಾಜರಾಗುವ ಸಲುವಾಗಿ ಆಕೆ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಅಗತ್ಯ ಬಿದ್ದಾಗ ಆಕೆ ಅಂಥ ಪ್ರಯಾಣಕ್ಕೆ ‘ಅಗತ್ಯವಾಗಿರುವ ವೆಚ್ಚ’ವನ್ನು ಆತನಿಂದ ಕ್ಲೇಮು ಮಾಡಬಹುದೆಂದು ತಿಳಿಸಿತು. ವಿಚ್ಛೇದನೆಯ ಅರ್ಜಿ ಇನ್ನೂ ವಿಚಾರಣೆಯಲ್ಲಿ ಇರುವಾಗಲೇ, ರಮ್ಯ ಎರಡು ದಿನಗಳು ನ್ಯಾಯಾಲಯಕ್ಕೆ ಹಾಜರಾಗಬೇಕಾಯಿತು. ಹಾಗೆ ಹಾಜರಾದುದರ ಸಂಬಂಧ 32,114 ರೂಗಳ ವೆಚ್ಚವನ್ನು ಕ್ಲೇಮು ಮಾಡಿ ಅರ್ಜಿಯನ್ನು ಸಲ್ಲಿಸಿದಳು. ಕುಟುಂಬ ನ್ಯಾಯಾಲಯ ಈ ಮೊತ್ತಕ್ಕೆ ಅನುಮತಿ ನೀಡಿ ಆದೇಶವನ್ನು ಹೊರಡಿಸಿತು.
ರಮ್ಯಳ ಗಂಡ, ಇಷ್ಟು ದೊಡ್ಡ ಮೊತ್ತವನ್ನು ಮಂಜೂರು ಮಾಡಿದ ಕುಟುಂಬ ನ್ಯಾಯಾಲಯದ ಈ ಅದೇಶವನ್ನು ಪ್ರಶ್ನಿಸಿ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಆಕೆಯ ಗಂಡ ರಮೇಶನ ಪರವಾಗಿ ವಾದಿಸುತ್ತಾ ಆತನ ವಕೀಲರು ‘ಮೊದಲನೆಯದಾಗಿ ರಮ್ಯ ಕೇವಲ ಗೃಹಿಣಿ. ಆಕೆ ರೈಲಿನಲ್ಲಿ ಪ್ರಯಾಣಿಸಬಹುದಿತ್ತು. ಆಕೆ ಹಾಗೆ ಮಾಡದೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ; ಎರಡನೆಯದಾಗಿ, ನನ್ನ ಕಕ್ಷಿದಾರರು (ಎಂದರೆ, ರಮ್ಯಳ ಗಂಡ ರಮೇಶ) ಆಕೆಯ ಪರವಾಗಿ ರೈಲು ಟಿಕೆಟನ್ನು ತಾವೇ ಕಾಯ್ದಿರಿಸುವುದಾಗಿ ಸಹ ಹೇಳಿದ್ದರು; ಕೊನೆಯದಾಗಿ ಸರ್ವೋಚ್ಚ ನ್ಯಾಯಾಲಯ ‘ಅಗತ್ಯ ವೆಚ್ಚವನ್ನು ಆಕೆಯ ಗಂಡ ನೀಡಬೇಕು’ ಎಂದು ಹೇಳಿರುವುದರಿಂದ, ವಿಮಾನದ ವೆಚ್ಚಕ್ಕೆ ಅನುಮತಿ ನೀಡಿರುವ ಕುಟುಂಬ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕು’ ಎಂಬ ವಾದವನ್ನು ಮುಂದಿಟ್ಟರು.
ಈ ಪ್ರಕರಣ ನಮಗೆ ಮುಖ್ಯವಾಗುವುದು, ರಮೇಶನ ಪರ ವಾದಿಸಿದ ವಕೀಲರು ತಮ್ಮ ಕಕ್ಷಿದಾರರನ್ನು ಸವ್ಮರ್ಥಿಸಿಕೊಳ್ಳುತ್ತಾ ಬಳಸಿದ ‘ಕೇವಲ ಗೃಹಿಣಿ’ ಪದಗಳು ಮತ್ತು ಆಕೆ ಕೇವಲ ಗೃಹಿಣಿಯಾದ್ದರಿಂದ ಆಕೆಯ ಬಳಿ ಸಮಯವಿತ್ತು, ಹಾಗಾಗಿ ಆಕೆ ವಿಮಾನದಲ್ಲಿ ಪ್ರಯಾಣಿಸಬಾರದಿತ್ತು, ರೈಲಿನಲ್ಲಿ ಪ್ರಯಾಣ ಮಾಡಬೇಕಿತ್ತು’ ಎಂಬ ವಾದ. ಇದು ಇಂದಿಗೂ ನಮ್ಮಲ್ಲಿ ಬೇರೂರಿರುವ ಪುರುಷ ಪ್ರಧಾನ ಸಂಸ್ಸøತಿಯನ್ನು ಬಿಂಬಿಸುತ್ತದೆ ಮತ್ತು ‘ಮನೆಗೆಲಸವೇನು ಮಹಾ’ ಎಂಬ ಧೋರಣೆಯನ್ನು ಸಹ ಬಿಂಬಿಸುತ್ತದೆ.
ಆದರೆ ಈ ಎಲ್ಲ ವಾದವನ್ನು ಕರ್ನಾಟಕ ಉಚ್ಚ ನ್ಯಾಯಾಲಯ ತಳ್ಳಿ ಹಾಕಿತು.
ಮೊದಲನೆಯದಾಗಿ, ‘ಸರ್ವೋಚ್ಚ ನ್ಯಾಯಾಲಯ ‘ಅಗತ್ಯ ವೆಚ್ಚವನ್ನು ಆಕೆಯ ಗಂಡ ನೀಡಬೇಕು’ ಎಂದು ಹೇಳಿರುವುದು ನಿಜ. ಆದರೆ, ಸರ್ವೋಚ್ಚ ನ್ಯಾಯಾಲಯ ಆ ವೆಚ್ಚವನ್ನು ರೈಲು ಪ್ರಯಾಣದ ವೆಚ್ಚಕ್ಕೆ ಸೀಮಿತಗೊಳಿಸಿಲ್ಲ’ ಎಂದು ಹೇಳುವ ಮೂಲಕ ರಮೇಶನ ವಕೀಲರ ಮೊದಲ ವಾದವನ್ನು ತಳ್ಳಿ ಹಾಕಿತು.
ಎರಡನೆಯದಾಗಿ, ‘ಅವಳು ಕೇವಲ ಗೃಹಿಣಿ, ಹಾಗಾಗಿ ಅವಳಿಗೆ ಸಮಯವಿತ್ತು, ಆ ಕಾರಣಕ್ಕಾಗಿ ಅವಳು ರೈಲಿನಲ್ಲಿ ಪ್ರಯಾಣಿಸಬೇಕಿತ್ತು ಎಂಬ ವಾದ, ಗೃಹಿಣಿ ಮನೆಯಲ್ಲಿ ನಿರ್ವಹಿಸುವ ಕೆಲಸಗಳ ಬಗ್ಗೆ ವಕೀಲರಿಗೆ ಇರುವ ಅಜ್ಞಾನವನ್ನು ತೋರಿಸುತ್ತದೆ, ಮತ್ತು ಬಹಳಷ್ಟು ಜನರು ಇದೇ ಅಭಿಪ್ರಾಯವನ್ನು ಹೊಂದಿದವರಾಗಿದ್ದಾರೆ. ಇದು ಸ್ತ್ರೀ ಪುರುಷರ ನಡುವೆ ಇರುವ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ’ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಇಷ್ಟಕ್ಕೇ ನಿಲ್ಲಿಸದೆ ಇನ್ನೂ ಮುಂದುವರಿದು, ‘ಗೃಹಿಣಿ ಯಾರೇ ವೃತ್ತಿಪರ ವ್ಯಕ್ತಿಯಷ್ಟೇ ಕೆಲಸದಲ್ಲಿ ತನ್ನನ್ನು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾಳೆ. ಕುಟುಂಬದ ಸದಸ್ಯರನ್ನು ನೋಡಿಕೊಳ್ಳುವ ಜವಾಬ್ದಾರಿ ಆಕೆಯ ಹೆಗಲ ಮೇಲಿರುತ್ತದೆ, ಮನೆಯನ್ನು ನಿರ್ವಹಿಸುವ ಜವಾಬ್ದಾರಿಯೂ ಆಕೆಯ ಮೇಲಿರುತ್ತದೆ. ಕುಟುಂಬದ ಸದಸ್ಯರನ್ನು ನೋಡಿಕೊಳ್ಳುವುದು ಮತ್ತು ಮನೆಯನ್ನು ನಿರ್ವಹಿಸುವುದು ಸುಲಭವಾದ ಕೆಲಸವಲ್ಲ. ಆದ್ದರಿಂದ ರಮೇಶನ ವಕೀಲರ ಈ ವಾದವೂ ನಿಲ್ಲುವಂಥದ್ದಲ್ಲ’
ಮೂರನೆಯದಾಗಿ, ರಮ್ಯ ಯಾವ ರೀತಿಯಲ್ಲಿ ಪ್ರಯಾಣಿಸಬೇಕು ಎಂಬುದನ್ನು ಆಕೆಯ ಪತಿ ನಿರ್ಧರಿಸಲಾಗುವುದಿಲ್ಲ. ಆಕೆ ವಿಮಾನದಲ್ಲಿ ಪ್ರಯಾಣಿಸುವದನ್ನು ಆಯ್ಕೆ ಮಾಡಿಕೊಂಡರೆ ಅದಕ್ಕೆ ತಗಲುವ ವೆಚ್ಚವನ್ನು ಆತ ಭರಿಸಲೇ ಬೇಕಾಗುತ್ತದೆ. ಅದರಿಂದ ಆತ ತಪ್ಪಿಸಿಕೊಳ್ಳಲಾರ’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿ ಕುಟುಂಬ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅಪೀಲನ್ನು ಉಚ್ಚ ನ್ಯಾಯಾಲಯ ತಳ್ಳಿ ಹಾಕಿ ಮಹತ್ವದ ತೀರ್ಪನ್ನು ನೀಡಿದೆ.
ಈ ಹಿಂದೆ ಮೋಟಾರು ವಾಹನ ಅಪಘಾತದಲ್ಲಿ ಮೃತಳಾದ ತನ್ನ ಪತ್ನಿಯ ಸಂಬಂಧ ಹೂಡಿದ ದಾವೆಯಲ್ಲಿ ಪತಿ 11 ಲಕ್ಷರೂಗಳ ಪರಿಹಾರವನ್ನು ಕ್ಲೇಮು ಮಾಡಿದ್ದ. ಆದರೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆತನಿಗೆ ಪರಿಹಾರವಾಗಿ ಮಂಜೂರು ಮಾಡಿದ ಮೋಬಲಗು 32 ಲಕ್ಷ ರೂಗಳು. ಆತ ಕೇಳಿದುದಕ್ಕಿಂತ ಮೂರು ಪಟ್ಟು ಹೆಚ್ಚಿಗೆ! ಇದಕ್ಕೆ ಅವರು ನೀಡಿದ ಕಾರಣ ಗೃಹ ಕೃತ್ಯದಲ್ಲಿ ಆಕೆ ನೀಡುತ್ತಿದ್ದ ಸಹಕಾರವನ್ನು ಆತ ಕಳೆದುಕೊಂಡಿದ್ದಾನೆ ಎಂಬುದು! ಮುಂಬಯಿಯ ಮೋಟಾರು ಅಪಘಾತ ಕ್ಲೇಮುಗಳ ನ್ಯಾಯಾಧಿಕರಣ ಇತ್ತೀಚೆಗೆ ನೀಡಿರುವ ಆದೇಶನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬಹುದು.
ಯಾವ ಕೆಲಸಕ್ಕೆ ಪ್ರತಿಫಲ ಹಣದ ರೂಪದಲ್ಲಿ ದೊರೆಯುತ್ತದೆಯೋ ಆ ಕೆಲಸ ಮಾತ್ರ ದುಡಿಮೆ ಎಂಬುದೇ ತೀರ ಇತ್ತೀಚಿನವರೆಗೂ ‘ದುಡಿಮೆ’ ಎಂಬ ಪದಕ್ಕೆ ನೀಡಲಾದ ಮತ್ತು ಒಪ್ಪಿಕೊಂಡು ಬಂದ ಪರಿಭಾಷೆಯಾಗಿತ್ತು. ಹಾಗಾಗಿಯೇ ಮನೆಯಲ್ಲಿ ಗೃಹಿಣಿ ಮಾಡುವ ಕೆಲಸವನ್ನು ದುಡಿಮೆಯೆಂದೇ ಪರಿಗಣಿಸುತ್ತಿರಲಿಲ್ಲ. ಏಕೆಂದರೆ ಆ ಕೆಲಸಕ್ಕೆ ಯಾರೂ ಅವಳಿಗೆ ಹಣದ ರೂಪದಲ್ಲಿ ಪ್ರತಿಫಲ ನೀಡುತ್ತಿರಲಿಲ್ಲ. ಹಾಗಾಗಿಯೇ ಮನೆಯ ಕೆಲಸವನ್ನು ‘ಅನುತ್ಪಾದಕ’ ದುಡಿಮೆ ಎಂದು ವರ್ಗೀಕರಿಸಿ ಬಿಡುವುದು.
ಆದರೆ ಮಹಿಳೆ ತನ್ನ ಅಸ್ಮಿತೆ ಮತ್ತು ಹಕ್ಕುಗಳಿಗಾಗಿ ಪ್ರಾರಂಭಿಸಿದ ಹೋರಾಟದೊಂದಿಗೇ ಗೃಹಿಣಿಯಾಗಿ ಮಹಿಳೆ ಮಾಡುವ ಕೆಲಸವನ್ನೂ ದುಡಿಮೆಯ ಪರಿಭಾಷೆಯಲ್ಲಿ ತರಬೇಕೆಂಬ ಹೋರಾಟವೂ ಪ್ರಾರಂಭವಾಯಿತು ಎನ್ನಬಹುದು.
ಇಂಥ ತೀರ್ಪುಗಳಲ್ಲಿ ಆ ಹೋರಾಟದ ಪ್ರತಿಫಲವನ್ನೂ ಕಾಣಬಹುದು ಹಾಗೆಯೇ ಬದಲಾಗುತ್ತಿರುವ ಸಮಾಜದ ಮನೋಭಾವವನ್ನೂ ಕಾಣಬಹುದು. ಇದು ಆಶಾದಾಯಕವಾದ ಬೆಳವಣಿಗೆ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *