ಕಾನೂನು ಕನ್ನಡಿ / ಉದ್ಯೋಗ ಸ್ಥಳದ ಆಯ್ಕೆ ಮಹಿಳೆಯ ಹಕ್ಕು – ಡಾ.ಗೀತಾ ಕೃಷ್ಣಮೂರ್ತಿ

ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆ ತನ್ನ ಹೆಜ್ಜೆ ಗುರುತನ್ನು ಮೂಡಿಸುತ್ತಿದ್ದಾಳೆ. ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಪತ್ನಿ ತನ್ನ ಕೆಲಸದ ನಿಮಿತ್ತ ಮನೆಯಿಂದ ದೂರವಿರುವ ಪ್ರಸಂಗಗಳೂ ಹೆಚ್ಚಾಗಿವೆ. ಇಂಥ ಸಂದರ್ಭಗಳಲ್ಲಿ ಮನೆಯ ಉಸ್ತುವಾರಿ, ಮಕ್ಕಳ ಲಾಲನೆ ಪಾಲನೆಗೆ ಹೆಚ್ಚಿನ ಹೊಂದಾಣಿಕೆ ಅಗತ್ಯವಾಗುತ್ತದೆ. ಈ ಅಗತ್ಯ ಬದಲಾವಣೆಗಳಿಗೆ ಹೊಂದಿಕೊಳ್ಳದೇ ಇದ್ದಾಗ ಕುಟುಂಬ ಛಿದ್ರವಾಗಲು ಇದೇ ಕಾರಣವೂ ಆಗುತ್ತದೆ.


ಮಹಿಳೆಗೆ ದೊರೆತಿರುವ ಶಿಕ್ಷಣ ಅವಕಾಶಗಳು, ಉದ್ಯೋಗ ಅವಕಾಶಗಳು ಮಹಿಳೆಯ ವೈಯಕ್ತಿಕ ಜೀವನದಲ್ಲಿ ಬದಲಾವಣೆಗಳನ್ನು ತಂದಿದೆ. ಅದರ ಜೊತೆ ಜೊತೆಯಲ್ಲಿಯೇ ಸಮಾಜದಲ್ಲಿಯೂ ಹಲವಾರು ಬದಲಾವಣೆಗಳನ್ನು ತಂದಿದೆ. ಈ ಬದಲಾವಣೆಗಳಿಂದಾಗಿ, ವ್ಯಕ್ತಿಯ ವೈವಾಹಿಕ ಜೀವನದಲ್ಲಿಯೂ ಪತಿ ಪತ್ನಿಯರು ಅನೇಕ ಬದಲಾವಣೆಗಳಿಗೆ ಸಿದ್ಧರಾಗಬೇಕಾಗಿರುವುದು ಅನಿವಾರ್ಯವಾಗಿದೆ. ಪತ್ನಿ ತನ್ನ ಎಲ್ಲ ಆದ್ಯತೆಗಳನ್ನು ಬದಿಗಿಟ್ಟು, ತನ್ನ ಗಂಡ ಮತ್ತು ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳುವುದಷ್ಟೇ ತನ್ನ ಪರಮ ಧ್ಯೇಯ ಎಂಬಂಥ ಮನೋಭಾವದಲ್ಲಿ ಬದಲಾವಣೆಗಳಾಗಿವೆ. ಗಂಡನೂ ತನ್ನ ಪತ್ನಿ ಮತ್ತು ಮಕ್ಕಳ ಯೋಗಕ್ಷೇಮವನ್ನು ಸರಿಸಮನಾಗಿ ನೋಡಿಕೊಳ್ಳಬೇಕು ಎಂಬುದು ಈಗಿನ ಸಮಾಜದ ಸಹಜ ನಿರೀಕ್ಷೆಗಳು ಎಂಬುದು ಒಪ್ಪಿತವಾಗುತ್ತಿದೆ.

ವ್ಯಕ್ತಿಯಾಗಿ ಮಹಿಳೆ ಈಗ ಗುರುತಿಸಲ್ಪಡುತ್ತಿದ್ದಾಳೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನ ಹೆಜ್ಜೆ ಗುರುತನ್ನು ಮೂಡಿಸುತ್ತಿದ್ದಾಳೆ. ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಪತ್ನಿ ತನ್ನ ಕೆಲಸದ ನಿಮಿತ್ತ ಮನೆಯಿಂದ ದೂರವಿರುವ ಪ್ರಸಂಗಗಳೂ ಹೆಚ್ಚಾಗಿವೆ. ಇಂಥ ಸಂದರ್ಭಗಳಲ್ಲಿ ಮನೆಯ ಉಸ್ತುವಾರಿ, ಮಕ್ಕಳ ಲಾಲನೆ ಪಾಲನೆ ಮುಂತಾದ ಕೌಟುಂಬಿಕ ವ್ಯವಸ್ಥೆಯಲ್ಲಿ ಏರುಪೇರುಗಳಾಗುತ್ತವೆ. ಇವುಗಳೆಲ್ಲವನ್ನು ನಿಭಾಯಿಸಲು ಕುಟುಂಬದ ಸದಸ್ಯರಲ್ಲಿ ಹೆಚ್ಚಿನ ಹೊಂದಾಣಿಕೆ ಅಗತ್ಯವಾಗುತ್ತದೆ. ಈ ಅಗತ್ಯ ಬದಲಾವಣೆಗಳಿಗೆ ಹೊಂದಿಕೊಳ್ಳದೇ ಇದ್ದಾಗ ಕುಟುಂಬ ಛಿದ್ರವಾಗಲು ಇದೇ ಕಾರಣವೂ ಆಗುತ್ತದೆ.

ಇಂಥದ್ದೊಂದು ಪ್ರಕರಣ ಛತ್ತಿಸ್‍ಘಡ ಉಚ್ಚ ನ್ಯಾಯಾಲಯದ ಮುಂದೆ ಬಂತು: ಹೇಮಂತ್ ಪರಾಶರ್ ಮತ್ತು ಕಾಮಿನಿ ಪರಾಶರ್ ಈ ಮೊಕದ್ದಮೆಯ ಪಕ್ಷಕಾರರು. ಇವರಿಬ್ಬರೂ 3.11.1995 ರಂದು ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು. ವಿವಾಹದ ಅನಂತರ ಕಾಮಿನಿ ತನ್ನ ವಾಸ್ತವ್ಯವನ್ನು ತನ್ನ ಗಂಡನ ಮನೆಗೆ ಬದಲಾಯಿಸಿದಳು. ಅವಳ ಅತ್ತೆ ಮಾವ ಇಬ್ಬರೂ ಆಂಧ್ರ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ಮೂರು ತಿಂಗಳಿಗೊಮ್ಮೆ ಮಗನ ಮನೆಗೆ ಬರುತ್ತಿದ್ದರು. ಈ ಮಧ್ಯೆ ಕಾಮಿನಿಗೆ ಶಿಕ್ಷಣ ಇಲಾಖೆಯಲ್ಲಿ ಸಹಾಯಕ ಪ್ರಾಧ್ಯಾಪಕಿಯ ಹುದ್ದೆ ದೊರೆಯಿತು. ಆಕೆ ಕೆಲಸದ ನಿಮಿತ್ತ ಗಂಡನ ಮನೆಯಿಂದ ದೂರ ಉಳಿಯಬೇಕಾಯಿತು. ಆ ಕೆಲಸವನ್ನು ಒಪ್ಪಿಕೊಳ್ಳದಿರುವಂತೆ ಆಕೆಯ ಗಂಡ ಒತ್ತಾಯ ಮಾಡಿದ. ಆದರೆ ಆಕೆ ಅವಳ ತವರಿನ ಬೆಂಬಲ ಪಡೆದು ಕೆಲಸಕ್ಕೆ ಸೇರಿದಳು.

ತನ್ನ ಪತ್ನಿ ತನ್ನ ಇಚ್ಛೆಗೆ ವಿರುದ್ಧವಾಗಿ ಕೆಲಸಕ್ಕೆ ಸೇರಿದ್ದಾಳೆ ಮತ್ತು ಸಾಕಷ್ಟು ಕಾರಣವಿಲ್ಲದೆ ತನ್ನನ್ನು ತೊರೆದು ಹೋಗಿದ್ದಾಳೆ. ಎಂದರೆ ಅವಳು ತನ್ನನ್ನು ಪರಿತ್ಯಜಿಸಿದ್ದಾಳೆ. ಆ ಕಾರಣಕ್ಕಾಗಿ ತನಗೆ ಅವಳಿಂದ ವಿಚ್ಛೇದನೆ ಬೇಕು ಎಂದು ಕೋರಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ 15.1.1999 ರಂದು ಅರ್ಜಿ ಹಾಕಿದ.

ಹಿಂದೂ ವಿವಾಹ ಅಧಿನಿಯಮದ ಮೇರೆಗೆ, ವಿಚ್ಛೇದನೆಯನ್ನು, ಆ ಕಾನೂನಿನಲ್ಲಿ ಪಟ್ಟಿ ಮಾಡಿರುವ ಕಾರಣಗಳಿಗಾಗಿ ಮಾತ್ರ ಪಡೆಯಬಹುದಾಗಿದೆ. ಆ ಕಾರಣಗಳಲ್ಲಿ ಒಂದು- ಪತಿ ಅಥವಾ ಪತ್ನಿ, ವಿನಾ ಕಾರಣ ಪತಿ ಅಥವಾ ಪತ್ನಿಯನ್ನು ಪರಿತ್ಯಜಿಸಿ ಅವನಿಂದ/ಅವಳಿಂದ ಎರಡು ವರ್ಷಗಳ ಕಾಲ ಅಥವಾ ಅದಕ್ಕೂ ಹೆಚ್ಚಿನ ಅವಧಿಗೆ ದೂರವಿರುವುದು. ಅಂಥ ಸಂದರ್ಭದಲ್ಲಿ, ಹಾಗೆ ಪರಿತ್ಯಜಿಸಿ ಹೋದ ವ್ಯಕ್ತಿಯಿಂದ ಪತಿ/ಪತ್ನಿ ವಿಚ್ಛೇದನೆ ಕೋರಿ ಅರ್ಜಿ ಸಲ್ಲಿಸಬಹುದು. ಇಲ್ಲಿ ಕಾಮಿನಿಯ ಪತಿ ಪರಾಶರ್ ವಿಚ್ಛೇದನೆ ಪಡೆಯಲು ತೋರಿಸಿದ್ದು ಇದೇ ಕಾರಣವನ್ನೇ.

ಆದರೆ ಇದನ್ನು ಪತ್ನಿ ವಿರೋಧಿಸಿದಳು. ಮದುವೆಗೆ ಮುನ್ನ ಅವಳ ಗಂಡ ತನಗೆ ಒಳ್ಳೆಯ ಕೆಲಸವಿದೆ ಎಂದು ಸುಳ್ಳು ಹೇಳಿದ್ದ, ಅವನು ಎಲ್ಲದಕ್ಕೂ ಸಂಪೂರ್ಣವಾಗಿ ತನ್ನ ತಂದೆ ತಾಯಿಯನ್ನೇ ಅವಲಂಬಿಸಿದ್ದ. ಅಲ್ಲದೆ, ಮದುವೆಗೆ ಮುಂಚೆಯೇ, ಮದುವೆಯ ನಂತರವೂ ಅವಳು ಕೆಲಸ ಮಾಡಬಹುದು ಎಂದು ಗಂಡನ ಮತ್ತು ಅವನ ಮನೆಯವರು ಒಪ್ಪಿಕೊಂಡಿದ್ದರು. ಮದುವೆಗೆ ಮುನ್ನ ಅವಳು ಸ್ಫರ್ಧಾತ್ಮಕ ಪರೀಕ್ಷೆ ಬರೆದಿದ್ದು, ಸಂದರ್ಶನಕ್ಕೆ ಕರೆ ಬಂದದ್ದು ಮದುವೆಯ ನಂತರ. ಸಂದರ್ಶನಕ್ಕೆ ಗಂಡನ ಒಪ್ಪಿಗೆ ಪಡೆದೇ ತಾನು ಹೋದುದು ಎಂದೂ ತಿಳಿಸಿದ್ದಾಳೆ. ತಾನು ಆಯ್ಕೆ ಆಗಿರುವುದು ತಿಳಿದನಂತರ ಗಂಡ ಹಾಗೂ ಅವನ ಮನೆಯವರು ತನ್ನೊಡನೆ ಕ್ರೂರವಾಗಿ ನಡೆದುಕೊಳ್ಳಲು ಪ್ರಾರಂಭಿಸಿದರು. ಉದ್ಯೋಗ ಅಥವಾ ವೈವಾಹಿಕ ಜೀವನ-ಎರಡರಲ್ಲಿ ಒಂದನ್ನು ಆಯ್ದುಕೊಳ್ಳುವಂತೆ ಆಕೆಯ ಅತ್ತೆ ಮಾವ ತಿಳಿಸಿದರು. ಗಂಡ ತನ್ನ ಪ್ರತಿಯೊಂದು ಅಗತ್ಯತೆಗಳಿಗೂ ತಂದೆ ತಾಯಿಯನ್ನೇ ಅವಲಂಬಿಸಿದ್ದರಿಂದ ತನಗೆ ಯಾವುದೇ ರೀತಿಯ ಬೆಂಬಲವನ್ನೂ ನೀಡಲಿಲ್ಲ ಮತ್ತು ತಂದೆ ತಾಯಿಯರ ನಿಲುವನ್ನು ವಿರೋಧಿಸಲೂ ಇಲ್ಲ. ಹಾಗಾಗಿ ತಾನು ವೈವಾಹಿಕ ಜೀವನದಿಂದ ವಂಚಿತಳಾದೆ ಎಂಬ ವಾದವನ್ನು ಮಂಡಿಸಿದಳು.

ಎರಡೂ ಪಕ್ಷಕಾರರು ಮಂಡಿಸಿದ ವಾದ ವಿವಾದಗಳು ಮತ್ತು ಹಾಜರುಪಡಿಸಿದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯ ವಿಚ್ಛೇದನೆಗೆ ಬಲವಾದ ಯಾವುದೇ ಕಾರಣವಿಲ್ಲ. ಉದ್ಯೋಗದ ಸಲುವಾಗಿ ಪತ್ನಿ ಗಂಡನಿಂದ ದೂರವಿದ್ದಾಳೆಯೇ ಹೊರತು ಗಂಡನನ್ನು ತ್ಯಜಿಸಿಲ್ಲ. ಆದ್ದರಿಂದ ಗಂಡನನ್ನು ತ್ಯಜಿಸಿದ್ದಾಳೆ ಎಂಬ ವಾದದಲ್ಲಿ ಹುರುಳಿಲ್ಲ ಎಂಬ ಕಾರಣಕ್ಕಾಗಿ ಅರ್ಜಿಯನ್ನು ತಿರಸ್ಕರಿಸಿತು.

ಕೆಳ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಗಂಡ ಛತ್ತೀಸಘಡ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ.
ಇಲ್ಲಿ ಗಂಡನ ಪರವಾಗಿ ಮಂಡಿಸಿದ ವಾದದ ಮುಖ್ಯ ಅಂಶಗಳು -ತನ್ನ ಗಂಡ ಹಾಗೂ ಗಂಡನ ಬಂಧುಗಳು ತನ್ನೊಡನೆ ಕ್ರೂರವಾಗಿ ನಡೆದುಕೊಂಡರು ಎಂದು ಪತ್ನಿ ಆರೋಪಿಸಿರುವುದು ಆಕೆ ಗಂಡನ ಮನೆಯನ್ನು ತೊರೆದ ನಂತರ. ಗಂಡನೊಡನೆ ಇದ್ದಾಗ ಇಂಥ ಯಾವುದೇ ಆರೋಪವನ್ನು ಆಕೆ ಮಾಡಿರಲಿಲ್ಲ. ಆದ್ದರಿಂದ ಆಕೆಗೆ ಗಂಡನನ್ನು ತ್ಯಜಿಸುವ ಉದ್ದೇಶವಿತ್ತು ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಅದರಲ್ಲಿ ಯಾವುದೇ ಹುರುಳಿಲ್ಲ, – ತನ್ನ ಗಂಡ ಉದ್ಯೋಗಕ್ಕೆ ಸೇರಲು ಒಪ್ಪಿಗೆಯನ್ನು ಕೊಡದಿದ್ದರೂ, ಪತ್ನಿ ಆತನ ಇಚ್ಛೆಗೆ ವಿರುದ್ಧವಾಗಿ ದೂರದ ಸ್ಥಳದಲ್ಲಿ ಉದ್ಯೋಗಕ್ಕೆ ಸೇರಿದ್ದಾಳೆ, ಅವಳ ಈ ನಡೆಯೂ ಸಹ ಅವಳಿಗೆ ಗಂಡನನ್ನು ತ್ಯಜಿಸಿ ಹೋಗುವ ಉದ್ದೇಶವಿತ್ತು ಎಂಬುದನ್ನು ಸ್ಪಷ್ಟ ಪಡಿಸುತ್ತದೆ. ಈಗ ಗಂಡ ಹೆಂಡತಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿ 22 ವರ್ಷಗಳಾಗಿವೆ ಮತ್ತು ಅವರ ನಡುವೆ ಯಾವುದೇ ಸಂಬಂಧವೂ ಇಲ್ಲ. ವಿವಾಹ ಸರಿಪಡಿಸಲಾಗದ ರೀತಿಯಲ್ಲಿ ಮುರಿದು ಬಿದ್ದಿದೆ (ಇರ್ರಿಟ್ರೀವಬಲೀ ಬ್ರೋಕನ್). ಈಗಲೂ ವಿವಾಹ ಬಂಧನವನ್ನು ಮುಂದುವರಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಆದ್ದರಿಂದ ಈ ಅರ್ಜಿಯನ್ನು ಪುರಸ್ಕರಿಸಿ, ವಿಚ್ಚೇದನೆ ಡಿಕ್ರಿಯನ್ನು ಹೊರಡಿಸಬೇಕು ಎಂದು ಕೋರಿದರು.

ಆದರೆ ಅಪೀಲಿನಲ್ಲಿ, ಪತ್ನಿಯ ಪರವಾಗಿ, ಕೆಳಗಿನ ನ್ಯಾಯಾಲಯದಲ್ಲಿ ಮಂಡಿಸಿದ ವಾದವನ್ನೇ ಮಂಡಿಸಲಾಯಿತು. ಪತ್ನಿ ತಾನೇ ಗಂಡನನ್ನು ತ್ಯಜಿಸಲು ಯಾವುವೇ ಕಾರಣಗಳೂ ಇರಲಿಲ್ಲ ಮತ್ತು ಅವಳಿಗೆ ಗಂಡನನ್ನು ತ್ಯಜಿಸುವ ಉದ್ದೇಶವಿತ್ತು ಎನ್ನಲು ಯಾವುವೇ ಸಾಕ್ಷ್ಯಾಧಾರಗಳು ಇಲ್ಲ. ಆಕೆ ಗಂಡನಿಂದ ದೂರವಿರಲು ಕಾರಣ ಆಕೆಯ ಉದ್ಯೋಗ ಸ್ಥಳ ಆಕೆಯ ಗಂಡನ ಮನೆಯಿಂದ ದೂರದ ಸ್ಥಳದಲ್ಲಿ ಇತ್ತು ಎಂಬದೇ ಆಗಿತ್ತು. ಆದ್ದರಿಂದ ಈ ಅಪೀಲನ್ನು ಪುರಸ್ಕರಿಸಬಾರದು ಎಂಬುದಾಗಿತ್ತು.

ಎರಡೂ ಪಕ್ಷಕಾರರ ವಾದ ವಿವಾದಗಳನ್ನು ಪರಿಶೀಲಿಸಿದ, ಸನ್ಮಾನ್ಯ ನ್ಯಾಯಧೀಶರಾದ ಗೌತಮ್ ಭದೂರಿ ಅವರು ಈ ಮುಂದಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು-
‘ಎರಡೂ ಪಕ್ಷಕಾರರ ವಕೀಲರು ಮುಂದಿಟ್ಟ ವಿವರಗಳು, ವಾದಗಳು ಮತ್ತು ಸಾಕ್ಷ್ಯಗಳ ಆಧಾರದಿಂದ ಸ್ಪಷ್ಟಪಟ್ಟ ಒಂದು ಅಂಶವೆಂದರೆ, ಉದ್ಯೋಗದ ಕಾರಣದಿಂದ ಪತ್ನಿ ಗಂಡನಿಂದ ದೂರವಿರಬೇಕಾಯಿತು ಎಂಬುದು. ತನ್ನ ಒಪ್ಪಿಗೆಯಿಲ್ಲದೆ ತನ್ನ ಪತ್ನಿ ಉದ್ಯೋಗಕ್ಕೆ ಸೇರಿದಳು ಎಂಬುದು ಪತಿಯ ವಾದವಾದರೆ, ಗಂಡನ ಒಪ್ಪಿಗೆಯನ್ನು ಪಡೆದೇ ತಾನು ಉದ್ಯೋಗಕ್ಕೆ ಸೇರಿದುದು ಎಂಬುದು ಪತ್ನಿಯ ವಾದ. ಆದ್ದರಿಂದ ಪತಿ ಪತ್ನಿಯರು ಬೇರ್ಪಡಲು ಏಕೈಕ ಕಾರಣ ಪತ್ನಿಗೆ ಪತಿಯ ಸ್ಥಳದಿಂದ ದೂರವಿರುವ ಸ್ಥಳಕ್ಕೆ ನಿಯುಕ್ತಿಯಾಯಿತು ಎಂಬುದು.

ವಿವಾಹದ ನಂತರ ಹೆಣ್ಣು, ಗಂಡನ ಮನೆಯಲ್ಲಿ, ಪತ್ನಿಯಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂಬುದು ಹಿಂದೂ ಸಮಾಜ ನಿರೀಕ್ಷಿಸುತ್ತದೆ. ಆದರೆ, ಸಮಾಜದಲ್ಲಿ ಆಗಿರುವ ಬದಲಾವಣೆಗಳನ್ನು ಮತ್ತು ಬದಲಾದ ಜೀವನ ಶೈಲಿಗಳನ್ನು ಈ ಹಂತದಲ್ಲಿ ಕಡೆಗಣಿಸಲಾಗದು. ಶಿಕ್ಷಣ ಪಡೆದ ಮಹಿಳೆಯನ್ನು ಗಂಡನ ಮನೆಯ ನಾಲ್ಕು ಗೋಡೆಗಳೊಳಗೆ ಕಟ್ಟಿಹಾಕಲಾಗದು. ಅಂಥ ಸಂದರ್ಭಗಳಲ್ಲಿ ಎರಡರ ನಡುವೆ ಹೊಂದಾಣಿಕೆ ಮಾಡಿಕೊಳ್ಳುವುದು ಗಂಡ ಹೆಂಡತಿಯರಿಬ್ಬರ ಜವಾಬ್ದಾರಿ. ಈಗಿನ ಸಾಮಾಜಿಕ ಹಿನ್ನೆಲೆಯಲ್ಲಿ ಆತನ ಪತ್ನಿ ಪಡೆದುಕೊಂಡಂಥ ಉದ್ಯೋಗಕ್ಕೆ ಅರ್ಹಳಾಗುವುದು ಮತ್ತು ಅರ್ಹತೆಯ ಮೇಲೆ ಪಡೆದುಕೊಳ್ಳುವುದು ಒಂದು ಸವಾಲು. ಹಾಗಿರುವಾಗ, ಉದ್ಯೋಗ ಮತ್ತು ಸಂಸಾರವೆರಡರ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಅವಳ ಮೇಲೆ ಒತ್ತಡ ಹಾಕುವುದು ಸರ್ವಥಾ ಸರಿಯಲ್ಲ. ಅಂಥ ಸಂದರ್ಭದಲ್ಲಿ, ಪತ್ನಿ ಉದ್ಯೋಗ ಮಾಡುವುದನ್ನು ಆಯ್ಕೆ ಮಾಡಿಕೊಂಡ ನಿರ್ಧಾರವನ್ನು, ಗಂಡನನ್ನು ತ್ಯಜಿಸುವ ಉದ್ದೇಶದಿಂದ ಕೈಗೊಂಡ ನಿರ್ಧಾರ ಎನ್ನಲಾಗದು.

ಇಲ್ಲಿಯವರೆಗೆ, ವಿಚ್ಛೇದನೆಯನ್ನು ಕೋರುತ್ತಾ ಬಂದದ್ದು ಪತ್ನಿ ದೂರದ ಸ್ಥಳದಲ್ಲಿ ಉದ್ಯೋಗಕ್ಕೆ ಸೇರಿದುದರಿಂದ ಉಂಟಾದ ಬೇರ್ಪಡೆಯ ಕಾರಣಕ್ಕೆ, ಅದನ್ನು ತೊರೆದು ಬರಲು ಅವಳು ನಿರಾಕರಿಸಿದಳು ಎಂಬ ಕಾರಣಕ್ಕೆ ಮತ್ತು ಅದನ್ನು ಉದ್ದೇಶಪೂರ್ವಕ ಪರಿತ್ಯಾಗ ಎಂಬ ವಾದದ ಆಧಾರದ ಮೇಲೆಯೇ.

ಈಗ, ಪತಿಯ ವಕೀಲರು ಮುಂದಿಟ್ಟ ವಾದವನ್ನು ಒಪ್ಪಿ, ವಿವಾಹ ‘ಸರಿಪಡಿಸಲಾಗದಂತೆ ಮುರಿದು ಬಿದ್ದಿದೆ’ ಎಂಬ ಕಾರಣದ ಮೇಲೆಯೇ ವಿಚ್ಛೇದನೆ ನೀಡಿದರೂ, ‘ಪರಿತ್ಯಜನೆ’ಯ ಕಾರಣ ತೋರಿ ವಿಚ್ಛೇದನೆ ಪಡೆಯಲಿಚ್ಛಿಸಿದ ಪತಿಯ ಪ್ರಯತ್ನ ಈಡೇರಿದಂತಾಗುತ್ತದೆ. ಪತ್ನಿ ಪತಿಯನ್ನು ಪರಿತ್ಯಾಗ ಮಾಡಿದ ಆರೋಪ ಸಾಬೀತಾದಂತೆ ಆಗುತ್ತದೆ ಮತ್ತು ಉದ್ಯೋಗ ದೊರೆತ ಸ್ಥಳದಲ್ಲಿ ಉದ್ಯೋಗ ಮಾಡುವ ಪತ್ನಿಯ ಆಯ್ಕೆಯ ಸ್ವಾತಂತ್ರ್ಯವನ್ನು ಕಡೆಗಣಿಸಿದಂತಾಗುತ್ತದೆ. ಆದ್ದರಿಂದ, ಈ ಕಾರಣವನ್ನು ನ್ಯಾಯಾಲಯ ಪುರಸ್ಕರಿಸುವುದು ಸಾಧ್ಯವಿಲ್ಲ.’ ಹೀಗೆ ಅಭಿಪ್ರಾಯಪಟ್ಟ ನ್ಯಾಯಾಧೀಶರು ಪತಿಯ ಅಪೀಲನ್ನು ವಜಾ ಮಾಡಿದರು.

ಸರ್ವೋಚ್ಚ ನ್ಯಾಯಾಲಯವೂ ಸಹ, ಇಂಥದ್ದೇ ಪ್ರಕರಣದಲ್ಲಿ, (ಜೋಸೆಫ್ ಶೈನ್ ವಿ ಯೂನಿಯನ್ ಆಫ್ ಇಂಡಿಯಾ) ಗಂಡ ತನ್ನ ಆಯ್ಕೆಯನ್ನು ಪತ್ನಿಯ ಮೇಲೆ ಹೇರಬಾರದು, ಅದು ಅವಳ ಅಸ್ಮಿತೆಯನ್ನೇ ನಾಶಪಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಯಾವುದೇ ಕಾನೂನಿನ ಹಾಗೂ ಅದರ ಯಾವುದೇ ಉಪಬಂಧವನ್ನು ರಚಿಸುವುದರ ಹಿಂದೆ ನಿರ್ದಿಷ್ಟ ಉದ್ದೇಶ ಮತ್ತು ನಿರ್ದಿಷ್ಟ ಕಾರಣಗಳು ಇರುತ್ತವೆ ಮತ್ತು ಅಂಥ ಉದ್ದೇಶ ಮತ್ತು ಕಾರಣಗಳನ್ನು ಶಾಸನ ರಚನೆಯ ಕಾಲದಲ್ಲಿ ಮಂಡಿಸಲಾಗಿರುತ್ತದೆ. ಕಾನೂನು ರಚನೆಯ ಉದ್ದೇಶವನ್ನು ಅರಿತು, ಕಾನೂನನ್ನು ವಿವೇಚನಾಯುತವಾಗಿ ಅನ್ವಯಿಸಿದಾಗ ಮತ್ತು ಅದನ್ನು ನಿರ್ವಚಿಸಿದಾಗ ಮಾತ್ರ, ಅದರ ರಚನೆಯ ಉದ್ದೇಶ ಈಡೇರುವುದು.

ಈ ಪ್ರಕರಣದಲ್ಲಿ, ಕಾನೂನಿನ ವ್ಯಾಪ್ತಿಯೊಳಗೇ, ಕಾನೂನಿನ ಪ್ರಕಾರವೇ ಮಹಿಳೆಯ ಸ್ವತಂತ್ರ ಅಸ್ತಿತ್ವಕ್ಕೆ ಕುಠಾರ ಪ್ರಾಯವಾಗುವ, ಅವಳ ಆರ್ಥಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಮತ್ತು ಪುರುಷ ಪ್ರಧಾನ ಚಿಂತನೆಯನ್ನು ಗಟ್ಟಿಗೊಳಿಸುವ ಪ್ರತಿವಾದಿಯ (ಪತಿಯ) ಎಲ್ಲ ಪ್ರಯತ್ನಗಳನ್ನೂ ನ್ಯಾಯಾಧೀಶರ ಸೂಕ್ಷ್ಮ ವಿಶ್ಲೇಷಣೆ ವಿಫಲಗೊಳಿಸಿತು ಮತ್ತು ಮಹಿಳೆಗೆ ನಿಜವಾದ ಅರ್ಥದಲ್ಲಿ ನ್ಯಾಯ ದೊರಕಿಸಿಕೊಟ್ಟಿತು. ಮಹಿಳೆಗೆ ಹಕ್ಕುಗಳನ್ನು ನೀಡುವ ಕಾನೂನುಗಳು ಯಶಸ್ವಿಯಾಗುವುದು ಇಂಥ ತೀರ್ಪುಗಳಿಂದ ಮಾತ್ರ.

-ಡಾ.ಗೀತಾ ಕೃಷ್ಣಮೂರ್ತಿ
*

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *