ಕಾನೂನು ಕನ್ನಡಿ / ಅತ್ಯಾಚಾರ: ಸಂವೇದನಾಶೀಲ ತೀರ್ಪು – ಡಾ.ಗೀತಾ ಕೃಷ್ಣಮೂರ್ತಿ

ಭಾರತದಲ್ಲಿ ಪ್ರತಿನಿತ್ಯ 96 ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಆದರೆ ಅಪರಾಧಿಗೆ ಶಿಕ್ಷೆ ಆಗುವುದು ತೀರಾ ಕಡಿಮೆ. ಬಹುತೇಕ ಪ್ರಕರಣಗಳಲ್ಲಿ ಸರಿಯಾದ ಸಾಕ್ಷ್ಯಗಳಿಲ್ಲ ಎಂಬುದು ಆರೋಪಿಯ ಖುಲಾಸೆಗೆ ಕಾರಣವಾಗುತ್ತದೆ. ಆದರೆ ಸರ್ವೋಚ್ಚ ನ್ಯಾಯಾಲಯ ಅತ್ಯಾಚಾರ ಪ್ರಕರಣಗಳಲ್ಲಿ ನೀಡಿರುವ ಸ್ಪಷ್ಟವಾದ ನೀತಿನಿರ್ಣಾಯಕ ತೀರ್ಪುಗಳನ್ನು ವಿಚಾರಣಾ ನ್ಯಾಯಾಲಯಗಳು ಗಂಭೀರವಾಗಿ ಪರಿಗಣಿಸುವುದು ಅಗತ್ಯ.

ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ 2012 ರ ಏಪ್ರಿಲ್ 4 ರಂದು ನಡೆದ ಅತ್ಯಾಚಾರ ಪ್ರಕರಣದಲ್ಲಿ
ಕರ್ನಾಟಕ ಉಚ್ಚನ್ಯಾಯಾಲಯ ಇತ್ತೀಚೆಗೆ (2019 ರ ಸೆಪ್ಟೆಂಬರ್ 17 ರಂದು) ಗಮನಾರ್ಹ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ, 2012 ರ ಏಪ್ರಿಲ್ 4 ರಂದು, ಆಗ 16 ವರ್ಷ ವಯಸ್ಸಿನ ಬಾಲೆಯ ಮೇಲೆ 47 ವರ್ಷದ
ವ್ಯಕ್ತಿ ಅತ್ಯಾಚಾರವೆಸಗಿದ. ಆ ಘಟನೆಯನ್ನು ಆಕೆ ಯಾರಲ್ಲಿಯಾದರೂ ಹೇಳಿದಲ್ಲಿ ಪರಿಣಾಮವನ್ನು
ಎದುರಿಸಬೇಕಾಗುತ್ತದೆ ಎಂದೂ, ಹೇಳಿದರೆ “ಕಾಲು ಮುರಿಯುತ್ತೇನೆ” ಎಂದೂ ಅವಳನ್ನು ಹೆದರಿಸಿದ್ದ.
ಆದರೆ ಆಕೆ ಅದನ್ನು ತನ್ನ ನೆರೆಯವರಲ್ಲಿ ಹೇಳಿಕೊಂಡಿದ್ದಳು. ಅವರು ಅವಳನ್ನು ಆಕೆಯ ತಾಯಿ ಕೆಲಸ ಮಾಡುತ್ತಿದ್ದ ತೋಟಕ್ಕೆ ಕರೆದೊಯ್ದು ಇಡೀ ಘಟನೆಯನ್ನು ಆಕೆಗೆ ತಿಳಿಸಿದರು. ಸಂತ್ರಸ್ತೆಯ ತಾಯಿ ಕೂಡಲೇ
ಪೊಲೀಸರಿಗೆ ದೂರು ನೀಡಿದಳು.

ಆಕೆಯನ್ನು ಪರೀಕ್ಷಿಸಿದ ವೈದ್ಯರು, “ಆ ಬಾಲಕಿಯ ದೇಹದ ಮೇಲೆ ಹಾಗೂ ಆಕೆಯ ದೇಹದ ಗುಪ್ತಾಂಗಗಳ ಮೇಲೆ ಯಾವುವೇ ಗಾಯಗಳ ಗುರುತಾಗಲೀ ರಕ್ತದ ಕಲೆಗಳಾಗಲೀ ಇಲ್ಲ, ಹಾಗೆಯೇ ಅಪರಾಧಿಯ
ಗುಪ್ತಾಂಗಗಳ ಮೇಲೆಯೂ ಅತ್ಯಾಚಾರ ನಡೆಸಿರಬಹುದು ಎಂಬುದಕ್ಕೆ ಯಾವುದೇ ಗುರುತುಗಳೂ ಇಲ್ಲ” ಎಂಬುದಾಗಿ ವರದಿ ಮಾಡಿದರು. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ ಯೋನಿ ಮೇಲಿನ ಲೇಪಗಳನ್ನು ಪರೀಕ್ಷೆಗೆ ಒಳಪಡಿಸಿ ನೀಡಿದ ವರದಿಯಲ್ಲಿಯೂ, “ಅತ್ಯಾಚಾರ ನಡೆಸಿರುವ ಬಗ್ಗೆ ಯಾವುವೇ ಕುರುಹುಗಳಿಲ್ಲ” ಎಂಬುದಾಗಿ ಉಲ್ಲೇಖಿಸಲಾಗಿತ್ತು.

ಈ ವರದಿಗಳನ್ನು ಆಧರಿಸಿ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿತು.
ಅತ್ಯಾಚಾರ ಮಹಿಳೆಯ ದೇಹದ ಮೇಲೆ ನಡೆಯುವ ಅತ್ಯಂತ ಹೇಯವಾದ ಮತ್ತು ಅತ್ಯಂತ ಘೋರವಾದ ಅಪರಾಧ. ದೆಹಲಿಯ ಸಾಮೂಹಿಕ ಅತ್ಯಾಚಾರ “ನಿರ್ಭಯ” ಪ್ರಕರಣದ ತರುವಾಯ, ಜಾರಿಯಲ್ಲಿರುವ ಅತ್ಯಾಚಾರ ಕಾನೂನನ್ನು ಅತ್ಯಾಚಾರಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸುವ ರೀತಿಯಲ್ಲಿ ಮತ್ತಷ್ಟು ತಿದ್ದುಪಡಿ
ಮಾಡಬೇಕು ಎಂಬುದು ಆ ಸಂದರ್ಭದಲ್ಲಿ ಭುಗಿಲೆದ್ದ ಸಾಮೂಹಿಕ ಪ್ರಜ್ಞೆಯ ಒತ್ತಾಯವಾಗಿತ್ತು. ಆನಂತರ, ಜಾರಿಯಲ್ಲಿದ್ದ ಅತ್ಯಾಚಾರ ಕಾನೂನಿಗೆ ಮತ್ತಷ್ಟು ತಿದ್ದುಪಡಿ ಮಾಡಲಾಯಿತು. ಆದರೆ, ನಂತರವೂ ವಯಸ್ಸಿನ
ಬೇಧವಿಲ್ಲದೆ ಹೆಣ್ಣು ಮಕ್ಕಳು ಈ ಅಪರಾಧಕ್ಕೆ ಗುರಿಯಾಗುತ್ತಿದ್ದಾರೆ. ಅತ್ಯಾಚಾರದ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಲು ಈಗ ಅತ್ಯಂತ ಕಠಿಣವಾದ ಕಾನೂನುಗಳಿವೆ. ಅತ್ಯಂತ ಕಠಿಣ ಶಿಕ್ಷೆಗಳೂ ಇವೆ.

ಶಿಕ್ಷೆಯಾಗಬೇಕಾದರೆ, ಅಪರಾಧ ಅನುಮಾನಕ್ಕೆ ಆಸ್ಪದವಿಲ್ಲದಂತೆ ಸಾಬೀತು ಪಡಿಸಬೇಕು. ಈ ಅಪರಾಧ ಸಾಮಾನ್ಯವಾಗಿ, ಸಾಕ್ಷಿಗಳು ಯಾರೂ ಇಲ್ಲದೆಡೆಯಲ್ಲಿಯೇ ನಡೆಯುವುದರಿಂದ, ಈ ಅಪರಾಧಕ್ಕೆ ಪ್ರತ್ಯಕ್ಷ
ಸಾಕ್ಷಿಗಳು ದೊರೆಯುವುದು ತೀರ ಅಪರೂಪ. ವೈದ್ಯಕೀಯ ವರದಿ ಮತ್ತು ಇತರ ಸಾಕ್ಷಿಗಳು ಮತ್ತು ಸಾಕ್ಷ್ಯಗಳ ಆಧಾರದಿಂದಲೇ ಅಪರಾಧ ಸಾಬೀತಾಗಬೇಕು. ಅವುಗಳಲ್ಲಿ ಪ್ರಮುಖವಾದದ್ದು ವೈದ್ಯಕೀಯ ವರದಿ.

ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಭಾರತ ದಂಡ ಸಂಹಿತೆಯ (ಇಂಡಿಯನ್ ಪೀನಲ್ ಕೋಡ್) 375 ರಿಂದ
376ಇ ವರೆಗಿನ ಪ್ರಕರಣಗಳು ಅನ್ವಯಿಸುತ್ತವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ನಿತ್ಯ 96 ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ನೂರು ಪ್ರಕರಣಗಳ
ಪೈಕಿ ತೊಂಬತ್ತುನಾಲ್ಕು ಪ್ರಕರಣಗಳಲ್ಲಿ ಅತ್ಯಾಚಾರ ನಡೆಯುವುದು ಪರಿಚಯವಿರುವವರಿಂದ! ನೆರೆಯವರು,
ಪರಿಚಿತರು, ತಂದೆ ಮತ್ತು ಬಂಧುಗಳಿಂದ.

ಅತ್ಯಾಚಾರಕ್ಕೆ ಇಷ್ಟೊಂದು ಮಹಿಳೆಯರು ಗುರಿಯಾಗುತ್ತಿದ್ದರೂ, ಶಿಕ್ಷೆಗೆ ಗುರಿಯಾಗುತ್ತಿರುವ ಅತ್ಯಾಚಾರಿಗಳ ಸಂಖ್ಯೆ ಅತ್ಯಲ್ಪ. ಶೇಕಡಾ 94 ರಷ್ಟು ಪ್ರಕರಣಗಳಲ್ಲಿ ಅತ್ಯಾಚಾರಿಗಳ ಅಪರಾಧ ಸಾಬೀತಾಗದೆ ಅಪರಾಧಿಗಳ ಬಿಡುಗಡೆಯಾಗುತ್ತಿದೆ. ವರದಿಯಾಗುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ಶಿಕ್ಷೆಗೊಳಗಾಗುವವರ
ಸಂಖ್ಯೆ ಹೆಚ್ಚಾಗಿಲ್ಲ. ಇದಕ್ಕೆ ಕಾರಣ ಅತ್ಯಾಚಾರಕ್ಕೆ ಒಳಗಾದ ಕೂಡಲೇ, ಅತ್ಯಾಚಾರಕ್ಕೆ ಒಳಗಾದವರು ಕೈಗೊಳ್ಳಬೇಕಾದಕ್ರಮಗಳ ಬಗ್ಗೆ ಅರಿವು ಇಲ್ಲದೆ ಇರುವುದು. ಇದರಿಂದಾಗಿ, ಅಪರಾಧ ಸಾಬೀತು ಪಡಿಸಲು ಅಗತ್ಯವಾದ ಮುಖ್ಯ ಸಾಕ್ಷ್ಯಗಳು ನಾಶವಾಗಿಬಿಡುತ್ತವೆ.

ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಗೆ ತನಗಿರುವ ಹಕ್ಕುಗಳ ಬಗ್ಗೆ ತಿಳಿದಿರುವುದಿಲ್ಲ. ಅನೇಕ ಬಾರಿ ಕಾನೂನು ಪ್ರಕ್ರಿಯೆಗೆ ಹೆದರಿ ಸುಮ್ಮನಾಗುವುದೂ ಒಂದು ಕಾರಣ. ಈ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರ ಮೇಲ್ಮನವಿ
ಸಲ್ಲಿಸದೆ ಇದ್ದಿದ್ದರೆ, ಈ ಪ್ರಕರಣವೂ ನ್ಯಾಯ ದೊರೆಯದ ಅನೇಕ ಪ್ರಕರಣಗಳಲ್ಲಿ ಒಂದಾಗುತ್ತಿತ್ತು. ಆದರೆ ಈ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ, ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತು.

ಸಂತ್ರಸ್ತೆಯ ಪರವಾಗಿ ವಾದಮಾಡುತ್ತಾ, ರಾಜ್ಯದ ವಕೀಲರಾದ ನಮಿತಾ ಮಹೇಶ್ ಅವರು, ‘ಸಲ್ಲಿಸಿರುವ
ಸಾಕ್ಷ್ಯಗಳನ್ನು ವಿಶ್ಲೇಷಿಸುವಲ್ಲಿ ಅಧೀನ ನ್ಯಾಯಾಲಯ ವಿಫಲವಾಗಿದೆ. ಅತ್ಯಾಚಾರಕ್ಕೆ ಒಳಗಾದವಳು ಅಪ್ರಾಪ್ತ ವಯಸ್ಕಳಾಗಿದ್ದರೆ ಮತ್ತು ಅವಳ ಸಾಕ್ಷ್ಯ ನ್ಯಾಯಾಲಯ ನಂಬಿಕೆ ಇರಿಸುವಂಥದ್ದಾಗಿದ್ದರೆ, ನ್ಯಾಯಾಲಯ ಆ
ಸಾಕ್ಷ್ಯವನ್ನು ಪರಿಗಣಿಸಬೇಕಾಗುತ್ತದೆ. ಆರೋಪವನ್ನು ಸಂದೇಹಕ್ಕೆ ಆಸ್ಪದವಿಲ್ಲದಂತೆ ರುಜುವಾತು ಪಡಿಸಿಲ್ಲ ಎಂಬ ನಿರ್ಧಾರಕ್ಕೆ ಬರುವುದಕ್ಕೆ ಮುಂಚೆ ಸಂತ್ರಸ್ತೆ ಅಪ್ರಾಪ್ತ ವಯಸ್ಕಳಾಗಿದ್ದಳು ಎಂಬುದನ್ನು ಮರೆಯಬಾರದು. ಇದಕ್ಕೆ ಪೂರಕ ಸಾಕ್ಷ್ಯವಾಗಿ ವೈದ್ಯಕೀಯ ಸಾಕ್ಷ್ಯ ಬೇಕಾಗಿಯೇ ಇಲ್ಲ’ ಎಂದು ವಾದಿಸಿದರು.

ಆದರೆ ಆರೋಪಿಯ ಪರ ವಾದಿಸಿದ ವಕೀಲ ಪಿ.ಬಿ. ಉಮೇಶ್ ಅವರು, ‘ಅಧೀನ ನ್ಯಾಯಾಲಯ ಮೌಖಿಕ ಮತ್ತು ದಸ್ತಾವೇಜೀಯ ಸಾಕ್ಷ್ಯಗಳೆಲ್ಲವನ್ನೂ ಪರಿಗಣಿಸಿದೆ ಮತ್ತು ಅತ್ಯಾಚಾರ ನಡೆದಿರುವುದರ ಬಗ್ಗೆಯೇ
ಅನುಮಾನ ವ್ಯಕ್ತ ಪಡಿಸಿದೆ. ಹಾಗಾಗಿ, ಅಧೀನ ನ್ಯಾಯಾಲಯದ ತೀರ್ಪನ್ನು ಬದಲಾಯಿಸಲು
ಯಾವುದೇ ಸಮರ್ಪಕ ಹಾಗೂ ಪೂರಕ ಸಾಕ್ಷ್ಯಗಳು ಇಲ್ಲ. ಆದ್ದರಿಂದ, ಮೇಲ್ಮನವಿಯನ್ನು ವಜಾ ಮಾಡಬೇಕು’ ಎಂದು ಕೋರಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ನ್ಯಾಯಮೂರ್ತಿ ರವಿ ಮಳಿಮಠ್ ಮತ್ತು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು, ‘ಆರೋಪಿ ಮತ್ತು ಸಂತ್ರಸ್ತೆಯ ಕುಟುಂಬಗಳ ನಡುವೇ ಯಾವುದೇ
ಹಗೆತನವಿಲ್ಲ. ಹಗೆತನವಿಲ್ಲದ ಕಾರಣ, ಸಂತ್ರಸ್ತೆಯ ತಾಯಿಗೆ ಆರೋಪಿಯನ್ನು ಸುಳ್ಳು ಆರೋಪದಲ್ಲಿ ಸಿಕ್ಕಿಸಬೇಕೆಂಬ ಯಾವುದೇ ಉದ್ದೇಶವಿರಲು ಸಾಧ್ಯವಿಲ್ಲ. ಅಲ್ಲದೆ, ಅಪರಾಧಕ್ಕೆ ಗುರಿಯಾದವಳನ್ನೇ ಅಪರಾಧಿಯೆಂದು ನೋಡುವ ಈ ಸಮಾಜದಲ್ಲಿ, ಯಾವ ತಾಯಿಯೂ ತನ್ನ ಮಗಳು ಇಂಥದ್ದೊಂದು ಹೇಯವಾದ ಅಪರಾಧಕ್ಕೆ ಗುರಿಯಾಗಿದ್ದಾಳೆಂದು ಸುಳ್ಳು ಆರೋಪವನ್ನು ಮಾಡುವುದಿಲ್ಲ ಎಂಬುದನ್ನೂ
ಗಮನದಲ್ಲಿ ಇಟ್ಟುಕೊಳ್ಳಬೇಕು’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಜೊತೆಗೆ, ‘ಸಂತ್ರಸ್ತೆಯ ಸಾಕ್ಷ್ಯ ನಂಬಬಹುದಾದದ್ದು ಎಂದು ನ್ಯಾಯಾಲಯಕ್ಕೆ ಮನದಟ್ಟಾದರೆ,
ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿದೆ ಎಂಬ ತೀರ್ಮಾನಕ್ಕೆ ಬರಬಹುದು’ ಎಂದು ಸರ್ವೋಚ್ಚ
ನ್ಯಾಯಾಲಯ ಅನೇಕ ಮೊಕದ್ದಮೆಗಳಲ್ಲಿ ಅಭಿಪ್ರಾಯಪಟ್ಟಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ. “ಆರೋಪಿಯ ವಕೀಲರು ಹಾಜರುಪಡಿಸಿದ ಸಾಕ್ಷ್ಯಗಳನ್ನು ಪರಿಗಣಿಸುವಲ್ಲಿ ತಪ್ಪು ಎಸಗಿದ್ದಾರೆ ಮತ್ತು ಎರಡೂ ಕುಟುಂಬಗಳ
ನಡುವೆ ಹಗೆತನವಿತ್ತು ಎಂಬ ತಪ್ಪು ನಿರ್ಧಾರಕ್ಕೆ ಅಧೀನ ನ್ಯಾಯಾಲಯ ಬಂದಿದೆ. ಆದರೆ ಇದಕ್ಕೆ
ದಾಖಲೆಗಳಲ್ಲಿ ಯಾವುದೇ ಆಧಾರವಿಲ್ಲ ಮತ್ತು ಸಾಕ್ಷ್ಯಗಳ ನಡುವೆ ಇರುವ ಸಣ್ಣ ಪುಟ್ಟ ವ್ಯತ್ಯಾಸಗಳನ್ನೇ ದೊಡ್ಡದನ್ನಾಗಿ ಮಾಡಲಾಗಿದೆ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ತೀರ್ಪನ್ನು ವಿಪರ್ಯಯಗೊಳಿಸುವುದು ಅಗತ್ಯವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಾಲಯ ತನ್ನ ಈ ನಿಲುವಿಗೆ ಸಮರ್ಥನೆಯಾಗಿ ಸರ್ವೋಚ್ಚ ನ್ಯಾಯಾಲಯದ ಅನೇಕ ತೀರ್ಪುಗಳನ್ನು
ಉದ್ಧರಿಸಿ, ಆರೋಪಿ ನಿರಪರಾಧಿ ಎಂದು ನೀಡಿದ ಅಧೀನ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿ
ಆರೋಪಿಯನ್ನು ಏಳು ವರ್ಷಗಳ ಕಠಿಣ ಕಾರಾವಾಸ ಶಿಕ್ಷೆಗೆ ಒಳಪಡಿಸಿದೆ. ಅಲ್ಲದೆ, ಸಂತ್ರಸ್ತೆಗೆ ಆರೋಪಿ
ಎರಡು ಲಕ್ಷ ರೂಗಳನ್ನು ಜುಲ್ಮಾನೆಯಾಗಿ ನೀಡಬೇಕೆಂದು, ನೀಡಲು ತಪ್ಪಿದರೆ ಹೆಚ್ಚುವರಿಯಾಗಿ ಮತ್ತೆ ಒಂದು ವರ್ಷ ಕಠಿಣ ಕಾರಾಗೃಹವಾಸ ಶಿಕ್ಷೆಗೆ ಒಳಪಡಬೇಕೆಂದು ಸಹ ತೀರ್ಪು ನೀಡಿದೆ.

ಈ ಪ್ರಕರಣದಲ್ಲಿ ಉಲ್ಲೇಖಿಸಿರುವ ಸರ್ವೋಚ್ಚ ನ್ಯಾಯಾಲಯದ ಅನೇಕ ತೀರ್ಪುಗಳಲ್ಲಿ, ತನ್ನ ನಿಲುವು ಮತ್ತು ಕಾರಣಗಳನ್ನು ಸ್ಪಷ್ಟಪಡಿಸಿದೆ. ಇವೆಲ್ಲವೂ, ಈ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಸಮರ್ಥಿಸುತ್ತವೆ. ಆದರೂ, ಮೇಲ್ಮನವಿಯಲ್ಲಿ ವಿಪರ್ಯಯಗೊಳಿಸುವ ಇಂಥ ತೀರ್ಪುಗಳನ್ನು ವಿಚಾರಣಾ ನ್ಯಾಯಾಲಯಗಳು ಏಕೆ ನೀಡುತ್ತವೆ ಎಂಬುದಕ್ಕೆ ಕಾರಣಗಳು ತಿಳಿಯುವುದೇ ಇಲ್ಲ.

ಉಚ್ಚ ನ್ಯಾಯಾಲಯದ ಈ ತೀರ್ಪು ಮತ್ತು ಇಂಥ ಪ್ರತಿಯೊಂದು ತೀರ್ಪು ಸಹ ಅತ್ಯಾಚಾರ ಅಪರಾಧ
ಪ್ರಕರಣಗಳಲ್ಲಿ ಸಂತ್ರಸ್ತರಾದ ಮಹಿಳೆಯರಿಗೆ ನ್ಯಾಯ ಒದಗಿಸುವ ಪ್ರಯತ್ನಗಳಲ್ಲಿ ತೊಡಗಿರುವ ವ್ಯಕ್ತಿಗಳ ಮತ್ತು ಸಂಘ ಸಂಸ್ಥೆಗಳ ಹೋರಾಟಗಳಿಗೆ ಹೆಚ್ಚಿನ ಬಲ ನೀಡುತ್ತದೆ.

-ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *