Latestಅಂಕಣ

ಕಾನೂನು ಕನ್ನಡಿ/ ಅತ್ಯಾಚಾರ ನಿಯಂತ್ರಣಕ್ಕೆ ಶೀಘ್ರ ತೀರ್ಪು, ಕಠಿಣ ಶಿಕ್ಷೆ- ಡಾ.ಗೀತಾ ಕೃಷ್ಣಮೂರ್ತಿ

ಕಾನೂನಿನ ಮುಖ್ಯ ಉದ್ದೇಶ, ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಮೂಲಕ, ಶಿಕ್ಷೆಯ ಭಯ ಹುಟ್ಟಿಸಿ, ಮುಂದೆ ಸಮಾಜದಲ್ಲಿ ಅಪರಾಧಗಳಾಗದಂತೆ ತಡೆಯುವುದು ಅಥವಾ ಅಪರಾಧಗಳನ್ನು ನಿಯಂತ್ರಿಸುವುದು. ಅನೇಕ ಪ್ರಕರಣಗಳಲ್ಲಿ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಗುರುತರ ಅಪರಾಧ ಮಾಡಿದ ವ್ಯಕ್ತಿಯೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡುಬಿಡುವ ಸಾಧ್ಯತೆಗಳಿವೆ. ಅಂಥ ಸಂದರ್ಭಗಳಲ್ಲಿ ಜನತೆಗೆ ಕಾನೂನು ವ್ಯವಸ್ಥೆಯ ಮೇಲಿರುವ ನಂಬಿಕೆಗೇ ಕೊಡಲಿ ಪೆಟ್ಟು ಬೀಳುತ್ತದೆ. ಹಾಗಾಗದಂತೆ ಆಗಬೇಕಾದರೆ, ಅಪರಾಧಿಗಳ ಶೀಘ್ರ ಮತ್ತು ನಿಷ್ಪಕ್ಷಪಾತ ವಿಚಾರಣೆಯಾಗುವಂತೆ, ಸಾಕ್ಷ್ಯಾಧಾರಗಳು ನಾಶವಾಗದಂತೆ ನೋಡಿಕೊಳ್ಳುವುದು ಮತ್ತು ಶೀಘ್ರವಾಗಿ ತೀರ್ಪು ಹೊರಬೀಳುವುದು ಅಗತ್ಯವಾಗುತ್ತದೆ.

ಸಮಾಜದ ನೈತಿಕ ಪ್ರಜ್ಞೆಯನ್ನೇ ಅದರ ಬುಡ ಸಮೇತ ಅಲುಗಾಡಿಸಿಬಿಡುವ ಅತ್ಯಂತ ಹೇಯ ಕೃತ್ಯವೆಂದರೆ ಅತ್ಯಾಚಾರ. ಆದರೆ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿ ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ, ಅಂಥ ಅಪರಾಧಗಳ ಸಂಖ್ಯೆಗೆ ಹೋಲಿಸಿದಾಗ ಬಹಳ ಕಡಿಮೆ ಎಂಬುದು ಒಂದು ವಿಪರ್ಯಾಸ. ಇದಕ್ಕೆ ಕಾರಣ, ಕೃತ್ಯ ನಡೆದ ದಿನ, ತನಿಖೆ ಮತ್ತು ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ದಿನಗಳಲ್ಲಿ ಇರುವ ಅಗಾಧ ಅಂತರ ಮತ್ತು ಈ ಅಂತರದಲ್ಲಿ ಸಾಕ್ಷ್ಯಾಧಾರಗಳ ನಾಶದ ಸಂಭಾವ್ಯತೆ. ಆದರೆ ಎಲ್ಲ ಹಂತಗಳಲ್ಲೂ ನಿಷ್ಪಕ್ಷಪಾತವಾದ, ಪ್ರಾಮಾಣಿಕವಾದ ತನಿಖೆ ನಡೆದು, ಸಾಕ್ಷ್ಯಾಧಾರಗಳು ನಾಶವಾಗದಂತೆ ನೋಡಿಕೊಂಡಲ್ಲಿ ಅಪರಾಧಿ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಇತ್ತೀಚೆಗೆ ಅತ್ಯಾಚಾರದ ಪ್ರಕರಣದಲ್ಲಿ, ಮಧ್ಯ ಪ್ರದೇಶದ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ನ್ಯಾಯಾಂಗದಲ್ಲಿರುವ ಭರವಸೆಯನ್ನು ಮತ್ತೊಮ್ಮೆ ಬಲಪಡಿಸಿದೆ.

ಪ್ರಸ್ತುತ ಅಪರಾಧ ನಡೆದದ್ದು 2018 ರ ಜುಲೈ 1 ರಂದು. ವಿಚಾರಣೆ ನಡೆದು, 2018 ರ ಸೆಪ್ಟೆಂಬರ್ 19 ರಂದು ವಿಚಾರಣಾ ನ್ಯಾಯಾಲಯ ಆರೋಪಿಯನ್ನು ದೋಷಿಯೆಂದು ಘೋಷಿಸಿ, ಅವನಿಗೆ ಮರಣ ದಂಡನೆಯ ಶಿಕ್ಷೆಯನ್ನು ವಿಧಿಸಿತು. ಇದನ್ನು ಪ್ರಶ್ನಿಸಿ ಸಲ್ಲಿಸಿದ ಅಪೀಲಿನ ವಿಚಾರಣೆಯನ್ನು ಕೇವಲ ನಾಲ್ಕು ತಿಂಗಳಲ್ಲೇ ಪೂರ್ಣಗೊಳಿಸಿದ ಉಚ್ಚ ನ್ಯಾಯಾಲಯ ಆರೋಪಿಯ ಮರಣದಂಡನೆಯನ್ನು ದೃಢೀಕರಿಸಿ ತೀರ್ಪು ಪ್ರಕಟಿಸಿದೆ.

ಈ ಪ್ರಕರಣದಲ್ಲಿ, ಸಂತ್ರಸ್ತೆ ಕೇವಲ ನಾಲ್ಕು ವರ್ಷಗಳ ಎಳೆಯ ಬಾಲಕಿ. ಕ್ರೌರ್ಯದ ಕಾಗುಣಿತವನ್ನೂ ಅರಿಯದವಳು. ಅಂಥ ಮಗುವಿನ ಮೇಲೆ ನಡೆದ ಕ್ರೌರ್ಯವಾದರೂ ಎಂಥದ್ದು?
2018 ರ ಜುಲೈ 1 ರ ರಾತ್ರಿ, ಸಂತ್ರಸ್ತೆ ತನ್ನ ತಂದೆಯೊಡನೆ ಮನೆಯ ಅಂಗಳದಲ್ಲಿ ಹಾಕಿದ್ದ ಮಂಚದ ಮೇಲೆ ಮಲಗಿದ್ದಳು. ರಾತ್ರಿ ಹತ್ತು ಗಂಟೆಯ ವೇಳೆಯಲ್ಲಿ ಆರೋಪಿ ಅವಳ ತಂದೆ ಪ್ರಹ್ಲಾದ್ ಸಿಂಗ್‍ನನ್ನು ಭೇಟಿ ಮಾಡಿ ಮಾತಾಡಲೆಂದು ಮಹೇಂದ್ರ ಸಿಂಗ್ ಬಂದ. ಮಾತುಕತೆಯ ನಂತರ ಅಲ್ಲಿಂದ ತೆರಳಿದ. ಸುಮಾರು 12 ಗಂಟೆಯ ಹೊತ್ತಿಗೆ ಸಂತ್ರಸ್ತೆಯ ತಂದೆ ಮೂತ್ರ ವಿಸರ್ಜನೆಗೆಂದು ಕೊಳದ ಬಳಿಗೆ ಹೋದ. ಆಗ ಸಂತ್ರಸ್ತೆಯೊಬ್ಬಳೇ ಮಂಚದ ಮೇಲೆ ಮಲಗಿದ್ದಳು. ಆದರೆ ಆತ ಹಿಂದಿರುಗಿ ಬಂದಾಗ ಸಂತ್ರಸ್ತೆ ಅಲ್ಲಿರಲಿಲ್ಲ. ಆಕೆಗಾಗಿ ಅವಳ ತಂದೆ ಹಾಗೂ ಮನೆ ಮಂದಿಯೆಲ್ಲ ಹುಡುಕಾಟ ನಡೆಸಿದರು. ಕೆಲ ಹೊತ್ತಿನ ನಂತರ ಆಕೆ ಧೀರ್‍ಸಿಂಗ್ ಎಂಬಾತನಿಗೆ ಸೇರಿದ ಹೊಲದಲ್ಲಿ, ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾಣ ಸಿಕ್ಕಿದಳು. ಆಕೆ ಒಬ್ಬಳೇ ಇದ್ದ ಸಂದರ್ಭವನ್ನು ಉಪಯೋಗಿಸಿಕೊಂಡು ಅವಳನ್ನು ಹೊತ್ತೊಯ್ದು ಆರೋಪಿ ಅವಳ ಮೇಲೆ ಅತ್ಯಾಚಾರ ನಡೆಸಿದ್ದ. ಆಕೆ ಒಳ ಉಡುಪು ಧರಿಸಿರಲಿಲ್ಲ. ಆಕೆಯ ಫ್ರಾಕ್ ಮೇಲೆ ರಕ್ತದ ಕಲೆಗಳಿತ್ತು ಮತ್ತು ಆಕೆಯ ಗುಪ್ತಾಂಗದಿಂದ ರಕ್ತ ಒಸರುತ್ತಿತ್ತು. ಆಕೆ ಚೀರದಂತೆ ಒಂದು ಕೈಯಿಂದ ಮಗುವಿನ ಬಾಯಿ ಮುಚ್ಚಿ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದುದು ಸ್ಪಷ್ಟವಿತ್ತು. ಆಕೆಯ ಮನೆಯವರು ಪೊಲೀಸರಿಗೆ ಈ ಬಗ್ಗೆ ತಿಳಿಸಿ ಆಕೆಯನ್ನು ಆಸ್ಪತ್ರೆಗೆ ಕರೆತಂದಿದ್ದರು. ಪೊಲೀಸರೂ ಸಹ ಅದೇ ಸಮಯಕ್ಕೆ ಆಸ್ಪತ್ರೆ ತಲುಪಿದರು. ಕೂಡಲೇ ಆರೋಪಿಯ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡರು. ಮಗುವಿನ ಪರಿಸ್ಥಿತಿ ಗಂಭೀರವಾಗಿದ್ದುದರಿಂದ ಅಲ್ಲಿಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ದೆಹಲಿಯ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ಗೆ ಕಳುಹಿಸಿದರು. ಆ ನಂತರದಲ್ಲಿ ಸೂಕ್ತ ವಿಚಾರಣೆಯ ನಂತರ, ನ್ಯಾಯಾಲಯದಲ್ಲಿ ಆರೋಪಿಯ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಲಾಯಿತು. ಆರೋಪಿ ತನ್ನ ಮೇಲೆ ಹೊರಿಸಿದ್ದ ಎಲ್ಲ ಆರೋಪಗಳನ್ನೂ ನಿರಾಕರಿಸಿದ. ಎರಡೂ ಕುಟುಂಬಗಳ ನಡುವೆ ಇದ್ದ ದ್ವೇಷದಿಂದ ತನ್ನ ಮೇಲೆ ಇಂಥ ಆರೋಪ ಹೊರಿಸಲಾಗುತ್ತಿದೆಯೆಂದು ದೂರಿದ.

ಆದರೆ, ವಿಚಾರಣಾ ನ್ಯಾಯಾಲಯ, ಸಂತ್ರಸ್ತೆಯ ಹಾಗೂ ಆಕೆಯ ಕುಟುಂಬದ ಸದಸ್ಯರ ಹೇಳಿಕೆ, ವೈದ್ಯಕೀಯ ಹಾಗೂ ಡಿಎನ್‍ಎ ಪರೀಕ್ಷೆಯ ವರದಿಗಳನ್ನು ಆಧರಿಸಿ ಆರೋಪಿಯನ್ನು ದೋಷಿ ಎಂದು ಪರಿಗಣಿಸಿ ಅವನಿಗೆ ಮರಣದಂಡನೆಯನ್ನು ವಿಧಿಸಿತು.

ಈ ತೀರ್ಪಿನ ವಿರುದ್ಧ ಆರೋಪಿ ಉಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿ, ತಾನು ನಿರ್ದೋಷಿಯೆಂದೂ, ತಾನು ಅತ್ಯಾಚಾರವೆಸಗದೇ ಇದ್ದರೂ ತನ್ನನ್ನು ಇದರಲ್ಲಿ ಅಪರಾಧಿಯನ್ನಾಗಿ ಮಾಡಲಾಗಿದೆಯೆಂದೂ ವಾದ ಮಂಡಿಸಿದ. ಆದರೆ ಪ್ರಕರಣದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನಂತರ ಮತ್ತು ವಾದ ವಿವಾದಗಳನ್ನು ಆಲಿಸಿದ ನಂತರ ಉಚ್ಚ ನ್ಯಾಯಾಲಯ ಆರೋಪಿಯ ವಾದವನ್ನು ತಳ್ಳಿ ಹಾಕಿತು. ತಾನೇ ಸಂತ್ರಸ್ತೆಯ ಮೇಲೆ ಅತ್ಯಾಚಾರೆಸಗಿದೆ ಎಂಬುದನ್ನು ಆರೋಪಿಯೇ ಆ ಗ್ರಾಮದ ಇಬ್ಬರ ಮುಂದೆ ಹೇಳಿದ್ದಾನೆ ಮತ್ತು ಆ ಇಬ್ಬರೂ ಅಪರಾಧಿ ಹಾಗೆಂದು ಹೇಳಿದ್ದು ನಿಜವೆಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಆತನ ಹೇಳಿಕೆಯ ಮೇಲೆಯೇ ಪೊಲೀಸರು ಸಂತ್ರಸ್ತೆ ರಕ್ತಸಿಕ್ತ ಒಳ ಉಡುಪುಗಳನ್ನು ವಶಕ್ಕೆ ಪಡೆದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಸಂತ್ರಸ್ತೆ ತಾನೇ, ಆರೋಪಿಯೇ ತನ್ನ ಮೇಲೆ ಅತ್ಯಾಚಾರವೆಸಗಿದ್ದು ಎಂಬುದನ್ನು ದೃಢಪಡಿಸಿದ್ದಾಳೆ.

ತನ್ನ ಕಕ್ಷಿದಾರ ಇನ್ನೂ 28 ವರ್ಷ ವಯಸ್ಸಿನವನೆಂದೂ, ಆತನ ಚಿಕ್ಕ ವಯಸ್ಸನ್ನು ಪರಿಗಣಿಸಿ ಮರಣದಂಡನೆಯ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಾಟು ಮಾಡಬೇಕೆಂಬ ಅಪರಾಧಿಯ ಪರ ವಕೀಲರ ವಾದವನ್ನು ನ್ಯಾಯಮೂರ್ತಿ ಪಿಕೆ ಜೈಸ್ವಾಲ್ ಮತ್ತು ನ್ಯಾಯಮೂರ್ತಿ ಅಂಜುಲಿ ಪಾಲೋ ಅವರ ನ್ಯಾಯಪೀಠ ತಳ್ಳಿ ಹಾಕಿದೆ.

ಈ ಎಲ್ಲ ಅಂಶಗಳನ್ನು ಆಧರಿಸಿ, ಆರೋಪಿಯೇ ಎಳೆಯ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಅಪರಾಧಿ ಎಂಬ ನಿರ್ಣಯಕ್ಕೆ ನ್ಯಾಯಾಲಯ ಬಂದಿತು ಮತ್ತು ವಿಚಾರಣಾ ನ್ಯಾಯಾಲಯ ವಿಧಿಸಿದ ಮರಣ ದಂಡನೆಯ ಶಿಕ್ಷೆಯನ್ನು ದೃಢಪಡಿಸಿತು. ಭಾರತ ದಂಡ ಸಂಹಿತೆಯ 363 ಮತ್ತು 376(ಎ)(ಬಿ) ಪ್ರಕರಣಗಳ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ನೀಡುವ ಅಧಿನಿಯಮದ 5(ಜೆ)(ಎನ್) ಪ್ರಕರಣದ ಅಡಿಯಲ್ಲಿ ಅಪರಾಧಿಗೆ ಮರಣದಂಡನೆಯನ್ನು ದೃಢೀಕರಿಸಿದೆ.

“ ದಂಡನೆಯನ್ನು ವಿಧಿಸುವಾಗ, ಆರೋಪಿಯ ವಯಸ್ಸನ್ನು, ಅವನ ಕುಟುಂಬದ ಹಿನ್ನೆಲೆಯನ್ನು, ಆತ ಈ ಹಿಂದೆ ಯಾವುದೇ ಅಪರಾಧವನ್ನು ಮಾಡಿಲ್ಲ ಎಂಬ ಅಂಶವನ್ನು ಪರಿಗಣಿಸಲಾಗದು. ಈ ಯಾವುವೇ ಅಂಶಗಳೂ ಅವನು ಮಾಡಿದ ಅಪರಾಧದ ಹೇಯ ಸ್ವರೂಪವನ್ನು ಮತ್ತು ಅಪರಾಧ ಮಾಡುವ ಸಮಯದಲ್ಲಿ ಅವನು ತೋರಿದ ಕ್ರೌರ್ಯವನ್ನು ಕಡಿಮೆ ಮಾಡುವುದಿಲ್ಲ. ಅಪರಾಧಿಗೆ ಅನುಕಂಪ ತೋರುವ ಭರದಲ್ಲಿ ಸಂತ್ರಸ್ತೆ ಹಾಗೂ ಆಕೆಯ ಕುಟುಂಬದವರು ಅನುಭವಿಸಿದ ನೋವನ್ನು ಕಡೆಗಣಿಸಲಾಗದು” ಎಂದು ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯವನ್ನು ನ್ಯಾಯಮೂರ್ತಿಗಳು ಉದ್ಧರಿಸಿದ್ದಾರೆ.
12 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಎಸಗಿದ ಅಪರಾಧಕ್ಕೆ ಮರಣದಂಡನೆಯ ಶಿಕ್ಷೆಯನ್ನು, 2018 ರಲ್ಲಿ ಆಪರಾಧಿಕ ಕಾನೂನುಗಳಿಗೆ ಮಾಡಿದ ತಿದ್ದುಪಡಿಯ ಮೂಲಕ, ಕಲ್ಪಿಸಲಾಯಿತು. ಇದು ಜಾರಿಗೆ ಬಂದ ನಂತರ ಎರಡು ಪ್ರಕರಣಗಳಲ್ಲಿ ಮರಣದಂಡನೆಯ ಶಿಕ್ಷೆ ವಿಧಿಸಲಾಗಿತ್ತಾದರೂ ಮೇಲಿನ ನ್ಯಾಯಾಲಯ ಅದನ್ನು ರದ್ದುಗೊಳಿಸಿ, ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಿತ್ತು. ಈ ತಿದ್ದುಪಡಿ ಜಾರಿಗೊಂಡ ನಂತರದಲ್ಲಿ ಅಪರಾಧಿಗೆ ಮರಣದಂಡನೆಯ ಶಿಕ್ಷೆಯನ್ನು ವಿಧಿಸಿದ ಮೊದಲ ಪ್ರಕರಣ ಇದು.

“ಇತ್ತೀಚೆಗೆ ಇಂಥ ಅಮಾನವೀಯ ಅಪರಾಧಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸುಧಾರಣಾ ಕ್ರಮಗಳು ಸಂಪೂರ್ಣವಾಗಿ ವಿಫಲವಾಗಿವೆ. ಅಪರಾಧ ಎಷ್ಟು ಗುರುತರವಾದದ್ದೋ ಅದಕ್ಕೆ ವಿಧಿಸುವ ಶಿಕ್ಷೆಯೂ ಅಷ್ಟೇ ಕಠಿಣವಾದದ್ದಾಗಿರಬೇಕು. ವಿಧಿಸುವಂಥ ಶಿಕ್ಷೆ, ಸಮಾಜ ಇಂಥ ಅಪರಾಧಗಳನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನೂ ರವಾನಿಸಬೇಕು” ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
“ಅಪರಾಧವನ್ನು ಮಾಡಿದ ವ್ಯಕ್ತಿ ಒಬ್ಬ ಶಿಕ್ಷಕ. ಆತನ ನಡೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ರಾಷ್ಟ್ರದ ಮಕ್ಕಳ ನಡತೆಯನ್ನು ರೂಪಿಸಬೇಕಾದಂಥ ಸ್ಥಾನದಲ್ಲಿರುವ ವ್ಯಕ್ತಿಯಿಂದ ಇಂಥ ಹೇಯ ಅಪರಾಧ ಘಟಿಸಿರುವುದನ್ನು ಊಹಿಸಲೂ ಸಾಧ್ಯವಿಲ್ಲ. ಇದು ನೈತಿಕ ಅಧಃಪತನವೆನಿಸುತ್ತದೆ” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಶಿಕ್ಷೆಯ ಭಯವಿದ್ದ ಹೊರತು ಅಪರಾಧಗಳ ಸಂಖ್ಯೆ ಕಡಿಮೆಯಾಗುವುದಿಲ್ಲ. ಶಿಕ್ಷೆ ಕಠಿಣವಾದಷ್ಟೂ ಭಯದ ಪ್ರಮಾಣ ಹೆಚ್ಚುತ್ತದೆ. ಹಾಗೆಯೇ ಆದಷ್ಟು ಶೀಘ್ರವಾಗಿ ಅಪರಾಧಿಗಳಿಗೆ ಶಿಕ್ಷೆಯಾದಾಗ ಜನತೆಗೆ ನ್ಯಾಯಾಂಗದಲ್ಲಿನ ವಿಶ್ವಾಸ ಹೆಚ್ಚುತ್ತದೆ. ಈ ದೃಷ್ಟಿಯಿಂದಲೂ ಈ ತೀರ್ಪು ಮಹತ್ವವಾದದ್ದು.

ಈ ಪ್ರಕರಣದಲ್ಲಿ, ಅಪರಾಧ ನಡೆದದ್ದು 2018 ರ ಜುಲೈ 1 ರಂದು.  ವಿಚಾರಣಾ ನ್ಯಾಯಾಲಯ ಅಪರಾಧಿಗೆ ಮರಣದಂಡನೆ ವಿಧಿಸಿದ್ದು 2018 ರ ಸೆಪ್ಟೆಂಬರ್ 19 ರಂದು!

ನಾಲ್ಕು ತಿಂಗಳೊಳಗೆ ಉಚ್ಚ ನ್ಯಾಯಾಲಯ ಅಪೀಲಿನ ವಿಚಾರಣೆಯನ್ನು ಹಾಗೂ ಮರಣದಂಡನೆಯ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ತೀರ್ಪು ಹೊರಬಿದ್ದದ್ದು 2019 ರ ಜನವರಿ 25 ರಂದು.! ಘಟನೆ ನಡೆದ ಆರು ತಿಂಗಳೊಳಗೆ!


ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *