ಕವಿತೆಯ ಕಥೆ- ವಿನಯ
ಕವಿತೆಯ ಕಥೆ
ಸಿಗ್ಗು ಸಂಜೆಯ ಪಯಣ
ಧಗ್ ಎನ್ನುವ ದಾರಿ ಸಾವರಿಕೆ
ಸುರಿವ ಧಗೆ ….. ಸುಳಿವ ಗಾಳಿ
ಕಳೆದುಹೋದಂತ ಅಲವರಿಕೆ
ಲೋಕಮಾನ್ಯರೆಲ್ಲ ತೂಕಡಿಸೋ ಹೊತ್ತು
ಅಂಬೆಗಾಲಿನ ಮುದ್ದು ಕೂಸೊಂದು ನಿರಿ ಜಗ್ಗಿ
ಏರಿತು ತೊಡೆಗೆ …. ಯಾವ ತಾಯಿಯದೋ
ತೊಡೆಮೆತ್ತೆಯಿಂದ ಜಾರಿ ಹೀಗೆ
ತಬ್ಬಿದೆ, ಅಪ್ಪಿದೆ, ಮಡಿಲಲ್ಲಿಟ್ಟು ನೆತ್ತಿ ನೇವರಿಸಿ
ಮುತ್ತಿಟ್ಟು
ಕಿಲುಗುಟ್ಟಿತು …. ಏನೆಂತೋ ತಿಳಿಯಿದು ….
ಬೆರಗು ಬೆರಗು
ಪಯಣಿಸುತ್ತಿದ್ದೆ ಸ್ವರ್ಗದ ಅಸೀಮ ಸೀಮೆಗೆ
ಎದೆಯೊತ್ತಿ ಮಲಗಿತ್ತು ಕೂಸು, ನೆದ್ದೆಯಲೆ
ತುಟಿ ಪಟಗುಟಿಸಿ
ಆ ಚಣವೆ ….. ಮೈಯ ನೆತ್ತರೆಲ್ಲ ಹಾಲಾಗಿ ಮೊಲೆ
ಬಿಗಿದರೆ
ಬಾಯೂಡದೆ ನೆದ್ದೆಯಲೆ ನಕ್ಕು
ನೇವರಿಸಿ ಆ ಗುಲಾಬಿ ಪಾದಗಳ
ಹೆತ್ತವಳ ಬಳುವಳಿಯಟ್ಟು ಗೆಜ್ಜೆಗಣ್ಣುಗಳ
ಬಿಗಿದ ಬೆರಳುಗಳ ಬಿಚ್ಚಿ ಮುತ್ತಿಟ್ಟು ಮುಚ್ಚಿದೆ
ಅಸದಳದ ಹೂ ಅರಳಿಸಿದ ಮರ ನಕ್ಕಿತು
ಹಾದಿಯುದ್ದ
ತೂಗಿತ್ತು ಜೋಂಪು? ಅರೆಗಳಿಗೆ
ಎಚ್ಚರಿಕೆ ಯಾಕಿಂಥ ಗಾಜುಗಣ್ಣು
ಒರಗಿತ್ತು ಕೂಸು. ಅದರ ತುಟಿಯ
ಪಸೆಯುಂಟು
ತೋಳಲ್ಲಿದೆ, ಬಿಗಿದ ಮೊಲೆಯಲಿ ಹಾಲುಕ್ಕಿ
ನೋವು ಒಳಗಲುಕಿದೆ
ಎತ್ತೊಯ್ದರೋಹಕ್ಕುದಾರರು ….
ಅರಸಲೆಲ್ಲಿ, ನನ್ನದಲ್ಲದ ಕೂಸ
ಎದೆಹಾಲ ಹಿಂಡಿ ಕಾಯಲಿಡು, ಕವಿತೆ ಬೆರೆ
ಎಂದಳು ಸಾರಾ ಶಗುಫ್ತ
ನಾನೋ ಕವಿತೆ ಬರೆಯಲಾಗದೆ ಕಥೆ ಬರೆದೆ

ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.