ಕವನ ಪವನ /ಹೌಸ್ ಹಸ್ಬೆಂಡ್ – ಅನು: ರೋಹಿಣಿ ಸತ್ಯ

ಹೌಸ್ ಹಸ್ಬೆಂಡ್

ಯು ಆರ್ ಫ್ರಮ್ ಮಾರ್ಸ್
ಐಯಾಮ್ ಫ್ರಮ್ ವೀನಸ್
ಎರಡು ಗ್ರಹಗಳ ವಾಸಿಗಳು ನಾವು
ಈ ಭೂಮಿಯಮೇಲೆ ಭೇಟಿಯಾಗಿದ್ದೇವೆ
ಎರಡು ಅಸ್ಮಿತೆಗಳು
ಒಂದು ಬದುಕಾಗಿ ಹುಟ್ಟುಪಡೆದಿದ್ದೇವೆ
ಈ ಲೋಕ
ನಿನಗು ನನಗು ಬೇರೆ ಬೇರೆ ಉಡುಗೆಗಳನ್ನು
ಕರ್ತವ್ಯದ ಕಿರೀಟಗಳನ್ನು ನೀಡಿದೆ
ಯುಗಗಳಿಂದ
ಯಾರ ಕಿರೀಟವನ್ನು ಅವರೇ ಧರಿಸಿದ್ದೇವೆ
ಅನಿವಾರ್ಯವಾಗಿ ಈಗ ಕಿರೀಟಗಳನ್ನು ಬದಲಾಯಿಸಿದ್ದೇವೆ


ಹೆರಿಗೆ ನೋವು ತಿಂದದ್ದು ನಾನಾದರೂ
ಬೆಟ್ಟದಷ್ಟು ದುಃಖವನ್ನು ಹೊತ್ತಿದ್ದು ನೀನು
ಕೂಸನ್ನು ಹೆತ್ತಿದ್ದು ನಾನಾದರೂ
ಅಂಗೈಯಲ್ಲಿ ಚಂದಿರನಂತೆ ಕಂಡಿದ್ದು ನೀನು
ಹಾಲು ಕೊಂಡು ತಂದದ್ದು ನಾನಾದರೂ
ಮಗುವಿಗೆ ಹಾಲೂಣಿಸಿದ್ದು ನೀನು
ಶಾಲೆಗೆ ಮಗುವಿಗೆ ಸಾಕ್ಸ್ ಹಾಕಿದ್ದು ನಾನಾದರೂ
ಘಟಿಕೋತ್ಸವದವರೆಗೂ ನಡೆಸಿದ್ದು ನೀನು
ಕುದುರೆಯ ಬೊಂಬೆಯನ್ನು ಕೊಂಡದ್ದು ನಾನಾದರೂ
ಕುದುರೆಯಾಗಿ ಸವಾರಿಯ ಹೇಳಿಕೊಟ್ಟದ್ದು ನೀನು

ಎಣ್ಣೆನೀರು ಹಾಕಿದ್ದು ನಾನಾದರೂ
ಹೊಸ ಶೈಲಿಯ ಜಡೆ ಹೆಣೆದು ಮಗುವನ್ನು ನಗಿಸಿದ್ದು ನೀನು
ಅಂಗಳದಲ್ಲಿ ರಂಗೋಲಿಯ ಬಿಡಿಸಿದ್ದು ನಾನಾನಾದರೂ
ಕಂದನ ಕೈಯಲ್ಲಿ ಗೋರಂಟಿಯ ಚಿತ್ರವ ಬರೆದದ್ದು ನೀನು
ಬಟ್ಟೆಯ ಕೊಂಡು ತಂದದ್ದು ನಾನಾದರೂ
ಬಣ್ಣ ಬಣ್ಣದ ವಿನ್ಯಾಸಗಳ ಉಡುಪು ಹೊಲೆಸಿದ್ದು ನೀನು
ಕಾರು ಕೊಂಡದ್ದು ನಾನಾದರೂ ಮನೆಯ ಡ್ರೈವರ್ ಆಗಿದ್ದು ನೀನು
ಆಟಗಳಲ್ಲಿ ಏಟು ಬಿದ್ದಿದ್ದು ಮಗುವಿಗಾದರು
ದಿಂಬು ಒದ್ದೆಯಾಗುವಂತೆ ಅತ್ತಿದ್ದು ನೀನು
ಅವಳು ದೊಡ್ಡವಳಾದಾಗ ದಾವಣಿ ಕೊಂಡದ್ದು ನಾನಾದರೂ
ಕ್ಷಣ ಕ್ಷಣ ಕಣ್ರೆಪ್ಪೆಯಂತೆ ಕಾವಲಾಗಿದ್ದು ನೀನು
ಮಗಳ ಮದುವೆಗೆ ಹಣಕಾಸು ಹೊಂದಿಸಿದ್ದು ನಾನಾದರೂ
ರಂಗು ಹಂಗಿನ ಪೂರ್ಣತೆಯ ನೀಡಿದ್ದು ನೀನು
ಅತ್ತೆಯ ಮನೆಗೆ ಕಳಿಸಿದ್ದು ನಾನಾದರೂ
ತವರ ಮನೆಗೆ ಹೆಸರು ತರುವಂತೆ ಬೆಳೆಸಿದ್ದು ನೀನು
ಅಪ್ಪನ ರೀತಿಯಲ್ಲಿ ಗಂಡ ಇಲ್ಲವೇಕೆಂದು ಮಗಳು ಮುನಿಸಿಕೊಂಡು ಬಂದಾಗ

ಕೂಗಿದ್ದು ನಾನಾದರೂ
ಅಳಿಯನನ್ನು ಅರ್ಥಮಾಡಿಸುವಲ್ಲಿ ನೆರವಾಗಿ ನಿಂತದ್ದು ನೀನು
ಹೌದು…ದುಡಿಯುತ್ತಿರುವ ಅಮ್ಮ ನಾನು
ಸಕ್ರಮವಾಗಿ ಸಂಸಾರ ನಡೆಸಿದ ಅಪ್ಪ ನೀನು
ಅಪ್ಪಾ…ಅಂತ ನಮ್ಮ ಮಗಳು
ತಾತಾ…ಅಂತ ಮೊಮ್ಮಗಳು
ನಿನ್ನ ಅಪ್ಪಿಕೊಂಡಾಗಲೆಲ್ಲ
ನಾನು ಅಸೂಯೆಗೊಳಗಾಗುತ್ತಿದ್ದೇನೆ
ನನಗಿಂತಲೂ ಅವರಿಗೆ ನೀನೆ ಹೆಚ್ಚಾಗಿರುವುದಕ್ಕಲ್ಲ
ನಿನ್ನಂತಹ ಅಪ್ಪ ನನಗೆ ಇಲ್ಲದಿರುವುದಕ್ಕೆ

ಕ್ಷಣ ಕ್ಷಣವೂ ನಾನು ಹೆಮ್ಮೆಯಿಂದ ಬೀಗುತ್ತಿದ್ದೇನೆ
ಪುರುಷಾಹಂಕಾರವನ್ನು ಮೀರಿ
ಹೆತ್ತ ತಾಯಿಯಂತೆ ನೋಡಿಕೊಳ್ಳುತ್ತಿರುವುದಕ್ಕೆ
ನಾನು ವರ್ಕಿಂಗ್ ವುಮನ್ ಆಗಿರುವುದಕ್ಕೆ
ನೀನು ಹೌಸ್ ಹಸ್ಬೆಂಡ್ ಆಗಿ ಬದಲಾಗಿರುವುದಕ್ಕೆ


ಈಗ ನಾವು ಇಬ್ಬರ ಕಿರೀಟಗಳನ್ನ
ಮ್ಯೂಸಿಯಂನ ಗಾಜಿನಕೋಣೆಯಲ್ಲಿ
ಭದ್ರವಾಗಿರಿಸೋಣ
ನಗ್ನ ಶಿರಗಳೊಂದಿಗೆ
ಸಹಜ ನ್ಯಾಯ ಶಿರೋಜಗಳನ್ನು
ಲೋಕದಮೇಲೆ ಹೊದಿಸಿ ಬಿಡೋಣ
ಗೃಹವನ್ನು ದಾಟಿ ಗ್ರಹಧರ್ಮವನ್ನು ಪ್ರತಿಷ್ಟಿಸೋಣ!

ತೆಲುಗು ಮೂಲ – ಐಯಿನಂಪೂಡಿ ಶ್ರೀಲಕ್ಷ್ಮಿ
ಅನುವಾದ – ರೋಹಿಣಿ ಸತ್ಯ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *