ಕವನ ಪವನ/ ಹೇಳೇ ರಾಧೆ… – ವಸುಂಧರಾ ಕದಲೂರು
ಹೇಳೇ ರಾಧೆ..,
ನಿನ್ನ ಸಂಗತಿ – ನಿನ್ನ ಆ ಸಂಗಾತಿ
ಕುರಿತು ನನ್ನ ಬಳಿ. ಅರಿತು ಕೊಳುವೆ
ಮೋಡಿ ಮಾಡಿದ ಒಲವಿನ ಅಚ್ಚರಿಯ
ಆಳ ಸುಳಿ.
‘ನೀ ನನ್ನ ಉಸಿರು’ ಎಂದಿದ್ದನೆ?
‘ರಾಧೇ.. ನೀ ನನ್ನ ಒಲವು’
ಉಸಿರಿದ್ದನೇನೆೇ?
ಮುರಳಿಯಂತೆ, ಕೊರಳಂತೆ,
ಕೊಳಲಿನಿಂದ ಕರೆದನಂತೆ
ಕರೆದ ಕೂಡಲೇ ಓಡಿದೆಯಂತೆ
ಅದು ಹೇಗೆ ನೀನಾದೆ
ಇತರೆ ಮೂಕ ಹಸುಗಳಂತೆ
ಮನೆಯಲ್ಲಿ ಹೇಳಿದ್ದೆಯೇನೇ,
ಅವರಿವರು ಒಪ್ಪಿದ್ದರೇನೇ
ಎಲ್ಲಾ ಬಿಟ್ಟು ನಟ್ಟಿರುಳುಗಳಲಿ
ಒಬ್ಬಂಟಿ ಹೋದೆಯೇನೆ
ಏನೋ ರಾಧೆ, ಕಾದಲನಿಗೆ
ಕಾದವಳಾದ ಕಾರಣ
ನಿನ್ನ ಬಗೆಗೆ ನನಗೀಗಲೂ
ಮೂಡುವುದು ಕರುಣಾ
ರಾಜಕಾರಣ ಹೇಳಿ
ದೂರ ಹೋದವನು ಮರಳಿ
ಬಂದಾಗ, ನರಳಿ ಮುಪ್ಪಿಡಿದ
ನಿನ್ನ ಗುರುತು ಹಿಡಿದನೇನೇ
ಕೊರಳ ಅಪ್ಪಿಕೊಂಡನೇನೆ
ನಿನ್ನ ಒಲವನು ಮೆಚ್ಚುವ ಜಗವು
ತೋರುವ ಉದಾರ ನಿಲುವು
ಹೊತ್ತಿಗೆ ಕತೆಗೆ ಮಾತ್ರವೆ ಸೀಮಿತವು
ರಾಧೇ…
ಸಂದೇಹಿಸುವ ಮನಕೆ
ನೀ ಹೇಳುವುದೇನೆ? ನಿನ್ನ ಹಾಗೆಯೇ
ಮಾಡಿದರೆ ಸಿಗುವುದೇ
ಮರ್ಯಾದೆ?
-ವಸುಂಧರಾ ಕದಲೂರು
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.