ಕವನ ಪವನ / ಹೆಜ್ಜೆ ಗೆಜ್ಜೆ- ಸಬಿಹಾ ಭೂಮಿಗೌಡ
ಹೆಜ್ಜೆ – ಗೆಜ್ಜೆ
ಎಳೆಯ ಗೆಳತಿಯರೆ
ಇದ್ದವು ಅಂದು
ಅತ್ತ ಆ ಮನೆಯವರು
ಇತ್ತ ಈ ಮನೆಯವರು
ಎಳೆದ ಗೆರೆಗಳು
ಉದ್ದ ಗಿಡ್ಡ ಅಡ್ಡಡ್ಡ ಉದ್ದುದ್ದ
ಚಿತ್ರಮೂಲನ ಕೋಟೆ
ಅವ್ವ ಅವರವ್ವ ಅಜ್ಜಿ
ಮುತ್ತಜ್ಜಿಯರ ಕಾಲದಿಂದ
ಅಲ್ಲೂ ನುಸುಳುದಾರಿ ಹುಡುಕಿ
ಕೊಡದೆ ಕಿಮ್ಮತ್ತು ಗೆರೆಗಳಿಗೆ
ದಾಟಿದ ಗಟ್ಟಿಗಿತ್ತಿಯರ ಪಟ್ಟಿ
ಏಳು ಮೊಳದ ಸೀರೆಯಷ್ಟು
ಬಾಳೆಕಾಯಿ ಗಂಟಲ್ಲಿ ಹುದುಗಿದ್ದು
ಹುಡುಕಿ ತೆಗೆದಲ್ಲಿ ಇದೆ ನಿಮಗೂ ಬುತ್ತಿ.
ಹದಿಹರೆಯದ ಗೆಳತಿಯರೆ
ಎಂಥ ಸೋಗಸಿತ್ತೇ ನಿಮ್ಮ ಆ
ವಿಶ್ವಾಸದ ನಡಿಗೆ, ಮಾತು, ದನಿ
ಎತ್ತಿದ ಗತ್ತಿನಲ್ಲಿ
ದೂಡಿದರೂ ಆಗ್ರಹದಿ ಕೂತ ಭಂಗಿಯಲಿ
ಹೊಸ ಬೆಳಕು ಇಣುಕಿತ್ತು
ಕಾಲಚಕ್ರ ತಿರುಗಿದೆ
ಅತ್ತ ದರಿ ಇತ್ತ ಪುಲಿ
ಎನ್ನದಿರಿ ನೀವು.
ಮುಂದಿದೆ ನಿಮ್ಮ ಆಯ್ಕೆ
ಹೋಗಬೇಕೆತ್ತ ನೀವು?
ಅವರೂ ಇವರೂ ಜೊತೆಗೂಡಿ
ಹಾಕಿಹರು ಬೇಲಿ
ಅವರ ಗುರಿ ಒಂದೇ
ದಾರಿ ಮಾತ್ರ ಬೇರೆಬೇರೆ
ಜೇನಲ್ಲಿ ಅದ್ದಿದ್ದು ಒಂದು
ಹಸಿಖಾರ ಸವರಿದ್ದು ಇನ್ನೊಂದು
ಏನನೆ ಉಂಡರು ಹಾಗಲ ಬೇವಿನ ಹೂರಣ.
ಮರೆಯದಿರಿ
ಹಿಜಾಬು ಅಕ್ಷರ ಕಲಿಕೆಗೆ ಸಾಧನ
ವಾದರೂ ಅದೇ ಸರ್ವತ್ರ ಸಾಧನವಲ್ಲ
ಸವೆದು ಹೋಗುತಿಹ ರೂಢಿಯ
ಎಳೆವವರು, ಹೊದಿಸುವವರು
ಇಬ್ಬರಿಗೂ ಒಂದೇ ದಿಗಿಲು
ಗೆರೆ ಹಾಕಲಾಗದ, ಪಳಗಿಸಲಾಗದ
ಆ ದಿನದ ದಿಗಿಲು!
ಕಾದಿಹರವರು ಮೊಳೆಯ ಜಡಿಯಲು
ಕರೆಯುತಿಹರಿವರು ಪಂಜರದಿ ಪಳಗಿಸಲು!
ಪ್ರಿಯ ಎಳೆಯ ಗೆಳತಿಯರೆ
ಆಯ್ಕೆಯ ಅವಕಾಶದ ಖುಷಿ
ಅದು ಇಟ್ಟ ಸವಾಲಿನ ದಿಗಿಲು
ನಿಭಾಯಿಸುವ ಹೊತ್ತಲಿ ಮರೆಯದಿರಿ
ಎಲ್ಲರೂ ಹಿಡಿದವರೇ ದಿವ್ಯವ
ಹಾದು ಬಂದವರೇ ಅಗ್ನಿ ಪರೀಕ್ಷೆಯ
ಎದೆಗುಂದದಿರಿ ಬಸವಳಿಯದಿರಿ
ಅಂತರಂಗದ ದನಿಯ ಆಲಿಸಿರಿ
ಅವರಿವರ ಅಪೇಕ್ಷೆಯ ಮರೆಯಿರಿ
ನೀವು ಇಡುವ ಒಂದೊಂದು ಹೆಜ್ಜೆಗಳು
ತಂಗಿಯರ ನಾಳೆಯ ಗೆಜ್ಜೆಗಳು.
- ಸಬಿಹಾ ಭೂಮಿಗೌಡ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.