ಕವನ ಪವನ/ ಹೂ ಹುಡುಗಿ -ಅಲಕಾ ಜಿತೇಂದ್ರ
ಹೂ ಹುಡುಗಿ
ಅಂದು ಪ್ರೇಮಿಗಳ ದಿನ
ಹೂ ಹುಡುಗಿಯ ಸುತ್ತಲೂ ಜನ
ಒಂದೊಂದು ಗುಲಾಬಿಗೂ
ಅಲ್ಲಿ ನಡೆದಿದೆ ಚೌಕಾಶಿ.
ನೀಲಿ ಕಾರಿನ ಕಪ್ಪು ಗಾಜು
ಕೆಳಗಿಳಿಸಿದವ ಕೇಳಿದ
ಐದು ರೂಪಾಯಿ ಕಡಿತ
ನಿಜ ಪ್ರೇಮಿಯೊಬ್ಬ
`ನನ್ನವಳಿಗೆ
ನೀಡುವ ಗುಲಾಬಿಗೆ
ಚೌಕಾಶಿಯೇ? ಛೇ’ ಎಂದ.
ಹೂಮುತ್ತು ಪಡೆದ ಗುಲಾಬಿ
ಕಾಲೇಜು ಹುಡುಗಿಯ
ಪುಸ್ತಕದೊಳಗೆ ಬಂಧಿ.
ಕೊನೆಯ ಗುಲಾಬಿಯೂ
ಪ್ರೇಮಿಯ ಕೈಸೇರಲು
ಹೂಹುಡುಗಿಯ ಮೊಗದಲ್ಲಿ
ಹೂನಗು
ಅರಿವಿದೆ ಆಕೆಗೆ
ಆ ನಗುವಿಗೂ
ಹೂವಿನಷ್ಟೇ ಆಯಸ್ಸು
ಆದರೂ ಹರಸಿದಳು
ಜಗದ ಪ್ರೇಮಿಗಳ
ನಿತ್ಯ ನಿಮಗಿರಲಿ ಪ್ರೀತಿಸುವ ಮನಸು
ನನಗೆ ಸಿಕ್ಕೀತು ಚೌಕಾಶಿಯಿಲ್ಲದ ಬದುಕು.
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.