ಕವನ ಪವನ/ ಹುಡುಗಿ ಹಾಗೂ ಚಿಟ್ಟೆ- ಅನು: ಭಾಗ್ಯ ಸಿ.ಎಚ್.
ಪ್ರವಾಸಿನಿ ಮಹಾಕೂಡ್ ಅವರ ಒರಿಯಾ ಕವಿತೆ
ಹುಡುಗಿ ಹಾಗೂ ಚಿಟ್ಟೆ
ನನ್ನ ಕೂಸೇ,
ನಿನ್ನ ಮುಷ್ಟಿಯಲ್ಲಿರುವುದೇನು?
ಕುತೂಹಲದ ಕಣ್ಣುಗಳ ತಾಯಿ ಕೇಳಿದಳು.
ಹುಡುಗಿಯ ಕಣ್ಣು, ತುಟಿ, ಮುಖ ಹಾಗೂ ದೇಹ
ಅವಳ ತುಂಟ ನಗೆಯನ್ನು ಮರೆಮಾಚಲು ಸೋತವು.
ನನ್ನ ಮುಷ್ಟಿಯಲ್ಲಿ
ಪುಟಾಣಿ ನೀಲಿ- ಬಿಳಿ ಚಿಟ್ಟೆ ಇದೆ
ನೋಡು…
ಮುಚ್ಚಿದ ಮುಷ್ಟಿ ಬಿಚ್ಚಿಕೊಂಡಿತು
ಅಲ್ಲಿ ಚಿಟ್ಟೆ ಇರಲಿಲ್ಲ.
ಆದರೆ,
ಅದು ಅಲ್ಲಿತ್ತು ಅಮ್ಮಾ
ತೋಟದಿಂದ ನಾನೇ ತಂದಿದ್ದೆ.
ತಾಯಿ ನಿಟ್ಟುಸಿರು ಬಿಟ್ಟಳು.
ಅರ್ಥವಿಲ್ಲದೆ ಕಳೆದುಕೊಂಡ, ಸೋತ, ಶರಣಾಗತಿಯ
ಹಳೆಕತೆಗಳು ನೆನಪಾದಾಗ
ಅಳೆಯಲಾರದಷ್ಟು ಆಳದ ದುಃಖ.
ನಾನೂ ಅದನ್ನು ನೋಡಿರುವೆ ಕೂಸೇ,
ಆ ನೀಲಿ- ಬಿಳಿ ರೆಕ್ಕೆಗಳ ಕನಸಿನೊಳಗೆ
ಮುಗ್ಧ ಕೌಮಾರ್ಯ ಹಾಗೂ
ಸೋತ ಯೌವ್ವನವಿತ್ತು.
ಹಿಡಿದುಕೋ ಮಗಳೇ…
ಬೆರಳುಗಳನ್ನು ಬಿಗಿಮಾಡು
ವರ್ಷಗಳ ಹಿಂದೆಯೇ ಖಾಲಿ ಕಣ್ಣುಗಳನ್ನುಳಿಸಿ
ನನ್ನಿಂದ ಹಾರಿಹೋದಂತೆ
ಅದು
ನಿನ್ನನ್ನು ತೊರೆಯದಿರಲಿ.
ಅಚ್ಚರಿಯಿಂದ
ಮಗಳು
ತಾಯಿಯೆಡೆ ನೋಡಿದಳು.
ಅನು: ಭಾಗ್ಯ ಸಿ.ಎಚ್.
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.