ಕವನ ಪವನ/ ಸರಸ್ವತಿಯ ದಿನಚರಿ- ನೂತನ ದೋಶೆಟ್ಟಿ
ಸರಸ್ವತಿಯ ದಿನಚರಿ
ಪೂರ್ವದಲ್ಲಿ ಮೂಡಿದ
ಉಷೆಯ ರಂಗಿನೊಡನೆ
ಸರಸೋತಿಯ ದಿನದ ಆರಂಭ
ಕಸ ಮುಸುರೆ ಸಾರಣೆಯಾಗಿ
ಇಟ್ಟ ರಂಗೋಲಿಯ ಮೇಲೆ
ಹೊನ್ನ ಕಿರಣದ ಪ್ರವೇಶ
ಹಾಲು ಕಾಣದ ಕಾಪಿ ಕಾಯಿಸಿ
ಎಸರಿಟ್ಟ ಅಕ್ಕಿ
ಕೊತ ಕೊತ ಕುದ್ದ ಮೇಲೇ
ಕೋಳಿ ಕೂಗುವುದು
ಈಗ ಊರಿಗೆಲ್ಲ ಬೆಳಗು
ಎಲೆಯ ಮೇಲೆ ಬಿದ್ದ
ಬಿಸಿ ಅನ್ನ , ಸಾರ ಎಸರು
ಬದಿಗೆ ಉಪ್ಪು ಮಾವಿನ ಚೂರು
ಸೊರ ಸೊರಕ್ಕೆಂದು ಹೀರಿದ
ಊರ ಜನವೆಲ್ಲ
ಗದ್ದೆಯತ್ತ ಸಾಗಿದ ಮೇಲೆ
ಆಕೆಯ ಅಂಗಳದಲ್ಲಿ
ಬಟ್ಟೆಗಳ ಝಳಝಳ
ಮೈಲಿಗಳಾಚೆಯ ಶಾಲೆಗೆ
ಹೊರಡುವ
ಹೆಮ್ಮಕ್ಕಳ ಕಂಡು
ಆಕೆಯ ಎದೆಯಲ್ಲಿ ಸಣ್ಣ ನೋವು
ನಾನು ಅಕ್ಷರವೇ ಬಾರದ ಸರಸೋತಿ!
ನೋವ ಹನಿ
ಕಣ್ಣಾಚೆ ದಾಟುವ ಮೊದಲೆ
ಮೊಣಕಾಲ ಮೇಲೆ ನಿರಿಗೆ ಚಿಮ್ಮುವ
ಸರಸೋತಿಯ ಕಾಲುಗಳು
ಕೆಸರ ಗದ್ದೆಗೆ ಇಳಿದು
ಸಸಿ ನೆಡುವಾಗ
ಬೆವರಾಗಿ ಕರಗಿದ ನೋವಲ್ಲಿ
ಮಾರ್ನಮಿಯ ಭತ್ತದ ಪೈರ
ಕನಸುಗಳು
ಅಂಗಳದಲ್ಲಿ ಕತ್ತಲಾವರಿಸಿ
ಒಂಟಿ ಚಿಮಣಿಯ ಬೆಳಕು
ಮನೆಯ ತುಂಬೆಲ್ಲ
ಓಡಾಡಿ ಆರಿದಾಗ
ಮುಗಿಯಿತು ಸರಸೋತಿಯ ದಿನ
ಹಣೆಯಲ್ಲಿ ಅಕ್ಷರ ಬರೆಯದಿದ್ದರೂ
ಸರಸೋತಿಯರ ಬೆವರ ಹನಿಗಳು
ಎಲೆ ತುಂಬಿ ಉಣಬಡಿಸುತ್ತವೆ
ಬಳಪ ಹಿಡಿಯದ ಕೈ
ಬೆವರ ತೊಡೆದು ನೀಡುವ
ಅನ್ನದ ಋಣವನ್ನು
ತೀರಿಸುವುದೆಂತು?
–ನೂತನ ದೋಶೆಟ್ಟಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.