ಕವನ ಪವನ/ ವಿವೇಕ – ಅನು: ಸಿ.ಎಚ್. ಭಾಗ್ಯ
ಪ್ರಗತಿಪರ ಚಿಂತಕ, ಉರ್ದು ಕವಿ ಅಲಿ ಸರ್ದಾರ್ ಜಾಫ್ರಿ ಅವರ ಕವಿತೆ ವಿವೇಕ
ನನ್ನ ಧಮನಿಗಳಲ್ಲಿ
ಉಲಿಯುತ್ತಿರುವ ರಕ್ತಕ್ಕೆ ಕಿವಿಕೊಡು.
ಅಗಣಿತ ನಕ್ಷತ್ರಗಳು ತಂತಿ ಮೀಟುತ್ತವೆ
ಪ್ರತಿ ಹನಿಯಲ್ಲೂ ಜಗತ್ತು ಸಂಗೀತ ಹಾಡುತ್ತದೆ.
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ
ಆಕಾಶ, ಪಾತಾಳ ಎಲ್ಲವೂ ಈ ರಕ್ತದಲ್ಲಿ ಮುಳುಗಿವೆ
ವಿಶ್ವದ ನಾದ,
ಭೂಮಿಯ ಪ್ರದಕ್ಷಿಣೆ
ಸೂರ್ಯ, ಚಂದ್ರ, ತಾರೆಯರ
ಮೂಡು, ಮುಳುಗು,
ಇಳಿಯುವ ಸಂಜೆ, ಕಣ್ತೆರೆಯುವ ಹಗಲು,
ಪ್ರಕೃತಿಯ ಎಲ್ಲ ಚೆಲುವು :
ಈ ಎಲ್ಲವೂ
ನನ್ನ ರಕ್ತದ ಸರೋವರದಲ್ಲಿ
ತಾವರೆಯಂತೆ ಅರಳುತ್ತವೆ.
ವಿಶ್ವವು ನನ್ನ ಹೃದಯದಲ್ಲಡಗಿದೆ.
ನಕ್ಷತ್ರ ಪುಂಜದಲ್ಲಿ ನಾನೊಂದು ಚುಕ್ಕಿ.
ಕಲ್ಪನಾ ಲೋಕದಲ್ಲಿ ನಾನೊಂದು ಬಿಂದು.
ನಾನೊಂದು ಹನಿ, ನನ್ನನ್ನು ನಾನು ಸಮುದ್ರ ಎಂದುಕೊಳ್ಳುವೆ.
ಸೂರ್ಯನಂತೆ, ನನ್ನ ಸೌರಮಂಡಲದಲ್ಲಿ ನಾನು ಏಕಾಕಿ
ನನ್ನ ಧಮನಿಯಲ್ಲಿ ವೇದಗಳು, ಖುರಾನ್ ಹರಿಯುತ್ತವೆ.
ಗಿಡಮರಗಳು, ಶಿಲೆಗಳು, ಮರುಭೂಮಿ ಹಾಗೂ ತೋಟಗಳು
ಆಧುನಿಕ ಮನುಷ್ಯನ ಚರಿತ್ರೆಯ ವಾರಸುದಾರ ನಾನು.
ನನ್ನ ಪ್ರತಿ ಹೆಜ್ಜೆಯೊಡನೆ
ಸ್ವರ್ಗವನ್ನು ದಾಟುವೆ,
ಪ್ರತಿ ಹೆಜ್ಜೆಯೊಡನೆ,
ನರಕ.
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.