ಕವನ ಪವನ/ ವಿದಿತ – ಜಯಶ್ರೀ ದೇಶಪಾಂಡೆ
ವಿದಿತ
ಅವಳ ಹಾಸಿಗೆಯ ಮಡಿಕೆಗಳಲ್ಲಿ
ಕೋದ ಕೋವಿಮಣಿಗಳದೊಂದು ಹರಹಿದೆ.
ಸುಕ್ಕು ಕರಗಿದ ವೇಳೆಗಳಲ್ಲಿ ಅವು ಮೇಲೆದ್ದು ಬರುತ್ತವೆ.
ಯಾವಕಾಲ? ಎಷ್ಟು ಸಮಯ ಎಂದು ಕೇಳಬೇಡಿ ಅವಳು ಹೇಳಲಾರಳು…
ಕೆಲವು ನೆನಪುಗಳ ಲೆಕ್ಕ ಇಡದಿರುವುದು, ಇಟ್ಟರೂ ಹೇಳದಿರುವುದೇ ಒಳ್ಳೆಯದು.
ಆದರೂ ಸುಕ್ಕು ತೀಡುವ ಕ್ಷಣಗಳಲ್ಲಿ
ನೀವವಳನ್ನು ಕಂಡರೆ ಆ ಮುಖ ಚೆಲ್ಲಿದ ಬೆಳಕಿನಲ್ಲಿ ನಿಮಗೆ ಬೇಕಿರುವುದನ್ನು
ಊಹಿಸಿಕೊಳ್ಳಿ.. ಅಥವಾ ಪಕ್ಕಕ್ಕೆ ಸರಿದುಬಿಡಿ.
ಅಲ್ಲಿ ಚಾಚಿಕೊಂಡು ಮಾಯವಾದೊಂದು ಬೆಳದಿಂಗಳಿದೆ,
ಮಲ್ಲಿಗೆ ಸರಿದು ಹೋದುದರ ಕುರುಹಿದೆ,
ಮಡಿಕೆ ಸುಕ್ಕುಗಳತ್ತ ಕಣ್ಣು ಹರಿಯದೆ
ಉರುಳಿ ನಕ್ಕ ನಗೆಯೂ,
ದಿಂಬಿಗೊತ್ತಿ ಅತ್ತ ಕಣ್ಣಿನ ಹನಿ ಕರೆಯೂ ಇದೆ.
ಅದೇನು ಹೇಳುತ್ತೋ? ಬೇಡ ಬಿಡಿ…
ಆಗೀಗ ಪೆನ್ನು ಹಾಳೆ ಕೈ ಹಿಡಿದು
ಬರೆಸಿಕೊಂಡ ಛಾಪಿದೆ…
ಸವಾಲುಗಳ ಪ್ರತಿಬಿಂಬಕ್ಕೂ ಬೆಚ್ಚಿ,
ಕೊಲ್ಲಬೇಕಾದ ಆ ಕ್ಷಣಗಳಿಗೆ ಸಾಥ್ ಕೊಡುತ್ತಲೇ
ಪಕ್ಕದ ನಿತ್ಯ ಮೌನಧ್ಯಾನಿ ನೈಟ್ ಲ್ಯಾಂಪು
ಅವಳುಡಿಗೆ ತೂರಿದ ಬೆಳಕು,
ಕತ್ತಲೆಗೊಂದು ಒದೆ ಕೊಟ್ಟು ಹಿಗ್ಗಿದೆ.
ಸುಕ್ಕುಗಳನ್ನು ಬಿಡಿಸಿ ತೀಡಿ
ಕನಸುಗಳ ಕಾಲವನ್ನು ಮಟ್ಟಸ ಮಾಡುವ
ಅವಳಿಗೆ ನೆನಪಾಗುತ್ತದೆ
ಅವಳಮ್ಮನ ಹಾಸಿಗೆ ಸುಕ್ಕುಗಳ ಈ ಪ್ರಶ್ನೆಗೆ
ಎಂದೂ ಮುಖಾಮುಖಿಯಾಗಬೇಕಾಗಲಿಲ್ಲ.
ಏಕೆಂದರೆ ಆ ಹಾಸಿಗೆ ಸುರುಳಿ ಸುತ್ತಿಕೊಂಡು
ಅಟ್ಟಕ್ಕೇರಿ ಬಿಟ್ಟಿದೆ!
ಆಟ ಮುಗಿಸಿ ಪೆವಿಲಿಯನ್ ಸೇರಿದೆ.
ಇನ್ನು ಅಲ್ಲಿಂದೀಚೆಗೆ ಎಲ್ಲ ಗಂಗೆಗಳಲ್ಲೂ
ಅಷ್ಟೇ ನೀರು…
ಮಡಿಕೆ ಸುಕ್ಕಿನ ಹೋರಾಟ
ಮುಗೀತಾ ಕೇಳದಿರಿ…
ಮಾತ್ರೆ ನುಂಗಿ ಮಲಗಿದ್ದಾಳೆ.
ಶ್! ಎಬ್ಬಿಸಬೇಡಿ!
-ಜಯಶ್ರೀ ದೇಶಪಾಂಡೆ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ಯಾಕೆ ಕನ್ನಡದ ಕವನದಲ್ಲಿ ಆಂಗ್ಲ ಮತ್ತು ಹಿಂದಿ ಭಾಷೆಯ ಪ್ರಯೋಗ? ಕನ್ನಡದ ಪದಗಳನ್ನು ಉಪಯೋಗಿಸಲು ಸಂಕೋಚವೇ ಅಥವಾ ಕನ್ನಡದ ಪದಗಳು ಉಪಲಭ್ದವಿಲ್ಲವೆ???
ಜಯಶ್ರೀ ಮೇಡಂ ..ಕವನ ಬಹಳ ಚೆನ್ನಾಗಿದೆ. ಮೆಲುದನಿಯಲ್ಲಿ ತಲೆಮಾರುಗಳ ಒಳಗುದಿ ಇದೆ.