ಕವನ ಪವನ/ ವಧುವರಾನ್ವೇಷಣೆ – ಅರವಿಂದ ಎಸ್.
ವಧುವರಾನ್ವೇಷಣೆ
ಕಸಾಯಿಖಾನೇಲಿ ನೇತುಹಾಕಿದ ದೇವರಫೋಟೋ
ಗಾಜಿನಲ್ಲಿ ಎದುರಿಗಿರುವ ವಧುವರಾನ್ವೇಷಣಾ
ಕೇಂದ್ರದ್ದೇ ಪ್ರತಿಫಲನ
ಆಗಾಗ ಹುಡುಗ ಹುಡುಗಿಯರದ್ದೂ
ಬಹಳ ಅಪರೂಪಕ್ಕೆ ರಚ್ಚು ಹಿಡಿದ
ಮಕ್ಕಳಿಬ್ಬರು ಓಡಿಹೋದ ಸುದ್ದಿ
ಕಾರಿನಿಂದಿಳಿದು ಶುಲ್ಕ ಪಾವತಿ ಕೇಂದ್ರಕ್ಕೆ
ಕ್ರೆಡಿಟ್ ಕಾರ್ಡನ್ನು ಮಾತ್ರ ಕೊಡಲು
ನಿಂತವನೆದುರು ಮುಟ್ಟಾದಾಗ ಮೂರು ದಿನ
ಹೊರಗಿರುವ ಹುಡುಗಿ ಬೇಕೆಂಬ
ವರನ ಒತ್ತಾಯಕ್ಕೆ ಆರಂಕಿ ದಾಟಿದ್ದೊಂದೇ
ಸಾಕೆನ್ನುವವಳ ಒಪ್ಪಿಗೆಗೆ ಬೊಕ್ಕ ತಲೆಯ
ಬುದ್ಧಿಜೀವಿಗೆ ತರ್ಕದಲ್ಲಿ ಸೋಲಿಸಬಲ್ಲವಳಿಗಾಗಿ
ಹಣ ಕಟ್ಟಲಿಕ್ಕೆ ಸರದಿಯಲ್ಲಿರುವಾಗ
ಪರಿಚಿತಳಾದವಳ ಜಾತಕದ ನಿರೀಕ್ಷೆ
ಮೈಕಲ್ಲಿ ಪ್ರವಚನದ ಮಧ್ಯೆ
ಆತ್ಮವು ಸುಡುವುದಿಲ್ಲ
ಎಂದದ್ದು ಕೇಳಿ
ಕಸಾಯಿಖಾನೆಯದೇ ವಾಸನೆ – ಎಷ್ಟೇ
ದೂರಿದರೂ ಯಾರೂ ಕೇಳಿಸಿಕೊಳ್ಳುವವರಿಲ್ಲ
ಹೀಗಿರಲಾಗಿ ನಡುವೆ
“ಈ ಜೀವ ನಿನಗಾಗಿ” ಎಂದು
ಆರತಕ್ಷತೆ ಸಮಾರಂಭದ ಆರ್ಕೆಸ್ಟ್ರಾದಲ್ಲಿ ಹಾಡುವವನ
ಮನೆಯಲ್ಲಿ ವಾಸನೆ ಕೆಟ್ಟ ವಾಸನೆ
ಉದುರಿದ ಕೂದಲು ಬಚ್ಚಲು ನೀರಿಗೆ ಸಿಕ್ಕಿ
ಮನೆಯೆಲ್ಲಾ ಕೊಳಚೆಯಾಗಿದೆ
ಅವನಪ್ಪ ಹಾಡಿದ್ದ ಗಿರಿಜಾ ಕಲ್ಯಾಣ
ರೆಕಾರ್ಡ್ ಮಾಡಿದ್ದ ಕ್ಯಾಸೆಟ್ ಹಾಕಿದ್ದ
ಟೇಪ್ ರೆಕಾರ್ಡರ್ ಈ ನೀರಲ್ಲಿ ಸಿಕ್ಕಿದ್ದಕ್ಕೋ ಏನೋ
ಕುಯ್ಯೋಂ ಕುಯ್ಯೋಂ ಕುಯ್ಯೋಂ ಎಂದೆನ್ನುತ್ತಲೇ ಇದೆ.
- ಅರವಿಂದ ಎಸ್.
(Dept. of Physics, Indian Institute of Technology, Madras. sakshiprajne@gmail.com)
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.