ಕವನ ಪವನ/ ಯಾರಿದು? – ಮಮತಾ ಅರಸೀಕೆರೆ

ಯಾರಿದು?

ಅಚಾನಕ್ ಚಿಗಿದ ಬೆಂದ ಮೊಂಡು ಮೊಳಕೆ
ಬಿರಿಯುತ್ತಿದ್ದ ಮೊಗ್ಗಲ್ಲಿ ಸಾವಿರ ಹಳಹಳಿಕೆ
ನವಿಲ ಸಾವಿರ ಕಣ್ಣಿಗೂ ಹೊಡೆದ ನೂರು ಮೊಳೆ
ಅಂಚಿನ ಪರಿಧಿಯಲ್ಲಿಯೇ ಹಿಗ್ಗಿ ಸುಗ್ಗಿ ಕಂಡ
ಎಳೆ ಬಿಸಿಲಿನಿಂದ ಅಗ್ದಿ ಚಿಮ್ಮುವ ಬಿರುಬಿಸಿಲಿಗೂ
ಕಾದ ಕೊಪ್ಪರಿಗೆಯಿಂದ ನಿರಂತರ ಅಗ್ನಿ ಕುಂಡಕ್ಕೂ
ಆಗಾಗ್ಗೆ ಹಾಯುವ, ಹೆತ್ತಕರುಳಿಗೆ ನಿಗಿ ನಿಗಿ
ಬೆಂಕಿ ತಾಕಿಸುವ ಅಸಹಜ ಸೆರಗಿನ ಕೆಂಡ
ವ್ಯಸನದಿಂದ ಕುದಿಸುವ ಹಾಳು ಬಂಜರು ಭೂಮಿ

ಎಡಬಿಡಂಗಿಯಂತಹ ಅಡ್ಡಾದಿಡ್ಡಿ ರಸ್ತೆಯುದ್ದಕ್ಕೂ
ಸುಖಾಸುಮ್ಮನೆ ಗಿರಿಗಿಟ್ಟಲೆಯಾಡುವ ಅನಿಶ್ಚಿತ ಅಶಿಸ್ತು
ಚಂಚಲತೆಯ ಮಹಾಪ್ರವಾಹಕ್ಕೆ ದಡವಾಗಿ, ಸುಳಿಯಾಗಿ
ರಪ್ಪನೆ, ಬಿಮ್ಮನೆ ಕೆಲಸಕ್ಕೆ ಬಾರದ ಒಣ ತರಗೆಲೆಯಂತೆ
ಅಲೆಯಲೆಯಾಗಿ ಧುಮ್ಮಿಕ್ಕುವ ಹುಳುಕು ನದಿಪಾತ್ರ
ವ್ಯರ್ಥ ಸಮಯಪಾಲನೆಗೆ ಸದ್ದುಮಾಡುತ್ತ ಬಲಿಯಾಗುವ
ಕೆಟ್ಟುನಿಂತು ತಟಸ್ಥವಾದ ಗೋಡೆ, ಟೇಬಲ್ಲಿನ ಪುಟ್ಟ ಗಡಿಯಾರ

ಊರುಕೇರಿಗಳ ಸ್ವಪಕ್ಷಪಾತ ಮಂದಿಗೆ ಅಸಡ್ಡೆ, ಅವಮಾನದ
ಹೀನ ಬೀಜ, ಕೂಗುಮಾರಿಗಳ ಧಿಕ್ಕರಿಸುವ ದತ್ತೂರಿ ಗಿಡ
ಸ್ವಂತ ಛಾವಣಿಯ ನೆರಳೂ ದಕ್ಕದ ಒಣಬಣ ಬೇಲಿಸಾಲಿನ ಕಳೆ
ಆಸುಪಾಸಿನ ಪೊದೆಪೊದರುಗಳಿಗೆ, ಆಸರೆಯಾಗುವ ಗುಜ್ಜುಬೆಣೆಗಳಿಗೆ
ಅಷ್ಟಿಷ್ಟು ನೀರು ಹನಿಸುವ ತಾಳ್ಮೆಯಿಲ್ಲದ ಬಿರುಕು ಬಿಂದಿಗೆ ಕೊಡ
ಅಲೆಮಾರಿ ಹಾದಿಗೆ ಗುರಿಯಿಲ್ಲದ ಗಮ್ಮತ್ತಿಲ್ಲದ ಅಸಂಖ್ಯಾತ
ವೈಫಲ್ಯ ಪಯಣದ ಮೊತ್ತ, ಗೂಡುಸೇರದ ರೆಕ್ಕೆಕಳೆದ ಹಕ್ಕಿ
ಕಂಡ ಕಡಲಿಗೂ ಹಂಬಲಿಸಿ ನೈರಾಶ್ಯದ ಗೋಣಿಹೊದ್ದ ಹೃದಯ

ಅನುಕಂಪ, ಸ್ವಮರುಕ, ಕೀಳರಿಮೆ, ಜ್ವಲಿಸುವ ಎದೆಯಿಟ್ಟುಕೊಂಡು
ಖಿನ್ನತೆಯಲ್ಲಿ ನರಳಿದ ಕಣ್ಣೀರು.
ಪರಲೋಕಕ್ಕೆ ಕೊರಳೊಡ್ಡಲಾರದ ದಿಟ್ಟತೆಯ ಕುಣಿಕೆ
ಎವೆಯಿಲ್ಲದೆ ಎಗ್ಗಿಲ್ಲದೆ, ಸರಪಳಿಗಳಿಗೆ ಸ್ವಚ್ಛಂದತೆಯ ಪಾಠ ಹೇಳಿದ
ಪ್ರಾಮಾಣಿಕ ಅಚ್ಛಬಿಳುಪಿನ ಸ್ವಚ್ಛ ಪ್ರೀತಿಯರಸುವ ಪಾರಿವಾಳ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *