ಕವನ ಪವನ/ ಮುತ್ತಜ್ಜಿ ಓಮಾ – ಅನು: ಶುಭದಾ ಎಚ್.ಎನ್.
ಬಂಟು ಭಾಷೆಯ ಆಫ್ರಿಕನ್ ಕವಿ ಅಬ್ದುಲ್ ಎಫೆಂಡಿಯ ಕವಿತೆ
ಓಮಾ ತನ್ನ ವಂಶವೃಕ್ಷದ ಪೂರ್ತಿ ಮುದಿಯಾದ
ಬೇರಾಗಿದ್ದಳು… ಸುಕ್ಕಾದ ತೊಂಭತ್ತೇಳು ವರ್ಷದ
ಮುತ್ತಜ್ಜಿ… ಅವಳ ಮಾಗಿದ ಕಣ್ಣುಗಳು ಇನ್ನೇನು
ಕಾಣಲಿದ್ದವು ಬದುಕಿನ ನೂರನೆಯ ವಸಂತವನ್ನು
ತನ್ನ ಕೂಡುಕುಟುಂಬದ ಹುಟ್ಟಿದ ಹಸುಗೂಸುಗಳ
ಹೊಕ್ಕುಳುಬಳ್ಳಿ ಕತ್ತರಿಸಿ, ಮೊದಲ ಪವಿತ್ರ ಸ್ನಾನ
ಮಾಡಿಸಿದವಳೂ ಅವಳೇ, ಎಳೆಬಸುರಿಯರಿಗೆ
ನಾರುಬೇರುಗಳ ಕುದಿಕಷಾಯಗಳ ಕುದಿಸಿದ್ದೂ ಈಕೆ
ಅಷ್ಟೇಕೆ, ತಾಯಗರ್ಭದಲ್ಲೇ ಕೊನೆಯುಸಿರೆಳೆದ ಕೆಲ
ನತದೃಷ್ಟ ಕಂದಮ್ಮಗಳನ್ನು ಎದೆಗೊತ್ತಿ ಹೊರನಡೆದು
ಮಣ್ಣಹಾಸಿಗೆಯಲ್ಲಿ ಮಲಗಿಸಿ ಕೊನೆಮುತ್ತನೊತ್ತಿ
ಮರಳಿ ದುಃಖಿತರಾಗಿರುತ್ತಿದ್ದ ಬಾಣಂತಿಯರ ತೇವದ
ಕಣ್ಣೀರೊರೆಸಿ, ಮಲಗಿಸಿ, ಸಂತೈಸುತ್ತಿದ್ದ ಮಹಾತಾಯಿಯಾಕೆ…
ನೋವು ತುಂಬಿರುತ್ತಿದ್ದ ಹೆರಿಗೆ ಕೋಣೆಯಲ್ಲಿ ಓಮಾ
ಇದ್ದರೆ ಸರಿ, ದೇವತೆಯೇ ಅಲ್ಲಿದ್ದಾಳೆಂಬಂತೆ ಎಲ್ಲ
ತುಂಬುಬಸುರಿಯರಿಗೆ ನಿರಾಳತೆ… ಓಮಾ ಅನ್ನುತ್ತಿದ್ದಳು
ಚೀರಬೇಡ, ಅಳಬೇಡ, ನಗು ನನ್ನ ಮಗಳೆ… ನಿನ್ನ ನಗುವೀಗ
ಸ್ವರ್ಗಕ್ಕೆ ಕೇಳಿದ ಕ್ಷಣವೇ ನಿನ್ನ ಕರುಳ ಹಾಸಿಗೆಯಿಂದ
ನಿನ್ನ ದೇವಶಿಶು ಹೊರಬರುತ್ತದೆ, ಕಂಡೆಯಾ ಕೇಳು
ನಿನ್ನ ನಿನ್ನಮ್ಮ ಹೆತ್ತಂತೆಯೇ, ನೀನೀಗ ನಿನ್ನ ಕಂದನನ್ನು
ಹೆರುತ್ತಿದ್ದೀಯ ಚಿನ್ನ, ಅವಳು ನಿನ್ನಹೊತ್ತು ಬಸವಳಿದು
ಸುಸ್ತಾದಂತೆ ನೀನೀಗ ದಣಿದಿದ್ದೀಯ,ಅವಳು ನಿನಗೆ ಹಾಲೂಡಿದಂತೆ,
ನೀನೂ ಹಾಲೂಡಿಸೀಗ ಅವಳು ನಿದಿರೆ
ಬಿಟ್ಟು ನಿನ್ನ ಸಾಕಿದಂತೆ ನೀನೂ ಸಾಕು ಕಂದ… ಆಗ
ತೀರುವುದು ನಿವ್ನ ತಾಯಹಾಲ ಖುಣ ಎನ್ನುತ್ಚಿದ್ದ
ಫಳಿಗೆಯಲ್ಲೇ ಎಳೆದನಿಯ ಅಳು ಕೋಣೆ ತುಂಬುತ್ತಿತ್ತು
ಹಡೆದವಳ ಬೆವರಿದ ಮುಖದಲ್ಲಿ ನಗೆಯರಳುತ್ತಿತ್ತು
ಅಮ್ಮನಾದ ಹುಡುಗಿ ಆಗ ಕಣ್ಣೀರು ತುಂಬಿ ತನ್ನಮ್ಮನನ್ನು
ನೆನೆಯುತ್ತ ಮೆತ್ತಗಾಗಿ ಹಂಬಲಿಸುವಳು ತಾಯಿಗಾಗಿ.
ಓಮಾಳ ಹಳೆ ಜಾಕಾಯಿ ಪೆಟ್ಟಿಗೆಯಲ್ಲಿ ಊರಮಕ್ಕಳಿಗೆ
ಮನೆಮದ್ದುಗಳಿದ್ದವು, ಮೂಲಿಕೆಗಳಿದ್ಜವು, ಚೂರ್ಣಗಳಿದ್ದವು,
ಹಸುಗೂಸುಗಳ ಜೀವಕ್ಕೆ ಯಾವ ಮದ್ದುಹಿತವೆಂದು
ಅವಳ ಮುದಿಕೈಗಳಿಗೆ ಗೊತ್ತಿತ್ತು, ಅದನ್ನಾಕೆ ಕಲಿತದ್ದು
ಶಾಲೆಯಿಂದಲ್ಲ, ತಲೆಮಾರುಗಳ ವೃಕ್ಷದಿಂದ ಹರಿದು
ಬೇರಿಗಿಳಿದ ಜ್ಞಾನವಿದು, ಓಮಾಳಿಗೆ ವಿಜ್ಞಾನವೇನೆಂದು
ಗೊತ್ತಿಲ್ಲ, ಆದರೆ ಶಿಶುಗಳನ್ನಾಕೆ ಬಲ್ಲಳು.
ಇಂತಹ ಓಮಾಳ ಚರ್ಮ ಹೆಚ್ಚು ಸುಕ್ಕುಗಟ್ಟಿದಷ್ಟೂ
ಆಕೆ ಮನೆಯವರ ಕಣ್ಣಿಗೆ ಹೆಚ್ಚು ಆದರಣೀಯಳಾದ
ಸುಂದರಳಾದ, ಪ್ರಿಯಜೀವವಾದಳು…
ಬೆನ್ನುಬಾಗಿದಷ್ಷೂ ಅವಳು ಭೂಮಿಗೆ,ದೇವನಿಗೆ ಹತ್ತಿರವಾದಳು…
ಆಗ ಹುಟ್ಟಿದ ಅವಳ ಇಪ್ಪತ್ತೆರಡನೆ
ಮರಿಮಗ ಅವಳ ದಿವ್ಯ ಕೈಗಳಿಗೆ ಬಂದ…
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.