ಕವನ ಪವನ/ ಮುಟ್ಟುಮುಟ್ಟು- ಸಚಿನ್ ಅಂಕೋಲ
ಮುಟ್ಟುಮುಟ್ಟು
ಚಳಿಗೆ ನಡುಗುತ್ತಾ
ಸೊಳ್ಳೆಗಳ ಕಾಟ ತಡೆಯುತ್ತಾ
ನಿದ್ದೆಯಿಲ್ಲದೇ ಅಮ್ಮ ನರಳುವಾಗ
ನನಗೂ ಹತ್ತುತ್ತಿರಲಿಲ್ಲ ನಿದ್ದೆ.
ಆ ಮೂರುದಿನ, ಮುಟ್ಟುಮುಟ್ಟು ಎನ್ನುತ್ತಲೇ
ಮುಟ್ಟಿಸಿಕೊಳ್ಳದೇ ಉಳಿದವರು ನಾವು…
ಈಗ, ನನ್ನವಳೂ
ತಿಂಗಳಲ್ಲಿ ಮೂರುದಿನ
ಅಸ್ವಸ್ಥಗೊಳ್ಳುತ್ತಾಳೆ.
ಚೂರು ಹೆಚ್ಚೇ ಸಿಡಿಮಿಡಿಗೊಳ್ಳುತ್ತಾಳೆ
ಹೊರಹಾಕುತ್ತಾಳೆ ಆಗಾಗ
ಒಳಗಿನ ಸಂಕಟವ…
ಎಂದಿನಂತೆಯೇ ಎದೆಗಪ್ಪಿ
ಮಲಗುತ್ತೇನೆ ನಾನು
ತುಸು ಹೆಚ್ಚೇ ಮುದ್ದಿಸುತ್ತಾ.
ಅವಳು ಮೆಲ್ಲನೆ ಅರಳುತ್ತಾಳೆ ಹೂವಂತೆ
ನಾಜೂಕಾದ ಪಕಳೆಗಳ ತೆರೆದಿಟ್ಟು
ಹಾರುತ್ತಾಳೆ ಚಿಟ್ಟೆಯಂತೆ
ಮರೆತುನೋವ ಸಂಭ್ರಮಿಸುತ್ತಾಳೆ.
ಹೊಸಚಿಗುರಿನಂತೆ…
ಮುಟ್ಟುಮುಟ್ಟು ಎನ್ನುತ್ತಲೇ
ಮುಟ್ಟದ ನಮಗೆ
ಜಗದ ಹುಟ್ಟಿನ ಗುಟ್ಟು ಹೇಳುತ್ತಾಳೆ.
- ಸಚಿನ್ ಅಂಕೋಲ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.