ಕವನ ಪವನ/ ಮುಟ್ಟನ್ನು ಪ್ರೀತಿಸುವೆ- ಕೆ.ಮಹಾಂತೇಶ

ನಾ ಮುಟ್ಟನ್ನು ಪ್ರೀತಿಸುವೆ

ನನಗೆ ಮುಟ್ಟೆಂದರೆ ಏನೆಂದು ಗೊತ್ತಿಲ್ಲ
ಅದು ಈ ಜನ್ಮದಲ್ಲಂತೂ
ಸಾಧ್ಯವೇ ಇಲ್ಲ ಬಿಡಿ.

ಆದರೆ ಮುಟ್ಟಾದ ನನ್ನವ್ವನ ಮುಟ್ಟಾದ ನನ್ನಕ್ಕನ
ಮುಟ್ಟಾದ ನನ್ನ ಅತ್ತಿಗೆಯರ
ಮಾತ್ರವಲ್ಲ…. ಈಗಲೂ
ಮುಟ್ಟಾಗುತ್ತಿರುವ ನನ್ನ ಬಾಳ ಸಂಗಾತಿಯನ್ನ
ಹತ್ತಿರದಿಂದ ಕಂಡ ಅನುಭವ ನನಗಿದೆ.

ಅವರು ಅನುಭವಿಸುವ ಸಂಕಟ, ಅವರು ಬಳಸಿದ
ಮುಟ್ಟಿನ ಬಟ್ಟೆಯಿಂದ ಹೊರಬರುವ
ಆ ಕಮಟು ವಾಸನೆ…
ಬಚ್ಚಲ ಮನೆಯಲ್ಲಿ ಅಲ್ಲಲ್ಲಿ ಚದುರಿಬಿದ್ದ
ಆ ರಕ್ತದ ಕಲೆಗಳು
ಆ ನಾಲ್ಕೈದು ದಿನಗಳ ಕಾಲ ಅವರು
ಅನುಭವಿಸುವ ತಳಮಳ, ಸಿಟ್ಟು, ಸೆಡವು
ಸಿಡಿಮಿಡಿಗಳ ನೋಟ….
ನನ್ನ ಸ್ಮೃತಿ ಪಟದಲ್ಲಿ ದಾಖಲಾಗಿವೆ
ಮತ್ತೂ ದಾಖಲಾಗುತ್ತಲೇ ಇವೆ.

ನನಗೆ ಮುಟ್ಟೆಂದರೆ ಏನೆಂದು ಗೊತ್ತಿಲ್ಲ
ಆದರೆ ನನ್ನ ಜೀವಕ್ಕೆ ಕಾರಣವಾದ
ಆ ಮುಟ್ಟನ್ನು ನಾನು ಪ್ರೀತಿಸುತ್ತೇನೆ.
ಯಾಕೆ ಗೊತ್ತಾ?

ತಾನು ಮುಟ್ಟಾದನೆಂದು ಎಂದೂ ನನ್ನವ್ವ
ನನ್ನ ಹಸಿವಿನಿಂದ ನರಳಿಸಲಿಲ್ಲ.
ತಾನು ಮುಟ್ಟಾದೆನೆಂದು ಎಂದೂ ನನ್ನಕ್ಕ
ನನ್ನ ಮುದ್ದಿಸುವುದಾ ಬಿಡಲಿಲ್ಲ

ತಾವು ಮುಟ್ಟಾದೆವೆಂದು ಎಂದೂ ನನ್ನ ಅತ್ತಿಗೆಯರು
ನನ್ನ ಮೇಲೆ ತಾಯ್ತನವ ನಿರಾಕರಿಸಲಿಲ್ಲ
ಮುಟ್ಟಾದೆನೆಂದು ಎಂದೂ ನನ್ನ ಹೆಂಡತಿ
ನನ್ನ ಪ್ರೀತಿಸುವುದ ನಿಲ್ಲಿಸಲಿಲ್ಲ….

ನನಗೆ ಮುಟ್ಟೆಂದರೆ ಏನೆಂದು ಗೊತ್ತಿಲ್ಲ
ನಿಜ ಅದು ಈ ಜನ್ಮದಲ್ಲಂತೂ
ಗೊತ್ತಾಗುವುದೇ ಇಲ್ಲ ಬಿಡಿ.

ಆದರೆ ಆ ನನ್ನವ್ವನ ಆ ನನ್ನಕ್ಕನ
ಆ ನನ್ನ ಅತ್ತಿಗೆಯರ ಮತ್ತು
ನನ್ನ ಬಾಳ ಸಂಗಾತಿಯ ಆ ಮುಟ್ಟು….
ಅದರ ಸಂಕಟ, ತಳಮಳಗಳಂತೂ
ಅರ್ಥವಾಗಿದೆ.
ಗಂಡಸೆಂಬ ಪ್ರಾಣಿ ಕನಿಷ್ಟ
ಮುಟ್ಟಿನ ಸಮಯದಲ್ಲಾದರೂ
ಮನುಷ್ಯತ್ವ ಹೊಂದಿರಬೇಕೆಂಬ ಪಾಠವನ್ನಂತೂ
ಅದು ಕಲಿಸಿದೆ.

ಹಾಗಾಗಿಯೇ
ಆ ಮುಟ್ಟಿನ ಸಮಯದಲ್ಲೇ ನನ್ನ ಹೆಂಡತಿಗೆ
ಎಂದಿಗಿಂತಲೂ ಹೆಚ್ಚು ಸಹಾಯಕನಾಗುತ್ತೇನೆ.
ಆಕೆಗೆ ಅಗತ್ಯವಿರುವ ಆರೈಕೆ ಮಾಡುತ್ತೇನೆ
ಜೊತೆಗೆ ಹೆಚ್ಚು ಪ್ರೀತಿಸುತ್ತೇನೆ ಕೂಡ.

ಯಾಕೆಂದರೆ ಮುಟ್ಟೆಂದರೆ ನನಗೆ
ಏನೆಂದು ಗೊತ್ತಿಲ್ಲ
ಅದು ಈ ಜನ್ಮದಲ್ಲಂತೂ
ಗೊತ್ತಾಗುವುದೇ ಇಲ್ಲ ಬಿಡಿ.
– ಕೆ.ಮಹಾಂತೇಶ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *