ಕವನ ಪವನ/ ಮಾತಾಡು ಭಾರತ- ಡಾ.ಕೆ. ಷರೀಫಾ

ಮಾತಾಡು ಮಾತಾಡು ಮಾತಾಡು ಭಾರತ
ದಲಿತ ಸಂತ್ರಸ್ಥಳ ನಾಲಿಗೆ ಕತ್ತರಿಸಿ,
ಬೆನ್ನು ಮೂಳೆ ಪುಡಿಮಾಡಿ, ಗೋಣು ಮುರಿದು,
ಮುರಿದರು ಕೈ, ಕಾಲ, ಕತ್ತುಗಳ.
ಭಯಾನಕ ಸ್ವರೂಪದ ಸಾಮೂಹಿಕ ಅತ್ಯಾಚಾರ
ಹದಿನೈದು ದಿನ ಸಾವು ಮರಣದೊಂದಿಗೆ ಸೆಣಸಾಟ
ಕೊನೆಗೂ ಬದುಕಲಿಲ್ಲ ಬಡ ಜೀವ,
ಹೆತ್ತವರಿಗೂ ಶವ ನೀಡದೇ, ಪ್ರಭುತ್ವದ ಅದೇಶದಂತೆ
ಪೊಲೀಸ ಪಹರೆಯಲಿ ಬೆಳಗಿನ ಜಾವ
ಅವಳ ಶವಕ್ಕೆ ಸುಟ್ಟುಹಾಕುತ್ತಾರೆ.
ಹೆತ್ತವರಿಗೂ ಮುಖ ತೋರಿಸದೇ.
ಸುಟ್ಟು ಕರಕಲು ದೇಹ ಸಾಕ್ಷಿ ಪುರಾವೆಗಳ ಸಮೇತ
ಮಾತಾಡು ಮಾತಾಡು ಮಾತಾಡು ಭಾರತ
*
ಇದ್ದಳು ಅವಳೊಬ್ಬ ವೈದ್ಯೆ ಮೇಲ್ಜಾತಿಯವಳು.
ಕ್ರೂರ ಅತ್ಯಾಚಾರಕ್ಕೊಳಗಾದಳು ವಿಕೃತಕಾಮಿಗಳು
ಹೈದರಾಬಾದಿನಲಿ ಸುಟ್ಟು ಸಾಯಿಸಿದ ಕಿರಾತಕರು
ಸಾಮೂಹಿಕ ಬಲಾತ್ಕಾರದ ಅರೋಪಿಗಳನ್ನು
ಬೆಳಗಿನ ಜಾವ ಪೊಲೀಸರೇ
ಗುಂಡು ಹಾರಿಸಿ ಕೊಲ್ಲುತ್ತಾರೆ
ಸಿಹಿ ಹಂಚಿ ಸಂಭ್ರಮಿಸುತ್ತಾರೆ ಮಹಿಳೆಯರು
ಪೊಲೀಸರಿಗೆ ಹೂಮಾಲೆ ಹಾಕಿ ಹೀರೋಪಟ್ಟ
ಮಾತಾಡು ಮಾತಾಡು ಮಾತಾಡು ಭಾರತ.
*
ಹತ್ರಾಸದ ಮೇಲ್ಜಾತಿಯ ಆರೋಪಿಗಳು
ನಿರ್ಭಯವಾಗಿ ಊರ ಬೀದಿಗಳಲಿ ಸುತ್ತುತ್ತಿದ್ದಾರೆ.
ಹೊತ್ತಿ ಉರಿಯುತ್ತಿದೆ ಧಗಧಗ ಭಾರತದ ಆತ್ಮ.
ಬೆಳಗಿನ ಜಾವ ಅಪರಾಧಿಗಳ ರಕ್ಷಿಸಲು
ಪೊಲೀಸು ಸುಡುತ್ತಿದ್ದಾರೆ ಮಾನವಳ ಶವ
ಯಾವ ಟಿವಿಯವರಿಲ್ಲ ಮಾಧ್ಯಮದವರಿಲ್ಲ.
ಖಾಕಿಯಲಿ ಮಗಳ ಕೊಲೆಗಾರ ಅವಿತು
ಮಾತಾಡು ಮಾತಾಡು ಮಾತಾಡು ಭಾರತ
*
ಇದ್ದಳು ಒಬ್ಬ ದಿಟ್ಟ ಮಹಿಳಾ ಪತ್ರಕರ್ತೆ ಏಕಾಂಗಿ
ರಾಮರಾಜ್ಯದ ತಿರುಳ ತಿರುತಿರುಗಿ ಕೇಳುತ್ತಾಳೆ.
ನಾಚಿಕೆಯಾಗಬೇಕು ಯೋಗಿ ನಿನಗೆ
ಹೆಣ್ಣುಮಕ್ಕಳನು ನುಂಗಿ ನೊಣೆಯುತ್ತಿರುವ
ನಿನ್ನ ರಾಜ್ಯದಲ್ಲಿ ಹೆಣ್ಣುಮಕ್ಕಳೇ ಹುಟ್ಟದಿರಲಿ.
ಇದು ನನ್ನ ಮನದಾಳದ ಶಾಪ
ಮಾತಾಡು ಮಾತಾಡು ಮಾತಾಡು ಭಾರತ
ಮೌನವೇಕೆ ನಿನ್ನ ನಾಲಿಗೆಯೂ ಕತ್ತರಿಸಿದರೇ?
*
ಮಾತಾಡು ಮಾತಾಡು ಮಾತಾಡು ಭಾರತ
ಪಾಪಿ ನಾಲ್ಕುಜನ ಠಾಕೂರರನ್ನು ರಕ್ಷಿಸುತ್ತಿದ್ದಾರೆ
ವ್ಯವಸ್ಥೆಯ ವಕ್ತಾರ ಪೊಲೀಸು, ಪ್ರಭುತ್ವ,
ಹಿಂದೊಮ್ಮೆ ಪೂಲನ್ ದೇವಿ ನಿಂತಿದ್ದಳು
ಇವರ ಸಂತತಿ ನಿರ್ನಾಮ ಮಾಡಲು
ನಮಗೆ ನಿನ್ನ ಭಗವಾ ಬಣ್ಣದ ಭಾರತ ಬೇಡ
ನಮಗೆ ನಮ್ಮದೇ ಮಹಿಳಾ ಭಾರತ ಬೇಕು
ನಮ್ಮದೇ ನೆಲ ಬೇಕು, ಬಹುತ್ವದ ಬಣ್ಣವಿರಲಿ
ಇಲ್ಲದಿರೆ ಮತ್ತೇ ಮತ್ತೇ ಅತ್ಯಾಚಾರ ನಡೆಯುತ್ತವೆ
ನಾಲಿಗೆ ಕತ್ತರಿಸಿಕೊಂಡ ಭಾರತ ಮೌನವಾಗುತ್ತದೆ
ದಿಕ್ಕೆಟ್ಟು ಕುಳಿತ ಮಾತಿಲ್ಲದ ಮೂಕ ಭಾರತವೇ
ಮಾತಾಡು ಮಾತಾಡು ಮಾತಾಡು ಭಾರತ

*

ಮಂದಿರ ಮಸೀದಿ ಕಟ್ಟಿ ಪ್ರಯೋಜನವೇನು
ಹೊಡೆದು ಸಾಯಿಸುತ್ತಾರೆ ಕಿರಾತಕರು
ಪುಟ್ಟ ಪುಟಾಣಿ ಸೀತೆ, ಸಾವಿತ್ರಿಯರನು
ಬಾಯಿ ಮುಚ್ಚಿಕೊಂಡಿದ್ದಾರೆ ದಲಿತ ಎಂಪಿಗಳು
ದಲಿತರವನೇ ರಾಷ್ಟ್ರಪತಿ, ಪ್ರತಿನಿಧಿಗಳೂ ಮೌನ
ಮಾಧ್ಯಮಗಳು, ಮುಖ್ಯಮಂತ್ರಿ, ಬಿಜೆಪಿ ಪಕ್ಷ.
ಪ್ರಧಾನ ಮಂತ್ರಿಗಳೂ ಮೌನಕ್ಕೆ ಜಾರಿದ್ದಾರೆ.
ಮುಖವಿಲ್ಲದವರೇ ನೀವು ಹೇಳಬಹುದು
ಅತ್ಯಾಚಾರ ನಡೆದಿದೆ ನಿಜ ಆದರೆ
ಅದು ಕೇವಲ ಅಕಸ್ಮಿಕ, ಯೋಜಿತವಲ್ಲ
ಬಾಬ್ರಿ ಮಸೀದಿ ಬಿದ್ದಿದೆ ನಿಜ ಆದರೆ
ಅದು ಕೇವಲ ಅಕಸ್ಮಿಕವೇ ಹೊರತು ಯೋಜಿತವಲ್ಲ.
ಇದು ರಾಕ್ಷಸರ ಸ್ವರ್ಗವಾಗಿದೆ .
ಮಾತಾಡು ಮಾತಾಡು ಮಾತಾಡು ಭಾರತ.
*
ಬಾಯ್ತೆರೆದ ಭೂಮಿಯಲಿ ಇಂಗಿ ಹೋಗುತ್ತಾರೆ
ಈ ನೆಲದ ಸೀತೆಯರು ಹೆಣ್ಣಿಲ್ಲದ ಲೋಕ ಊಹಿಸಿ,
ಹೆಣ್ಣುಮಕ್ಕಳ ಸಾವಿಗೆ ಮೌನವಾಗಿರುವಿರಿ ನೀವು
ರಾಮಮಂದಿರ ಕಟ್ಟಲು ಹೋರಟ ಭಗವಾಗಳೇ
ಹುಡುಕಿ ಕೊಡೀ ನನ್ನ ಹೆಣ್ಣುಮಕ್ಕಳ ನೆಲವನು
ಮೌನವಾಗಿರುವ ಪ್ರಭುತ್ವವೇ ನಿನಗೆ ಧಿಕ್ಕಾರವಿರಲಿ
ಮಾತಾಡು ಮಾತಾಡು ಮಾತಾಡು ಭಾರತ.
*

ನ್ಯಾಯದೇವತೆಯ ತಕ್ಕಡಿ ಅಲ್ಲಾಡುತ್ತಿದೆ ನೋಡು
ನ್ಯಾಯದ ತಕ್ಕಡಿಯಲಿ ಬಿದ್ದ ಕತ್ತರಿಸಿದ ನಾಲಿಗೆ
ಅವಳ ಕನಸುಗಳು ಸುಟ್ಟು ಕರಕಲಾದವು
ಬಾಣಲೆಯ ಬೆಂಕಿಯೊಳಗೆ ಸಾಕ್ಷಿಗಳ ಸಹಿತ
ನಾಶವಾದವು ಸಾಕ್ಷಿ ಪುರಾವೆಗಳೆಲ್ಲ ಬೆಂಕಿಗಾಹುತಿ
ಕೋರ್ಟಿನ ಕಟಕಟೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ
ತುಂಡಾದ ನಾಲಿಗೆಯ ಮಾತುಗಳು
ಮಾತಾಡು ಮಾತಾಡು ಮಾತಾಡು ಭಾರತ.
*
ಪೊಲೀಸರ ಪೌರೋಹಿತ್ಯದಲ್ಲಿ ದಹಿಸಿತು ದೇಹ
ಇನ್ನಿಲ್ಲದಂತೆ ದಸ್ತಾವೇಜುಗಳೆಲ್ಲ ಬೂದಿಯಾದವು
ಕರುಳ ಕೂಗಿನ ಮೊರೆತ ಕೇಳದಾಯಿತು ಖಾಕಿಗೆ
ಸಾಕ್ಷ್ಯ ಉಳಿಸದಂತೆ ದಹಿಸಿಬಿಟ್ಟಿತು ಬೆಂಕಿಗೆ
ಸನಾತನಿಗಳ ಪ್ರಭುತ್ವದ ರಕ್ಷಣೆಯ ಕಕ್ಷೆಯಲಿ
ಸುಟ್ಟಬೂದಿಯ ನಿಶಾನೆಯೂ ಸಿಗದಂತೆ
ಪೊಲೀಸರ ಪಹರೆಯಲಿ ಅಮಾಯಕಳ ದೇಹ
ಕರಕಲಾಯಿತು ಸಾಕ್ಷಿ ಪುರಾವೆಗಳ ಸಮೇತ
ಮಾತಾಡು ಮಾತಾಡು ಮಾತಾಡು ಭಾರತ.
*
ಡಾ.ಕೆ.ಷರೀಫಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *