ಕವನ ಪವನ/ ಮನಸೊಂದು ಮಹಾಭಾರತ – ಬಿ.ಕೆ.ಮೀನಾಕ್ಷಿ

ಮನಸೊಂದು ಮಹಾಭಾರತ

ಹೇಗೆ ಬರೆಯುವುದು ಕವಿತೆಗಳ?
ದಾಳವಾಗಿದೆ ಜೀವ ನೀವೆಸೆದ ಗಾಳಕ್ಕೆ
ಬೆತ್ತಲಾಗಿದೆ ದೇಹ ಸುತ್ತಲ ಕುರುಡು ಕಂಗಳಿಗೆ
ಧಮನಿಗಳ ಕಳಚಿ ಹರವಿ ಕುಳಿತರೆ
ಕುಹಕ ಕಿರುಕುಳಗಳ ಪ್ರವಾಹ
ಕಿಚ್ಚು ಕಿಡಿಗಳ ಬಡಿದಾಟ ಹೃದಯದಲಿ
ಒಳಗೆಲ್ಲ ಕುಳಿಬಿದ್ದ ಅಸ್ಥಿ…..ಆಧಾರವಿನ್ನೆಲ್ಲಿ?

ಯುದ್ಧ ಸಾರಿದೆ ಮನಸು
ಧರ್ಮಾಧರ್ಮಗಳ ದ್ವಂದ್ವದಲಿ
ಅಂಟಿಕೊಂಡ ವ್ಯಾಧಿಗಳ ನರಳಾಟ ಎದೆಯೊಳಗೆ
ಅಸ್ಥಿರದ ಚಿತೆಯ ಚಿಂತೆಯಲಿ
ಕನಸುಗಳು….. ಅರಗಿನ ಹೂವುಗಳು!
ಭಸ್ಮವಾಗದ ಅಭೀಪ್ಸೆಗಳು ನೂರೆಂಟು
ಸಹಸ್ರನಾಮ ದೈವಭಕ್ತಿ ಯುಕ್ತಿಗಳ
ನಡುನಡುವೆಯೇ
ಅಗಣಿತ ಕಾಮನೆಗಳ ತಣಿಯದ ಕಾಡುವಿಕೆ

ಅಕ್ಷಯಗೊಂಡ ತಲ್ಲಣಗಳ ತಳಮಳದಲಿ
ಅಸ್ತಿತ್ವದ ತಡಕಾಟ….. ಉಳಿವಿಗಾಗಿ ಹೋರಾಟ
ಛಿದ್ರಗೊಂಡಿದೆ ಹೂವ ಲೋಕ!
ಆದರೂ ಸ್ವರ್ಗಾರೋಹಣದ ಸುಖ
ಶರಶಯ್ಯೆಯಲಿ ಮಲಗಿದರೂ
ಅದೇ ಪರಮಸುಖ
ಎದೆಯಗೂಡು ಸದಾ ಯುದ್ಧದ ಬೀಡು
ಏನೆಂದು ಬಿಡಿಸಿಡುವುದು ಎದೆಯ ಭಾವಗಳ
ಹೇಗೆ ಬರೆಯುವುದು ಕವಿತೆಗಳ?

-ಬಿ.ಕೆ.ಮೀನಾಕ್ಷಿ, ಮೈಸೂರು

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *