ಕವನ ಪವನ/ ಮನದ ಮಾತುಗಳು…- ಶುಭದಾ ಎಚ್.ಎನ್.

ಮನದ ಮಾತುಗಳು…

ಪ್ರಭುತ್ವ ಆಗಾಗ ದೇಶವಾಸಿಗಳ ಕಿವಿಗೆ
ಬೀಳುವಂತೆ ತನ್ನ ಮನದ ಮಾತುಗಳನ್ನು
ಕೋಟಿಗಳಿಗೆ ಕಮ್ಮಿ ಇಲ್ಲದಂತೆ ವ್ಯಯಿಸಿ
ಮಾತನಾಡುವುದುಂಟು..ಇದು ಪ್ರಜೆಗಳ
ಸೌಭಾಗ್ಯವಲ್ಲದೆ ಮತ್ತೇನು?

ಜನರ ಮನಸ್ಸಿನಲ್ಲೂ ಆಡದೇ ಕಾದಿಟ್ಟ
ಮಾತುಗಳಿವೆ, ಸಂದೇಹಗಳಿವೆ, ಗುಮಾನಿಗಳಿವೆ
ಆಕ್ರೋಶವಿದೆ, ಹೃದಯದ ಫಾಯಗಳೆಲ್ಲ
ಸಿಡಿದು ಮಾತುಗಳಾಗಲು ಹವಣಿಸುತ್ತಿವೆ
ಕೇಳುವ ಕಿವಿಗಳು ತುರ್ತಾಗಿ ಬೇಕಿವೆ…
ಕಣ್ಣೆದುರೇ ಔಷಧಿ ಸಿಗದೆ ಸತ್ತವರನ್ನು ಕಂಡ
ವೈದ್ಯರಲ್ಲಿ ಹೇಳಬೇಕಾದ ಮಾತುಗಳಿವೆ….

ಮಗನಿಗೆ ಕಡೆಯ ವಿದಾಯ ಹೇಳಲಾಗದ ತಂದೆಯ…
ಎದೆಯಲ್ಲಿ ಕುದಿ ದುಃಖದ ಮಾತುಗಳಿವೆ
ಗಂಡ..ಮಕ್ಕಳು ಚಿಕಿತ್ಸೆ ಸಿಗದೇ ಮರಣಿಸಿದ್ದನ್ನು
ಕಂಡು ತತ್ತರಿಸಿದ ಸ್ತ್ರೀಯ ಕರುಳಿನಿಂದ
ಹೊರಬಂದ ಶಾಪದ ಮಾತುಗಳಿವೆ….
ಇದ್ದಕ್ಕಿದ್ದಂತೆ ತಬ್ಬಲಿಗಳಾದ ಅಬೋಧ ಹಸುಗೂಸುಗಳ
ಇನ್ನೂ ಹಾಲೂ ಆರದ ತುಟಿಗಳಲ್ಲೂ ಮಾತುಗಳಿವೆ..

ಕೆಲಸ ಕಳೆದುಕೊಂಡು ಹೊಟ್ಟೆಗಿಲ್ಲದೆ ಬರಿಗಾಲಲ್ಲಿ,
ಸುಡುಬಿಸಿಲಲ್ಲಿ ನೂರಾರು ಮೈಲಿ ನಡೆದು
ಹುಟ್ಟೂರು ಸೇರಿದ ಶ್ರಮಿಕರ ಹಸಿವ ದಾವಾಗ್ನಿಯಲ್ಲೂ
ಆಕ್ರೋಶದ ಮಾತುಗಳಿವೆ….

ಹಸಿರುನೀಲಿ ಬಣ್ಣ ಪಡೆದ ಗಂಗೆಯ ಒಡಲಲ್ಲೂ
ಸೂತಕದ,ನೋವು,ಆಕ್ರಂದನಗಳ ಮಾತುಗಳು
ಮುಳುಗಿವೆ…ಇಂತಹ ನೋವಿಗದ್ದಿದ ಸಾವಿರಾರು
ಮಾತುಗಳು ಪ್ರತಿನಿತ್ಯ ಮರಣಿಸುತ್ತಿವೆ ಮೌನವಾಗಿ…
ಸಾವಿನೆದುರು ಮಾತು ಬರಿಯ ಒಣ ಗಲಾಟೆ
ಖಾಯಿಲೆ, ನೋವು,ನಷ್ಟ, ಉಪವಾಸ,ಬಡತನಗಳು
ಮಾತಾಡದೆಯೆ ಕೊಲ್ಲುತ್ತವಾದರೆ, ಕೆಲವೊಮ್ಮೆ ಮಾತುಗಳೂ…

ಆಡುವ ಮಾತುಗಳೆಲ್ಲ ಮನದ ಮಾತುಗಳಾಗಲಾರವು
ಮತ್ತು ಮನದ ಮಾತುಗಳು ಅಂತರಂಗಕ್ಕೆ ಮಾತ್ರ
ಕೇಳುತ್ತವೆ ಹಾಗೂ ಅವು ಮಾರುಕಟ್ಟೆಯನ್ನು ಎಂದಿಗೂ
ಆಕರ್ಷಿಸಿಸಲಾರವು.

ಶುಭದಾ ಎಚ್.ಎನ್.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *