ಕವನ ಪವನ/ ಮದುವೆಯಾಗಿ ಎಂಟು ವರ್ಷಗಳ ನಂತರ- ಅನು: ನಚಿಕೇತ ವಕ್ಕುಂದ
ಮದುವೆಯಾಗಿ ಎಂಟು ವರ್ಷಗಳ ನಂತರ
ನಾನು ಮೊದಲ ಸಲ ತಂದೆ – ತಾಯಿಗಳ ಕಂಡೆ,
ಅವರು ಕೇಳಿದರು ‘ನೀನು ಸಂತೋಷವಾಗಿರುವೆಯಾ?’ ಎಂದು.
ಅದೊಂದು ಅಸಂಬದ್ದ ಪ್ರಶ್ನೆ
ಅದನ್ನು ಕೇಳಿ ನಗಬೇಕಿತ್ತು ನಾನು.
ಬದಲಾಗಿ ಅತ್ತುಬಿಟ್ಟೆ,
ಬಿಕ್ಕಳಿಕೆ ನಡವೆಯೇ ಹೌದೆಂದು ತಲೆಯಾಡಿಸಿದೆ.
ನಾನವರಿಗೆ ಹೇಳಬೇಕೆಂದುಕೊಂಡೆ
ಮಂಗಳವಾರ ಸಂತೋಷದಿಂದಿದ್ದರೆ
ಬುಧವಾರ ದುಃಖತಪ್ತಳಾಗಿದ್ದೆನೆಂದು.
ಒಂದು ದಿನ 8 ಘಂಟೆಗೆ ಸಂತೋಷದಿಂದಿದ್ದರೆ
8.15 ರಷ್ಟೊತ್ತಿಗೆ ಅತಿಯಾದ ದುಃಖ ಅಪ್ಪಳಿಸಿತೆಂದು.
ಒಂದು ದಿನ ನಾವೆಲ್ಲ ಹೇಗೆ ಕಲ್ಲಂಗಡಿ ತಿಂದು
ಖುಷಿ ಪಟ್ಟೆವೆಂದು ಹೇಳಬೇಕೆಂದುಕೊಂಡೆ.
ಹಾಗೆಯೇ ನಾನೊಮ್ಮೆ
ಇಡೀ ರಾತ್ರಿ ಅಳುತ್ತ ನನ್ನಷ್ಟಕ್ಕೆ ನೊಂದು
ಹಾಸಿಗೆಯಲ್ಲಿ ವಿಲ ವಿಲ ಒದ್ದಾಡಿದೆ ಎಂಬುದನ್ನು ಕೂಡ.
ಹನ್ನೆರಡು ಜನರ ದೊಡ್ಡ ಕುಟುಂಬದಲ್ಲಿ
ಸಂತೋಷದಿಂದಿರುವುದು ಅಷ್ಟು ಸುಲಭವಲ್ಲ
ಎಂಬುದನ್ನು ಅವರಿಗೆ ಹೇಳಬೇಕೆಂದುಕೊಂಡೆ.
ಆದರವರು ಪುಟ್ಟಕುರಿಮರಿಗಳಂತೆ ಅತ್ತಿತ್ತ ಕುಪ್ಪಳಿಸುವ
ನನ್ನಿಬ್ಬರು ಮಕ್ಕಳನ್ನು ನೋಡುತ್ತಿದ್ದರು.
ಅವರ ಒಣಗಿ ಮುದುಡಿದ ಕೈಗಳು, ಬಾಡಿದ ಮುಖಗಳು
ಹಾಗೂ ಮುದಿಯರಂತೆ ನರೆತ ರೆಪ್ಪೆಗಳು
ಇವೆಲ್ಲ ಅತಿ ಅಸಹನೀಯವಾದರೂ ಅಷ್ಟೇ ವಾಸ್ತವಗಳು.
ಆದ್ದರಿಂದ ನಾನು ಈ ಒಂದೊಂದನ್ನೂ ನುಂಗಿಕೊಂಡು
ಮಹಾಸಂತುಷ್ಟಿಯ ಮುಗುಳುನಗೆ ಬೀರಿದೆ.
ಅನುವಾದ : ನಚಿಕೇತ ವಕ್ಕುಂದ
ಇಂಗ್ಲಿಷ್ ಮೂಲ : ಮಮತಾ ಕಾಲಿಯಾ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.