ಕವನ ಪವನ/ ಮತ್ತೆ ಮತ್ತೆ ಹುಟ್ಟುತ್ತಾರೆ -ಕಾತ್ಯಾಯಿನಿ ಕುಂಜಿಬೆಟ್ಟು
ಕುಮಾರವ್ಯಾಸ ಭಾರತದ ದ್ರೌಪದಿಯು
“ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು…
ಹೆಣ್ಣು ಜನುಮವೆ ಸುಡಲಿ… ಘೋರಪಾತಕಿಯೆನ್ನವೊಲು ಮುನ್ನಾರು ನವೆದವರುಂಟು ?”
ಎನ್ನುತ್ತ ಬಸಿರ ಹೊಸೆದುಕೊಂಡು ಅತ್ತದ್ದು ಸುಮ್ಮನೆಯೇ ಹೇಳಿ ?
ಕೃತ ತ್ರೇತ ದ್ವಾಪರ ಕಲಿ… ಯಾವ ಯುಗವಾದರೇನಂತೆ
ಹೆಣ್ಣು ಹೆಣ್ಣೇ…
ಅದೇ ಕೀಚಕ ಅದೇ ಸೈಂದವ ಅದೇ ರಾವಣ ಅದೇ ದೇವೇಂದ್ರ
ನರಕಾಸುರರು ಮತ್ತೆ ಮತ್ತೆ ಪುಲ್ಲಿಂಗ ಹೊತ್ತು ಹುಟ್ಟುತ್ತಾರೆ
ಹೆಣ್ಣಿನ ಕನಸು ಸುಡಲು
ಹೆಣ್ಣ ಬಸಿರಲೇ…!!!
ಮೊನ್ನೆ ಮೊನ್ನೆ ಗೋವಿನ ಮುಖವಾಡ ಹಾಕಿಕೊಂಡ ವ್ಯಾಘ್ರವೊಂದು
ನಂಬಿ ಬಳಿ ಬಂದ ಗೋವಿನ ಚರ್ಮವನ್ನು ಸಿಪ್ಪೆ ಸುಲಿದಂತೆ ಸುಲಿದು
ಬಿಸಿ ನೆತ್ತರು ಸೋರುವ ಮಾಂಸವನ್ನು ದೊರಗು ನಾಲಗೆಯಲ್ಲಿ ನೆಕ್ಕಿ ನೆಕ್ಕಿ
ಮೋರಿಗೆಸೆದು ಅದರ ಚರ್ಮವನ್ನೂ ತಾನೇ ಹೊದ್ದುಕೊಂಡಿತಂತೆ…
ಮೋಹನ ಮುಖವೊಂದು ಸಂಭೋಗಿಸಿ ಗರ್ಭಪಾತಕೆ ಸೈನೈಡ್ ಕೊಟ್ಟು
ಬಾತ್ರೂಂನಲ್ಲೇ ಸರಣಿಯಲ್ಲಿ ಹೆಣ್ಣು ಆತ್ಮಗಳ ಗರ್ಭಪಾತ ಮಾಡಿಸಿತಂತೆ…
ಬಾಟಲಿ ನಿಪ್ಪಲ್ ಚೀಪುತ್ತಿದ್ದ ಹಸುಗೂಸು… ಲಾಲಿಪಾಪ್ ಬಣ್ಣದಲ್ಲಿ ಮೈಮರೆತ ಹುಡುಗಿ
ಹದಿಹರೆಯದ ಎಳೆಕಾಯಿ ಹೈಸ್ಕೂಲ್ ಹುಡುಗಿ ಹಣ್ಣಾಗುವ ಮುನ್ನವೇ
ಬಲಾತ್ಕಾರಕ್ಕೆ ಹಣ್ಣಾಗಿ ಮಣ್ಣಾದರು
ಬುದ್ಧಿಯಿದ್ದರೂ ಬುದ್ಧಿಯನ್ನು ವಿದೇಶಿ ಪರ್ಫೂಮ್ ಗಿಫ್ಟಿಗೆ ಮಾರಿಕೊಂಡವಳು
ಹೊಗಳಿಸಿ ಹೊಗಳಿಸಿಕೊಂಡು ತಾನೇತಾನಾಗಿ ಹೊನ್ನ ಶೂಲಕ್ಕೇರಿದವಳು
ಕೈಹಿಡಿದವನನ್ನು ನಂಬಿ ಓಡಿ ಬಂದವಳು
ಅಪಹರಣಕ್ಕೊಳಗಾದವಳು…
ಕೆಂಪುದೀಪದ ಬೆಳಕಲ್ಲಿ ಏಳೇಳು ಜನ್ಮದ ಏಳೇಳು ಚರ್ಮಗಳನ್ನು
ಕ್ಷಣಕ್ಕೊಮ್ಮೆ ಸುಲಿಸಿಕೊಳ್ಳುತ್ತ
ಸಾವಿನ ತಟ್ಟೆಯಲ್ಲಿ ಚೀರಾಡುತ್ತಿದ್ದಾರೆ
ರೈಲು ಬಸ್ಸು ಕಾರು ಹಾದಿ ಬೀದಿ ಕಾಡು ಹಾಡಿ
ಎಲ್ಲೆಂದರಲ್ಲಿ … ನಿತ್ಯ ಹಸಿಹಸಿ ಸುದ್ಧಿ
ಹೆಣ್ಣಿನ ಮೇಲೆ ಅತ್ಯಾಚಾರ
ಹಣ್ಣುಹಣ್ಣು ಮುದುಕಿಯ ಮೇಲೆ ಅತ್ಯಾಚಾರ
ಹಸುಗೂಸಿನ ಮೇಲೆ ಅತ್ಯಾಚಾರ
ತಂದೆಯಿಂದಲೇ ಚಿಕ್ಕಪ್ಪನಿಂದಲೇ ಶಿಕ್ಷಕನಿಂದಲೇ
ಲೇ ಲೇ ಲೇ… ಲೇ ನಂಬಿದವನಿಂದ ‘ಲೇ’…
ಪದಗಳು ಉರಿಯುತ್ತಿವೆ ಎದೆಯೊಳಗೆ ಧಗಧಗನೆ
“ಕತ್ತರಿಸಿ ಹಾಕಬೇಕು … ಮಕ್ಳ…!!!”
ಥತ್! ಗಂಡಿನ ಅನಾಚಾರಕ್ಕೆ ಹೆಂಗಸರು ಬೈಯುವ
ಬೈಗುಳವೂ ಹೆಣ್ಣಿಗೇ…! ಯಾರುಯಾರಿಗೇ ಬೈಯಲಿ
ಜಗತ್ತಿನ ಭಾಷೆಯೇ ಪುಲ್ಲಿಂಗ ! ಬೈಗುಳದ ಅರ್ಥಕೋಶವೇ ಗರ್ಭಕೋಶ !
ಮುಂ…ಗಂಡ, ಸೂ…ಮಗ… ಸನ್ ಆಫ್ ಬಿಚ್- ಡಾಗ್ ಅಲ್ಲ!!!
ನಂಬಿದವರಿಂದಲೇ… ಲೇ… ಸೀತೆಯೇ
ರಾವಣನು ನಿನ್ನ ಬಳಿ ಸನ್ಯಾಸಿ ವೇಷದಲ್ಲಿ ಬರಲಿಲ್ಲವೇ ?
ನಂಬಿದವರಿಂದಲೇ…
ಗಿಳಿ ಗೂಬೆ ಗೋವು ಹಾವು ಹುಲ್ಲೆ ಮೊಸಳೆ… ಗುಳ್ಳೆನರಿ ನಾಯಿ!
ಬಗೆಬಗೆಯ ನಗುವ ಮುಖವಾಡಗಳು ಈಗ ಮಾರಾಟಕ್ಕಿವೆ
ಅದರ ಅಳತೆಗೆ ಹೊಂದುವ ತೊಗಲು ಮೈಯೂ
ನಂಬಿದವರಿಂದಲೇ…ಲೇ…
ನಂಬಬೇಡಿ ಮುದ್ದು ಮರಿಗಳೇ
ನಂಬ’ಲೇ…’ ಬೇಡಿ ಗಿಡುಗ ರಣಹದ್ದುಗಳನ್ನು!
ಹಸಿ ಹಸಿ ಸಿಪ್ಪೆ ಸುಲಿದು ಉಪ್ಪುಕಾರ ಸುರಿದು
ಬೇಯಿಸಿ ತಟ್ಟೆಯಲ್ಲಿ ಇಡಿಯಾಗಿ ಜೀವಂತ ಇಡುತ್ತಾರೆ ನಿಮ್ಮನ್ನು ನಾಳೆ
ನಿತ್ಯ ‘ಚಿಕ್ಕನ್ ಚಿಲ್ಲಿ’ ಎಂಬ ನಾಮಫಲಕ
ನಿಮ್ಮ ಹಣೆಗೆ ಕಟ್ಟಿ.
-ಕಾತ್ಯಾಯಿನಿ ಕುಂಜಿಬೆಟ್ಟು
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.