ಕವನ ಪವನ / ಮಗಳು … – ಆಶಾ ನಾಗರಾಜ್
ತರಕಾರಿ ಹೆಚ್ಚಿ, ಒಗ್ಗರಣೆ ಹಾಕಲು
ಒಳ ಹೊಕ್ಕಳು ಅ೦ದು ಮಗಳು.
ಅಲ್ಲಿ೦ದ ಹೊರಬರುವ
ದಾರಿ ಮರೆತಳು ಅವಳು.
ಗೊಜ್ಜುಅವಲಕ್ಕಿ ಒಗ್ಗರಣೆಗಳು
ಹಿರಿದಾಗಿದ್ದವು ಅವಳಿಗೆ ಅ೦ದು.
ಒತ್ತುಶ್ಯಾವಿಗೆ, ಹೋಳಿಗೆಗಳಲ್ಲೆಲ್ಲಾ
ಇ೦ದು ಅವಳೇ ಮು೦ದು.
ಚೂರಿ, ಈಳಿಗೆಮಣೆಗಳನ್ನು ಬಲು
ಮುತುವರ್ಜಿಯಿ೦ದ
ಮುಟ್ಟುತ್ತಿದ್ದಳ೦ದು.
ಈ ಆಯುಧಗಳೆಲ್ಲಾ ಆಟದ
ಪರಿಕರಗಳಾಗಿವೆ ಅವಳಿಗಿ೦ದು.
ನೋಡಿ, ಮುಟ್ಟಿ, ಮೂಸಿ ಪದಾರ್ಥಗಳ
ಪಟ್ಟಿ ತಯಾರಿಸುತ್ತಿದ್ದಳು,
ಚಮಚ, ಲೋಟಗಳಲ್ಲಿ ಅಳೆದು
ನಳಪಾಕ ಇಳಿಸುತ್ತಿದ್ದಳು.
ಇ೦ದು ಕೈ ಬೆರಳುಗಳಲ್ಲಿ ಹಿಡಿದು
ಮುಷ್ಟಿಯಲ್ಲಿ ಎಲ್ಲವ ನಿಭಾಯಿಸುವಳು.
ಮನಸ್ಸಿನಲ್ಲಿ ಪದಾರ್ಥವ ನೆನೆದು ಕೈಯನ್ನು
ಚಾಚಿದೊಡೆ ಆ ಪದಾರ್ಥದ ಡಬ್ಬಿಯನೇ ಕೈಮುಟ್ಟುವುದು!
ಅಯ್ಯೊ.. ಒಳಹೊಕ್ಕೆನೆಂದು
ನಿಟ್ಟುಸಿರನೆಂದು ಬಿಟ್ಟವಳಲ್ಲ
ಬಡಿಸುವಾಗ ಉಸಿರ ಗಟ್ಟಿಯಾಗಿ ಹಿಡಿದು
ಬಡಿಸುವಳು,ಉಪ್ಪು-ಖಾರ ಹದ ತಪ್ಪಿದೆ ಎಂದಲ್ಲ.
ಉಣ್ಣುವವರ ಲಯ-ತಾಳದ ಗತಿಯ ಪರಿವೆ ಅವಳಿಗೆ.
ಚಂದ್ರಯಾನಕ್ಕೆ ಸಿದ್ಧಳಾಗಿರುವಳು.
ಭದ್ರವಾಗಿ ನಿಂತಿರುವಳು ಅಡುಗೆ ಕೋಣೆಯಲ್ಲಿ.
ಎಲ್ಲಿ ಊಹಿಸಿದರೂ ಅಲ್ಲಿ ಕಾಣುವಳು.
ಯಾವ ಪಾತ್ರೆಯಾದರೂ ಅದರ ಆಕಾರವನ್ನೇ ಪಡೆಯುವಳು.ಮಗಳು
ಅವಳು ನಿಸ್ಸೀಮಳಾಗಿರುವಳೋ?
ಅಥವಾ ಒಗ್ಗಿ ಹೋಗಿರುವಳೋ?
ಪ್ರಾವೀಣ್ಯ ಪಡೆದಿರುವಳೋ?
ಪಕ್ವವಾಗಿರುವಳೋ? ಮಗಳು.
ಆಶಾ ನಾಗರಾಜ್
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.