ಕವನ ಪವನ / ಭಾಗೀರತಿ ಉಳಿಸಿದ ಪ್ರಶ್ನೆಗಳು -ನೂತನ ದೋಶೆಟ್ಟಿ

ಭಾಗೀರತಿ ಉಳಿಸಿದ ಪ್ರಶ್ನೆಗಳು

ಕೆರೆಗೆ ಗಂಡು-ಹೆಣ್ಣೆಂಬ ಬೇಧವೆಲ್ಲಿಯದು?
ಮಗನೆಂದೂ ಹೇಳಬಹುದಿತ್ತು
ಬಲಿಗಾದರೋ ಸೊಸೆಯೇ ಸರಿ
ಜೋಯಿಸರ ಮಾತು

ಎಂಜಲ ನುಂಗಿದ ಭಾಗೀರತಿಯ
ಗಂಟಲಲ್ಲಿ ಒಣಗಿದ ಪ್ರಶ್ನೆ
ಹಜಾರದ ಪಿಸುಮಾತಿಗೆ ಬಾಯಿಲ್ಲವೇಕೆ?

ಎಳೆಯ ಕೊಟ್ಹೆಣ್ಣ ಮನದಳಲು
ತವರ ಹೊಸ್ತಿಲ ಆಚೆ
ಚಿಗುರ ಚಿವುಟುವ ನಿಷ್ಠುರತೆ

ಹರಳುಗಟ್ಟಿದ ಕಣ್ಣೀರು
ಅಕ್ಕಿ-ಬೇಳೆಗೆ ಎಸರು
ಸಾವ ಮೆರವಣಿಗೆಗೂ ಪಾಯಸದೂಟ

ಮಡಿಯುಟ್ಟು ನಡೆದವಳ ಹಿಂದೆ
ಕಟುಕರಾ ದಂಡು
ಸ್ವಾರ್ಥಕೆಲ್ಲಿಯ ಬಲ?

ಕೋವಿ ಕೊಡಲಿಗಳಿಲ್ಲ
ಇರಿವ ಮೌನದ ಸೈನ್ಯ
ಎದೆಗಾತಿ ಉಳಿಸಿದಳು
ರಣಹೇಡಿ ಪಡೆ

ಕಣ್ಣ ಕನಸುಗಳು
ಎದೆಯ ಆಸೆಗಳು
ದೂರದಿನಿಯನ ನೆನಪು

ಕರಗುತ್ತ ಕರಗುತ್ತ
ಮೆಟ್ಟಲೇರಿತು ಕೆರೆ
ನಿಂತಲ್ಲಿ ನಿಂತ ನೀರೆ
ಸಿಗದೆ ಕೈ ಆಸರೆ

ಉಳಿವಿಗೆ ಇರದು ಅರ್ಥ
ಸಾವಲ್ಲೆ ಸಾರ್ಥಕತೆ
ಯುಗಯುಗಕು ಉಳಿದ ಪ್ರಶ್ನೆ
ಹೂಳಲ್ಲಿ ಹೂತಿದೆ.

  • ನೂತನ ದೋಶೆಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *