ಕವನ ಪವನ/ ಬರಿಗಾಲಿನವರ ಸ್ವರ್ಗಾರೋಹಣ – ಎಂ. ಆರ್. ಕಮಲ
ಬರಿಗಾಲಿನವರ ಸ್ವರ್ಗಾರೋಹಣ
ಇರುಳ ನಕ್ಷತ್ರ ನೋಡುತ್ತ ನಡೆದವರಿಗೆ
ನೆಲದ ಹಳ್ಳ, ಕೊಳ್ಳ, ಗುಂಡಿ ಗೊಟರು
ಯಾವುದೊಂದೂ ಕಣ್ಣಿಗೆ ಬೀಳಲಿಲ್ಲ
ಬಸಿರು, ಬಾಣಂತಿ, ಮುದಿತನ, ಎಳೆತನ,
ಪದಗಳಷ್ಟೇ ಆಗಿ ಪಾದ ಬೆಳೆಸಿದರು
ಕಣ್ಣೊಳಗೆ ಕುಣಿದದ್ದು ಒಂದು ಸೂರು
ಛಾವಣಿ ಹೆಂಚಿನದೋ, ಹುಲ್ಲಿನದೋ
ಕಟ್ಟಿಕೊಂಡು ನಿಮಗೇನಾಗಬೇಕು
ಅವರಿಗಂತೂ ಅದು ನೆಮ್ಮದಿಯ ಗೂಡು
ನರಕದಲ್ಲೇ ಕಟ್ಟಿಕೊಂಡ ಒಂದು ಸ್ವರ್ಗ
ಸ್ವರ್ಗಾರೋಹಣ ಮಾಡುವಾಗ
ಬಿದ್ದವರೆಷ್ಟು ಎಂದು ಕೇಳುತ್ತಿರಬೇಡಿ
ಕಾಲುನಡಿಗೆಯೋ, ಕುದುರೆಯೋ
ಡೋಲಿಯೋ, ಬೆನ್ನಿನಾಸರೆಯೋ
ಜೊತೆಗೆ ನಾಯಿಯೋ ಎಂಥದ್ದೋ
ಒಟ್ಟಿನಲ್ಲಿ ದಾರಿ ಸಾಗುತ್ತಿರಬೇಕು
ಬೊಗಸೆಯಷ್ಟು ನೀರು ಆಸರೆಯಾಗಿ
ಊಟ, ತಿಂಡಿ ಸಿಕ್ಕಿದರೂ ಸಿಗಬಹುದು!
ಬಿದ್ದವರನ್ನು ಬೇಗ ಸ್ವರ್ಗಕ್ಕೆ ಸೇರಿಸಿ,
ಎದ್ದವರು ನರಕದ ದರ್ಶನ ಪಡೆದೇ ಹೋದರು!
–ಎಂ. ಆರ್. ಕಮಲ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.