ಕವನ ಪವನ/ ಬಯಸಿದ ಸೀರೆ ಸಿಗಲಿಲ್ಲ! – ಮಾಲತಿ ಪಟ್ಟಣಶೆಟ್ಟಿ

ಬಯಸಿದ ಸೀರೆ ಸಿಗಲಿಲ್ಲ!

1
ಉಡಬೇಕೆಂದಿದ್ದ ಸೀರೆ ಸಿಗಲಿಲ್ಲ,
ಇಲ್ಲ, ಈ ಜನ್ಮದಲ್ಲಿ ಸಿಗಲೇ ಇಲ್ಲ;
ನನಗೆ ಬೇಕಾದಂಥ ನೇಯ್ಗೆ, ಬಣ್ಣಗಳ ಜೋಡು,
ಚಿತ್ತಾರಗಳ ಹಾಡು, ಅಂಚಲ್ಲಿ ತುಂಬಿ ತುಳುಕುವ ನಕ್ಷತ್ರ ಸಾಲು!
ಕಣ್ಣಲ್ಲಿ ಬೆಳಕು ತುಂಬುವ ಸೀರೆ,
ಎದೆಯಲ್ಲಿ ಅಂಥಃಕರಣಕ್ಕೆ ಇಂಬಾದ ಸೀರೆ,
ಬೆಳದಿಂಗಳ ತಂಗಾಳಿಯಂಥ ಸೀರೆ

ಜೀವವಿಡಿ ಹುಡುಕಿದೆ ಸಿಗಲಿಲ್ಲ!

2
ಕಣ್ಣಿನ ಸಾವಿರ ಬಣ್ಣಗಳ ಸೀರೆ,
ಅದುಮಿಟ್ಟ ಬಯಕೆಯ ಎಳೆಯಿಂದ ನೇಯ್ದದ್ದು,
ಮನದ ಕುಸಿರಿಗೆ, ಉಸಿರಿಗೆ ಹಾ ಎಂಬ ಅನುಭವ
ಕೊಡುವ ಸೀರೆ, ತಿಳಿಯಲಾರರು, ಅಳೆಯಲಾರರು
ಯಾರೇನು ಕೊಟ್ಟಾರು ಇಂಥ ಸೀರೆ

ನಾನು ಬಯಸಿದ ಸೀರೆ!!

3
ನನ್ನ ಎದೆ ಬಡಿತ, ಬಯಕೆ, ಬಿಸುಪು, ಬೇಡಿಕೆಗಳಿಂದ
ಕಲ್ಪನೆಯಲ್ಲಿ, ಕನಸಲ್ಲಿ ನೇಯುತ್ತಲೇ ಇದ್ದೇನೆ ಹಗಲುರಾತ್ರಿ!
ದರ್ಶನಕ್ಕೆ ಸಿಕ್ಕರೂ ಸಿಗದು ಸ್ಪರ್ಶನಕ್ಕೆ,
ದೂರದಲ್ಲೇ ಕಣ್ಣು ತುಂಬುತ್ತದೆ ಸೀರೆ,
ನೋಡಿ ಹುಚ್ಚಳಂತೆ ಕುಣಿಯುತ್ತೇನೆ!!
ಏನು ಆ ಬಣ್ಣಗಳ ನರ್ತನ, ಆ ಕಾಗುಣಿತ, ಆ ಮಣಿತ

ಕಣ್ಣಲ್ಲೇ ಕಚ್ಚಿಕೊಂಡು ಸುಖಿಸುತ್ತೇನೆ ಕ್ಷಣ!!

4
ಆಕಾಶದಲ್ಲಿ ಸಿಗವು ಆ ಬಣ್ಣ,
ಸಾಗರದಲ್ಲಿ ಅಂಥ ಅಲೆಗಳಿಲ್ಲವೋ ಅಣ್ಣಾ,
ನೆಲದಲ್ಲಿ ಅಂಥ ಹಸಿರು ಇಲ್ಲವೇ ಇಲ್ಲ!!
ಕಣ್ಣ ಕೊಳದೊಳಗೆ ತೇಲಿ ನಿಲ್ಲುತ್ತದೆ ಶುಭ್ರ
ಕಮಲದಂತೆ, ಮನಸ್ಸನ್ನು ಗೆಲ್ಲುತ್ತದೆ ಪೂರ್ಣ ಚಂದಿರನಂತೆ!
ದೂರ ದೂರ ನಿಲ್ಲುತ್ತದೆ ಅದು,
ಕೈಗೆ ಸಿಗದಿರುವುದೇ ಭಾಗ್ಯ ಎನ್ನಲೇ?
ಕಲ್ಪನೆಯಲ್ಲಿ ನುಗ್ಗಿ, ಬಯಕೆಯಲ್ಲಿ ಹಿಗ್ಗಿ
ಕನಸಿನೊಳಗೊಂದು ಕನಸಾಗಿ ಕಾಣುವ ಸೀರೆ!

ಇದು ನಾನು ಈ ಜನ್ಮದಲ್ಲಿ ಉಡದಂಥ ಸೀರೆ!!

  • ಮಾಲತಿ ಪಟ್ಟಣಶೆಟ್ಟಿ
    ಧಾರವಾಡ


Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *