ಕವನ ಪವನ/ ಬಯಲನ್ನೇ ಕನ್ನಡಿಯಾಗಿಸು…!- ಬಿದಲೋಟಿ ರಂಗನಾಥ್

ಹೇಳಲಾರದ ನೋವೊಂದು
ಮನಸ ಹಣ್ಣು ಮಾಡಿ ಒಡೆದು ಕವಿತೆಯಾಗಿ
ನಿದ್ದೆಯ ಮೂಗು ಮುರಿದು
ಮುಡಿಸಿದೆ ಕತ್ತಲಿಗೆ ದೀಪದ ಬತ್ತಿ

ಒಂಟಿ ಕಾಡುವ ಭಾವದ ಬುತ್ತಿ
ಬಿಚ್ಚಿ ಕಚ್ಚಿ ಕಚ್ಚಿ ತಿನ್ನುತಿದೆ
ರಾತ್ರಿಗಳ ಮೈ ಸವರುತ್ತ
ನೋವು ಅಲೆ ಅಲೆಯಾಗಿ ಗಾಳಿಯಲಿ ತುಂಬಿ
ಉಸಿರಾಡುತ್ತ ಬದುಕಿನ ನೆಲವ ಅಂಗೈಲಿಡಿದು

ಕವಿತೆಯಾಗಿರುವ ನೆಲದ ಮಣ್ಣಲಿ
ಈಗಾಗಲೆ ತಾವೂರಿದ ಬೇರಿನ ಸ್ಪರ್ಶ
ಗಿಡಕೆ ಜೀವ ನೀಡಿದೆ
ಹಸಿರಾಡುವ ಪ್ರತಿ ಎಲೆಯೂ
ಬದುಕಿನ ಬಣ್ಣದ ಗಾತ್ರವ ತೂಗುತಿದೆ

ನಿದ್ದೆದೂಡಿದ ರಾತ್ರಿಗಳಿಗೆ ಮುಖವಿರುವುದಿಲ್ಲ
ಅಂತರ್ಮುಖಿ ಭಾವವು ಚಲಿಸುವ ದಾರಿಯದು
ಯಾರೂ ಬೇಸರಿಸಿಕೊಳ್ಳದ
ಸದ್ದುಗದ್ದಲವಿಲ್ಲದ ನಮ್ಮದೇ ಸದ್ದಿಲ್ಲದ
ನಡಿಗೆಯ ಹೊತ್ತದು

ಬೆವರಿದ ಆತ್ಮ
ಗಾಳಿಯ ಬಯಸಿದೆ
ನೆಂದ ಮನಸು
ಬಿಸಿಲ ಕಿರಣದ ಸ್ಪರ್ಶಕೆ ಹವಣಿಸಿದೆ

ಮುಖವೇ ಕಾಣದ ಕನ್ನಡಿ ಎದುರು
ಎಷ್ಟಂತ ನಿಲ್ಲಲು ಸಾಧ್ಯ…?
ಬಯಲನ್ನೇ ಕನ್ನಡಿಯಾಗಿಸು
ಎಷ್ಟೊತ್ತಾದರೂ ನೋಡಿಕೊಳ್ಳಬಹುದು
ಸೋತ ಮುಖದ ಗೆರೆಗಳ ನಡುವೆ
ಮಾತು ಮೌನವಾಗಿಸಿದ ಕವಿತೆಯ ಸಾಲುಗಳನ್ನು

ಬೊಗಸೆ ತುಂಬಿದ ಕಣ್ಣೀರಲ್ಲಿ
ನಿನ್ನದೇ ಭಾವಹಕ್ಕಿ ಸತ್ತು ಬಿದ್ದಿದೆ !
ಶವ ಸಂಸ್ಕಾರ ಮಾಡಲು
ಎದೆಯ ನೆಲವೇ ಇಲ್ಲವಾದರೆ..
ಮತ್ತೆ ಎಲ್ಲಿ ಬಿತ್ತುವೆ ..?

-ಬಿದಲೋಟಿ ರಂಗನಾಥ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *