ಕವನ ಪವನ/ ಪ್ಲವ ಸಂವತ್ಸರದ ಹಬ್ಬ ಮಾಡಬೇಕೇ? – ವಸಂತ ಕಲ್ ಬಾಗಲ್

ಪ್ಲವ ಸಂವತ್ಸರದ ಹಬ್ಬ ಮಾಡಬೇಕೇ?


ಯುಗಾದಿ ಹಬ್ಬ ಮನೆಗಳಲ್ಲಿ;
ಮನೆ ಇದ್ದರೆ ಅಷ್ಟೇ

ಹೋಳಿಗೆ ಪಾಯಸ ಉಂಟು;
ದಿನಸಿ ಒಲೆ ಇದ್ದರಷ್ಟೇ

ಬೀದಿಯೇ ಜೀವನದ ಹಾದಿ
ಎನ್ನುವವರಿಗೆ ?

ಆಗಸವೇ ಸೂರು, ಮುಕ್ತಿಯೇ ಕದ
ಆದವರಿಗೆ ?

ಹೊಸತು ವರ್ಷ , ಅಂದರೆ
ಎಲ್ಲ ಬರೇ ಬೇವು, ಇಲ್ಲ ಬೆಲ್ಲ

ಇಲ್ಲ ಕಲ್ಲುಸಕ್ಕರೆ ಬರಿ ಕಲ್ಲು
ಬಾಯಲ್ಲಿ , ಜಠರದಲ್ಲಿ

ಕಾಲಡಿಯಲ್ಲಿ ಗೊಬ್ಬಳಿ ಮುಳ್ಳು
ಹಬ್ಬವೆಲ್ಲಾ ಬರೇ ಸುಳ್ಳು

ಎಲ್ಲಿಂದಲೋ ಬಂದು ಇನ್ನೆಲ್ಲಿಗೋ
ಹೋಗುವ ದಾರಿಹೋಕ

ಮೈಬಾಕರು ಕಾದು ಕುಳಿತಿರುವರು
ಕಪ್ಪು ಕತ್ತಲಲ್ಲಿ

ಮುಟ್ಟಿ ಮೈ ಕೊಟ್ಟು ಕೈ ಚೆನ್ನಪಟ್ಟಣದ ಗೊಂಬೆಯಂತೆ

ಒಂದರೊಳಗೊಂದು ಮಗು
ಮಗುವಿಗೊಂದು ಕೂಸು

ಕೂಸಿಗೊಂದು ಹಸುಳೆ
ತೆಗೆದಷ್ಟೂ ಮರಿಗಳು ಸೈಜುವಾರು.

ಹೆಣ್ಣು ಬೀದಿಪಾಲು , ಬೀದಿ
ಎಲ್ಲರ ಪಾಲು

ಹಬ್ಬ ಬಂದರೆಷ್ಟು ಬಿಟ್ಟರೆಷ್ಟು
ಇವರಿಗೆ ಇಲ್ಲ ಅಹವಾಲು

ಕೈ ಕೊಟ್ಟ ಕಮಲಗಳು
ಅರಳದೆಯೇ ಬಾಡುತವೆ

ಬೀದಿಯಲ್ಲಿ ಬಿಡಬೇಡಿ ,
ಇವು ಅಲ್ಲ ಬಸವಿ

ವಿಪ್ಲವ ಆಗದಿರಲಿ ಮುಗ್ಧ
ಬಾಲೆಯರ ಬಾಳು

ಸಂವತ್ಸರ ಯಾವುದಾದರೇನು ಬೀದಿ
ಬದಿ ವಲಸಿಯ, ನಾಳೆ ಏನು ?

ವಸಂತ ಕಲ್ ಬಾಗಲ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *