ಕವನ ಪವನ/ ಪ್ರೆಗಾ ನ್ಯೂಸ್ – ಅನು: ರೋಹಿಣಿ ಸತ್ಯ
ಅವಳ ಕಣ್ಣುಗಳು
ಮೋಡಗಳ ಕಾರ್ಖಾನೆಯಾಗುತ್ತವೆ.
ಒಂದು ಸಣ್ಣ ಕಾಡು
ಅದರಲ್ಲಿ ಅಳಿಲು, ಅಳಿಲಿನ ಮರಿಗಳು
ಕೋಳಿ, ಅದರ ರೆಕ್ಕೆಗಳ ಕೆಳಗೆ ಅವಿತುಕೊಳ್ಳಲು ಬರುವ ಕೋಳಿ ಮರಿಗಳು
ಆಗತಾನೆ ಹುಟ್ಟಿದ ಮೊಲದ ಮರಿಗಳ ಮೈ ಸೌಕುಮಾರ್ಯ
ತಾಯಿ ಹಾಲಿಗಾಗಿ ದಿನವೆಲ್ಲ ಎದುರುನೋಡುವ ಆಕಳ ಮರಿ
ಯಾವುದೊ ಹಸುಗೂಸು
ಮಂಜು ಮಂಜಾಗಿ ಕಂಗಳ ಪರದೆಯಮೇಲೆ
ಕನಸಿನಲ್ಲಿ ಬರುತ್ತವೆ.
ಮೋಡಗಳಂತೆ
ಹೂವಿನಂತೆ
ಪುಟ್ಟ ಚಿಗುರು ಮೂಡಿದ ಮೊಳಕೆಗಳಂತೆ
ಮೆತ್ತ ಮೆತ್ತನೆಯ ಕವಿತೆಯಂತಹದ್ದದೇನೋ
ತನ್ನ ಹೊಟ್ಟೆಯವನದಲ್ಲಿ
ಒಂದು ದಿನ ಶುರುವಾಗುತ್ತದೆಂದು
ದಿನವೂ ಕೆಲವು ಆಸೆಗಳೊಂದಿಗೆ ಕಂಗಳಿಗೆ
ಬಣ್ಣ ಬಣ್ಣದ ಕನಸುಗಳನ್ನು ಬಟ್ಟೆಗಳಂತೆ
ತೊಡಿಸುತ್ತಾಳೆ.
ಮಕ್ಕಳೆಷ್ಟು? ಅಂತ
ಯಾರಾದರೂ ಕೇಳಿದಾಗ ಪಾಪಾಸುಕಳ್ಳಿ ಗಿಡವನ್ನು
ಪ್ರಶ್ನೆಗಳ ರೀತಿ ಹೊಟ್ಟೆಯಲ್ಲಿ ಇಳಿಸುತ್ತಿರುವಂತೆ ತಳಮಳಗೊಳ್ಳುವ ಆಕೆ
‘ಸೋಷಲ್ ಗಾದರಿಂಗ್ಸ್’ ಎಲ್ಲವನ್ನು ಬಿಟ್ಟುಬಿಟ್ಟು
ಮನೆಯ ನಾಲ್ಕು ಗೋಡೆಗಳ ನಡುವೆ ಮಕ್ಕಳ ಪ್ರಪಂಚಕ್ಕಾಗಿ
ಪ್ರಾರ್ಥನೆಗಳ ತೋಟವನ್ನು ಬೆಳೆಸುತ್ತಾಳೆ.
ಋತುಕ್ರಮ ಒಂದು ದಿನ ತಡವಾದರೆ ಸಾಕು
ನಡುಗುತ್ತಿರುವ ಕೈಗಳಿಂದ “ಪ್ರೆಗಾ ನ್ಯೂಸ್” ಅನ್ನು ಹರಿಯುತ್ತ
ಒಂದೊಂದು ಗೀಟನ್ನೇ ‘ನೆಗೆಟಿವ್’ ಆಗಿ ಅರವತ್ತನೇ ಸಲ
ನೋಡಿಕೊಂಡು
ಅರ್ಧಕ್ಕೆ ತುಂಡರಿಸಿದ ದೇಹದಂತೆ ವಿಲವಿಲ ಒದ್ದಾಡುವ
ಚಿಟ್ಟೆಯಾಗುತ್ತಾಳೆ.
ಅವಳು ಅವರಿಗೆ ಮಕ್ಕಳು ಹೆರಲಾಗದ ಬಂಜೆ.
ಆಕೆಗೆ ಆಕೆ ಪ್ರತಿ ತಿಂಗಳು ತನಗೆ ತಾನೇ
ಮತ್ತೆ ಹುಟ್ಟುವ
ಮಂಜಿನ ಮುದ್ದೆ.
ಮಕ್ಕಳೇ ಅಳತೆಗೋಲಾದ ಪ್ರಪಂಚಕ್ಕೆ
ಅಳೆಯಲಾಗದ ತಾಯಿಯ ಪ್ರೀತಿ ತೂಗುವ ಬಟ್ಟು.
ತೆಲುಗು ಮೂಲ : ಮೆರ್ಸಿ ಮಾರ್ಗರೆಟ್
ಅನುವಾದ : ರೋಹಿಣಿ ಸತ್ಯ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.