ಕವನ ಪವನ/ ಪ್ರೀತಿ ಮುಗಿದ ಮೇಲೆ – ಶ್ರೀದೇವಿ ಕೆರೆಮನೆ
ಪ್ರೀತಿ ಮುಗಿದ ಮೇಲೆ
ಎಲ್ಲವನ್ನೂ ನಿನಗೆ ಹೇಳಲೇ ಬೇಕೆ?
ಅಕ್ಕಪಕ್ಕದವರೆಲ್ಲ ಕಣ್ಣರಳಿಸುವಂತೆ ಸಿಡುಕುತ್ತಾನೆ
ನಿನಗೆ ಹೇಳದೇ ಹುಲ್ಲು ಕಡ್ಡಿಯನ್ನೂ
ಎತ್ತಿಡಲಾಗದು ನನಗೆ
ಅವನದ್ದೇ ಮಾತು ನೆನಪಾಗಿ
ಕಣ್ಣು ಮಸುಕಾಗುತ್ತದೆ
ಪ್ರತಿದಿನ ಬೆಳ್ಳಂಬೆಳಿಗ್ಗೆಯೇ ನಿನಗೆ
ಮೆಸೆಜು ಕುಟ್ಟುತ್ತ ಕುಳಿತುಕೊಳ್ಳುವಷ್ಟು
ಸಮಯ ನನ್ನಲ್ಲಿಲ್ಲ
ಅಸಹನೆ ಕಣ್ಣಲ್ಲಿ ಇಣುಕುತ್ತದೆ
ನಿನಗೆ ಶುಭೋದಯ ಹೇಳದೆ
ಕಣ್ಣೇ ಬಿಡಲಾಗದು ಎಂದವನು ಇವನೇ ತಾನೆ
ಸೂರ್ಯೋದಯಕ್ಕೆ ತಾವರೆಯಂತೆ ಅರಳಿದ್ದ ಮನಸ್ಸು
ಕ್ಷಣಗಳಲ್ಲೇ ಬಾಡಿ ಉದುರಿಹೋಗುತ್ತದೆ
ಛೆ ಎಂತಹ ಕಿರಿಕಿರಿ ನಿನ್ನದು
ಸ್ನೇಹಿತರೊಂದಿಗೂ ಕ್ಷಣಕಾಲ ಹಾಯಾಗಿರುವಂತಿಲ್ಲ
ಕೋಪ ಮೇರೆಮೀರಿರುವುದು
ಮುಖಕಾಣದಿದ್ದರೂ ಸ್ಪಷ್ಟವಾಗಿ ಅರಿವಾಗುತ್ತಿದೆ
ಯಾರು ಜೊತೆಗಿದ್ದರೇನು
ಮನಸು ಸದಾ ನಿನ್ನನ್ನೇ ಧ್ಯಾನಿಸುತ್ತದೆ
ಎಂದು ಅವನು ಹೇಳಿದಂತೆ ತಾನೇ ಭ್ರಮಿಸಿದೆನಾ
ಮನಸು ಗೊಂದಲಕ್ಕೊಳಗಾಗುತ್ತದೆ
ಸದಾ ನನ್ನ ಜೊತೆಗೇ ಇರುವುದಾದರೂ ಏಕೆ
ನಿನ್ನ ಸ್ನೇಹಿತೆಯರಿಲ್ಲವೇ
ಮಾತಲ್ಲಿ ದೂರ ಸರಿಸುವ ಹುನ್ನಾರ
ನಾವಿಬ್ಬರಿರುವಾಗ ಬೇರೆಯವರೇಕೆ
ಎಂದ ಮಾತಿಗೆ ಗೆಳತಿಯರನ್ನೆಲ್ಲ ತಪ್ಪಿಸಿದ್ದು
ನೆನಪಾಗಿ ಕಣ್ಣಂಚು ಒದ್ದೆಯಾಗುತ್ತದೆ
ನಿನ್ನಿಂದ ಅಡ್ಡಿ, ಏನೂ ಸಾಧಿಸಲಾಗುತ್ತಿಲ್ಲ
ಕೂರಲಗಿನ ಹರಿತವಾದ ಚಾಕು
ನೇರವಾಗಿ ಎದೆಗೇ ಇರಿದಿದೆ
ನೀನು ಜೊತೆಗಿರದೇ ಬೇರೆ ಸಾಧನೆ ಬೇಕೆ
ಬೆತ್ತಲೆ ತೋಳಲ್ಲಿ ಮುದ್ದಿಸುತ್ತ ಹೇಳಿದ್ದು
ಬಹುಶಃ ಹಿಂದಿನ ಜನ್ಮದಲ್ಲಿರಬಹುದು
ನೀನು ಏನಾದರೂ ಮಾಡಿಕೊ
ನಿನ್ನಲ್ಲಿ ನಂಬಿಕೆಯೇ ಇಲ್ಲ
ಕಿವಿಗಪ್ಪಳಿಸಿದ್ದು ಅಣುಬಾಂಬ್ ಅಲ್ಲ ತಾನೆ
ತಾಳಿ ಕಟ್ಟದ, ಅಗ್ನಿಸಾಕ್ಷಿಯಿರದ
ಈ ಸಂಬಂಧಕ್ಕೆ ನಂಬಿಕೆಯೊಂದೇ ಆಧಾರ
ಅದೆಲ್ಲಿಂದಲೋ ತಂಗಾಳಿಯಂತೆ ತೇಲಿಬಂದ
ಅವನದ್ದೇ ಮಾತು ಕನಸಲ್ಲಿರಬಹುದೇ
ಕೈಜಾರಿ ಬಿದ್ದು ಒಡೆದು ಹೋದ ಕನ್ನಡಿಗೆ
ಬ್ಯಾಂಡೇಜು ಅಂಟಿಸಿ ಇಣುಕುತ್ತಿದ್ದಾಳೆ
ಹೃದಯವಂತೂ ಚೂರುಚೂರಾಗಿದೆ
ಮುಖವಾದರೂ ಇಡಿಯಾಗಿ ಕಾಣಲಿ
ಒಡೆದ ಕನ್ನಡಿಯ ಪ್ರತಿ ಚೂರಲ್ಲೂ ಕಾಣುವ
ಹೆಣ್ಣು, ಅಬಲೆ, ಮಾಯೆ, ನತದೃಷ್ಟೆ, ವಿಧವೆ, ಸೂಳೆ
ರಾಕ್ಷಸಿ, ಮೋಹಿನಿ ಹೀಗೆ ಹತ್ತಾರು ಮುಖಗಳು
ಆದರೂ ಎಲ್ಲದರೊಳಗೂ ಇಣುಕುವ ಅಸಹಾಯಕತೆ
ಕಂಡು ಗಹಗಹಿಸಿ ಬೋರಾಡುತ್ತಿದ್ದಾಳೆ
ಕೆದರಿದ ಕೂದಲು, ಕೃಶವಾದ ಕಾಯ
ಕಳೆದುಕೊಂಡ ಪ್ರೀತಿಯ ಪರಿತಾಪದಲ್ಲಿ
ಮೈಮೇಲಿನ ಬಟ್ಟೆಗಳ ಹಂಗುತೊರೆದಿದ್ದಾಳೆ
ಅಕ್ಕನಿಗೇ ಇರದ ವಸ್ತ್ರ ನನಗೇಕೆ
ಮಾತಿಗೂ ಮುನ್ನ
ನೋವ ಮುಚ್ಚಿಡುವ ದೊಡ್ಡ ನಗು
ಒಬ್ಬಳೇ ನಗುವುದ ಕಂಡು ಲೋಕ
ಮರುಗುತ್ತ ಹೇಳಿದೆ
ಅನೈತಿಕ ಸಂಬಂಧ ಕಳಚಿಕೊಂಡ ನಂತರ
ಈಗವಳಿಗೆ ಹುಚ್ಚು ಹಿಡಿದಿದೆ
-ಶ್ರೀದೇವಿ ಕೆರೆಮನೆ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.