ಕವನ ಪವನ / ನೆನಪಿನ ಏಳುಬೀಳು – ರೇಣುಕಾ ರಮಾನಂದ
ನೆನಪಿನ ಏಳುಬೀಳು
ನಮ್ಮಮ್ಮನ ಜೋಡಿಯ ಮುದುಕಿಯರೆಲ್ಲ
ವರ್ಷಕ್ಕೊಮ್ಮೆ
ನನ್ನನ್ನು ಕಂಡಾಗ ಅಪ್ಪುಹೊಡೆಯುತ್ತಾರೆ
ಅವರ ಗಲ್ಲದ ನೆರಿಗೆಯ ತುಂಬ
ಅರುಮರು ನೆನಪಿನ ಏಳುಬೀಳು
ಅಂದಿನದ್ದೂ ಇಂದಿನದ್ದೂ ಸಿರಬಿರಸಿ
ಹೇಳಿ ಮಳ್ಳು ಮಳ್ಳು
ನಗುತ್ತಾರೆ.
ಹತ್ತು ಹನ್ನೆರಡು ಕುರ್ಚಿ ಮಂಚ ಸೋಫಾಗಳಿದ್ದರೂ
ಬಾಗಿಲ ಮೆಟ್ಟಿನ ಮೇಲೆ ” ಬಾ ಕುಳ್ಳು”
ಎಂದು ಎಳೆದಪ್ಪಿ ಕುಳ್ಳಿಸಿಕೊಳ್ಳುತ್ತಾರೆ
ಎಷ್ಟು ಬಾಲೆ ಮೀಸಿದವೋ
ಅವರ ಕೈಗಳು
ಎಷ್ಟು ಮಡಕೆ ಹಿಡಕಿದವೋ
ಅವರ ಬೆರಳುಗಳು
‘ನಿಂತಲ್ಲೇ ತಿರುಗಿ ತೋರಿಸುತ್ತಾರೆ
ಕತ್ತರಿ ಕೈ ಹಾಕಿ
‘ಸರಳೇ ಕಮಲೇ’ ಆಡ್ತಿದ್ದೆವು
ನಾನೂ ನಿಮ್ಮವ್ವಿಯೂ
ಒಂದು ಕೆಂಪು ದಾಸಾಳ ಕೊಯ್ದು ಕೈಲಿಟ್ಟು
“ಬರೂದ್ ಬಂದಿ
ತುಳಸಿ ಮನೆಗೆ ಕೈ ಮುಕ್ಕಂಡು ಹೋಗು
ಗನಾದಾಗ್ಲೆ ನಿಂಗೆ” ಎಂದು ಹಾರೈಸಿ
ಹನುಮಟ್ಟೆಯ ಮಹಾಮಾಯೆಯ ದಿಕ್ಕಿಗೆ
ತಿರುಗಿ ಕೈ ಮುಗಿಯುತ್ತಾರೆ
ಮಣ್ಣಿನ ಗುಂದೆ ಹತ್ತಿ
ಓಣಜಿ ತಿರುಗಿ ಮರೆಯಾಗುವವರೆಗೂ
ಕಾಣದ ಕಣ್ಣಲ್ಲಿ ನನ್ನತ್ತಲೇ ನೋಡುತ್ತ
ಬಿಟ್ಟು ಬರಲಾರದ ಹಾಗೆ ಕಟ್ಟಿ ಹಾಕುತ್ತಾರೆ
ಅವರ ಕೈ ಕೆನ್ನೆ ಸವರಿದ ನನ್ನ ಬೆರಳಿಗೆ
ಮಿದು ಮಿದು ಪರಾಗದ ಹರಳು
ಕಣ್ಣಿನ ಮುಗ್ಧ ಹತ್ತಿಯ ಅರಳು
ಉಬ್ಬಿದ ಕೊರಳು
ಅಂಟಿಕೊಂಡು ಬರುತ್ತದೆ
ಅದರ ಭಾವಾರ್ತಿಯಲ್ಲೇ
ಬದುಕಿರುತ್ತೇನೆ ನಾನು
ವರ್ಷಪೂರ್ತಿ
-ರೇಣುಕಾ ರಮಾನಂದ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.