ಕವನ ಪವನ/ ನೀ ಮಾತನಾಡಿಸದ ಮೇಲೆ…ಅಕ್ಷತಾ ಕೃಷ್ಣಮೂರ್ತಿ
ಇತ್ತೀಚೆಗೆ ನೀ ಮಾತನಾಡಿಸದ ಮೇಲೆ
ದಿನವು ಸಾಗುವ ಕಾಡಿನ ಹಾದಿ ಸವೆದು
ಅಡ್ಡಡ್ಡ ಮರಗಳು ಬಿದ್ದು
ಉದ್ದುದ್ದ ಮಾತುಗಳು.
ಕೇಳಿಸಿಕೊಳ್ಳಬಾರದಿತ್ತು
ಮರ
ಬೀಳಿಸಿದ ಗಾಳಿ ತಂದ ವಿಷಯ.
ನಿನ್ನ ನೆನಪಲಿ ಹುಟ್ಟಿದ ಕವನಗಳಿಗೆ
ನೇಣು ಹಾಕಿ ಗಲ್ಲಿಗೇರಿಸಬೇಕಿತ್ತು
ಕೊನೆ ಆಸೆ ಕೇಳದೆ
ಪುನಃ ಕವನ ಕಟ್ಟದೆ.
ಹಲೋ ಹಲೋ ಎಂದಾಗಲು ಉತ್ತರ ಕೊಡದ
ಸಂಜೆಗಳನ್ನು ಸುಮ್ಮನೆ ಬಿಡಬೇಕಿತ್ತು
ಕತ್ತಲಾವರಿಸುವ ಘಳಿಗೆಯನು
ಅದು ಬೇಗ ಬೇಗ ಅಪ್ಪಲು
ನೀ ಮುತ್ತಿಟ್ಟ ನೆನಪುಗಳ
ಇಡುಗಂಟು ಕಟ್ಟದೆ
ಹಾರಲು ಬಿಡಬೇಕಿತ್ತು ಕಾಡಿಸಿಕೊಳ್ಳದೆ.
ಮಾಡಬೇಕಾಗಿತ್ತು ನಿಜ.
ಅದಾಗದೇ
ಹೃದಯಕ್ಕೀಗ ಉಂಬಳ ಕಚ್ಚಿದ ಕೆರೆತ
ಆಗಾಗ ನವೆದು ನೋವು
ಸವರಿದ ಮುಲಾಮು ವಾಯಿದೆ
ಮೀರಿ ಆಗಿದೆ ಕೀವು.
ಹೂ ಹಣ್ಣು ಕೊಟ್ಟ ಮರ
ಮುಂದೊಮ್ಮೆ ಒಣಗಿ
ಕೊರಡಾಗಿ ಕರಗಿದ ಮರುದಿನವೇ
ಕಾರಣವಿಲ್ಲದೆ ಅದರ ಬುಡದಲ್ಲೆದ್ದ ಚಿಕ್ಕ ಪುಟ್ಟ ಗಿಡ
ನಿನ್ನ ಕಣ್ಣಲ್ಲಿ ಹಸಿರೊಡೆವ ಸ್ಪರ್ಧೆ.
ಕಾಡಿನ ದಾರಿಯಲಿ
ಬಿದ್ದ ಮುರಿದ ಗೆಲ್ಲುಗಳ
ಅನಾಥಪ್ರಜ್ಞೆ
ಇದೆಲ್ಲ ಗೊತ್ತಾಗಿದ್ದು
ನೀ
ಮಾತನಾಡದ ಮೇಲೆಯೇ.
ಈಗೀಗ
ಅದ್ಯಾವಾಗಲೋ ಒಮ್ಮೊಮ್ಮೆ
ಯಾರ್ಯಾರದೋ ವಿಷಯಕ್ಕೆ
ಫೋನಾಯಿಸಿ ಮಾ ಮಾತನಾಡುವಾಗಲೆಲ್ಲ
ಯೋಚಿಸುವೆ ತರಾತುರಿಯಲ್ಲಿ
ಅಂಕ ನೀಡಬಾರದಿತ್ತು ನಿನಗೆ.
ಗೊತ್ತು
ಒಲವ ಪರಿಭಾಷೆಯನು
ಬರೆದಿಟ್ಟಿಲ್ಲ ಯಾವ ಇತಿಹಾಸ..!
ಎದೆಯ ಮಾತು ಅರಿತವರಾರು..?
ಆಗಾಗ ಧುತ್ತೆಂದು ಕಾಣುವ
ನಿನ್ನಿರವಿನ ನೆರಳು
ಬಿಸಿಲಲ್ಲಿ ಪ್ರಖರಗೊಳ್ಳುವ ಸತ್ಯ
ಸುಳ್ಳಾಗದು ಎಲ್ಲ ನಿಜ,
ನೀನು ಮಾತನಾಡಿದರೆ.
ನೋಡು,
ನೀನು ಮಾತನಾಡುವುದೇ ಒಂದು ಕನಸು
ಎಲ್ಲ ತಿಳಿದು
ಕಣ್ಕಟ್ಟಿನಾಟ ಆಡುವ ಇರುಳು
ನಿನ್ನ ನೆನಪ ನೇವರಿಕೆ
ಎದೆಗೂಡಲ್ಲಿ ಅಂತರ್ಧಾನವಾಗುತ್ತಲೇ ಇದೆ
ನೀ ಮಾತನಾಡದಿದ್ದರು.
-ಅಕ್ಷತಾ ಕೃಷ್ಣಮೂರ್ತಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.