ಕವನ ಪವನ / ನಿಮ್ಮ ಮಗನಿಗೇಕೆ ಹೇಳಲಿಲ್ಲ? – ಭಾರತಿ ಹೆಗಡೆ
ನನಗೆ ಗೊತ್ತು
ಈ ಕಾಮಾಂಧ ಪಿಪಾಸುಗಳು
ನನ್ನ ಮೇಲೆ ಎರಗುವ ಹೊತ್ತಿಗೆ
ನಿಮಗೆ ಏನೂ ಗೊತ್ತಿರುವುದಿಲ್ಲ ಎಂದು
ಅವರೆಲ್ಲ ಅಟ್ಟಹಾಸದಿಂದ ನನ್ನ ಸುಟ್ಟು ಬೂದಿ ಮಾಡುವ ಹೊತ್ತಿಗೆ
ನೀವೆಲ್ಲ ಮೈತುಂಬ ಕಂಬಳಿ ಹೊದ್ದು
ಅಗ್ಗಿಷ್ಟಿಕೆಯಲ್ಲಿ ಛಳಿಕಾಯಿಸುತ್ತ ಕೂತಿರುತ್ತೀರಿ ಎಂದು
ಸುಟ್ಟು ಕರಕಲಾದ ನನ್ನೀ ದೇಹವನ್ನು ನೋಡಿದ ಮೇಲೆಯೇ
ನೀವೆಲ್ಲ ಮಮ್ಮಲ ಮರುಗುತ್ತೀರಿ ಎಂದೂ…
ನಿಮ್ಮ ನಿಮ್ಮ ಮಗಳ ನೆನೆದು ಒಂದಷ್ಟು ನಿಟ್ಟುಸಿರು ಹೊರಹಾಕುತ್ತೀರಿ
ನೀವೆಲ್ಲ ಕಣ್ಣೀರು ಸುರಿಸಿ
ನನ್ನನ್ನು ನಿಮ್ಮ ಮಗಳ ಸ್ಥಾನದಲ್ಲಿರಿಸಿ
ಒಂದಷ್ಟು ಆಕ್ರೋಶದಿಂದ
ಅವರನ್ನು ಸುಟ್ಟುಬಿಡಬೇಕು, ಕೊಲೆಮಾಡಿಬಿಡಬೇಕೆಂಬ
ಕುದಿವ ಸಿಟ್ಟು ನಿಮ್ಮಲ್ಲೂ ಬಂದೇ ಬರುತ್ತದೆ ಎಂದು
ನಾನು ಬಲ್ಲೆ
ಜೊತೆಗೇನೆ
ಸದ್ಯ ನನ್ನ ಮಗಳಿಗಾಗಲಿಲ್ಲವಲ್ಲ
ಎಂಬೊಂದು ಸಮಾಧಾನದ ನಿಟ್ಟುಸಿರೂ
ನಿಮ್ಮಿಂದ ಹೊರಹೊಮ್ಮಲೂಬಹುದು
ಹೀಗೆಲ್ಲ ಸುಟ್ಟು ಬೆಂದು ಕರಕಲಾದ
ನನ್ನ ಆತ್ಮದ ನಿಟ್ಟುಸಿರು ಅದಲ್ಲ
ನಿಮ್ಮ ಕಣ್ಣೀರು, ನಿಮ್ಮ ಆಕ್ರೋಶ
ನನ್ನುರಿಯನ್ನು ತಣಿಸಲಾರವು
ಗೆಳತಿಯರೇ…ಗೆಳೆಯರೇ…ತಾಯಂದಿರೇ…ಅಪ್ಪಂದಿರೇ,
ನೀವು ಕೇಳಲೇಬೇಕಾದ ಕೆಲವು ಪ್ರಶ್ನೆಗಳಿವೆ
ನಾವೇನು ತಪ್ಪು ಮಾಡಿದ್ದೇವೆಂದು
ನೀವು ಕೇಳಿರಿ ಅವರಿಗೆ…
ನಾವು ನಿಮ್ಮಂತೆಯೇ ನಡೆದೆವು
ಮೈತುಂಬ ಬಟ್ಟೆ ತೊಟ್ಟೆವು,
ಗಂಡಿನ ಪಾದಕ್ಕೆರೆಗಿದೆವು
ಕತ್ತಲಾವರಿಸುವ ಮುನ್ನ ಮನೆಯೊಳಗಿದ್ದುಬಿಡಿ
ಎಂದಿರಿ
ಅಷ್ಟೊತ್ತಿನಲ್ಲಿ ನಿನಗೇನು ಕೆಲಸ ಎಂದು ಕೇಳಿದಿರಿ
ಅದರಂತೆಯೇ ನಡೆದೆವು ಕೂಡ
ನಿಮಗೆ ಕಾಣಿಸಿದ್ದು ಬೊಂಬೆಯಂಥ ನಾವು ಮಾತ್ರ
ಈ ಥರ ಸುಟ್ಟಿರಿ, ಬೇಯಿಸಿದಿರಿ ಬಿಕರಿಗಿಟ್ಟಿರಿ ನಮ್ಮನ್ನು
ಕೇಳಿರಿ ಈಗ
ನಿಮ್ಮೊಳಗೊಬ್ಬಳು ಹೆಣ್ಣಿದ್ದರೆ
ಕೇಳಿರಿ ಈಗ
ನಿಮ್ಮೊಳಗೊಬ್ಬ ಮನುಷ್ಯ ಇದ್ದರೆ
ಕೇಳಿರಿ ಈಗ
ನಿಮ್ಮೊಳಗೊಬ್ಬ ತಾಯಿ ಇದ್ದರೆ…
ನನ್ನಂತೆ ಅದೆಷ್ಟೋ ಹೆಣ್ಣುಗಳ ಜೀವ ಉಳಿಯಬೇಕೆಂದರೆ
ನೀವೇನು ಮಾಡುತ್ತೀರಿ
ದೊಡ್ಡವರೇ ನಿಮಗೆಷ್ಟು ಧೈರ್ಯ
ನಿಮಗೆಷ್ಟು ಸೊಕ್ಕು
ನಮ್ಮಂಥವರನ್ನು ಹೀಗೆಲ್ಲ ಚೆಂಡಾಡಲು
ನಿಮ್ಮ ಗಂಡುಮಕ್ಕಳನ್ನು ಬಿಟ್ಟರಲ್ಲ
ಅವರಿಗೇನು ಹೇಳಿದಿರಿ ನೀವು?
ನಿಮ್ಮ ಮಗನಿಗೇನು ಕಲಿಸಿದ್ದೀರಿ?
ಬೇಕಿರಲಿಲ್ಲ ನಮಗೆ ನಮ್ಮ ಪಾದಪೂಜೆ
ಬೇಕಿರಲಿಲ್ಲ ನಮಗೆ ದೇವಿಯೆಂಬ ಪಟ್ಟ
ಸುಟ್ಟರೆ, ಕತ್ತು ಹಿಚುಕಿದರೆ ನಮಗೂ ನಿಮ್ಮಂತೆಯೇ ನೋವಾಗುವುದು
ನಮ್ಮನ್ನು ಮನುಷ್ಯರು ಎಂದು ಅರಿಯಿರಿ
ಎಂದು ನೀವೇಕೆ ನಿಮ್ಮ ಮಗನಿಗೆ ಹೇಳಿಕೊಡಲಿಲ್ಲ?
ತೊಡೆತಟ್ಟಿ, ಕೇಕೆ ಹಾಕಿ ನಕ್ಕವರ ನೆರಳಲ್ಲೇಕೆ ನಮ್ಮನ್ನು ಬೆಳೆಸಿದಿರಿ ನೀವು?
ಧೈರ್ಯವಿದ್ದರೆ ಹೇಳಿ…
ಮಗನಂತೆ ನಾನೂ ಮನುಷ್ಯಳು ಎಂದು
ರಕ್ತಮಾಂಸ ತುಂಬಿದ ಈ ದೇಹಕ್ಕೂ ನೋವಾಗುವುದು ಎಂದು
ಓ ಮನುಜರೇ…
ನನ್ನ ಆತ್ಮದ ಗೆಳೆತಿಯರಾದರೂ ಬದುಕಲು ಬಿಡಿ
ಸ್ವಚ್ಛಂದವಾಗಿ…
ನೋವಿಲ್ಲದ ಜಗದಲ್ಲಿ.
- ಭಾರತಿ ಹೆಗಡೆ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.