ಕವನ ಪವನ /ನಿಗೂಢ ಹನಿ -ಆಶಾ ನಾಗರಾಜ್
ಅಲ್ಲೇ ಕಣ್ಣಂಚಲ್ಲಿ ಒಮೊಮ್ಮೆ
ಸೆರಗಿನ ಅಂಚಲ್ಲಿ ಮತ್ತೊಮ್ಮೆ
ಕಣ್ಣಲ್ಲೆ ಇಂಗುವುವು ಕೆಲವೊಮ್ಮೆ
ಅಬ್ಬಾ!! ಎಂಥ ಚಾಣಾಕ್ಷ ಹನಿಗಳಿವು?
ಹೊಂಚು ಹಾಕಿ ಕೂರುವುದಿಲ್ಲ
ಸಂಚು ಹೂಡಿ ಬರುವುದೂ ಅಲ್ಲ
ನಿಯತ್ತಿಗೆ ಬಲು ಹೆಸರುವಾಸಿ ಇವು
ಅಪ್ಪಣೆ ಇಲ್ಲದೆ ಹೊರಬರವು!
ಆ ಕಣ್ಣಿಗೂ, ಆ ಧೂಳಿಗೂ ಏನೋ ಬಂಧ.
ಒಮ್ಮೆ ಕಣ್ಣಿಗೆ ಕಾಡಿಗೆ ಹೆಚ್ಚಾಯಿತೆನ್ನುವಳು!
ಕೆಲವೊಮ್ಮೆ ಖಾರದ ಕೈ ತಾಕಿತೆನ್ನುವಳು!
ಎಷ್ಟೆಲ್ಲಾ ಸಬೂಬುಗಳು? ಕಣ್ಣೀರ ಸವಾಲಿಗೆ!
ರೆಪ್ಪೆ ಮಿಟುಕಿಸಿದರೆ ಹೊರ ಬಂದಾವೆಂಬ ಗಾಬರಿಗೆ
ಕಣ್ಣ ಕೊಂಚ ಅರಳಿಸಿ ಹನಿಗಳಿಗೆ ಅಲ್ಲೇ ಜಾಗಮಾಡಿ ನಿಲ್ಲಿಸುವಳು!!
ನಿಲ್ಲದೆ…. ಹಠಮಾಡಿ ಹನಿಯೊಂದು ಹೊರಬಂದರೆ!
ಮತ್ತದೇ ಧೂಳಿನ ನೆಪ ಹೇಳುವಳು.
ಕೆಲವೊಮ್ಮೆ ಕಣ್ಣಲ್ಲಿ ಮಿಂಚಾಗಿ ‘ಮಿಂಚು ಹನಿ’
ಮತ್ತೊಮ್ಮೆ ಮೋಡದ ಮರೆಯ ‘ಮಂದ ಹನಿ’
ನಿಗಾವಹಿಸಿ ದಿಟ್ಟಿಸಿ ನೋಡಿದರಷ್ಟೇ ಕಾಣುವ ‘ ನಿಗೂಢ ಹನಿ’
ಹಲವು ಬಗೆಯಾಗಿ `ಕಣ್ಣಂಚಿನ ಮಿಂಚುಗಳು’ !
-ಆಶಾ ನಾಗರಾಜ್
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.