ಕವನ ಪವನ / ನಾವೂ ನೋಡೋಣ- ಅನು: ಮಮತಾ ಸಾಗರ
ನೋಡೋಣ
ನಾವೂ ನೋಡೋಣ
ನೋಡೇ.. ಬಿಡೋಣ ಅದೇನಂತ
ನಾವೂ ನೋಡೋಣ
ನೋಡೇಬಿಡೋಣ
ಆಣೆ ಮಾಡಿ ಇಟ್ಟಂಥ ಆ ದಿನವ
ಶಾಸನದಲಿ ಬರೆದಿಟ್ಟ ಆ ದಿನವ
ನೋಡೋಣ
ನಾವೂ ನೋಡೋಣ
ದಬ್ಬಾಳಿಕೆಯ ಒತ್ತಡದ ಬೆಟ್ಟಗಳು
ಹತ್ತಿಯ ಹಾಗೆ ಹಾರಿ ಹೋಗೋದ
ನೋಡೋಣ
ನಾವೂ ನೋಡೋಣ
ಅಂಚಿಗಿಟ್ಟವರ ಕಾಲ ಕೆಳಗೇನೇ
ಈ ಭೂಮಿ ಗಡ ಗಡ ನಡುಗೋದ
ಅಳೋ ಪ್ರಭುಗಳ ತಲೆ ಮೇಲೆ
ಸಿಡಿಲು ಸಿಡಿ ಸೀಡಿ ಸಿಡಿಯೋದ
ನಾವೂ ನೋಡೋಣ
ಕರುಣೆಯೇ ದೇವರು ಆದಾಗ
ಆ ದೇವರು ಗುಡಿಯಾಚೆ ನಡೆದಾಗ..
ತಳ್ಳಿಸಿಕೊಂಡ ನಮಗೆಲ್ಲ
ಆ ದೇವರ ಸನಿಹ ಸಿಕ್ಕಾಗ
ಗದ್ದಿಗಳೆಲ್ಲಾ ಉರುಳೋದ
ಅಧಿಕಾರಗಳು ನೆಗೆದು ಬೀಳೋದ
ನೋಡೋಣ
ನಾವೂ ನೋಡೋಣ
ನೋಡೇ.. ಬಿಡೋಣ ಅದೇನಂತ
ನಾವೂ ನೋಡೋಣ
ಕಡೆಗೂ ಉಳಿಯೊದು ದೇವರು ತಾನೇ
ಕಣ್ಣಿಗೆ ಕಂಡೂ, ಕಾಣದೆಯೂ
ನೋಡೋವಂಥದ್ದಾಗಿ ನೋಡುಗವಾಗಿ
ಏಳುತ್ತದೆ ಹಕ್ಕಿನಾ.. ಕೂಗೂ
ಅಲ್ಲಿ ನಾ ಇರುವೆ ನೀನೂ ಇರುವೆ
ಆಗ ಅಳುತ್ತಾರೆ ಈ ಜನವೆಲ್ಲ …
ಅದು ನನ್ನಂಥವರು ಹಾಗು ನಿನ್ನಂಥವರು.
ನೋಡೋಣ
ನಾವೂ ನೋಡೋಣ
ನೋಡೇ.. ಬಿಡೋಣ ಅದೇನಂತ
ನಾವೂ ನೋಡೋಣ
ಮೂಲ: ಫೈಜ್ ಅಹಮದ್ ಫೈಜ್ ಅನು: ಮಮತಾ ಸಾಗರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.