ಕವನ ಪವನ/ ನಾಲಿಗೆಯಿಲ್ಲದ ಸಾಕ್ಷಿಗಳು -ಸುಧಾ ಚಿದಾನಂದಗೌಡ
ನೀರಿಗಂತೂ ನಾಲಿಗೆಯಿಲ್ಲ
ಇದ್ದಿದ್ದರೆ ಹೇಳಿಬಿಡುತ್ತಿತ್ತು
ಆ ಅಸ್ಪೃಶ್ಯ ಬಾಲೆ
ಅರ್ಧಕೊಡ ನೀರಿಗೆ ಒಂದಿಡೀ ದಿನ ಕಾದ
ಅವಮಾನದ ಕಥೆಯನ್ನ
ಕರುಣೆಯ ಕಣ್ಣು
ಮೈಯೆಲ್ಲ ತೋಯಿಸಿ ಕಣ್ಣೀರಿಟ್ಟ ಮೂಕಕಾವ್ಯವನ್ನ
ಗಾಳಿಗಂತೂ ಬಾಯಿಯಿಲ್ಲ
ಇದ್ದಿದ್ದರೆ ತೋರಿಸುತ್ತಿತ್ತು
ನೆತ್ತರ ವಾಸನೆಯ ಬಚ್ಚಿಟ್ಟ ಸನಾತನದ
ಹಸಿಕ್ರೌರ್ಯದ ಬಣ್ಣದ ಮುಸುಕಿನಲಿ
ತಾ ಕಂಡ ಹುಸಿನಗುವಿನ ಪೊಳ್ಳನ್ನ
ನೀಲಿಬಾನಿನ ನಾಲಿಗೆ ಹೊರಳುವುದೇ ಇಲ್ಲ
ಹೊರಳಿದ್ದರೆ ಕರುಳ ಬಿಗಿಯುತ್ತಿತ್ತು
ಕೇರಿಗಳಲಿ ನರಳುವ ಹಸಿದ
ಹುಲುಮನುಜರ
ಬೆನ್ನಿಗಂಟಿದ ಹೊಟ್ಟೆಯ ಗೆರೆ,
ವಾಡೆಗಳಲಿ ಬಿಗಿದ ಸೆರಗಿನಲಿ ಬದುಕುವ
ಹೆಂಗಳೆಯರ ಬಿಕ್ಕಳಿಕೆ,
ನಿರೀಕ್ಷೆಯ ಕಂಬನಿ
ಎಲ್ಲ ನೋಡುತ್ತಾ ನೀಲನಭ ಮೌನಿ
ನೆಲ ನಾಲಿಗೆ ಕಚ್ಚಿ ಕುಳಿತಿದೆ
ನೆಲದೆದೆಯ ತುಂಬ ಛಿದ್ರಹೆಣಗಳ ಗೋರಿ
ರೇಪಾದವಳು, ತೋಪಾದವನು,
ಸಿದ್ಧಹಾದಿಗಳ ಒಲ್ಲದವರು,
ಪ್ರಶ್ನಿಸಿದವರು,
ಹನಿ ನೀರಿಗೆ, ಎಕರೆ ನೆಲಕೆ ಹೋರಾಡಿ,
ನೆಲಕಂಡವರು,
ಗಡಿದಾಟಲು ಯತ್ನಿಸಿ
ಒಂಟಿಯಾದವರು-
ಎಲ್ಲವನು ತಬ್ಬಿಹಿಡಿದು
ಮಾತು ನುಂಗಿದೆ ನೆಲ,
ಮೌನದ ಬೇರು ನೆಚ್ಚಿದೆ.
ಬೆಂಕಿಗೂ ಮಾತು ಬಾರದು
ಅಯೋಧ್ಯೆಯ, ಕಂಬಾಲಪಲ್ಲಿಯ…
ಮತ್ತೆಲ್ಲಿಯೋ ಹೊತ್ತಿ ಉರಿದ ಜ್ವಾಲೆ
ಉರಿದು ಉಳಿದ ಬೂದಿಯ ಕಥೆಗೆ
ಮಾತಾಗುತ್ತಿಲ್ಲ
ಇಲ್ಲಿ ಯಾವ ಸಾಕ್ಷಿಗೂ ನಾಲಿಗೆಯಿಲ್ಲ.
-ಸುಧಾ ಚಿದಾನಂದಗೌಡ
ಹಗರಿಬೊಮ್ಮನಹಳ್ಳಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.