ಕವನ ಪವನ / ನನ್ನ ಅವ್ವ – ಸಯ್ಯದ್ ಯೇಜಸ್ ಪಾಷ
ನನ್ನ ಅವ್ವ
ಅವಳ ವಿದ್ಯೆ- ನೈವೇದ್ಯವಾದರು
ಮಕ್ಕಳ ವಿದ್ಯೆಗಾಗಿ
ಮುಂಜಾನೆ ಮುಸ್ಸಂಜೆ
ಘಮ ಘಮಿಸಿ ಸುವಾಸನೆ ಬೀರುವ
ಸಾವಿರಾರು ಅಗರಬತ್ತಿಕಡ್ಡಿಗಳನ್ನು
ಹೊಸೆಯುತ್ತಿದ್ದಳು ನನ್ನ ಅವ್ವ.
ಹೊಸೆಯಲು ಬತ್ತಿ
ಒಣಗಿದ ಹಸಿಟಿಗೆ ನೀರು ಹಾಕಿ ಕಲಕಿಸಿ
ಇಟ್ಟಾಗ ಥೇಟ್ ಕರಿ ರಾಗಿಮುದ್ದೆಯೇ
ಉಂಡೆಯನ್ನು ಕಟ್ಟುತ್ತಿದ್ದವಳು ನನ್ನ ಅವ್ವ.
ಸ್ವಲ್ಪ ಸ್ವಲ್ಪವೇ ಕಿತ್ತು ಕಡ್ಡಿಗೆ ಹಸಿಟನ್ನು ಸೇರಿಸಿ
ಒಂದು ಮಾಡಿದಾಗ ಸಾವಿರ ಕಡ್ಡಿಗಳಿಗೆ
ಒಂದು ಕಟ್ಟಂತೆ ಸಿದ್ದವಾಗುತ್ತಿದ್ದ
ದಿನಕ್ಕೆರಡು ಕಟ್ಟಿಗೆ ಇಪ್ಪತ್ತು ರೂಪಾಯಿಗಳು
ನಮಗೆಲ್ಲ ಹೊಟ್ಟೆ ತುಂಬಿಸುವುದಕ್ಕೆ.
ಮಣೆ ಸಿದ್ದವಾಗುತ್ತಿತ್ತು ಊಟದ ಮಣೆಯಲ್ಲ
ಅಮ್ಮನ ಕೆಲಸಕ್ಕ ಸಹಾಯ ಮಾಡುತ್ತ
ಅಗರಬತ್ತಿ ಹಿಟ್ಟಿಗೆ ಕಡ್ಡಿವ ಸೇರಿಸಿ ಹೊಸೆಯುವ ಮಣೆ
ಅದರ ಮೇಲೆ ಕೈಚಳಕ ತೋರುತ್ತ
ಊದು ಬತ್ತಿ ಸಿದ್ದಪಡಿಸುತ್ತಿದ್ದವಳು ನನ್ನ ಅವ್ವ.
ನೆರಿಗೆ ಗಟ್ಟಿದ್ದ ಮುಖ ಕಣ್ಣಲ್ಲಿ ಅದೇ ಹೊಳಪು
ಕಳೆದಹೋದ ದಿನಗಳ ನೆನಪುಗಳು
ಸದಾ ಕಾಲ ಮಾಸದೆ ಮನದಲ್ಲಿ ಉಳಿಯುವ ಹಾಗೆ ಮಾಡಿ
ಬಡತನದಲ್ಲು ಶ್ರೀಮಂತಿಕೆ ತೋರಿಸಿ
ನೆನಪಿನ ಬುತ್ತಿಯನ್ನು ಇಟ್ಟವಳು ನನ್ನ ಅವ್ವ.
ನೆತ್ತರು ಬೆವರಾಗಿ, ಬೆವರು ಅತ್ತರಾಗಿ
ಸಾವಿರಾರು ಗುಡಿ ಮಸೀದಿ ಮನೆಯಲ್ಲಿ
ಘಮ ಸೂಸುವ ಆಹ್ಲಾದಕರ ಸುವಾಸನೆ
ಅಗರಬತ್ತಿ- ಧೂಪ
ಕುಲುಮೆಯಲ್ಲಿ ಬೇಯುವ
ಸಂಸಾರ ನೊಗ ಕಟ್ಟಿ ಬೆಳೆಸಿ
ತೆರೆಯ ಹಿಂದಿನ ಕಷ್ಟ ತೋರಿಸದ ನನ್ನ ಅವ್ವ.
–ಸಯ್ಯದ್ ಯೇಜಸ್ ಪಾಷ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ದುಡಿಯುವ ಅವ್ವನ ಬದುಕು, ಬೆಳೆಯುವ ಮಕ್ಕಳ ಭವಿಷ್ಯದ ಬೆಳಕು, ಊದುಬತ್ತಿಯ ಸುವಾಸನೆ, ಎಲ್ಲವನ್ನೂ ಒಳಗೊಂಡಿರುವ ಕವಿತೆ ಹಲವಾರು ಅರ್ಥಸ್ಫುರಿಸುತ್ತಿದೆ. ಕವಿತೆ ಚೆನ್ನಾಗಿದೆ.