ಕವನ ಪವನ / ದೂರಾಗುವ ಆತಂಕ – ಬಸವರಾಜ ಕಾಸೆ

ಭೂಮಿ ತೂಕದ ಹೆಣ್ಣೇ ನಾನೇನು ಹೇಳಲಿ ಸಾಕ್ಷಿ ನುಡಿಯುತ್ತಿದೆ ನೋಡಲ್ಲಿ ಅಂಬರ
ನೀ ಅದೆಷ್ಟು ವಿಶಾಲ ಗಹಗಹಿಸಿ ನಗುತ್ತಿದೆ ಹಂಗಿನರಮನೆಯಲ್ಲಿ ಉಬ್ಬಸದಬ್ಬರ

ವಿರಹದ ಬೇಗೆಗೆ ತತ್ತರಿಸುವ ಬೆವರ ನೆರಿಗೆ ತಾಳದೆ ಒಳ ಒತ್ತಡ ಒತ್ತರಿಸಿ ಸೆಕೆ
ಮಟಮಟ ಮಧ್ಯಾಹ್ನ ಸಂತೆಯ ಬೀದಿಯಲ್ಲಿ ಒಬ್ಬಂಟಿ ಪ್ರೇಮಿ ಕಣ್ಣಂಚಲ್ಲಿ ದಿಗಂಬರ

ಮಿಂಚುವ ಬೆಳಕಲ್ಲಿ ಹಬ್ಬುವ ಕಾವು ಮಂಕಾಗಿಸಿ ಮಂದ ನಾನು ಪ್ರತಿಫಲಿಸಿ ನಿನ್ನದೇ ಬಿಂಬ
ಕಿವಿ ಕಿತ್ತೊಗುವ ಚೀರಾಟ ನನ್ನೊಳಗೆ ಆ ಕ್ಷಣದ ನಟ್ಟನಡುವೆಯೂ ನೀನಲ್ಲಿ ಶ್ವೇತಾಂಬರ

ಏಣಿ ಹಾಕಲಾದೀತೆ ಉರುಳಿರುಳಿ ಮತ್ತೆ ತಿರುಗಿ ಬೀಳುವ ಸಂಜೆ ನೀ ಬಲು ಎತ್ತರೆತ್ತರ
ಬದುಕಿನ ಬಯಕೆ ಬಹು ದೊಡ್ಡ ಆಸರೆಗೆ ತೂತು ಮನದ ಮಾಳಿಗೆಯಲ್ಲಿ ಮಳೆಯಬ್ಬರ

ಬಣ್ಣ ತುಂಬಿದವರಾರೋ ನಿನಗೆ ನೀ ರಂಗು ಪಡೆಯಲು ನಾನೇ ಆಗಬೇಕೇ ಆವಿ
ಭೋರ್ಗೆರವ ದುಃಖ ರಭಸದಿ ಬಡಿದಪ್ಪಳಿಸಿ ಹಿಮ್ಮೆಟ್ಟುವ ಭಾವಗಳಲ್ಲಿ ಕಡಲುಬ್ಬರ

ನೀ ಬಿಡು ಚೆಲ್ಲಿದರೂ ಬೆಳದಿಂಗಳು ಕೋರೈಸುವೆ ತಾರೆಯರ ಸಂಗಡ ತಂದು ನಗುಮೊಗ
ಅಲ್ಲೇ ಸುತ್ತ ನಿರ್ಮಿತ ಕಪ್ಪು ಕಗ್ಗತ್ತಲೆ ಜವಾಬಿಗೆ ನಕ್ಕಾನು ಚಂದ್ರ ಕಂಡಲ್ಲಿ ನಮ್ಮಿಬ್ಬರ

ಸಂಧಿಸಿ ಮೋಡಗಳೆರಡು ಮಿಡಿತಗಳ ತಾಗಿ ಘರ್ಷಿಸಿದವು ಆಗದೆ ಒಮ್ಮತದೊಲವು
ಸಿಕ್ಕಸಿಕ್ಕಲ್ಲಿ ನುಚ್ಚುನೂರಾಗಿ ಅದುರಿ ಆಕ್ರಂದನ ಶೇಷ ನರನಾಡಿಯಲ್ಲಿ ನಿರಾಡಂಬರ

  • ಬಸವರಾಜ ಕಾಸೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *